ರೆಡ್​​ಬಸ್​​ನಂತೆ ರಿಯಲ್ ಎಸ್ಟೇಟ್​ಗೆ ರಿಯಲ್ಟೊಎಕ್ಸ್​​ಪ್ರೆಸ್..!

ಟೀಮ್​​ ವೈ.ಎಸ್​​.

ರೆಡ್​​ಬಸ್​​ನಂತೆ ರಿಯಲ್ ಎಸ್ಟೇಟ್​ಗೆ ರಿಯಲ್ಟೊಎಕ್ಸ್​​ಪ್ರೆಸ್..!

Friday October 16, 2015,

2 min Read

ರಿಯಲ್ ಎಸ್ಟೇಟ್ ವಲಯವು ತುಂಬಾ ಅಸಂಘಟಿತವಾಗಿದ್ದು, ಅಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎನ್ನುವುದು ಎಲ್ಲರಿಗೂ ತಿಳಿದಿದೆ. ಹೌಸಿಂಗ್.ಕಾಂ ಈ ಉದ್ದಿಮೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡುತ್ತಿದೆ. ಇದೇ ವಲಯದಲ್ಲಿ 99ಏಕರ್ಸ್.ಕಾಂ, ಮ್ಯಾಜಿಕ್​​ಬ್ರಿಕ್ಸ್.ಕಾಂ ಮೊದಲಾದ ಸಂಸ್ಥೆಗಳು ಕೂಡಾ ಇಡೀ ವಲಯದ ಇಮೇಜ್ ಬದಲಾವಣೆಗೆ ಶ್ರಮಿಸುತ್ತಿದೆ. ಹಾಗಿದ್ದರೂ, ರಿಯಲ್ ಎಸ್ಟೇಟ್ ಕಚೇರಿಗಳಲ್ಲಿ ಕೆಲಸ ಮಾಡುವುದು, ಸಂಘಟಿಸುವುದು ಎಲ್ಲವೂ ದಶಕದ ಹಿಂದಿನಂತೆಯೇ ಕಠಿಣವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಅನಿಲ್ ನಿರ್ಧರಿಸಿಬಿಟ್ಟಿದ್ದರು.

image


ಹೇಗೆ ಮತ್ತು ಏನು?

ಐಐಟಿ ಖರಗ್​​ಪುರದಿಂದ 2004ರಲ್ಲಿ ಪದವಿ ಪಡೆದ ಅನಿಲ್ ಕುಮಾರ್ ನಿರ್ಮಲ್ ಅವರು ರಿಯಲ್ಟೊಎಕ್ಸ್​​ಪ್ರೆಸ್ ಆರಂಭಿಸಿದರು. ಇದು ಕ್ಲೌಡ್ ಆಧರಿತ ಸಿಆರ್​​ಎಂ ಸೊಲ್ಯುಷನ್ ಆಗಿದೆ. ರಿಯಲ್ ಎಸ್ಟೇಟ್ ಕನ್ಸಲ್ಟಂಟ್​​ಗಳಿಗೆ ತಮ್ಮ ಆಂತರಿಕ ವ್ಯವಹಾರ ಪ್ರಕ್ರಿಯೆಗಳನ್ನು ನಿಭಾಯಿಸಲು, ಗ್ರಾಹಕರ ಜೊತೆ ಸ್ಥಿರವಾದ ಸಂವಹನ ಹೊಂದಲು ಒಂದೇ ವೇದಿಕೆಯಡಿ ಅವಕಾಶ ಕಲ್ಪಿಸುವ ಸೊಲ್ಯುಷನ್ ಇದಾಗಿದೆ.

ಆರ್ಥಿಕ ಪ್ರಗತಿ ಮಂದಗತಿಯಲ್ಲಿದ್ದಾಗ 2008ರಲ್ಲಿ ಅನಿಲ್ ಅವರು ಇದನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ರಿಯಲ್ ಎಸ್ಟೇಟ್ ವಲಯ ಅತ್ಯಂತ ದುಸ್ಥಿತಿಯಲ್ಲಿತ್ತು. ಇದೇ ತಮಗೆ ಹೂಡಿಕೆಗೆ ಸರಿಯಾದ ಅವಕಾಶ ಎಂದು ಲೆಕ್ಕ ಹಾಕಿದ ಅನಿಲ್ ಅವರು ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತಂದರು.

