ಫ್ಲಿಫ್​​ಕಾರ್ಟ್​ಗಿಂತ ಡಬಲ್ ಆದಾಯ ಗಳಿಸಿದ ಭಾರತೀಯ ರೈಲ್ವೇ - ಆನ್​​ಲೈನ್ ರೈಲ್ವೇ ಟಿಕೆಟ್ ಮಾರಾಟದಲ್ಲಿ IRCTC ಫಸ್ಟ್

ಉಷಾ ಹರೀಶ್​​​

0

ಭಾರತೀಯ ರೈಲ್ವೇಗೆ ತನ್ನದೇ ಆದ ಇತಿಹಾಸವಿದೆ. ಭಾರತದಲ್ಲಿ ಅತೀ ಬಡವನಿಂದ ಹಿಡಿದು ಶ್ರೀಮಂತರವರೆಗೂ ಎಲ್ಲರೂ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಭಾರತದಲ್ಲಿ ರೈಲ್ವೇಗೆ ಒಂದು ಪ್ರತ್ಯೇಕ ಬಜೆಟ್ ಕೂಡಾ ಮಂಡಿಸಲಾಗುತ್ತದೆ. ಅಂತಹ ರೈಲ್ವೇ ಇಲಾಖೆ ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ(ಐಆರ್​ಸಿಟಿ). ಕಳೆದ ಮಾರ್ಚ್ ತನಕ ಆನ್​ಲೈನ್ ಟಿಕೆಟ್ ಮಾರಾಟದಿಂದ 20 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಿ ದಾಖಲೆ ನಿರ್ಮಿಸಿದೆ. ಇದು ಭಾರತದ ಅತಿದೊಡ್ಡ ಆನ್​ಲೈನ್ ರೀಟೇಲರ್ ಫ್ಲಿಫ್​​ಕಾರ್ಟ್ ಆದಾಯಕ್ಕೆ ಹೋಲಿಸಿದರೆ ಎರಡು ಪಟ್ಟು ದೊಡ್ಡ ಮೊತ್ತವಾಗಿದೆ.

ಐಆರ್​​ಸಿಟಿಸಿ ಏನು..?

ಐಆರ್​​ಸಿಟಿಸಿ ಎಂಬುದು ಭಾರತೀಯ ರೈಲ್ವೆ ಇಲಾಖೆಯ ಒಂದು ಅಂಗ ಸಂಸ್ಥೆಯಾಗಿದ್ದು, ರೈಲ್ವೆ ಇಲಾಖೆಗೆ ಸಂಬಂಧಿಸಿದ ಆಹಾರ ಸರಬರಾಜು, ಪ್ರವಾಸ ಮತ್ತು ಆನ್ ಲೈನ್ ಟಿಕೆಟ್ ಕಾದಿರಿಸುವ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ.

ಇ-ಟಿಕೆಟ್ ವಹಿವಾಟು

ಇ-ಟಿಕೆಟ್ ಮಾರಾಟದಿಂದ ಇಂಡಿಯನ್​​ ರೈಲ್ವೇ ಆದಾಯ 15,410 ಕೋಟಿಯಿಂದ 20,620 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. 2002ರಲ್ಲಿ ಇ-ಟಿಕೆಟ್ ವಿತರಣೆ ಆರಂಭವಾದಾಗ ದಿನಕ್ಕೆ 27 ಟಿಕೆಟ್ ಮಾತ್ರ ಮಾರಾಟವಾಗುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ದೇಶದಲ್ಲಿ ಕೆಲವೊಂದು ದಿನ ಸರಾಸರಿಯಾಗಿ 13.4 ಲಕ್ಷ ಟಿಕೆಟ್ ವಿತರಣೆಯಾದ ಇತಿಹಾಸವೂ ಇದೆ. ಇತ್ತೀಚಿನ ದಿನಗಳಲ್ಲಿ ಮಾರಾಟವಾಗುವ ಒಟ್ಟು ರೈಲ್ವೇ ಟಿಕೆಟ್​​ಗಳಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಆನ್​​ಲೈನ್​​ನಲ್ಲೇ ಮಾರಾಟವಾಗುತ್ತಿವೆ. ಅಷ್ಟೇ ಅಲ್ಲದೇ ಐಆರ್​​ಸಿಟಿಸಿ ತನ್ನ ಪೋರ್ಟಲ್​​ನಲ್ಲಿ ನಾನಾ ಜಾಹೀರಾತುಗಳಿಗೆ ಸ್ಥಳವಾಕಾಶ ಕೊಟ್ಟು ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹಿಸುತ್ತಿದೆ.

