ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್ 

ಟೀಮ್​ ವೈ.ಎಸ್​ ಕನ್ನಡ

0

ಇಂದಿನ ದಿನಗಳಲ್ಲೂ ಮಾಡೆಲಿಂಗ್ ಅಂದ್ರೆ ಸಾಕು ಅದು ಒಂದು ವೃತ್ತಿಯಾ? ಹವ್ಯಾಸಕ್ಕಾಗಿ ಹಾಗೂ ಟೈಮ್‍ಪಾಸ್‍ಗಾಗಿ ಮಾಡುವ ಕೆಲಸ ತಾನೇ? ಎಂದು ಪ್ರಶ್ನಿಸುವವರೇ ಹೆಚ್ಚು. ಅದರಲ್ಲಂತೂ ಹೆಣ್ಣುಮಕ್ಕಳಿಗೆ ಕಷ್ಟವಂತೆ, ಹಾಗಂತೆ ಹೀಗಂತೆ ಎಂದೆಲ್ಲ ಅಂತೆ ಕಂತೆಗಳೂ ಸಾಕಷ್ಟಿವೆ. ಆದರೆ ಈಗ್ಗೆ 30 ವರ್ಷಗಳ ಹಿಂದೆಯೇ ಮಹಿಳೆಯೊಬ್ಬರು ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟು, ಕಂಪನಿಯೊಂದನ್ನು ಪ್ರಾರಂಭಿಸಿ, ಇಂದು ಬೆಂಗಳೂರಿನ ಪ್ರತಿಷ್ಠಿತರ ಸಾಲಿಗೆ ಸೇರಿದ್ದಾರೆ. ಬಾಲಿವುಡ್‍ನಲ್ಲಿ ಆಳ್ವಿಕೆ ನಡೆಸುತ್ತಿರುವ ಬೆಂಗಳೂರಿನ ಬ್ಯೂಟಿಗಳಾದ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ ಇಬ್ಬರೂ ತಮ್ಮ ಮಾಡೆಲಿಂಗ್ ಕರಿಯರ್ ಪ್ರಾರಂಭಿಸಿದ್ದು ಇವರ ಮೂಲಕವೇ! ಹೌದು, ಇದು ಅನಿಲಾ ಆನಂದ್ ಅವರ ಯಶೋಗಾಥೆ.

ಅನಿಲಾ ಆನಂದ್, ಮೂಲತಃ ಮೈಸೂರಿನವರು. 20ನೇ ವಯಸ್ಸಿನಲ್ಲಿ ಮದುವೆಯಾದ ಬಳಿಕ ಬೆಂಗಳೂರಿನಲ್ಲೆ ಸೆಟಲ್ ಆಗಿದ್ದಾರೆ. ಪತ್ರಿಕೋದ್ಯಮ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ಬಳಿಕ ಅನಿಲಾ ಶಿಕ್ಷಕಿಯಾಗುವ ಕನಸು ಕಂಡಿದ್ದರು. ಆದರೆ ಮನೆಯಲ್ಲಿ ಅತ್ತೆ, ಯಾವ ಸೊಸೆಯಂದಿರೂ ಕೆಲಸ ಮಾಡುತ್ತಿಲ್ಲ. ನೀನೊಬ್ಬಳು ಮಾತ್ರ ಕೆಲಸಕ್ಕೆ ಹೋಗುವುದು ಬೇಡ ಎಂದರು. ಆದರೆ ನನಗೆ ಮನೆಯಲ್ಲಿ ಸುಮ್ಮನೆ ಕೂತು ಕಾಲಹರಣ ಮಾಡಲು ಇಷ್ಟವಿರಲಿಲ್ಲ. ಹೀಗಾಗಿಯೇ ಬೇರೆ ಏನು ಮಾಡಬಹುದು ಅಂತ ಯೋಚಿಸತೊಡಗಿದೆ. ಆಗಲೇ ಮಾಡೆಲಿಂಗ್ ಕೋಆರ್ಡಿನೇಟರ್ ಆಗುವ ಐಡಿಯಾ ಹೊಳೆಯಿತು. ಈಗಿನ ಕಾಲದಲ್ಲಿ ಸ್ಟಾರ್ಟಪ್ ಅನ್ನುತ್ತೀವಲ್ಲಾ, ಈಗ್ಗೆ 34 ವರ್ಷಗಳ ಹಿಂದೆ ನಮ್ಮದೂ ಒಂದು ರೀತಿಯ ಸ್ಟಾರ್ಟಪ್ ಆಗಿತ್ತು' ಎಂದು ಹೇಳಿಕೊಳ್ಳುತ್ತಾರೆ ಅನಿಲಾ. ತಕ್ಷಣ ಕಾರ್ಯಪ್ರವೃತ್ತರಾದ ಅವರು 1984ರಲ್ಲಿ ಅದಿತಿ ಕ್ರಿಯೇಷನ್ಸ್ ಸಂಸ್ಥೆ ಪ್ರಾರಂಭಿಸಿದರು.

