ಇಲ್ಲಿ ಊಟ ತಯಾರಿದೆ..! ಬಾಕ್ಸ್​​8 ಇದ್ದಮೇಲೆ ಹಸಿವಿನ ಚಿಂತೆ ಇಲ್ಲ..!

ಟೀಮ್​​ ವೈ.ಎಸ್​​.

0

ಕಳೆದ 12 ರಿಂದ 18 ತಿಂಗಳಿನಲ್ಲಿ ಆನ್ ಡಿಮಾಂಡ್ ಸೇವೆಗಳ ಬೇಡಿಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಅದು ಊಟದ ಪೂರೈಕೆ ಆಗಿರಬಹುದು, ಅಥವಾ ನಲ್ಲಿ ರಿಪೇರಿ, ಬ್ಯೂಟಿ ಪಾರ್ಲರ್ ಸೇವೆ, ಹೊಲಿಗೆ ಮತ್ತು ವಾಹನ ಚಾಲಕರ ಸೇವೆ ಆಗಿರಬಹುದು, ವೆಬ್ ಸೈಟ್ ಮತ್ತು ಆ್ಯಪ್​​ಗಳ ಮೂಲಕ ಈ ರೀತಿಯ ಬೇಡಿಕೆ ಇಡುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿ, ವೈಯುಕ್ತಿಕ ಆದಾಯದಲ್ಲಿ ಹೆಚ್ಚಳ ಮತ್ತು ಸಮಯದ ಅಭಾವ ಈ ಮೂರು ಕೂಡ ಭಾರತದಲ್ಲಿ ಆಹಾರ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಆಹಾರ ಪೂರೈಕೆ ಸೇವೆಯಲ್ಲಿ ಕೆಲವರು ಇನ್ನೂ ಕೂಡ ಆಹಾರ ರವಾನೆ ಮತ್ತು ಅಡುಗೆ ಮಾಡುವವರ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇನ್ನು ಕೆಲವರು ಮಾತ್ರ, ಗ್ರಾಹಕನಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಆಹಾರ ಸೇವೆಯ ಸಂಪೂರ್ಣ ಸಂಪರ್ಕ ಸರಪಳಿಯನ್ನು ತಾವೇ ನಿರ್ವಹಿಸುತ್ತಿದ್ದಾರೆ. ಇಂತಹುದೇ ಒಂದು ಸಂಸ್ಥೆ ಮುಂಬೈನ ಬಾಕ್ಸ್ 8. ಈ ಸಂಸ್ಥೆ ಆಹಾರ ಪೂರೈಕೆಯ ಎಲ್ಲಾ ಹಂತಗಳನ್ನು – ಅಂದರೆ ಆಹಾರ ತಯಾರಿಕೆಗೆ ಕಚ್ಚಾ ವಸ್ತುಗಳನ್ನು ಪೂರೈಸುವುದರಿಂದ ಆರಂಭಿಸಿ ಗ್ರಾಹಕನಿಗೆ ತಲುಪಿಸುವವರೆಗೂ ಎಲ್ಲ ನಿರ್ವಹಣೆಯನ್ನೂ ತಾನೇ ಮಾಡುತ್ತದೆ.

ಪಾಂಕೋ ಹೆಸರಿನಿಂದ ಕೇವಲ ಮೆಕ್ಸಿಕನ್ ಆಹಾರವನ್ನು ಪೂರೈಸುವ ಸಂಸ್ಥೆಯಾಗಿ 2011 ರಲ್ಲೇ ಪ್ರಾರಂಭಗೊಂಡು ನಂತರ ತನ್ನ ಹೆಸರನ್ನು ಡಿಸೆಂಬರ್ 2013 ರಲ್ಲಿ ಬಾಕ್ಸ್ 8 ಎಂದು ರಿ-ಬ್ರಾಂಡ್ ಮಾಡಿತು.