ನಿಮಿಷಕ್ಕೆ ಎರಡು ಸಾವಿರ ಟಿಕೆಟ್..!

ನಿಮಿಷಕ್ಕೆ ಎರಡು ಸಾವಿರ ಟಿಕೆಟ್ ವಿತರಿಸುವ ವ್ಯವಸ್ಥೆ ಮಾಡಿರುವ ಇಲಾಖೆ ಅದನ್ನು 7200 ಟಿಕೆಟ್ ವಿತರಿಸುವ ಮಟ್ಟಿಗೆ ಸದೃಢಗೊಳಿಸಲು ತಯಾರಿ ನಡೆಸಿದೆ. ಸಮರ್ಪಕ ಮತ್ತು ತ್ವರಿತ ವೇಗದ ತಾಂತ್ರಿಕ ವ್ಯವಸ್ಥೆಯನ್ನು ಬಳಸಿಕೊಂಡು ಇ ಟಿಕೆಟ್ ಮಾರಾಟದಲ್ಲಿ ರೈಲ್ವೇ ಇಲಾಖೆ ಈ ಪ್ರಗತಿ ಸಾಧಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಆನ್​ಲೈನ್ ಟಿಕೆಟ್ ಮಾರಾಟದಿಂದ 20,620 ಕೋಟಿ ರೂ. ಆದಾಯ ಪಡೆದಿರುವ ಇಲಾಖೆ ಇದರಿಂದ ಶೇ 34 ರಷ್ಟು ಲಾಭ ಗಳಿಸಿದೆ. ಒಂದು ವರ್ಷದ ಹಿಂದಿನ ವಹಿವಾಟು 15,410 ಕೋಟಿ ರೂಪಾಯಿ. ಕಳೆದ ವರ್ಷ 130 ಕೋಟಿ ರೂಪಾಯಿ ತೆರಿಗೆ ಪಾವತಿಸಿದ ನಂತರವೂ ಐಆರ್​ಸಿಟಿ ಆದಾಯದಲ್ಲಿ ಹೆಚ್ಚಳವಾಗಿದೆ.

ರೈಲ್ ನೀರ್ ನಿಂದಲೂ ಲಾಭ

ಇ-ಟಿಕೆಟ್ ಮಾತ್ರವಲ್ಲದೆ ಟಿಕೆಟ್​​ಗಳ ಮೇಲಿನ ಸೇವಾ ತೆರಿಗೆ, ಕೇಟರಿಂಗ್ ಸರ್ವೀಸ್, ‘ರೈಲ್ ನೀರ್’ ಬಾಟಲ್ ಮಾರಾಟದಿಂದ ರೈಲ್ವೆ ಇಲಾಖೆಯ ಆದಾಯ ಶೇ.19ರಷ್ಟು ಹೆಚ್ಚಳವಾಗಿದೆ. ಒಟ್ಟು 1,141 ಕೋಟಿ ತಲುಪಿದೆ. ಈ ತನಕ ಐಆರ್​ಸಿಟಿಸಿಗೆ ಸ್ಪರ್ಧೆಯೊಡ್ಡುವಂಥ ಆನ್​ಲೈನ್ ಮಾರುಕಟ್ಟೆ ತಾಣಗಳು ಯಾವುದು ಇಲ್ಲ ಎಂಬುದು ಅಧಿಕಾರಿಗಳ ಮಾತು. ಅಷ್ಟೇ ಅಲ್ಲದೆ ಐಆರ್​ಸಿಟಿಸಿ ನೀಡುವ ಗ್ರಾಹಕ ಸೇವೆ ಆಹಾರ, ಪ್ರವಾಸ ಮತ್ತಿತರ ಸೌಲಭ್ಯಗಳು ಜನರನ್ನು ಆಕರ್ಷಿಸಿವೆ. ಅದಕ್ಕಾಗಿ ಸಾಕಷ್ಟು ಜಾಹಿರಾತುದಾರರು ಐಆರ್​ಸಿಟಿಸಿ ವೆಬ್​ಸೈಟ್​​ಗೆ ಜಾಹೀರಾತು ನೀಡಿದ್ದಾರೆ. ಇದರಿಂದ ಆನ್​ಲೈನ್ ವ್ಯವಹಾರ ಜೋರಾಗಿಯೇ ಸಾಗಿದೆ.

Related Stories