ಸಾಥೀ ಹಾತ್ ಬಢಾನಾ – ಸಾಮಾಜಿಕ ತಳಹದಿ

ಟೀಮ್​ ವೈ.ಎಸ್​​.

0

1988ರಲ್ಲಿ ಟಿಸ್(ಟಿಐಎಸ್‍ಎಸ್)ನಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉನ್ನತ ಪದವಿ ದೊರೆತದ್ದೇ ತಡ ಜಾನಕಿ ಸಾಫ್ಟ್​​​ವೇರ್ ಕಂಪನಿಗಳು, ವಿದೇಶ ಪ್ರವಾಸ, ಆರಾಮ ಕೆಲಸ ಹಾಗೂ ಕೈತುಂಬಾ ಹಣ ಗಳಿಸುವ ಕನಸು ಕಂಡಿದ್ದರು. ವಿದೇಶ ಪ್ರವಾಸ, ಮದುವೆ ಹಾಗೂ ಕೆಲಸದಲ್ಲೂ ಸಾಕಷ್ಟು ಏರಿಳಿತಗಳನ್ನು ಕಂಡ ಜಾನಕಿ, ತಮ್ಮ 33ನೇ ವಯಸ್ಸಿನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಳಿಕ ಎಲ್ಲವನ್ನೂ ಬಿಟ್ಟು ಮನೆ, ಮಗು ಹಾಗೂ ಕುಟುಂಬಕ್ಕಷ್ಟೇ ಸೀಮಿತವಾದರು. ಆದ್ರೆ ಅತ್ತ ಮಗಳು ಶಿಶುವಿಹಾರಕ್ಕೆ ಹೋಗುತ್ತಲೇ ಜಾನಕಿಗೆ ಮತ್ತೆ ಏನಾದರೂ ಮಾಡಬೇಕೆಂಬ ಆಸೆ ಮೊಳಕೆಯೊಡೆಯಿತು. ಅದೇ ಸಮಯದಲ್ಲಿ ಅವರು ಕುಟುಂಬ ಸಮೇತರಾಗಿ ಪುಣೆಯ, ಔಂಧ್‍ಗೆ ಸ್ಥಳಾಂತರವಾಗಬೇಕಾಯ್ತು. ಆ ಹೊಸ ಜಾಗಕ್ಕೆ ಬಂದದ್ದೇ ಜಾನಕಿ ತಲೆ ಸೂಪರ್ ಕಂಪ್ಯೂಟರ್‍ನಂತೆ ಕೆಲಸ ಮಾಡತೊಡಗಿತು. ಅಲ್ಲೆಲ್ಲೂ ಸಮೀಪದಲ್ಲಿ ಒಳ್ಳೆಯ ಪುಸ್ತಕ ಮಳಿಗೆಗಳು ಇಲ್ಲದಿರುವುದು ಗೊತ್ತಾದ ಕೂಡಲೇ, ಅವರು ಟ್ವಿಸ್ಟ್ ಎನ್ ಟೇಲ್ಸ್ ಎಂಬ ಪುಸ್ತಕ ಮಳಿಗೆ ಪ್ರಾರಂಭಿಸಿದರು. ಬರೊಬ್ಬರಿ 11 ವರ್ಷಗಳ ಕಾಲ ಆ ಮಳಿಗೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು ಜಾನಕಿ. ಅದೇ ಸಮಯದಲ್ಲಿ ಇ-ಕಾಮರ್ಸ್ ಆಗ ತಾನೇ ಮೊಳಕೆಯೊಡೆದಿತ್ತು. ಈ ಬೆಳವಣಿಗೆ ಕಂಡು ತಕ್ಷಣ ಎಚ್ಚೆತ್ತುಕೊಂಡ ಜಾನಕಿ, ತಡ ಮಾಡದೇ ಟ್ವಿಸ್ಟ್ ಎನ್ ಟೇಲ್ಸ್ ಪುಸ್ತಕ ಮಳಿಗೆಗೆ ಬೀಗ ಹಾಕಿದರು. ಕಾರಣ ಅವರ ತಲೆಯಲ್ಲಿ ಹೊಸ ಆಲೋಚನೆಯೊಂದು ಜನ್ಮ ತಾಳಿತ್ತು. ಹೀಗೆ ಹಠಾತ್ತಾಗಿ ಪುಸ್ತಕ ಮಳಿಗೆಯನ್ನು ಬಂದ್ ಮಾಡಿದ ಒಂದೇ ವರ್ಷದಲ್ಲಿ ಜಾನಕಿ ‘ಸಾಥಿ ಹಾತ್ ಬಢಾನಾ’ ಎಂಬ ಸಾಮಾಜಿಕ ಸಂಸ್ಥೆ ಪ್ರಾರಂಭಿಸಿದರು.