ಬಾಕ್ಸ್ 8ನ ಸಹ ಸಂಸ್ಥಾಪಕರಾದ ಅಂಶುಲ್ ಗುಪ್ತಾ, “ಮೊದಲು ಗ್ರಾಹಕ – ಇದೇ ನಮ್ಮ ಮೂಲಮಂತ್ರವಾಗಿದೆ. ನಮ್ಮ ಮತ್ತೊಂದು ವಿಶೇಷವೆಂದರೆ ಆಹಾರ ಪೂರೈಕೆಯ ಎಲ್ಲಾ ಹಂತಗಳನ್ನು ನಾವೇ ಸ್ವತಃ ನಿಭಾಯಿಸುತ್ತೇವೆ. ಹೀಗಾಗಿಯೇ ನಮ್ಮ ಶೇ. 80 ರಷ್ಟು ಗ್ರಾಹಕರು ನಿಯಮಿತ ಗ್ರಾಹಕರಾಗಿದ್ದಾರೆ” ಎಂದು ಹೇಳುತ್ತಾರೆ.

ಅಂಶುಲ್ ಹಾಗೂ ಅಮಿತ್ ರಾಜ್ ಅವರ ಕನಸಿನ ಕೂಸಾದ ಬಾಕ್ಸ್ 8 ಸಂಸ್ಥೆ, ಪ್ರಸ್ತುತ ಮುಂಬೈನಲ್ಲಿ ಪ್ರತಿನಿತ್ಯ 2500 ಆರ್ಡರ್ ಗಳನ್ನು ನಿಭಾಯುತ್ತಿದೆ. ಹಲವಾರು ಅಡುಗೆ ಮನೆಗಳಲ್ಲಿ ಮಾಡಿದ ಆಹಾರವನ್ನು ಒಟ್ಟಿಗೆ ಸೇರಿಸಿ ನೀಡುವ ಬದಲಾಗಿ, ಬಾಕ್ಸ್ 8 ತನ್ನ ಡೆಲಿವರಿ ಕೇಂದ್ರಗಳಲ್ಲಿಯೇ ಆಹಾರ ತಯಾರಿಸಿ ಪೂರೈಸುತ್ತದೆ. ಹೀಗಾಗಿ ಗ್ರಾಹಕರಿಗೆ ತಾಜಾ ಮತ್ತು ಬಿಸಿಬಿಸಿಯಾದ ಆಹಾರ ದೊರಕುತ್ತದೆ. “ನಮ್ಮ ಸಂಪೂರ್ಣ ವಸ್ತು ತಯಾರಿಕಾ ಪ್ರಕ್ರಿಯೆಯನ್ನು ಹಲವಾರು ಹಂತಗಳಲ್ಲಿ ವಿಭಾಗಿಸಲಾಗಿದೆ. ಹೀಗಾಗಿ ಪೂರೈಕೆಯಲ್ಲಿ ನಿರಂತರತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಉದಾಹರಣೆಗೆ, ಆಹಾರ ಪೂರೈಕಾ ಕೇಂದ್ರಗಳಲ್ಲಿ ಕೌಶಲ್ಯಅಗತ್ಯವಿರದ ಪ್ರಕ್ರಿಯೆ ( ಇಲ್ಲಿ ಆಹಾರವನ್ನು ಗ್ಯಾಸ್ ಮೇಲೆ ಇಡುವ ಅಗತ್ಯ ಇರುವುದಿಲ್ಲ) ಕೈಗೊಂಡುಆಹಾರದ ನಿರಂತರತೆ ಕಾಪಾಡುತ್ತೇವೆ” ಎಂದು ಅಮಿತ್​​​ ಹೇಳುತ್ತಾರೆ.

