ಸಮಾಜದಲ್ಲಿ ಕಂಡೂ ಕಾಣಿಸದ ಪ್ರತಿಭಾ ಸಂಪನ್ನರು

ವಿಶ್ವಾಸ್​ ಭಾರಾಧ್ವಾಜ್​​

0

ಅಸಹಾಯಕತೆಯ ನಡುವೆಯೂ ಬದುಕಿನ ಮಹಾಸಾಗರವನ್ನು ಧೈರ್ಯದಿಂದ ಎದುರಿಸಿ ಈಜಿದ ಛಲದಂಕ ಮಲ್ಲ, ದೈಹಿಕ ವೈಕಲ್ಯವನ್ನೇ ಮೆಟ್ಟಿ ನಿಂತ ವಿರಾಟ್ ಪ್ರತಿಭೆ, ಅಂಗವೈಕಲ್ಯ ಧಿಕ್ಕರಿಸಿ ಮೂಗಿನ ಮೇಲೆ ಬೆರಳಿಡುವ ಸಾಧನೆ ನಿರ್ವಹಿಸಿದ ಬಹುಮುಖ ಪ್ರತಿಭೆ ವಿಶ್ವಾಸ್ ರವಿ. ಇಷ್ಟೆಲ್ಲಾ ಪ್ರತಿಭಾವಂತ ನಮ್ಮದೇ ಬೆಂಗಳೂರಿನಲ್ಲಿದ್ದರೂ ಅಜ್ಞಾತದಲ್ಲಿ ಬದುಕುತ್ತಿರುವ ವಿಶ್ವಾಸ್ ರವಿಯ ಜೀವನದ ಮೇಲೆ ಬೆಳಕು ಚೆಲ್ಲುವ ಕಥಾನಕವಿದು. ವಿಶ್ವಾಸ್ ರವಿ ಅನ್ನುವ ಈ ಹೆಮ್ಮೆಯ ಕನ್ನಡದ ಕುವರನ ಬಾಳಲ್ಲಿ ಇದ್ದಿದ್ದು ಬರೀ ಅಂಧಕಾರವೇ. ಅವರ ಹೆಸರಿನಲ್ಲಿದ್ದ ಸೂರ್ಯ ಎಂದಿಗೂ ಪ್ರಜ್ವಲಿಸಲೇ ಇಲ್ಲ. ಅವರ ಜೀವನದಲ್ಲಿ ಘಟಿಸಿದ ಕರಾಳ ಅವಘಡವೊಂದು ವಿಶ್ವಾಸ್‍ರ ಭವಿಷ್ಯವನ್ನು ಮಬ್ಬುಮಾಡಿತ್ತು. ಆದರೂ ಧೃತಿಗೆಡದೆ ಎದುರಾದ ಎಲ್ಲಾ ಅಡೆತಡೆಗಳನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿದ ವಿಶ್ವಾಸ್ ತಮ್ಮ ಬದುಕಿನ ಸಂಕಷ್ಟದ ಸರಮಾಲೆಗಳನ್ನೇ ಸಾಧನೆಗೆ ಮೆಟ್ಟಿಲುಗಳನ್ನಾಗಿಸಿ ಶಿಖರವೇರಿದ ವಿಶೇಷ ಪ್ರತಿಭೆ.