ಆರಂಭದಲ್ಲಿ ಎದುರಿಸಿದ ಸವಾಲುಗಳು ಹಲವು

ಈಗಲೂ ಮಾಡೆಲಿಂಗ್ ಅಂದ್ರೆ ಸಾಕು ಮೂಗು ಮುರಿಯುವ ಮಂದಿ ಹೆಚ್ಚು. ಇನ್ನು 1984ರಲ್ಲಿ ಪರಿಸ್ಥಿತಿ ಹೇಗಿತ್ತು ಅಂತ ಊಹಿಸಿಕೊಳ್ಳಿ. ಹಾಗಂತ ಅನಿಲಾ ಅವರು ಹಿಂದೇಟು ಹಾಕಲಿಲ್ಲ. 

" ಪ್ರಾರಂಭದಲ್ಲಿ ತುಂಬ ಕಷ್ಟವಿತ್ತು. ಮಾಡೆಲಿಂಗ್ ಅಂದರೆ ಅದು ಕೆಟ್ಟ ಕೆಲಸ ಅಂದುಕೊಂಡಿದ್ದ ದಿನಗಳವು. ಹೀಗಾಗಿಯೇ ಜನರನ್ನು ಒಪ್ಪಿಸುವುದೇ ಕಷ್ಟವಿತ್ತು. ಮಾಡೆಲ್‍ಗಳು ತಮ್ಮ ಪೋಷಕರೊಂದಿಗೆ ಬರುತ್ತಿದ್ದರು. ಮೊದಲು ಪರಿಚಿತ ಮಕ್ಕಳಿಂದಲೇ ಮಾಡೆಲಿಂಗ್ ಮಾಡಿಸುತ್ತಿದ್ದೆ. ಮಾಡೆಲ್‍ಗಳನ್ನು ಜಾಹೀರಾತುಗಳಿಗೆ ಕಳುಹಿಸಿ, ಅದಕ್ಕೆ ಕಮಿಷನ್ ಪಡೆಯುತ್ತಿದ್ದೆ. ಆಗ ಕುಟುಂಬದಲ್ಲೂ ಇದ್ಯಾವ ಕೆಲಸ, ನೋಡಿದವರು ಏನಂದುಕೊಳ್ಳುತ್ತಾರೆ ಅಂತೆಲ್ಲ ಹೇಳಿದರು. ಆದರೆ ನಾನು ಹಣಕ್ಕಾಗಿ ಈ ಕೆಲಸ ಮಾಡುತ್ತಿರಲಿಲ್ಲ, ಏನಾದರೂ ಮಾಡಬೇಕು ಅಂತ ಇದನ್ನು ಆರಿಸಿಕೊಂಡಿದ್ದೆ. ಹಲವು ವರ್ಷಗಳ ಕಾಲ ಪರಿಚಿತರು, ಸಂಬಂಧಿಕರು ನಾನು ಟೈಮ್‍ಪಾಸ್‍ಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದುಕೊಂಡಿದ್ದರು. ಆದರೆ ಇದೇ ನನ್ನ ವೃತ್ತಿಯಾಗಿಸಿಕೊಂಡಿದ್ದೆ"
- ಅನಿಲಾ ಆನಂದ್​, ಅದಿತಿ ಕ್ರಿಯೇಷನ್ಸ್ ಸಂಸ್ಥಾಪಕಿ

ಬೆಳವಣಿಗೆ ಹೇಗಾಯ್ತು?