ಉಳಿದ ಕಡೆ ಎಲ್ಲಿ ಕೌಶಲ್ಯದ ಅಗತ್ಯವಿದೆಯೋ ಅವನ್ನು ಮೂಲ ಕೇಂದ್ರಗಳಲ್ಲೇ ಮಾಡಲಾಗುತ್ತದೆ. ಹಾಗೆಯೇ ಆಹಾರದ ಗುಣಮಟ್ಟವನ್ನು ಕಾಪಾಡಲು ಕಚ್ಚಾವಸ್ತುಗಳ ಖರೀದಿಯನ್ನು ಕೇಂದ್ರೀಕರಣಗೊಳಿಸಲಾಗಿದೆ.

ಬಾಕ್ಸ್ 8 ಸಂಸ್ಥೆಯು ಪ್ರತಿತಿಂಗಳು ಶೇ. 25 ರಿಂದ 30 ರಷ್ಟು ಬೆಳವಣಿಗೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

“ಈ ಬೆಳವಣಿಗೆಯಲ್ಲಿ ಹೆಚ್ಚು ತೃಪ್ತಿ ನೀಡುವ ವಿಷಯವೆಂದರೆ ಇದೆಲ್ಲವೂ ಸಾವಯವವಾಗಿದ್ದು, ಕೇವಲ ಬಾಯಿ ಮಾತಿನ ಮೂಲಕವೇ ಮಾರುಕಟ್ಟೆ ಸೃಷ್ಟಿಯಾಗಿದೆ. ಈ ತನಕ ನಾವು ಯಾವುದೇ ಫ್ಲೆಕ್ಸ್ ಗಳನ್ನು ಹಾಕಿಲ್ಲ ಅಥವಾ ಮಾರ್ಕೆಟಿಂಗ್ ಮಾಡಿಲ್ಲ” ಎಂದು ಅಂಶುಲ್ ಗುಪ್ತಾ ಹೇಳುತ್ತಾರೆ.

ದಾರಿಯಲ್ಲಿ ಎದುರಾದ ತೊಡಕುಗಳು

ಆಹಾರದ ರುಚಿಯಲ್ಲಿ ಗುಣಮಟ್ಟ ಮತ್ತು ನಿರಂತರತೆ ಕಾಪಾಡದಿರುವುದು, ತಡವಾದ ಡೆಲಿವರಿ ಹಾಗೂ ಗ್ರಾಹಕನ ಹಿಂದಿನ ಕಹಿ ಅನುಭವಗಳು, ಈ ಉದ್ಯಮದ ಸಾಮಾನ್ಯ ಸವಾಲುಗಳಾಗಿವೆ. ಆದರೆ ಬಾಕ್ಸ್8 ಆಹಾರ ಪೂರೈಕೆಯ ಎಲ್ಲ ಹಂತಗಳನ್ನು ತಾನೇ ನಿರ್ವಹಿಸುವುದರಿಂದ, ಈ ರೀತಿಯ ಸಮಸ್ಯೆಗಳ ಮೇಲೆ ನಿಯಂತ್ರಣವಿರುತ್ತದೆ. “ಆಹಾರ ಪೂರೈಕೆಯ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಾವು ತಂತ್ರಜ್ಞಾನವನ್ನು ಸಾಕಷ್ಟು ಬಳಸಿದ್ದೇವೆ. ಪ್ರಸ್ತುತ, ಆಹಾರ ಪೂರೈಕೆಯ ಸಂಪೂರ್ಣ ಪ್ರಕ್ರಿಯೆ ಮೇಲೆ ಅಂದರೆ ಆರ್ಡರ್ ತೆಗೆದುಕೊಳ್ಳುವುದರಿಂದ ಹಿಡಿದು ಡೆಲಿವರಿ ಮಾಡುವವರೆಗಿನ ಪ್ರತಿಯೊಂದು ಹಂತದ ಮೇಲೆ ನಿಗಾ ಇಡುತ್ತೇವೆ. ಇದರ ಮುಂದಿನ ಹಂತವಾಗಿ ನಮ್ಮ ಆ್ಯಪ್ ನಲ್ಲಿ ಗ್ರಾಹಕರೇ ತಾವು ನೀಡಿರುವ ಆರ್ಡರ್ ಅನ್ನು ಟ್ರಾಕ್ ಮಾಡಬಹುದು” ಎನ್ನುತ್ತಾರೆ ಅಂಶುಲ್.