“ನಾನು ಆಗಲೇ ಯೋಜನೆಯನ್ನು ರೂಪಿಸಿದ್ದೆ, ಉದ್ದಿಮೆ ಆರಂಭಕ್ಕೆ ಎಲ್ಲವೂ ಸಿದ್ಧವಾಗಿತ್ತು. ಆದರೆ ನಾನು ಸರಿಯಾದ ಸಂದರ್ಭಕ್ಕಾಗಿ ಕಾಯುತ್ತಿದ್ದೆ. ವೈಯುಕ್ತಿಕವಾಗಿ 2008-2009 ನನಗೆ ಒಳ್ಳೆಯ ಸಮಯವಾಗಿತ್ತು. ನನಗೆ ಆಗಲೇ ವಿವಾಹವಾಗಿತ್ತು. ನನ್ನ ಮಗನಿಗೂ 3 ವರ್ಷ ತುಂಬಿತ್ತು. ಅದರೆ, ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ನಾನು ಇದನ್ನು ಅವಕಾಶವಾಗಿ ಉಪಯೋಗಿಸಿದೆ. ಯಾಕೆಂದರೆ, ಪ್ರಸಕ್ತ ಮಾರುಕಟ್ಟೆಯ ಸನ್ನಿವೇಶವು ನನಗೆ ಪ್ರತಿಭಾನ್ವಿತರ ತಂಡ ಕಟ್ಟಲು ನೆರವಾಗುತ್ತದೆ ಎಂದು ಕೊಂಡಿದ್ದೆ. ಅದು ನಿಜವಾಯಿತು. ನಾನು 5 ಜನರ ಒಳ್ಳೆಯ ತಂಡದೊಂದಿಗೆ ಕೆಲಸ ಆರಂಭಿಸಿದೆ. ಈ ಪೈಕಿ ಇಬ್ಬರು ಈಗಲೂ ನನ್ನ ಜೊತೆಗಿದ್ದಾರೆ. ಅವರು ನಮ್ಮ ಕಂಪನಿಯ ದೊಡ್ಡ ಆಸ್ತಿ,” ಎನ್ನುತ್ತಾರೆ ಅನಿಲ್.

ಸವಾಲುಗಳು

ಎಲ್ಲಾ ಉದ್ಯಮಿಗಳಂತೆ ಅನಿಲ್​​ಗೂ ತಮ್ಮದೇ ಆದ ಅಡ್ಡಿಗಳು, ಮೈಲಿಗಲ್ಲುಗಳು ಎದುರಾಗಿದ್ದವು. ಸಿಆರ್​​ಎಂ ಸೊಲ್ಯುಷನ್ ಉತ್ಪನ್ನ ತಯಾರಿಸುವ ವೇಳೆ ಎಲ್ಲವೂ ಚೆನ್ನಾಗಿತ್ತು. ಅದ್ಭುತ ಉತ್ಸಾಹವಿತ್ತು. ತಯಾರಿಕೆಯ ಹಂತದಲ್ಲಿ ಫನ್ ಇತ್ತು, ಖುಷಿ ಇತ್ತು, ಎಕ್ಸೈಟ್​​ಮೆಂಟ್ ಇತ್ತು. ಆದರೆ, ನಿಜವಾದ ಸವಾಲು ಎದುರಾಗಿದ್ದು, ಉತ್ಪನ್ನ ಹಿಡಿದುಕೊಂಡು ಮಾರುಕಟ್ಟೆಗೆ ಹೋದಾಗಲೇ. ಮೊದಲ ಗ್ರಾಹಕರ ಬಳಿ ಹೋಗಿ ಪ್ರೆಸೆಂಟೇಷನ್ ಕೊಟ್ಟಾಗ ನಿಜವಾದ ಸ್ಥಿತಿ ಗೊತ್ತಾಗಿ ಹೋಗಿತ್ತು. ಅವರಿಗೆ ಸಿಆರ್​​ಎಂ ಸೊಲ್ಯುಷನ್ ಎಂದರೇನು? ಅದರಿಂದ ಅವರಿಗೆ ಏನು ಉಪಯೋಗ ಎನ್ನುವುದೇ ತಿಳಿದಿರಲಿಲ್ಲ. ಅರ್ಥ ಮಾಡಿಸಲೂ ಕಷ್ಟಕರವಾಗಿತ್ತು.