1984ರಲ್ಲಿ ಅದಿತಿ ಕ್ರಿಯೇಷನ್ಸ್ ಪ್ರಾರಂಭಿಸಿದ ಅನಿಲಾ ಆನಂದ್ ಅವರು ಸುಮಾರು 8 ವರ್ಷಗಳ ಕಾಲ ಮಾಡೆಲಿಂಗ್ ಕೋಆರ್ಡಿನೇಟರ್ ಆಗಿಯೇ ಕೆಲಸ ಮುಂದುವರಿಸಿದರು. ನಂತರ 1992ರಿಂದ ಜಾಹೀರಾತು ನಿರ್ಮಾಣವನ್ನೂ ಪ್ರಾರಂಭಿಸಿದರು. 

" ಜಾಹೀರಾತು ಸಂಸ್ಥೆಯವರು ನಮಗೆ ಪರಿಕಲ್ಪನೆ ನೀಡುತ್ತಾರೆ. ನಾವು ಅದನ್ನು ನಿಜವಾಗಿಸುತ್ತೇವೆ. ಅವರು ಕಾಗದದ ಮೇಲೆ ರಚಿಸಿದ ಲೋಕವನ್ನು ನಾವು ನಿಜವಾಗಿ ಸೃಷ್ಟಿಸುತ್ತೇವೆ. ಪ್ರತಿ ಪ್ರಾಜೆಕ್ಟ್ ಕೂಡ ಸವಾಲಿನಿಂದ ಕೂಡಿರುತ್ತದೆ. ಯಾಕೆಂದರೆ ನಾವು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ ಬದಲಾಗಿ ಮುಂಬೈ, ದೆಹಲಿ, ಚೆನ್ನೈ, ಯೂರೋಪ್, ದಕ್ಷಿಣಾ ಆಫ್ರಿಕಾ ಹೀಗೆ ಇಲ್ಲಿನ ಗ್ರಾಹಕರನ್ನು ವಿದೇಶಗಳಿಗೂ ಕರೆದೊಯ್ದು ಚಿತ್ರೀಕರಣ ಮಾಡುತ್ತೇವೆ. ಇವತ್ತು ಏರೋಪ್ಲೇನ್ ಮುಂದೆ ಶೂಟ್ ಮಾಡಿದರೆ, ನಾಳೆ ಹಡಗಿನ ಮುಂದೆ ಶೂಟ್ ಮಾಡುತ್ತೇವೆ. ಇವತ್ತು ಕೇವಲ ಒಂದು ಪಿನ್‍ನೊಂದಿಗೆ ಶೂಟ್ ಮಾಡಿದರೆ, ನಾಳೆ ಯಾವುದೋ ವಿದೇಶದಲ್ಲಿರುತ್ತೇವೆ. ಎಲ್ಲವನ್ನೂ ಒಂದೇ ದಿನದಲ್ಲಿ ರೆಡಿ ಮಾಡುತ್ತೇವೆ. ನಮ್ಮದು ರಚನಾತ್ಮಕ ಮಾತ್ರವಲ್ಲ ಅಷ್ಟೇ ಜವಾಬ್ದಾರಿಯುತ ಕೆಲಸ. ಹೀಗಾಗಿಯೇ ನಮ್ಮ ಬಳಿ ಚಿಕ್ಕ ಮಗುವಿನಿಂದ ಹಿಡಿದು 80ರ ವಯೋವೃದ್ಧರವರೆಗೂ 500ಕ್ಕೂ ಹೆಚ್ಚು ಮಾಡೆಲ್‍ಗಳಿದ್ದಾರೆ. ಕಲಾನಿರ್ದೇಶಕರು, ಫೋಟೋಗ್ರಾಫರ್, ಛಾಯಾಗ್ರಾಹಕರು, ಮೇಕಪ್, ಕಾಸ್ಟ್ಯೂಮ್, ಕೇಶವಿನ್ಯಾಸ, ಸೆಟ್ ಡಿಸೈನರ್, ಸ್ಟಂಟ್ ಡೈರೆಕ್ಟರ್ ಹೀಗೆ ದೊಡ್ಡ ತಂಡವೇ ಇದೆ ."
- ಅನಿಲಾ ಆನಂದ್​, ಅದಿತಿ ಕ್ರಿಯೇಷನ್ಸ್ ಸಂಸ್ಥಾಪಕಿ

ಮುಂದಿನ ಯೋಜನೆಗಳು - ಮುಂದಿರುವ ಸವಾಲು?

