ಕಸದಿಂದ ರಸ...ಉನ್ನತಿಯತ್ತ ತ್ಯಾಜ್ಯ ಮರುಬಳಕೆ ಉದ್ಯಮ

ಟೀಮ್​​ ವೈ.ಎಸ್​​.

ಕಸದಿಂದ ರಸ...ಉನ್ನತಿಯತ್ತ ತ್ಯಾಜ್ಯ ಮರುಬಳಕೆ ಉದ್ಯಮ

Thursday November 05, 2015,

2 min Read

ಸುಮಿತ್ ಖಂಡೇಲ್‍ವಾಲ್ ಅವರ ಪ್ರಕಾರ ರಿಸ್ಕ್ ತೆಗೆದುಕೊಳ್ಳುವ ಹಸಿವು ನಿಮ್ಮಲ್ಲಿ ಇರುವವರೆಗೆ ಉದ್ಯೋಗದಲ್ಲಿ ನಿಮಗೆ ಶೇಕಡಾ 25ರಷ್ಟು ಬೆಳವಣಿಗೆ ಅವಕಾಶವಿದೆ. ರಿಸ್ಕ್ ತೆಗೆದುಕೊಳ್ಳುವ ಹಸಿವು ಆರಿದ ಮೇಲೆ ಬೆಳವಣಿಗೆಯ ಅವಕಾಶ ಶೇಕಡಾ 10ರಷ್ಟು ಮಾತ್ರ. ಅಲ್ಲಿ ಪ್ರಕಾಶಮಾನವಾದದ್ದು ಏನೂ ಇರುವುದಿಲ್ಲ. ಇನ್ನೊಂದೆಡೆ ಎಲ್ಲವೂ ಸರಿಯಾಗಿದ್ರೆ ಉದ್ಯಮದಲ್ಲಿ ಆರಂಭದ ಕೆಲ ವರ್ಷಗಳ ಕಾಲ ಶೇಕಡಾ 5ರಷ್ಟು ಬೆಳವಣಿಗೆ ಅವಕಾಶವಿರುತ್ತದೆ. ಹಾಗಾಗದೇ ಇದ್ದಾಗಲೇ ಸುಮಿತ್ ಖಂಡೇಲ್‍ವಾಲ್ ಕೆಲಸ ಬಿಟ್ಟು ಭಾರತದಲ್ಲಿ ಮರುಬಳಕೆ ಉದ್ಯಮ ಆರಂಭಿಸಿದ್ರು. ಅದೇ `ರಿಸೈಕಲ್ ಟ್ರೇಡ್ ಇಂಡಿಯಾ' ಕಂಪನಿ.

image


ಸುಮಿತ್, ಹತ್ತಾರು ಉದ್ಯಮಗಳ ಬಗ್ಗೆ ಲೆಕ್ಕಾಚಾರ ಹಾಕಿದ್ರು. ಆದ್ರೆ ಉದ್ಯಮ ಮೂರು ವರ್ಷಕ್ಕೂ ಮುನ್ನವೇ ಕ್ಲಿಕ್ ಆಗಬೇಕೆಂಬುದು ಅವರ ತಂತ್ರವಾಗಿತ್ತು. ಹೆಚ್ಚಿನ ಲಾಭಾಂಶವಿರುವ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನೆಲೆಗೊಂಡಿರುವ ಉದ್ಯಮವನ್ನೇ ಆರಂಭಿಸಬೇಕೆಂದು ನಿರ್ಧರಿಸಿದ್ರು. ತ್ಯಾಜ್ಯ ಮರುಬಳಕೆ ಉದ್ಯಮದಲ್ಲಿ ಹೆಸರು ಮಾಡಿರುವ ಅಟ್ಟೆರೋ ಮತ್ತು ಇಕೋಸೆಂಟ್ರಿಕ್‍ನಂತಹ ಕಂಪನಿಗಳ ಕಾರ್ಯವೈಖರಿ ಸುಮಿತ್ ಅವರಿಗೆ ಪ್ರೇರಣೆಯಾಗಿತ್ತು. ಸುಮಿತ್ ಕೊನೆಗೂ `ರಿಸೈಕಲ್ ಟ್ರೇಡ್ ಇಂಡಿಯಾ' ಕಂಪನಿಯನ್ನು ಶುರು ಮಾಡಿದ್ರು. ಸುಮಿತ್ ಎಂಬಿಎ ಪದವೀಧರರು. ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ತಮ್ಮ ಸಹೋದರ ಚಂಚಲ್ ಅವರ ನೆರವಿನೊಂದಿಗೆ ಸುಮಿತ್ ರಿಸೈಕಲ್ ಟ್ರೇಡ್ ಇಂಡಿಯಾ ಕಂಪನಿಯನ್ನು ನಡೆಸ್ತಿದ್ದಾರೆ. ಐವರು ಮ್ಯಾನೇಜರ್‍ಗಳ ತಂಡ ಸಂಸ್ಥೆಯ ಮಾರುಕಟ್ಟೆಯನ್ನು ವಿಸ್ತರಿಸುವ ಕೆಲಸದಲ್ಲಿ ನಿರತವಾಗಿದೆ.