ಅಡಿಪಾಯ

ತಂತ್ರಜ್ಞಾನ ಯುಗಕ್ಕೆ ಗುಲಾಮನಂತಾದ ಇಂದಿನ ಸಮಾಜದಲ್ಲಿ ಜನರಿಗೆ ಒತ್ತಡ ಹೆಚ್ಚು. ಅದನ್ನು ನಿಭಾಯಿಸಲು ಸಾಥಿ ಹಾತ್ ಬಢಾನಾ ಸಹಾಯ ಮಾಡುತ್ತಿದೆ. ಮಾನವ ಸಂಪನ್ಮೂಲ ವಿಭಾಗದಲ್ಲಿ ಶಿಕ್ಷಣ ಪಡೆದು, ಕೆಲಸ ಮಾಡಿದ ಅನುಭವವೂ ಇರುವ ಜಾನಕಿ ಬದಲಾಗುತ್ತಿರುವ ಜನರ ಪ್ರವೃತ್ತಿಗಳನ್ನು ಮೊದಲಿಂದಲೂ ವಿಶೇಷವಾಗಿ ಗಮನಿಸುತ್ತಿದ್ದರು. ಇದರಿಂದ, ‘ಒಂದು ಸಮಾಜವಾಗಿ ನಾವು ಎಷ್ಟೇ ಆಧುನಿಕರಾಗಿದ್ದೀವಿ ಎಂದುಕೊಂಡರೂ, ನಮ್ಮಲ್ಲಿನ್ನೂ ನಾಗರಿಕ ಮನೋಭಾವ ಬೆಳೆದಿಲ್ಲ’ ಅನ್ನೋದನ್ನು ಅರಿತರು ಜಾನಕಿ. ಮಹಿಳೆಯರ ಮೇಲಿನ ಕ್ರೌರ್ಯ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಆತ್ಮಹತ್ಯೆಯಂತಹ ಬೇರೆ ಬೇರೆ ರೀತಿಯ ಸಾಮಾಜಿಕ ಸಮಸ್ಯೆಗಳು ನಾವಂದುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತವೆ’ ಎಂಬ ಉತ್ತರ ಕಂಡುಕೊಂಡರು. ಅದಕ್ಕೆ ಉದಾಹರಣೆ ನೀಡುವ ಜಾನಕಿ ‘ಹೌದು, ಹಸುಗಳನ್ನು ರಸ್ತೆ ಮೇಲೆ ಓಡಾಡಲು ಬಿಡಬಾರದು. ಆದ್ರೆ ರಸ್ತೆ ದಾಟುತ್ತಿರುವ ಹಸುವನ್ನು ಕಂಡು, ಕೆರಳಿದ ವಾಹನ ಸವಾರರು ಬೇಕಂತಲೇ ಜೋರಾಗಿ ಹಾರ್ನ್ ಮಾಡುವುದನ್ನು ನಾನು ನೋಡಿದ್ದೇನೆ. ನಮ್ಮಲ್ಲಿ ಖಂಡಿತ ಏನೋ ಸಮಸ್ಯೆ ಇದೆ ಅನ್ನೋದು ಇದರಿಂದಲೇ ಗೊತ್ತಾಗುತ್ತೆ’ ಅಂತಾರೆ.

ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಅಂದ್ರೆ ಎಲ್ಲರೂ ಒಗ್ಗಟ್ಟಾಗಿ ಒಂದೇ ಗುರಿಯತ್ತ ಸಾಗಬೇಕು. ಸಾಥಿ ಹಾತ್ ಬಢಾನಾ (ಸಹಾಯ ಹಸ್ತು ನೀಡು ಗೆಳೆಯ) ಹೆಸರೇ ಹೇಳುವ ಹಾಗೆ ನಾವು ಬೇರೆ ಬೇರೆ ಸಂಘ, ಸಂಸ್ಥೆಗಳೊಂದಿಗೆ ಸೇರಿ ಒಟ್ಟಿಗೆ ಕೆಲಸ ಮಾಡುತ್ತೇವೆ ಅಂತಾರೆ ಜಾನಕಿ.