ಅಪರಿಮಿತ ವಿಶ್ವಾಸದ ಯುವಕ ವಿಶ್ವಾಸ್ ರವಿ, ವಿಶ್ವಾಸವೊಂದಿದ್ರೆ ಸಾಕು ಏನನ್ನಾದ್ರೂ ಗೆಲ್ಲಬಹುದು ಅನ್ನೋದಕ್ಕೆ ಜೀವಂತ ಸಾಕ್ಷಿ. ನೋವು ಅವಮಾನಗಳನ್ನ ಹಲ್ಲು ಕಚ್ಚಿ ಸಹಿಸಿ, ಅಗಿದು ನುಂಗಿ ಸಾಧನೆಯ ಮೂಲಕ ತಲೆ ಎತ್ತಿ ನಿಂತ ದಿಟ್ಟ ಈ ಯುವಕ. ಹತ್ತು ವರ್ಷ ತುಂಬುವವರೆಗೂ ವಿಶ್ವಾಸ್ ಸಹಜPವಾಗಿಯೇ ಇದ್ದ ಬಾಲಕ. ಅವರ ಬಾಲ್ಯದಲ್ಲಿ ನಡೆದ ದುರಂತ ವಿಶ್ವಾಸ್‍ರ ಭವಿಷ್ಯವನ್ನು ಕಳೆಹೀನಗೊಳಿಸಿ ಬದುಕನ್ನೇ ಬದಲಾಯಿಸಿತು. ಹತ್ತು ವರ್ಷದ ವಿಶ್ವಾಸ್, ನಾಲ್ಕನೇ ತರಗತಿ ಓದುತ್ತಿದ್ದಾಗ ಅಂದೊಂದು ದಿನ ತನಗೆ ಅರಿವಿಲ್ಲದಂತೆ ವಿದ್ಯುತ್ ಅಪಘಾತಕ್ಕೆ ಸಿಲುಕಿ, ತಮ್ಮೆರಡು ಕೈಗಳನ್ನ ಕಳೆದುಕೊಂಡರು. ಆ ವೇಳೆ ಮಗನ ರಕ್ಷಣೆಗೆ ಮುಂದಾದ ಪ್ರೀತಿಯ ಅಪ್ಪ ಸಹ ವಿಧಿಯಾಟಕ್ಕೆ ಬಲಿಯಾದರು. ವಿಶ್ವಾಸ್, ತಮ್ಮ ಬದುಕಿನಲ್ಲಿ ಪ್ರತ್ಯಕ್ಷ ನರಕದರ್ಶನ ಮಾಡಿದ್ದು ಅಂದಿನಿಂದಲೇ. ಅದಾಗಿ ಹದಿನೈದು ದಿನಗಳಾದ ಬಳಿಕವಷ್ಟೆ ಅವರಿಗೆ ತಂದೆಯ ದುಃಖಾಂತ್ಯದ ವಿಷಯ ತಿಳಿಸಲಾಗಿತ್ತು. ಚಿನ್ನದ ನಾಡು ಕೋಲಾರದಲ್ಲಿ ನೆಲೆಸಿದ್ದ ಅವರ ಕುಟುಂಬ ಮುಂದಿನ ಬದುಕು ಸಾಗಿಸಲು ಬಂದಿದ್ದು ಮಹಾನಗರಿ ಬೆಂಗಳೂರಿಗೆ. ಅಮ್ಮನ ಆರೈಕೆ ಹಾಗೂ ರಕ್ಷಣೆಯ ನೆರಳಿನಲ್ಲಿ ಬೆಳೆದ ವಿಶ್ವಾಸ್ ಕಷ್ಟದಿಂದ ಅಭ್ಯಾಸ ನಡೆಸಿ ಸಮಾಜವೇ ಅಚ್ಚರಿ ಪಡುವಂತೆ ಬಿಕಾಂ ಪದವಿ ಸಂಪಾದಿಸಿಕೊಂಡರು. ಆದರೆ ವಿಧಿ ವಿಪರ್ಯಾಸ ಬೇರೆಯೇ ಆಗಿತ್ತು. ಮತ್ತೊಂದು ಆಘಾತ ಬರಸಿಡಿಲಿನಂತೆ ಬಂದೆರಗಿತ್ತು, ವಿಶ್ವಾಸ್‍ರ ಓದು ಮುಗಿಯುವ ವೇಳೆಗೆ ಅವರಿಗೆ ಅಪಾರ ಆತ್ಮಸ್ಥೈರ್ಯ ತುಂಬುತ್ತಿದ್ದ ತಾಯಿ ಅವರಿಂದ ದೂರವಾಗಿದ್ದರು.