ಇಲ್ಲಿ ತಮ್ಮನ್ನು ತಾವು ಅಪ್ ಗ್ರೇಡ್ ಮಾಡಿಕೊಳ್ಳುವ ಪ್ರಯತ್ನ ಸದಾ ನಡೆದಿರುತ್ತದೆ. ಹೀಗಾಗಿ ಸಂಸ್ಥೆಯು ನಿರಂತರವಾಗಿ ಡಾಟಾ ಅನಾಲಿಸಿಸ್ ಮಾಡುತ್ತಾ , ತನ್ನ ಪ್ರಕ್ರಿಯೆಗಳನ್ನು ಸುಧಾರಿಸಿಕೊಳ್ಳುತ್ತಿರುತ್ತದೆ. “ಪ್ರಸ್ತುತ, ನಮ್ಮ ಸೇವೆಯಲ್ಲಿ ಶೇ. 0.5 ರಷ್ಟು ಎರರ್ ರೇಟ್ ಇದೆ. ಇದನ್ನು ಸೊನ್ನೆಗೆ ತರುವುದೇ ನಮ್ಮ ಮುಂದಿನ ಗುರಿಯಾಗಿದೆ” ಎಂದು ಅಮಿತ್ ವಿವರಿಸುತ್ತಾರೆ.

ಬಾಕ್ಸ್8 ರಲ್ಲಿ ಏನಿದೆ?

ಬಾಕ್ಸ್8, ಗ್ರಾಹಕರಿಗೆ ಬಿಸಿಬಿಸಿಯಾಗಿ, ರುಚಿಕಟ್ಟಾಗಿ ಹಾಗೂ ನೋಡಲಿಕ್ಕೂ ಆಕರ್ಷಕವಾಗಿರುವ ಆಹಾರವನ್ನು ತಯಾರಿಸುತ್ತದೆ. “ನಮ್ಮಲ್ಲಿ ನುರಿತ ಅಡುಗೆ ಭಟ್ಟ (ಷೆಫ್)ರ ತಂಡವಿದೆ. ನಮ್ಮ ಪ್ರತಿಯೊಂದು ಆಹಾರ ಉತ್ಪನ್ನವೂ ರುಚಿಕಟ್ಟಾಗಿದ್ದು ಉತ್ತಮ ಗುಣಮಟ್ಟ ಹೊಂದಲು ಇವರು ಪರಿಶ್ರಮಪಡುತ್ತಾರೆ. ಹೀಗಾಗಿ, ಜನರು ನಮ್ಮ ಉತ್ಪನ್ನಗಳನ್ನು ಸದಾ ಇಷ್ಟಪಡುತ್ತಾರೆ” ಎಂದು ಅಮಿತ್ ಹೇಳುತ್ತಾರೆ.

ಆಹಾರ ಚೆಲ್ಲದಂತೆ ಹಾಗೂ ಶುದ್ಧವಾಗಿ ಇರುವಂತೆ ನೋಡಿಕೊಳ್ಳಲು ವಿಶೇಷವಾಗಿ ಮಾಡಲಾಗಿರುವ ಬಾಕ್ಸ್​​ಗಳಲ್ಲಿ ಆಹಾರದ ಡೆಲಿವರಿಯಾಗುತ್ತದೆ. ಪ್ರಸ್ತುತ, ಬಾಕ್ಸ್8 ರ ಗ್ರಾಹಕರು ತಿಂಗಳಲ್ಲಿ ಮೂರರಿಂದ ನಾಲ್ಕು ಬಾರಿ ಸೇವೆಯನ್ನು ಪಡೆಯುತ್ತಿದ್ದು, ಇದನ್ನು ತಿಂಗಳಲ್ಲಿ ಎಂಟರಿಂದ 10 ರವೆರೆಗೆ ವೃದ್ಧಿಸಬೇಕೆಂಬುದು ಸಂಸ್ಥೆಯ ಗುರಿಯಾಗಿದೆ.

