ದೇಸಿ ಸ್ಟೈಲ್‍ಗೆ ಫೇಮಸ್ ಆದ ಮಾಲಿನಿ ಮುದ್ದಪ್ಪ

ಟೀಮ್ ವೈ.ಎಸ್.

0

ನೀವು ಆ ಬಟ್ಟೆಯ ಸ್ಟೈಲ್, ಕಲರ್, ಫ್ಯಾಬ್ರಿಕ್ ನೋಡುತ್ತಿದ್ದಂತೆ ಹೇಳಿಬಿಡಬಹುದು ಅದು ವಿನ್ಯಾಸಕಿ ಮಾಲಿನಿ ಮುದ್ದಪ್ಪ ಅವರ ಡಿಸೈನಿಂಗ್ ವರ್ಕ್ ಎಂದು. ಅಷ್ಟು ಫೇಮಸ್ ಆಗಿವೆ ಮಾಲಿನಿ ಮುದ್ದಪ್ಪ ಅವರ ಡಿಸೈನಿಂಗ್ ಡ್ರೆಸ್‍ಗಳು. ಅಂದಹಾಗೆ ಅವರು ವಿನ್ಯಾಸ ಮಾಡುವ ದಿರಿಸುಗಳು ಪಕ್ಕಾ ದೇಸಿ ಸ್ಟೈಲ್‍ನಲ್ಲಿರುವುದು ವಿಶೇಷ. ಅಷ್ಟೇ ಅಲ್ಲ ಈ ದಿರಿಸುಗಳು ಪ್ರತಿಯೊಬ್ಬರಿಗೂ ಫಿಟ್ ಆಂಡ್ ಫೈನ್ ಆಗಿ ಕಾಣಿಸುತ್ತವೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊಂದಿರುವ ಮಾಲಿನಿ ಮುದ್ದಪ್ಪ ಅವರ ವಿನ್ಯಾಸದ ಬಟ್ಟೆಗಳು ಹೇಗೆ ತಯಾರಾಗುತ್ತವೆ, ಅವರು ಇಷ್ಟರ ಮಟ್ಟಿಗೆ ಬೆಳೆದದ್ದು ಹೇಗೆ ಎಂಬ ಕುತೂಹಲವಿದ್ದರೆ ಈ ಲೇಖನವನ್ನೊಮ್ಮೆ ಓದಿ...

ಮಾಲಿನಿ ಮುದ್ದಪ್ಪ ಅವರಿಗೆ ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ತುಡಿತ, ಕನಸು ಚಿಕ್ಕಂದಿನಿಂದಲೂ ಇತ್ತು. ಈ ವಿಷಯದಲ್ಲಿ ಅವರಿಗೆ ತಾಯಿಯೇ ಮೊದಲ ಪ್ರೇರಣೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಮಾಲಿನಿ ಅವರ ತಂದೆ ಮಿಲಿಟರಿ ಎಂಜಿನಿಯರಿಂಗ್ ಸರ್ವಿಸ್‍ನಲ್ಲಿದ್ದರಿಂದ, ಸಹಜವಾಗಿಯೇ ಅವರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಶಿಫ್ಟ್ ಆಗುವುದು ಸಾಮಾನ್ಯವಾಗಿತ್ತು. ಈ ಸಮಯದಲ್ಲಿ ಹೆಚ್ಚುಕಡಿಮೆ ಕಾಶ್ಮೀರ, ಅಸ್ಸಾಂ, ಪುಣೆ ಹೀಗೆ ಎಲ್ಲಾ ಸ್ಥಳಗಳನ್ನು ಸುತ್ತುವರೆಯುವ ಪ್ರಸಂಗ ಬಂದೊದಗಿತು. ಆಗ ಆರ್ಮಿ ಪಾರ್ಟಿಗಳಿಗೆ ಹೊರಡುತ್ತಿದ್ದ ಅವರ ತಾಯಿಯ ಡ್ರೆಸ್ಸಿಂಗ್ ಸ್ಟೈಲ್ ಮಾಲಿನಿ ಅವರ ಮೇಲೆ ಗಾಢ ಪರಿಣಾಮ ಬೀರಿತಂತೆ. ತನ್ನ ತಾಯಿಯನ್ನು ‘ಕ್ಲಾಸಿಕ್ ಬ್ಯೂಟಿ’ ಎಂದೇ ವರ್ಣಿಸುವ ಮಾಲಿನಿ, “ಸ್ಥಳಗಳಿಗೆ ತಕ್ಕಂತೆ ಡ್ರೆಸ್, ಕಲರ್‍ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ನನ್ನ ತಾಯಿಯ ಸ್ಟೈಲ್ ನಿಜಕ್ಕೂ ಅದ್ಭುತ”ವೆಂದು ಪ್ರಂಶಸಿಸುತ್ತಾರೆ. ಹೀಗೆ ಬಾಲ್ಯದ ದಿನಗಳಿಂದಲೇ ಡ್ರೆಸ್ ಫ್ಯಾಷನ್ ಡಿಸೈನ್ ಬಗ್ಗೆ ಒಲವನ್ನು ಬೆಳೆಸಿಕೊಂಡವರು ಮಾಲಿನಿ.