ಹೇಗೆ ನಡೆಯುತ್ತೆ ವ್ಯಾಪಾರ..?

1. ಸಂಭಾವ್ಯ ಸದಸ್ಯರೊಬ್ಬರು ಸೈಟ್‍ಗೆ ಭೇಟಿ ಕೊಡ್ತಾರೆ. ರಿಜಿಸ್ಟರ್ ಮಾಡಿ ಸದಸ್ಯರಾಗುತ್ತಾರೆ.

2. ಕ್ಷೇತ್ರಕ್ಕೆ ಸಂಬಂಧಿಸಿದ ನವೀಕರಣ ವಿಚಾರವನ್ನು ಎಲ್ಲರೊಂದಿಗೂ ಹಂಚಿಕೊಳ್ಳಲಾಗುತ್ತದೆ.

3. ಸಂಬಂಧಪಟ್ಟ ಖರೀದಿದಾರರು ಹಾಗೂ ಮಾರಾಟಗಾರರಿಗೆ ಪೋರ್ಟಲ್‍ನಂತಹ ಇಮೇಲ್ ಒಂದನ್ನು ಕಳಿಸಲಾಗುತ್ತದೆ. ಸದಸ್ಯರು ತಮ್ಮ ಕೊಡು-ಕೊಳ್ಳುವ ಆಫರ್‍ಗಳನ್ನು ಅದರಲ್ಲಿ ಭರ್ತಿ ಮಾಡಬೇಕು.

4. ಆಕರ್ಷಕ ಆಫರ್ ಏನಾದ್ರೂ ಕಂಡುಬಂದಲ್ಲಿ ಪರಸ್ಪರ ಸಂವಹನ ಏರ್ಪಡಿಸಲಾಗುತ್ತದೆ. ಒಪ್ಪಂದವನ್ನು ಅಂತಿಮಗೊಳಿಸಲಾಗುತ್ತದೆ. ಈ ವಹಿವಾಟಿನ ಮೇಲೆ `ರಿಸೈಕಲ್ ಟ್ರೇಡ್ ಇಂಡಿಯಾ' ಕಂಪನಿ ಕಮಿಷನ್ ವಿಧಿಸುತ್ತದೆ.

ಮಾರುಕಟ್ಟೆಯ ಪ್ರಮಾಣ...

ತ್ಯಾಜ್ಯ ಕೈಗಾರಿಕೆಯನ್ನು ಅಳೆಯುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಭಾರತದಲ್ಲಿ ಮಾರಾಟವಾಗುವ ತಾಜಾ ಸಾಮಾಗ್ರಿಗಳಲ್ಲಿ ಶೇಕಡಾ ಇಪ್ಪತ್ತರಷ್ಟು ತ್ಯಾಜ್ಯವಿರುತ್ತದೆ. ಅದನ್ನು ಮರುಬಳಕೆ ಮಾಡಲಾಗ್ತಿದೆ. ಸುಮಾರು 5 ಲಕ್ಷ ಟನ್‍ಗಳಷ್ಟು ಇ-ವೇಸ್ಟ್ ಭಾರತದಲ್ಲಿ ಉತ್ಪಾದನೆಯಾಗುತ್ತದೆ. ಶೇಕಡಾ 20ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಈ ಪೈಕಿ ಶೇಕಡಾ 5ರಷ್ಟನ್ನು ಮಾತ್ರ ಮರುಬಳಕೆದಾರರು ಸರಿಯಾದ ಕ್ರಮದಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಉಳಿದವು ಅಸಂಘಟಿತ ವಲಯಕ್ಕೆ ಹೋಗುತ್ತವೆ. ಈ ಪ್ರಕ್ರಿಯೆಯಲ್ಲಿ ದೊಡ್ಡ ಅಧಕ್ಷತೆಯೇ ಇದೆ. ಈ ವಿಷಯದ ಮೇಲೆ ರಿಸೈಕಲ್ ಟ್ರೇಡ್ ಇಂಡಿಯಾ ಗಮನ ಹರಿಸಿದೆ. ಅಂತರಾಷ್ಟ್ರೀಯ ಏಜೆನ್ಸಿ ಹಾಗೂ ಸಂಸ್ಥೆಗಳ ಸಲಹೆ ಮೇರೆಗೆ ಮರುಬಳಕೆ ಪ್ಲಾಂಟ್‍ಗಳನ್ನು ಸ್ಥಾಪಿಸಲು ಸೇತುವೆಯಂತೆ `ರಿಸೈಕಲ್ ಟ್ರೇಡ್ ಇಂಡಿಯಾ' ಕೆಲಸ ಮಾಡುತ್ತಿದೆ.