ಸಾಥಿ ಹಾತ್ ಬಢಾನಾ ಸಂಸ್ಥೆಯ ಅನನ್ಯ ಪರಿಕಲ್ಪನೆ ಅಂದ್ರೆ, ಅದು ಲಿಸನಿಂಗ್ ಪೋಸ್ಟ್. ಇಲ್ಲಿ ಮಾನಸಿಕ ಒತ್ತಡದಲ್ಲಿರುವ ಅಥವಾ ಖಿನ್ನತೆಗೊಳಗಾದ ವ್ಯಕ್ತಿಗೆ ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದೂರಾದ ಗಂಡ ಅಥವಾ ಹೆಂಡತಿ, ಸಂಬಳಕ್ಕೆ ಕತ್ತರಿ ಹಾಕಿಸಿಕೊಂಡ ಉದ್ಯೋಗಿ ಅಥವಾ ಪ್ರೀತಿ ಪಾತ್ರರ ಅಕಾಲ ಮರಣದಿಂದಾಗಿ ಅಧಿಕ ಒತ್ತಡ ಎದುರಿಸುತ್ತಿರುವವರು ತಮ್ಮ ಸಮಸ್ಯೆಗಳ ಬಗ್ಗೆ ಇಲ್ಲಿ ಮಾತನಾಡಬಹುದು. ಎಸ್‍ಎಚ್‍ಬಿ (ಸಾಥಿ ಹಾತ್ ಬಢಾನಾ) ಬಳಿ ತರಬೇತಿ ಪಡೆದ ನುರಿತ ಕೇಳುಗರಿದ್ದು, ಅವರು ಒತ್ತಡದಲ್ಲಿರುವವರ ಸಮಸ್ಯೆಗಳಿಗೆ ಕಿವಿಯಾಗುತ್ತಾರೆ. ಹೀಗೆ ತಮ್ಮ ಮನಸಿನ ಮಾತುಗಳನ್ನು ಮತ್ತೊಬ್ಬರ ಬಳಿ ಬಿಚ್ಚಿಟ್ಟಾಗ ಖಿನ್ನರಾದವರ ಮನಸ್ಸಿನ ಭಾರ ಇಳಿದಂತಾಗಿ ಸಮಾಧಾನ ಸಿಗುತ್ತದೆ.

ಸಾಥಿ ಹಾತ್ ಬಢಾನಾ ಪ್ರಮುಖವಾಗಿ ಸಹಾನುಭೂತಿ, ಲಿಂಗ ತಾರತಮ್ಯ ಹಾಗೂ ಜೀವನದ ಕೌಶಲ್ಯಗಳು ಎಂಬ ಮೂರು ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಲಿಸನಿಂಗ್ ಪೋಸ್ಟ್ ಜೊತೆಗೆ ಸಹಾನುಭೂತಿ ವಿಭಾಗದಲ್ಲಿ ಪಾಲಿಸುವವನ ರಕ್ಷಣೆ ಅಥವಾ ಕೇರಿಂಗ್ ಫಾರ್ ದಿ ಕೇರ್‍ಗಿವರ್ಸ್ ಎಂಬ ವಿಶಿಷ್ಠ ಕಾರ್ಯಕ್ರಮವಿದೆ. ಅದರಂತೆ ಈ ವಿಭಾಗದಲ್ಲಿ ತಂಡಗಳನ್ನಾಗಿ ವಿಂಗಡಿಸಿಕೊಂಡು ಎಲ್ಲರೂ ತಮ್ಮ ಸಮಸ್ಯೆಗಳ ಕುರಿತು ಮಾತನಾಡುತ್ತಾರೆ. ಇಲ್ಲಿ ಎಲ್ಲರೂ ಸೇರಿ ತಮ್ಮ ತಮ್ಮ ಸಮಸ್ಯೆಗಳ ಕುರಿತು ಚರ್ಚಿಸುವ ಮೂಲಕ ಒತ್ತಡ ನಿವಾರಿಸಿಕೊಳ್ಳಬಹುದು. ಹಿರಿಯ ನಾಗರಿಕರಿಗೆ ಪ್ರತಿ ತಿಂಗಳಲ್ಲಿ ಎರಡು ಬುಧವಾರ ಸ್ಮಾರ್ಟ್ ಫೋನ್ ನೆರವು ಕಾರ್ಯಕ್ರಮ ಆಯೋಜಿಸಲಾಗುತ್ತೆ.

ಇನ್ನು ಎರಡನೇ ವಿಭಾಗವಾದ ಲಿಂಗ ತಾರತಮ್ಯದಲ್ಲಿ ಎಸ್‍ಎಚ್‍ಬಿ ಶಾಲೆ, ಯುವಕ, ಯುವತಿಯರು ಹಾಗೂ ಕಾರ್ಪೊರೇಟ್ ಕಂಪನಿಗಳೊಂದಿಗೆ ಕೆಲಸ ಮಾಡುತ್ತದೆ. ಶಾಲೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೋ ಕಾಯ್ದೆ ಕುರಿತು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಕಾರ್ಯಾಗಾರ ನಡೆಸಲಾಗುತ್ತದೆ. ಹಾಗೇ 9ನೇ ತರಗತಿ ಹಾಗೂ ಅದರ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಲೈಂಗಿಕತೆ, ಅಭಿವ್ಯಕ್ತಿ ಗುರುತುಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಕೊನೆಯದಾಗಿ ಕಾರ್ಪೊರೇಟ್ ಕಂಪನಿಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳದ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತೆ.