ವಸ್ತ್ರೋದ್ಯಮ ಕ್ಷೇತ್ರದಲ್ಲಿ ಅನುಭವ

ಹಾಗೆ ನೋಡಿದರೆ ಮಾಲಿನಿ ಅವರು ಈ ಕ್ಷೇತ್ರಕ್ಕೆ ಏಕಾಏಕಿ ಕಾಲಿಟ್ಟಿಲ್ಲ. ಎರಡು ದಶಕಗಳ ಕಾಲ ವಸ್ತ್ರೋದ್ಯಮ ಕ್ಷೇತ್ರದಲ್ಲಿ ದುಡಿದ ಅವರು ಅಬೆಕ್ರ್ರೋಮ್ಬೀ ಮತ್ತು ಫಿಚ್, ಗ್ಯಾಪ್(GAP) ನಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಕಾರ್ಯನಿರ್ವಹಿಸಿದ ಕೊನೆಯ ಸಂಸ್ಥೆ ಲೆವಿ ಸ್ಟ್ರಾಟಸ್ ಅಂಡ್ ಕೊ. ಇಲ್ಲಿ ಅವರು ದಕ್ಷಿಣ ಏಷ್ಯಾದ ಟಾಪ್ಸ್ ಸೋರ್ಸಿಂಗ್ ಹೆಡ್ ಆಗಿದ್ದರು. ಮಾಲಿನಿ ಇಷ್ಟರಮಟ್ಟಿಗೆ ಬೆಳೆಯಲು ಇಂತಹ ಕಂಪೆನಿಗಳಲ್ಲಿ ಪಡೆದುಕೊಂಡ ಅನುಭವ ಎಂಬುದನ್ನು ಮಾತ್ರ ನಾವೂ ಮರೆಯುವ ಹಾಗಿಲ್ಲ.

ಆರಂಭವಾಯ್ತು ದೇಸಿ ವಸ್ತ್ರ ತಯಾರಿಕೆ

ತಮ್ಮ ದೇಸಿ ವಸ್ತ್ರ ತಯಾರಿಕೆಗೆ ಸಾಂಪ್ರದಾಯಿಕ ಡೈಯಿಂಗ್, ಪ್ರಿಂಟಿಂಗ್ ಹಾಗೂ ವೇವಿಂಗ್ ಟೆಕ್ನಿಕ್ ಬಳಸುವ ಮಾಲಿನಿ ಮುದ್ದಪ್ಪ ಅವರು ಎಲ್ಲಾ ವರ್ಗದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ವಸ್ತ್ರ ವಿನ್ಯಾಸ ಮಾಡುತ್ತಾರಂತೆ. ಇವರ ಕೆಲಸಕ್ಕೆ ಸಹೋದರಿ ಶೋಭನಾ ಶಂಕರ್ ಸಹ ಕೈಜೋಡಿಸಿರುವುದರಿಂದ ಅವರಿಗೆ ಇನ್ನಷ್ಟು ಸಹಕಾರಿಯಾಗಿದೆ. ತೊಡುವ ಡ್ರೆಸ್‍ಗಳು ಯಾವಾಗಲೂ ‘ದಿ ಬೆಸ್ಟ್’ ಆಗಿರಬೇಕೆಂದು ಬಯಸುವ ಮಾಲಿನಿ ಚಿಕ್ಕವರಿದ್ದಾಗಲೇ ಮನೆಯಲ್ಲಿ ವಸ್ತ್ರ ವಿನ್ಯಾಸಗಳ ಎಕ್ಸ್‍ಪೆರಿಮೆಂಟ್ ಮಾಡುತ್ತಿದ್ದರಂತೆ. ತಾಯಿಯ ಸೀರೆಯನ್ನು ಬಳಸಿಕೊಂಡು ಸ್ಕರ್ಟ್ಸ್ಗಳನ್ನು ತಯಾರಿಸಿದ್ದುಂಟು. ಬಾಂಬೆ ಡೈಯಿಂಗ್ ಫ್ಯಾಬ್ರಿಕ್‍ಗಳನ್ನು ಹೆಚ್ಚಾಗಿ ಖರೀದಿಸುವ ಮಾಲಿನಿ ಸ್ವತಃ ಅನೇಕ ಬಟ್ಟೆಗಳನ್ನು ಸ್ಟಿಚ್ ಮಾಡಿದ್ದಾರೆ.