ತಂಡ, ಬಂಡವಾಳ ಹೂಡಿಕೆ ಮತ್ತು ಯೋಜನೆಗಳು

ಬಾಕ್ಸ್8 ತಂಡದಲ್ಲಿ 450 ಜನರಿದ್ದಾರೆ. ಇದರಲ್ಲಿ 50 ಜನ ಸಂಸ್ಥೆಯ ಕೋರ್ ಟೀಮ್ ನ ಸದಸ್ಯರಾಗಿದ್ದಾರೆ. ಇವರೆಲ್ಲರೂ ಐಐಟಿಯಿಂದ ಬಂದಿದ್ದು, ಕೆಲ ಪಾಕಪ್ರವೀಣರು ಐಟಿಸಿ ಮತ್ತು ಮಾರಿಟ್ ಹೋಟೆಲಿನಿಂದ ಬಂದವರಾಗಿದ್ದಾರೆ. ಭವಿಷ್ಯದಲ್ಲಿ, ಸಂಸ್ಥೆಯು ಪುಣೆ, ಬೆಂಗಳೂರು, ಚೆನ್ನೈ, ಹೈದ್ರಾಬಾದ್ ಮತ್ತು ದೆಹಲಿಯಲ್ಲಿ ತನ್ನ ಸೇವೆಯನ್ನು ವಿಸ್ತರಿಸುವ ಯೋಜನೆ ಹೊಂದಿದೆ.

ಈ ವರ್ಷದ ಮೇ ತಿಂಗಳಿನಲ್ಲಿ ಬಾಕ್ಸ್ 8ಗೆ ಮೇ ಫೀಲ್ಡ್ ಪಾರ್ಟನರ್ಸ್ಸ್ ಕಡೆಯಿಂದ 21 ಕೋಟಿಯಷ್ಟು ಬಂಡವಾಳ ಹರಿದು ಬಂದಿದೆ. “ಮುಂದಿನ ಎರಡು ತಿಂಗಳಿನಲ್ಲಿ ನಮ್ಮ ಕೋರ್ ಟೀಮ್ ಸದಸ್ಯರ ಸಂಖ್ಯೆಯನ್ನು 50 ರಿಂದ 100 ಕ್ಕೆ ಹೆಚ್ಚಿಸಲಿದ್ದೇವೆ. 8 ರಿಂದ 10 ಪಟ್ಟು ಫೀಲ್ಡ್ ಸ್ಟಾಫ್ ಸದಸ್ಯರನ್ನು ಹೊಂದಲಿದ್ದೇವೆ” ಎಂದು ಅಂಶುಲ್ ಅಂಕಿಸಂಖ್ಯೆನ್ನು ಮುಂದಿಡುತ್ತಾರೆ.

ಸಂಸ್ಥೆಯು ವರ್ಷಾಂತ್ಯದ ವೇಳೆಗೆ 10 ಸಾವಿರ ಆರ್ಡರ್ ಗಳನ್ನು ತಲುಪುವ ಗುರಿ ಹೊಂದಿದ್ದು, ಮುಂದಿನ 18 ತಿಂಗಳಿನಲ್ಲಿ 500 ಕೋಟಿ ಜಿ.ಎಮ್.ವಿ ಮಾರ್ಕ್ ಅನ್ನು ತಲುಪುವ ಯೋಜನೆ ಹಾಕಿಕೊಂಡಿದೆ.

ಯುವರ್ ಸ್ಟೋರಿಯ ಅಭಿಪ್ರಾಯ.