ನನಗೀಗ ಬೇರೆ ಸಂಸ್ಥೆಗಳೊಂದಿಗೆ ಸ್ಪರ್ಧಿಸಬೇಕು ಅಂತಿಲ್ಲ ಬದಲಾಗಿ ಈ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟ. ಜರ್ನಿ ಸರಳವೇ, ಆದರೆ ಮುಂದುವರಿಯುವುದು ಕಷ್ಟ. ನಮ್ಮದು 35 ವರ್ಷಗಳ ಕಂಪನಿ. ಆದರೆ 25ರಿಂದ 35 ವರ್ಷದ ಒಳಗಿನವರು ನಮ್ಮ ಗ್ರಾಹಕರು. ಇದು ಇನ್ಸ್ಟಾಗ್ರಾಮ್, ಸ್ನ್ಯಾಪ್‍ಚಾಟ್ ಯುಗ. ಹೀಗಾಗಿಯೇ ಅವರ ಆಲೋಚನೆಗೆ ತಕ್ಕಂತೆ ನಾವು ಯೋಚಿಸಬೇಕು. ಇಂದಿನ ಯುವಪೀಳಿಗೆಯವರು ನಮ್ಮನ್ನು ಹಳೆ ಕಂಪನಿ ಎಂದುಕೊಳ್ಳಬಾರದು. ಆ ಹೊಸತನವನ್ನು ಉಳಿಸಿಕೊಂಡು ಮುನ್ನುಗ್ಗುವುದೇ ನಮ್ಮ ಮುಂದಿರುವ ಸವಾಲುಗಳು ಎಂದು ಹೇಳಿಕೊಳ್ಳುತ್ತಾರೆ ಅನಿಲಾ.

ಇಂದಿನ ಮಾಡೆಲಿಂಗ್ ಟ್ರೆಂಡ್ ಮತ್ತು ಮಹಿಳೆಯರು

ಹೊರಗಿನವರು ಏನೋ ಅಂದುಕೊಳ್ಳಬಹುದು, ಆದರೆ ಫ್ಯಾಷನ್ ಹಾಗೂ ಜಾಹೀರಾತು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ತುಂಬ ಗೌರವವಿದೆ ಎಂಬುದು ಅಂತಾರೆ ಅನಿಲಾ. ಇನ್ನು ಇವತ್ತಿನ ಮಾಡೆಲಿಂಗ್ ಟ್ರೆಂಡ್ ಕುರಿತು ಮಾಹಿತಿ ನೀಡುತ್ತಾರೆ.

" ಸುಮಾರು ಏಳೆಂಟು ವರ್ಷಗಳಿಂದೀಚೆಗೆ ಬ್ರೆಜಿಲ್ ಮೂಲದ ಮಾಡೆಲ್‍ಗಳು ಮುಂಬೈಗೆ ಬಂದು ಸೆಟಲ್ ಆಗಿದ್ದರು. ಆಗ -ಫಾರೀನ್ ಹುಡುಗಿಯರು ಅಂತ ಜಾಹೀರಾತು ಸಂಸ್ಥೆಗಳೂ ಸಹ ಅವರ ಹಿಂದೆ ಬಿದ್ದಿದ್ದರು. ಆದರೆ ಈಗ ಆ ಟ್ರೆಂಡ್ ಬದಲಾಗಿದೆ. ಭಾರತದವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ" 
- ಅನಿಲಾ ಆನಂದ್​, ಅದಿತಿ ಕ್ರಿಯೇಷನ್ಸ್ ಸಂಸ್ಥಾಪಕಿ

ಅನುಷ್ಕಾ, ದೀಪಿಕಾ ಮಾಡೆಲ್ ಗುರು ಅನಿಲಾ!