ಎರಡು ಕೈಗಳನ್ನೂ ಕಳೆದುಕೊಂಡು, ಹೆತ್ತ ಜೀವಗಳನ್ನು ಕಳೆದುಕೊಂಡ ವಿಶ್ವಾಸ್ ಈಗಲೂ ಒಂಟಿ ಜೀವನ ಸಾಗಿಸುತ್ತಿದ್ದಾರೆ. ಅನುದಿನವೂ ಕೇವಲ ನೋವನ್ನೇ ತಿಂದುಂಡು ಬೆಳೆದವರಾದರೂ ಬದುಕಿನ ಯಾವ ಹಂತದಲ್ಲೂ ಸೋಲನ್ನು ಒಪ್ಪಿಕೊಳ್ಳದೇ, ಎದುರಾದ ಸಂಕಷ್ಟಗಳ ಸರಮಾಲೆಯನ್ನೇ ಸವಾಲಾಗಿ ಸ್ವೀಕರಿಸಿದವರು. ಮುಖ್ಯವಾಗಿ ಶ್ಲಾಘಿಸಬೇಕಾದ ಸಂಗತಿ ಎಂದರೇ ಅವರು ಇವೇ ಮಾನದಂಡಗಳ ಮೂಲಕ ಇಂದು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಎರಡೂ ಕೈ ಕಳೆದುಕೊಂಡರೂ ವಿಶ್ವಾಸ್ ತಮ್ಮ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ನೋವಿನಲ್ಲಿ ನರಳುತ್ತಿದ್ರೂ ಸಹಾಯ ನಿರಾಕರಿಸಿದ ಮಂದಿಗೆ ತಮ್ಮ ಸಾಧನೆಯ ಮೂಲಕವೇ ಪ್ರತ್ಯುತ್ತರ ಕೊಟ್ಟಿದ್ದಾರೆ. ಅವರು ಎದುರಿಸಿದ ನಿರಾಸೆಗಳು ಒಂದೆರಡಲ್ಲ ಎರಡೂ ಕೈಗಳನ್ನು ಕಳೆದುಕೊಂಡು ಹೊಟ್ಟೆ ಪಾಡಿಗಾಗಿ ಕೆಲಸಕ್ಕೆ ಅಲೆಯುತ್ತಿದಾಗ ಲಭಿಸುತ್ತಿದ್ದಿದ್ದು ಕೇವಲ ಧೈನ್ಯ ಅನುಕಂಪ ಮಾತ್ರ. ಒಂಟಿ ಜೀವನ ಬದುಕು ಸಾಗಿಸ್ಬೇಕು ಅನ್ನೋ ಅನಿವಾರ್ಯತೆಯಲ್ಲಿ ತಮ್ಮ ಕಷ್ಟದ ದಿನಗಳಲ್ಲಿ ಬದುಕಿನ ಮಹಾಪ್ರವಾಹ ದಾಟಿದ ಕಥೆ ನಿಜಕ್ಕೂ ಮೈ ನವಿರೇಳಿಸುವಂತದ್ದು.

ಅವರಿಗೆ ಅನುಕಂಪ ಅನ್ನೋ ಪದದ ಬಗ್ಗೆ ಅಸಹ್ಯವಿತ್ತು; ಆದ್ರೆ ಬದುಕುವ ಹಠವಿತ್ತು. ಅವಮಾನ, ಅನುಕಂಪಗಳನ್ನೇ ಎದುರಿಸುತ್ತಿದ್ದವರು ಸಾಧಿಸುವ ಛಲ ಮೈಗೂಡಿಸಿಕೊಂಡರು. ಈ ಛಲವೇ ಅವರ ಬದುಕನ್ನು ಬದಲಾಯಿಸಿ ಪ್ರಶಸ್ತಿಗಳ ಸರದಾರನನ್ನಾಗಿ ಮಾಡಿತು. ಕೈಗಳ ಸಹಾಯವಿಲ್ಲದೇ ತಮ್ಮ ಎಲ್ಲಾ ಕೆಲಸ ಕಾರ್ಯಗಳನ್ನ ಮಾಡಿಕೊಳ್ಳುವ ಸ್ವಾಭಿಮಾನಿ ವಿಶ್ವಾಸ್‍ಗೆ ಮೊದಮೊದಲು ಎಷ್ಟೇ ಅಲೆದಾಡಿದರೂ ಎಲ್ಲೂ ಕೆಲಸ ಸಿಗಲಿಲ್ಲ. ಸಾಕಷ್ಟು ಕಂಪನಿಗಳ ಮೆಟ್ಟಿಲುಗಳನ್ನು ಹತ್ತಿಳಿದರೂ ಪ್ರಯೋಜನ ಆಗಲಿಲ್ಲ. ಇದರಿಂದ ಅವರಲ್ಲಿ ನಿಧಾನ ಕೀಳರಿಮೆ ಹುಟ್ಟಿಸತೊಡಗಿತ್ತು. ಇದೇ ಕೊರಗಲ್ಲಿ ನರಳುತ್ತಿದ್ದಾಗ ಒಂದು ದಿನ ಎಲ್ಲಾ ಅವಮಾನಗಳನ್ನ ಸಹಿಸಿ, ಕೀಳರಿಮೆ ತೊಡೆದು ಹಾಕಿದ ಮೈ ಕೊಡವಿ ಮೇಲೆದ್ದ ಅವರು ಮತ್ತೆ ಹಿಂತುರಿಗಿ ನೋಡಲೇ ಇಲ್ಲ. ಬದುಕಿನಲ್ಲಿ ಸಮಾಜ ಗುರುತಿಸುವ ಏನಾದರೂ ಸಾಧನೆ ಮಾಡುವ ಬಗ್ಗೆ ನಿರ್ಧಾರ ಮಾಡಿದರು. ನೃತ್ಯ ಕಲಿತರು, ಜೊತೆಗೆ ಮಾರ್ಶಲ್ ಆರ್ಟ್ಸ್​​  ಕುಂಗ್‍ಫೂ ಹಾಗೂ ಈಜನ್ನ ಕಲಿತರು. ಅಪರಿಮಿತ ಆಸಕ್ತಿ, ಉತ್ಸಾಹ, ಹಾಗೂ ಶ್ರದ್ಧೆಯಿಂದ ನಿರಂತರ ಅಭ್ಯಾಸ ಮಾಡಿದರು.