image


ಕೆಲವು ವಲಯಗಳಲ್ಲಿ ಈಗಾಗಲೇ ಸುಧಾರಣೆ ಕಂಡುಬಂದಿದೆ. ಸರ್ಕಾರದ ಹೊಸ ನೀತಿ-ನಿಯಮಗಳು, ಕಸ ಹಾಕಲು ಸ್ಥಳದ ಕೊರತೆ ಹಾಗೂ ಗೋ ಗ್ರೀನ್ ಹೋರಾಟದ ಫಲವಾಗಿ ತ್ಯಾಜ್ಯ ಮರುಬಳಕೆ ಉದ್ಯಮ ಇನ್ನು 5 ವರ್ಷಗಳಲ್ಲಿ ಭಾರೀ ಜನಪ್ರಿಯತೆ ಪಡೆಯಲಿದೆ.

ವಿಸ್ತಾರ ಹಾಗೂ ಆದಾಯದ ಮಾದರಿ...

ಗೋ ಗ್ರೀನ್ ಪರಿಕಲ್ಪನೆ ಹಾಗೂ ಸಂರಕ್ಷಣೆಯ ಕಲ್ಪನೆ `ರಿಸೈಕಲ್ ಟ್ರೇಡ್ ಇಂಡಿಯಾ'ಗೆ ವಿವಿಧ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಕಾಲೇಜು ಹಾಗೂ ಕಂಪನಿಗಳಲ್ಲಿ ಈವೆಂಟ್‍ಗಳನ್ನು ಆಯೋಜಿಸಲು ದಾರಿ ಮಾಡಿಕೊಟ್ಟಿದೆ. ವಿನಿಮಯ ಮಾದರಿಯ ಜಾಹೀರಾತು ಮತ್ತು ವಿವಿಧ ಬಗೆಯ ಆನ್‍ಲೈನ್ ಅಸ್ತ್ರಗಳನ್ನೂ ಬಳಸಿಕೊಂಡು `ರಿಸೈಕಲ್ ಟ್ರೇಡ್ ಇಂಡಿಯಾ' ಕಂಪನಿ ಕಾರ್ಯನಿರ್ವಹಿಸುತ್ತಿದೆ. ಒಪ್ಪಂದದಿಂದ ಬರುವ ಕಮಿಷನ್, ಉದ್ಯಮ ಯೋಜನೆಗಳ ಮಾರಾಟ, ಅವುಗಳ ಮೇಲಿನ ಒಪ್ಪಂದ, ಹಾಗೂ ಯಂತ್ರಗಳ ಮಾರಾಟದಿಂದ ಸಂಸ್ಥೆಗೆ ಆದಾಯ ಬರುತ್ತಿದೆ. ವೆಬ್‍ಸೈಟ್ ಒಂದನ್ನು ಆರಂಭಿಸಿ ಸದಸ್ಯತ್ವಕ್ಕೆ ಶುಲ್ಕ ವಿಧಿಸಲು `ರಿಸೈಕಲ್ ಟ್ರೇಡ್ ಇಂಡಿಯಾ' ಯೋಜನೆ ಹಾಕಿಕೊಂಡಿದೆ. ದಿನೇ ದಿನೇ ಹೆಚುತ್ತಿರುವ ಕಸದ ಸಮಸ್ಯೆಗೆ ತಮ್ಮ ಸಂಸ್ಥೆ ಮೂಲಕ ಸುಮಿತ್ ಪರಿಹಾರ ಒದಗಿಸಿದ್ದಾರೆ.

image


ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸಲು ಇಂತಹ ತ್ಯಾಜ್ಯ ಮರುಬಳಕೆ ಕಂಪನಿಗಳ ಅಗತ್ಯವಿದೆ. ತ್ಯಾಜ್ಯ ಹಾಗೂ ಕಸವನ್ನು ಸಮರ್ಪಕವಾಗಿ ಸಂಸ್ಕರಿಸಿದ್ರೆ ಸುತ್ತಲ ಪರಿಸರ ಸಹಜವಾಗಿಯೇ ಸ್ವಚ್ಛವಾಗುತ್ತದೆ. ರೋಗಗಳ ಭೀತಿಯಿಂದ್ಲೂ ಜನರು ಮುಕ್ತರಾಗಬಹುದು. ಕಸದಿಂದ ರಸ ಎಂಬ ಮಾತನ್ನು ಸುಮಿತ್ ಖಂಡೇಲ್‍ವಾಲ್ ನಿಜ ಮಾಡಿದ್ದಾರೆ. ಸತತ ಪರಿಶ್ರಮದ ಮೂಲಕ ಮರುಬಳಕೆ ಉದ್ಯಮದಲ್ಲಿ ಹೆಸರು ಗಳಿಸುತ್ತಿದ್ದಾರೆ.