21 ರ ಹರೆಯದಲ್ಲಿದ್ದಾಗಲೇ ತಾವೇ ಸ್ಟಿಚ್ ಮಾಡಿದ ಡಿಸೈನಿಂಗ್ ಬಟ್ಟೆಗಳನ್ನು ಮಾಲಿನಿ ಅವರು ಪ್ರದರ್ಶನಕ್ಕಿಟ್ಟಿದ್ದರೆಂದರೆ ಅವರಿಗೆ ವಸ್ತ್ರ ವಿನ್ಯಾಸದ ಬಗ್ಗೆ ಹಂಬಲ ಎಷ್ಟಿತ್ತೆಂಬುದು ತಿಳಿಯುತ್ತದೆ. ಬಟ್ಟೆಗಳ ಕಟಿಂಗ್ ಬಗ್ಗೆ ಹೆಚ್ಚು ಜಾಗೃತಿವಹಿಸುವ ಮಾಲಿನಿ ತಮ್ಮ ಸ್ಟುಡಿಯೋದಲ್ಲಿ ಮಾಸ್ಟರ್ ಕಟರ್‍ಗಳನ್ನು ಹಾಗೂ ಟೈಲರ್‍ಗಳನ್ನೂ ಇರಿಸಿಕೊಂಡಿದ್ದಾರೆ. ಮಾಲಿನಿ ತಮ್ಮ ವಿನ್ಯಾಸದ ಬಟ್ಟೆಗಳಿಗೆ ಕೃಷ್ಣ ಎಂದು ಹೆಸರಿಟ್ಟಿದ್ದು, 2013ರಲ್ಲಿ ಬೆಂಗಳೂರಿನ ಆರ್.ಟಿ. ನಗರದಲ್ಲಿ ಕೃಷ್ಣ ಸ್ಟುಡಿಯೋ ಆರಂಭಿಸಿದರು. ಇದೀಗ ಇದು ಎಷ್ಟು ಪ್ರಖ್ಯಾತಿ ಗಳಿಸಿದೆ ಎಂದರೆ ಸ್ಥಳೀಯರು ಮಾತ್ರವಲ್ಲದೇ, ರಾಜ್ಯದ ಹೊರ ಭಾಗಗಳಿಂದ ಬರುವ ಜನರು ಕೂಡ ಇಲ್ಲಿ ಬಟ್ಟೆ ಖರೀದಿಸದೆ ಹೋಗುವುದಿಲ್ಲ.

ಭಾರತೀಯ ಶೈಲಿಯ ಉಡುಪುಗಳಿಗೆ ಪ್ರಾಶಸ್ತ್ಯ

ದೇಸೀ ಪದ್ಧತಿಯಿಂದ ತಯಾರಿಸಿದ ಬಟ್ಟೆಗಳೂ ಹೆಚ್ಚು ಆಕರ್ಷಕವಾಗಿರುತ್ತವೆ ಎನ್ನುವ ಮಾಲಿನಿ ಕುರ್ತಾ, ಸಲ್ವಾರ್, ಸೀರೆಗಳಿಗೆ ತರಕಾರಿಗಳಿಂದ ತೆಗೆದ ಬಣ್ಣ, ಅರಿಶಿಣ, ಕುಂಕುಮ, ಹಸಿರೆಲೆಯ ನೈಸರ್ಗಿಕ ಬಣ್ಣ ಬಳಸುತ್ತಾರೆ. ಅನಿವಾರ್ಯವಾದರೆ ಮಾತ್ರ ರಾಸಯನಿಕ ಬಣ್ಣವನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರಂತೆ. ಬಟ್ಟೆಗಳನ್ನು ತಮಿಳುನಾಡು, ಆಂಧ್ರ, ಗುಜರಾತ್, ಬಾಗೂರು, ರಾಜಸ್ಥಾನ ನೇಕಾರರಿಂದ ತರಿಸಲಾಗುತ್ತದೆ. ಕಾಂಚೀವರಂನ ಕಾಟನ್ ಸೀರೆಯನ್ನು ಸಂಡೂರಿನ ಲಂಬಾಣಿಗಳಿಂದ ವಿನ್ಯಾಸಗೊಳಿಸಲಾಗುತ್ತದೆ.

ನಾವು ತೊಡುವ ಬಟ್ಟೆಗಳು ಕಂಫರ್ಟಬಲ್ ಆಗಿರಬೇಕು. ಹಾಗೆಯೇ ಬಟ್ಟೆಗಳನ್ನು ಖರೀದಿಸುವಾಗ, ಧರಿಸುವಾಗ ನಮ್ಮದೇ ಆದ ಶೈಲಿಯನ್ನು ರೂಢಿಸಿಕೊಳ್ಳಬೇಕು. ನೀವು ಬಟ್ಟೆಗೆ ಹೊಂದಿಕೊಳ್ಳಬಾರದು. ನಿಮಗೆ ಬಟ್ಟೆ ಹೊಂದಿಕೊಳ್ಳಬೇಕು. ಅದಕ್ಕೆ ನಾವು ಬಣ್ಣಗಳಲ್ಲಿ ಹಲವು ಪ್ರಯೋಗ ಮಾಡಿ ಗ್ರಾಹಕರಿಗೆ ತಕ್ಕಂಥ ವಿನ್ಯಾಸ ನೀಡುತ್ತೇವೆ ಎನ್ನುವುದು ಮಾಲಿನಿ ಮುದ್ದಪ್ಪ ಅವರ ಅಂಬೋಣ...