ಸದ್ಯ ಬಾಲಿವುಡ್ ಮಾತ್ರವಲ್ಲ ಹಾಲಿವುಡ್‍ನಲ್ಲೂ ಮಿಂಚುತ್ತಿರುವ ಬೆಂಗಳೂರಿನ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಅವರನ್ನು ಮಾಡೆಲಿಂಗ್‍ಗೆ ಪರಿಚಯಿಸಿದ್ದು ಇದೇ ಅನಿಲಾ ಆನಂದ್. ಹೌದು, ಆಕೆ 9ನೇ ತರಗತಿಯಲ್ಲಿದ್ದಾಗ ತನ್ನ ತಾಯಿಯ ಜತೆ ನಮ್ಮ ಕಚೇರಿಗೆ ಬಂದು, ಮಾಡೆಲಿಂಗ್ ಮಾಡಬೇಕು ಅಂತ ಹೇಳಿದಳು. ಆಗ ಬ್ಯಾಡ್ಮಿಂಟನ್ ಪಟುವಾಗಿದ್ದ ದೀಪಿಕಾಗೆ ಸ್ವಲ್ಪ ತೂಕ ಇಳಿಸಿಕೊಳ್ಳುವಂತೆ ಹೇಳಿ ಕಳುಹಿಸಿದ್ದೆವು. ಅದಾಗಿ ಆರು ತಿಂಗಳಲ್ಲಿ ಸಣ್ಣಗಾಗಿ ಬಂದ ದೀಪಿಕಾ ಬಳಿ ನಾವು ಮೊದಲ ಬಾರಿಗೆ ಕೋಲ್ಗೇಟ್ ಜಾಹೀರಾತು ಮಾಡಿಸಿದ್ದೆವು. ಮೊನ್ನೆ ಶೂಟಿಂಗ್ ಪ್ರಯುಕ್ತ ಮುಂಬೈನ ಯಶ್‍ರಾಜ್ ಸ್ಟುಡಿಯೋಗೆ ಹೋಗಿದ್ದಾಗ, ಆಕೆಯೇ ನನ್ನನ್ನು ಗುರುತು ಹಿಡಿದು ಬಂದು ಮಾತನಾಡಿಸಿದಳು. ಖುಷಿಯಾಯಿತು' ಎಂದು ನೆನಪುಗಳನ್ನು ಬಿಚ್ಚಿಡುತ್ತಾರೆ ಅನಿಲಾ ಆನಂದ್. ವಿಶೇಷ ಅಂದ್ರೆ ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಅವರನ್ನೂ ಇವರೇ ಜಾಹೀರಾತು ಲೋಕಕ್ಕೆ ಪರಿಚಯಿಸಿದ್ದಂತೆ. ಮಾತ್ರವಲ್ಲ ಫರ್ಹಾನ್ ಅಖ್ತರ್, ಕಂಗನಾ ರಣಾವತ್, ದಿಯಾ ಮಿರ್ಜಾ, ರಣದೀಪ್ ಹೂಡಾ ಅವರಂತಹ ಹೆಸರಾಂತ ಬಾಲಿವುಡ್ ನಟರೊಂದಿಗೂ ಕೆಲಸ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ರಮ್ಯಾ ಚಿತ್ರರಂಗಕ್ಕೆ ಬಂದಿದ್ದು...?

ಮಾಜಿ ಸಂಸದೆ, ಖ್ಯಾತ ಸ್ಯಾಂಡಲ್‍ವುಡ್ ನಟಿ ರಮ್ಯಾ ಅವರನ್ನೂ ಚಿತ್ರರಂಗಕ್ಕೆ ಪರಿಚಯಿಸಿದ್ದು ಇದೇ ಅನಿಲಾ ಮೇಡಂ. ರಮ್ಯಾ ಸಿನಿಮಾ ಕನಸು ಹೊತ್ತು ಇವರ ಬಳಿ ಬಂದಾಗ, ಅನಿಲಾ ಅವರನ್ನು ವಜ್ರೇಶ್ವರಿ ಕಂಬೈನ್ಸ್ ಕಚೇರಿಗೆ ಕರೆದೊಯ್ದರಂತೆ. ಅದು ಪುನೀತ್ ರಾಜ್‍ಕುಮಾರ್ ಅವರ `ಅಪ್ಪು' ಚಿತ್ರಕ್ಕೆ ತಯ್ಯಾರಿ ನಡೆಯುತ್ತಿದ್ದ ಸಮಯ. ಆಗ ಪುನೀತ್ ಅವರೊಂದಿಗೆ ಸ್ಕ್ರೀನ್ ಟೆಸ್ಟ್ ಮಾಡಿದರು. ಆದರೆ ರಮ್ಯಾ ಸ್ವಲ್ಪ ದಪ್ಪಗಿದ್ದ ಕಾರಣ, ಅವರಿಗೆ ಸಣ್ಣಗಾಗಲು ಹೇಳಿದರು. ಅದಾಗಿ ಸ್ವಲ್ಪ ತಿಂಗಳ ಬಳಿಕ ಅವರು `ಅಭಿ' ಹಾಗೂ `ಎಕ್ಸ್​ಕ್ಯೂಸ್​ ಮಿ' ಚಿತ್ರಗಳಿಗೆ ಆಯ್ಕೆಯಾದರು' ಎಂದು ಹೇಳಿಕೊಳ್ಳುತ್ತಾರೆ ಅನಿಲಾ. ರಮ್ಯಾ ಮಾತ್ರವಲ್ಲ ದಿವಂಗತ ನಟಿ ನಿವೇದಿತಾ ಜೈನ್, ದಿಗಂತ್, ಲಕ್ಷ್ಮೀ ಗೋಪಾಲಸ್ವಾಮಿ, ವಿನಯ್ ರೈ, ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನೇಹಾ ಶೆಟ್ಟಿ, ರಘು ಮುಖರ್ಜಿ ಸೇರಿದಂತೆ ಹಲವಾರು ಸ್ಯಾಂಡಲ್‍ವುಡ್ ಸ್ಟಾರ್‍ಗಳು ಚಿತ್ರರಂಗಕ್ಕೆ ಬರುವ ಮುನ್ನ ಅನಿಲಾ ಅವರ ಗರಡಿಯಲ್ಲಿ ಪಳಗಿದ್ದಾರೆ.