ಇನ್ನು ಜೀವನ ಕೌಶಲ್ಯ ವಿಭಾಗದಲ್ಲಿ ಜಾನಕಿ ಮತ್ತವರ ಸಹೋದ್ಯೋಗಿ ವಿಭಾ ಜನರಿಗೆ ಬೇರೆ ಬೇರೆ ಉದ್ಯೋಗಗಳಿಗೆ ಸಂಬಂಧಿಸಿದ ಕೌಶಲ್ಯ ತರಬೇತಿ ನೀಡ್ತಾರೆ. ಈ ಹಿನ್ನೆಲೆಯಲ್ಲಿ ಐಟಿಐ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳೊಂದಿಗೂ ಎಸ್‍ಎಚ್‍ಬಿ ಕೆಲಸ ಮಾಡುತ್ತದೆ. ಈ ಮೂರೂ ವಿಭಾಗಗಳಲ್ಲಿರುವ ಎಲ್ಲಾ ಕಾರ್ಯಕ್ರಮಗಳನ್ನೂ ಸ್ವಯಂ ಸೇವಕರ ಸಹಾಯದಿಂದ ಕೈಗೊಳ್ಳಲಾಗುತ್ತೆ.

ಪುಣೆಯ ಔಂಧ್‍ನಲ್ಲಿರುವ ಎಸ್‍ಎಚ್‍ಬಿ ಆವರಣದಲ್ಲಿ ಪ್ರತಿ ಶನಿವಾರ ಬೆಳಗ್ಗೆ ನಡೆಯುವ ಹವ್ಯಾಸೀ ಕಾರ್ಯಗಾರಗಳು ಜನರಿಂದ ಒಳ್ಳೆ ಪ್ರತಿಕ್ರಿಯೆ ಪಡೆದಿವೆ. ಜನರಿಗೆ ಹೊಸ ಕೌಶಲ್ಯಗಳನ್ನು ಕಲಿಸಲು ಹಾಗೂ ಎಲ್ಲರ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ಈ ಕಾರ್ಯಕ್ರಮವನ್ನು ಪ್ರತಿ ವಾರ ಆಯೋಜಿಸಲಾಗುತ್ತೆ.

ತಾವು ಆಯೋಜಿಸುತ್ತಿರುವ ಪ್ರತಿಯೊಂದು ಕಾರ್ಯಕ್ರಮದಿಂದಲೂ ಹೆಚ್ಚು, ಹೆಚ್ಚು ಜನರಿಗೆ ಸಹಾಯವಾಗಲಿ. ಈ ಮೂಲಕ ಸಮುದಾಯದಲ್ಲಿ ಬದಲಾವಣೆಯ ಅಲೆ ಬೀಸಲಿ ಅನ್ನೋದು ಜಾನಕಿ ಅವರ ಆಶಯ. ಸ್ವಂತ ಹಣದಿಂದ ಎಸ್‍ಎಚ್‍ಬಿ ಪ್ರಾರಂಭಿಸಿರುವ ಜಾನಕಿ ಅವರಿಗೆ ಶಾಲೆ ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ ನಡೆಯುವ ಕಾರ್ಯಾಗಾರ ಹಾಗೂ ಸೆಷನ್‍ಗಳಿಂದ ಹಣ ಬರುತ್ತಿದೆ. ಆದ್ರೆ ಆ ಹಣವನ್ನು ಸಾಥಿ ಹಾತ್ ಬಢಾನಾಗೆ ಸಂಬಂಧಿಸಿದ ಇತರೆ ಕಾರ್ಯಗಳಿಗೆ ಖರ್ಚು ಮಾಡಲಾಗುತ್ತಿದೆ. ‘ಬದಲಾಗುತ್ತಿರುವ ಪ್ರಪಂಚಕ್ಕೆ ತಕ್ಕಂತೆ ನಮ್ಮ ಮನಸ್ಸು ವಿಕಸನ ಹೊಂದದಿದ್ದರೆ, ನಾವು ಮಾನಸಿಕ ಹಾಗೂ ಸಾಮಾಜಿಕ ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಈ ಬದಲಾವಣೆ ತರಲು ಕೇವಲ ಒಬ್ಬ ಮನುಷ್ಯನಿಂದ ಸಾಧ್ಯವಿಲ್ಲ ಅನ್ನೋದು ನನಗೂ ಗೊತ್ತಿದೆ. ಆದ್ರೆ ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋಹಾಗೆ ನಾವೆಲ್ಲಾ ಒಟ್ಟಿಗೆ ಸೇರಿದರೆ ಅದು ಸಾಧ್ಯ.’ ಅಂತ ಹೇಳ್ತಾರೆ ಜಾನಕಿ.