ಅಪಾರ ಪ್ರತಿಭಾವಂತ ವಿಶ್ವಾಸ್ ಈಗ ಕುಂಗ್‍ಫೂ ಕಿಂಗ್. ರಾಷ್ಟ್ರ ಮಟ್ಟದ ಕುಂಗ್ ಫೂ ಮಾರ್ಷಲ್ ಆರ್ಟ್ಸ್​​ನಲ್ಲಿ ಮೂರು ಬೆಳ್ಳಿ ಪದಕಗಳನ್ನ ಗೆದ್ದ ಹೆಗ್ಗಳಿಕೆ ಇವರದ್ದು. ನೃತ್ಯ ಮಾಡಲು ತೊಡಗಿದ್ರೇ ಆ ಮನೋಹರ ನರ್ತನಕ್ಕೇ ನಾಟ್ಯ ಮಯೂರವೂ ಪರಾಕು ಹೇಳಬೇಕು; ಅಷ್ಟು ರಮ್ಯವಾಗಿರುತ್ತದೆ. ಕೈಗಳ ಸಹಾಯವೇ ಇಲ್ಲದೇ ಇವರು ಅತ್ಯಂತ ಆತ್ಮವಿಶ್ವಾಸದಿಂದ ಈಜುತ್ತಾರೆ. ಅವರಿಗಿದು ಅತ್ಯಂತ ಸಹಜವಾಗಿ ಜನ್ಮತಃ ಸಿದ್ಧಿಸಿದ ವರವೇನೋ ಅನ್ನುವಂತೆ ಮೀನುಗಳಂತೆ ಸರಾಗವಾಗಿ ಈಜಾಡುತ್ತಾರೆ. ಈಗಾಗಲೇ ಎಂ.ಕಾಂ ಮುಗಿಸಿರೋ ವಿಶ್ವಾಸ್, ಬೆಂಗಳೂರಿನ ವಿಜಯನಗರದಲ್ಲಿ ವಾಸವಿದ್ದಾರೆ. ನೇರವಾಗಿ, ನಿಷ್ಠುರವಾಗಿ ಮಾತನಾಡುವ ಇವರು, ಎರಡು ಕೈಗಳ ಕೆಲಸವನ್ನು ತಮ್ಮೆರಡು ಕಾಲುಗಳಲ್ಲಿ ಮಾಡಿಕೊಳ್ಳುತ್ತಾರೆ. ಹೀಗೆ ದಣಿವರೆಯದ ಸಾಧನೆ ಮಾಡಿರುವ ವಿಶ್ವಾಸ್ ರವಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತರು ಸಹ ಹೌದು. ವಿಶ್ವ ವಿಕಲಚೇತನರ ದಿನಾಚರಣೆಯಂದೇ ವಿಶ್ವಾಸ್ ರವಿಯವರಿಗೆ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನೂ ಮೆಚ್ಚಬೇಕಾದ ಸಂಗತಿ ಎಂದರೇ ವಿಶ್ವಾಸ್ ರವಿ ತಮ್ಮಲ್ಲಿರೋ ಅದ್ವಿತೀಯ ಪ್ರತಿಭೆಯನ್ನ ಹಲವು ವಿಶೇಷ ಪರಿಣಿತ ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. ಕೇವಲ ಆತ್ಮವಿಶ್ವಾಸವನ್ನೇ ಸಾಧನೆಯ ಮಾನದಂಡವನ್ನಾಗಿಸಿದ ವಿಶೇಷ ಚೇತನ ವಿಶ್ವಾಸ್ ರವಿಯವರಿಗೆ ಯುವರ್ ಸ್ಟೋರಿ ಪರವಾಗಿ ಹ್ಯಾಟ್ಸ್ ಆಫ್..

Related Stories

Stories by YourStory Kannada