ಮಹಿಳೆಯರಿಗೆ ಕಿವಿಮಾತು

ಇದು ಪುರುಷಪ್ರಧಾನ ಸಮಾಜ. ಹೀಗಾಗಿಯೇ ಬಹುತೇಕ ಕ್ಷೇತ್ರಗಳಲ್ಲಿ ಪುರುಷರೇ ಹೆಚ್ಚು. ಅನಿಲಾ ಅವರು ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟಾಗಲೂ ಇಲ್ಲಿ ಪುರುಷರದ್ದೇ  ಪಾರುಪತ್ಯವಿತ್ತು. ಆದರೆ ಕುಟುಂಬದ ಬೆಂಬಲದಿಂದ ಇವತ್ತು ಈ ಮಟ್ಟಕ್ಕೆ ಬೆಳೆದಿದ್ದಾರೆ. 

" ಮೊದಲು ಕುಟುಂಬದವರಲ್ಲಿ ನಮ್ಮ ಕೆಲಸದ ಕುರಿತು ಆತ್ಮವಿಶ್ವಾಸ ತುಂಬಬೇಕು. ಅವರ ಬೆಂಬಲ ನಿಮಗೆ ಬೇಕೇಬೇಕು. ಅವರ ವಿರುದ್ಧ ಹೋಗಿ ನೀವು ಏನೂ ಸಾಧಿಸಲಾಗುವುದಿಲ್ಲ. ಮೊದಲು ಮಾಡೆಲಿಂಗ್ ಕೋಆರ್ಡಿನೇಟರ್ ಆಗುವ ಕುರಿತು ಹೇಳಿದಾಗ, ನಮ್ಮ ಮನೆಯಲ್ಲೂ ಎಲ್ಲರಿಗೆ ಶಾಕ್ ಆಯಿತು. ಯಾಕೆಂದರೆ ಈ ಕ್ಷೇತ್ರದಲ್ಲಿ ಪುರುಷರೇ ಹೆಚ್ಚಿದ್ದರು. ಅವರೇ ಬಂದು ನನ್ನನ್ನು ಪಿಕ್ ಮತ್ತು ಡ್ರಾಪ್ ಮಾಡುತ್ತಿದ್ದರು. ಹಾಗಂತ ನಾನೊಬ್ಬಳೇ ಕಾರ್‍ನಲ್ಲಿ ಮತ್ತೊಬ್ಬ ಪುರುಷನೊಂದಿಗೆ ಹೋಗುತ್ತಿದ್ದೇನೆ ಅಂತ ಕುಟುಂಬದವರು ತಪ್ಪು ತಿಳಿದುಕೊಳ್ಳಲಿಲ್ಲ. ಯಾಕೆಂದರೆ ನಾನು ಎಲ್ಲರೊಂದಿಗೆ ಹಾಗೆ ನಡೆದುಕೊಳ್ಳುತ್ತಿದ್ದೆ. ಮಕ್ಕಳೂ ಯಾಕಿಷ್ಟು ಶ್ರಮ ಪಡುತ್ತೀಯಾ ಎಂದು ಕೇಳುತ್ತಿದ್ದರು. ಆಗ ನಾನು ತಿಳಿವಳಿಕೆ ಹೇಳಿದೆ. ಅವರಿಗೂ ಅರ್ಥವಾಯಿತು. ಹೀಗೆ ಕುಟುಂಬದಿಂದ ಸಾಕಷ್ಟು ಬೆಂಬಲ ದೊರೆತಿದೆ " 
 ಅನಿಲಾ ಆನಂದ್​, ಅದಿತಿ ಕ್ರಿಯೇಷನ್ಸ್ ಸಂಸ್ಥಾಪಕಿ

ನಾನು ಹುಡುಗನಾಗಿ ಹುಟ್ಟಬೇಕಿತ್ತು!