ಅವರಿಗೆ ಅದು ಅಗತ್ಯ ಎನ್ನುವುದಕ್ಕಿಂತ ಇದ್ದರೆ ಒಳ್ಳೆಯದು ಎನ್ನುವ ಭಾವನೆ ಇತ್ತು. ಆರಂಭದಲ್ಲಿ ಉತ್ಪನ್ನದ ಮಾರಾಟವೇ ಆಗುತ್ತಿರಲಿಲ್ಲ. ಬಂಡವಾಳ ಕರಗಲಾರಂಭಿಸಿತ್ತು. ಸಾಲದ್ದಕ್ಕೆ, 3 ಜನರು ಸಂಬಳ ಕೊಡದ ಹಿನ್ನೆಲೆಯಲ್ಲಿ ತಂಡ ಬಿಟ್ಟು ಹೊರನಡೆದರು. ಮಾರುಕಟ್ಟೆ ಆಗ ಚಿಗುರಲಾರಂಭಿಸಿತ್ತು.

ಆದರೆ, ಅನಿಲ್ ಅವರಿಗೆ ತಮ್ಮ ಉತ್ಪನ್ನದ ಮೇಲೆ ತುಂಬಾ ನಂಬಿಕೆ ಇತ್ತು. ಆ ನಂಬಿಕೆ ಕೈಕೊಡಲಿಲ್ಲ. 5 ವರ್ಷಗಳ ಪಯಣದಲ್ಲಿ, ಈಗ ಎಲ್ಲವೂ ಸಾಕಾರವಾಗಿದೆ. ಸಧ್ಯ 200ಕ್ಕೂ ಹೆಚ್ಚು ಕಂಪನಿಗಳು ರಿಯಲ್ಟೋಎಕ್ಸ್​​ಪ್ರೆಸ್ ಸೇವೆ ಪಡೆಯುತ್ತಿವೆ.

ಪಾಠಗಳು

ತಮ್ಮ ಪ್ರಯಾಣದ ವೇಳೆ ಕಲಿತ ನಾಲ್ಕು ಪಾಠಗಳನ್ನು ಅನಿಲ್ ಹಂಚಿಕೊಳ್ಳುತ್ತಾರೆ..

ಎ)ನಿಮ್ಮ ಉದ್ದಿಮೆ ಮೇಲೆ ನಂಬಿಕೆ ಇದ್ದರೆ ಎಂದಿಗೂ ಬಿಟ್ಟುಬಿಡಬೇಡಿ (ಬೇರೆಯವರು ಉದ್ಯಮ ಮುಚ್ಚಲು ಸಾವಿರ ಸಲಹೆ ನೀಡಬಹುದು, ನೀವು ನಿಮ್ಮ ಬುದ್ಧಿಯ ಮಾತು ಕೇಳಿ)

ಬಿ)ನಿಮಗೆ ನೀವು ನಿಷ್ಠರಾಗಿರಿ, ನಿಮ್ಮ ಉತ್ಪನ್ನ ಮತ್ತು ತಂಡಕ್ಕೆ ನಿಷ್ಠರಾಗಿರಿ

ಸಿ)ನಿಮ್ಮ ಗ್ರಾಹಕ, ಬಳಕೆದಾರ, ನಿಮ್ಮ ಉದ್ಯೋಗಿ ..ಹೀಗೆ ಯಾರು ಏನನ್ನು ಬಯಸುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ

ಡಿ)ಹೊಸತನ ಹುಡುಕಿ- ಒಮ್ಮೆ ನಿಮ್ಮ ವ್ಯವಹಾರದಲ್ಲಿ ಸಂಪ್ರದಾಯಸ್ಥರಾಗಿ ಬಿಟ್ಟರೆ, ನೀವು ಅದನ್ನು ಬಿಟ್ಟುಬಿಡಿ