ಭಾರತದಲ್ಲಿ ಆಹಾರ ವಲಯ ಅತ್ಯುತ್ತಮ ಬೆಳೆಯುವ ಅವಕಾಶವನ್ನು ಹೊಂದಿದೆ. ಹಾಗೆಯೇ, ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳನ್ನು ಗಮನಿಸಿದಾಗ, ಅಲ್ಲಿ ಹಲವಾರು ಬಿಲಿಯನ್ ಡಾಲರ್ ಸಂಸ್ಥೆಗಳಿರುವುದು ಗೋಚರಿಸುತ್ತದೆ. ಭಾರತೀಯ ಅರ್ಥವ್ಯವಸ್ಥೆಯ ವೇಗವನ್ನು ನೋಡಿದರೆ, ಹಾಗೂ ಉದ್ಯೋಗಿಗಳ ಸಂಖ್ಯೆಯನ್ನು ಗಮನಿಸಿದರೆ, ಆಹಾರವನ್ನು ಆರ್ಡರ್ ಮಾಡುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿರುವುದು ಕಂಡುಬರುತ್ತದೆ.

ಪ್ರಸ್ತುತ, ಆಹಾರ ಪೂರೈಕೆ ಮಾರುಕಟ್ಟೆಯು ಭಾರತದಲ್ಲಿ 1.6 ಬಿಲಿಯನ್ ಡಾಲರ್ ನಷ್ಟಿದ್ದು, ಪ್ರತಿವರ್ಷ ಶೇ. 30 ರಷ್ಟು ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಬಾಕ್ಸ್8 ಹೊರತುಪಡಿಸಿದಂತೆ, ಇತರ ಸ್ಟಾರ್ಟ್ ಅಪ್ ಕಂಪನಿಗಳಾದ ಸ್ಪೂನ್ ಜಾಯ್, ಬೆಂಗಳೂರಿನ ಫ್ರೆಶ್ ಮೆನು, ಗುರ್​​ಗಾಂವ್​​ನ ಎಫ್.ಆರ್.ಎಸ್.ಎಚ್ ತಮ್ಮದೇ ಆದ ರೀತಿಯಲ್ಲಿ ಬೆಳೆಯುತ್ತಿವೆ.

ಆಹಾರ ಪೂರೈಕೆ ಕಂಪನಿಗಳಾದ ಸ್ವಿಗ್ಗಿ, ರೋಡ್ ರನ್ನರ್ ಹಾಗೂ ಕ್ವಿಕ್ಲಿಗಳಿಗಿಂತ ಬಾಕ್ಸ್ 8 ಉತ್ತಮವಾಗಿದೆ ಎನಿಸುತ್ತದೆ. ಯಾಕೆಂದರೆ ಆಹಾರ ಪೂರೈಕೆಯ ಪ್ರತಿ ಹಂತದ ಮೇಲೆ ಬಾಕ್ಸ್8 ಗೆ ನಿಯಂತ್ರಣವಿದೆ. ಮುಖ್ಯವಾಗಿ, ತಮ್ಮದೇ ಅಡಿಗೆಮನೆಯಲ್ಲಿ ಆಹಾರ ತಯಾರಿಸಿ ಡೆಲೆವರಿ ಮಾಡುವ ಸಂಸ್ಥೆಗಳು, ಕೇವಲ ಡೆಲೆವರಿಯನ್ನಷ್ಟೇ ಮಾಡುವ ಸಂಸ್ಥೆಗಳಿಗಿಂತ ಹೆಚ್ಚಿನ ಲಾಭವನ್ನು ಹೊಂದಬಹುದಾಗಿದೆ. ಹೈಪರ್ ಲೋಕಲ್ ಹಾಗೂ ಇ-ಕಾಮರ್ಸ್ ಕ್ಷೇತ್ರಗಳಷ್ಟೇ ಅಲ್ಲದೇ ಆಹಾರ ತಂತ್ರಜ್ಞಾನ ಕ್ಷೇತ್ರ ಕೂಡ ಭವಿಷ್ಯದಲ್ಲಿ ಗಮನ ಸೆಳೆಯಲಿದೆ.


Related Stories