ಕೆಲವೊಮ್ಮೆ ನಾನು ಹುಡುಗನಾಗಿ ಹುಟ್ಟಬೇಕಿತ್ತು ಅಂತನಿಸುತ್ತದೆ. ಹುಡುಗನಾಗಿದ್ದರೆ ಇನ್ನೂ ಏನೇನು ಮಾಡಿರುತ್ತಿದ್ದೆನೋ ಗೊತ್ತಿಲ್ಲ. ಹೆಣ್ಣುಮಕ್ಕಳಿಗೆ ನೈಸರ್ಗಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ ಹಲವು ಸಮಸ್ಯೆಗಳು, ಜವಾಬ್ದಾರಿಗಳಿರುತ್ತವೆ. ಆದರೆ ಅವು ನನ್ನನ್ನು ತಡೆದಿವೆ ಅಂತ ನಾನಂದುಕೊಂಡಿಲ್ಲ. ಕುಟುಂಬ ಮತ್ತು ಕೆಲಸ ಎರಡೂ ಕಡೆ ಗಮನ ಹರಿಸುವುದು ಕಷ್ಟ. ನನಗೆ ಮನೆ, ಅಡುಗೆ, ತೋಟ, ಮಕ್ಕಳು, ಫ್ರೆಂಡ್‍ಗಳು ಬೇಕು ಕೆಲಸವೂ ಬೇಕು. ಅಲ್ಲಿದ್ದರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಇಲ್ಲಿರುವಾಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮಹಿಳೆಯರು ಪುರುಷರಿಗಿಂತ ಶ್ರಮಜೀವಿಗಳು. ಹೀಗಾಗಿಯೇ ಮಹಿಳೆಯರು ಮಾನಸಿಕವಾಗಿ ಪುರುಷರಿಗಿಂತ ತುಂಬ ಗಟ್ಟಿ ಇರುತ್ತಾರೆ. ಒಂದು ಕೆಲಸ ಹಿಡಿದರೆ, ನೂರಕ್ಕೆ ನೂರು ಕೊಡಲೇಬೇಕು ಆಗಲ್ಲ ಎನ್ನುವಂತಿಲ್ಲ, ತಪ್ಪುಗಳೂ ಆಗುವಂತಿಲ್ಲ. ಆ ರೀತಿಯ ಮನೋಭಾವ ನನ್ನದು. ಅದರಿಂದ ನನಗೆ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ ಎಂದುಕೊಳ್ಳುತ್ತೇನೆ' ಎಂದು ಹೇಳುತ್ತಾ ಅನಿಲಾ ಆನಂದ್​ ಮಾತು ಮುಗಿಸಿದ್ರು.

ಇದನ್ನು ಓದಿ:

1. ಹಣದ ಹಿಂದೆ ಬೀಳುವ ವೈದ್ಯರಿಗೆಲ್ಲಾ ಇವರೇ ಒಂದು ಪಾಠ…

2. ಕೌಮುಥಿ ಸೋಲಾರ್​ ಪವರ್​ ಪ್ರಾಜೆಕ್ಟ್​ನ ವಿಶ್ವದಾಖಲೆ- ನನಸಾಗುತ್ತಿದೆ ಗ್ರೀನ್​ ಇಂಡಿಯಾ ಕಾನ್ಸೆಪ್ಟ್​

3. ಸಕ್ಕರೆ ಕಾಯಿಲೆ ಬಗ್ಗೆ ಟೆನ್ಷನ್​ ಬಿಟ್ಟುಬಿಡಿ- ಸೆಲ್ಫ್​ ಮ್ಯಾನೇಜ್​ ಡಯಾಬಿಟಿಸ್​ ಆ್ಯಪ್​ನ್ನು ಡೌನ್​ಲೋಡ್​ ಮಾಡಿ..!

Related Stories