ಸಂಚಾರ ನಿಯಮ ತಿಳಿಸಲೊಂದು ಉದ್ಯಾನ..!

ಅಗಸ್ತ್ಯ

0

ವಿದ್ಯಾರ್ಥಿಗಳಿರುವಾಗಲೇ ವಾಹನ ಚಾಲನೆ ಮಾಡುವ ಬಗ್ಗೆ ಸಾಕಷ್ಟು ಕುತೂಹಲಗಳಿರುತ್ತವೆ. ವಾಹನ ಚಲಾಯಿಸುವಾಗ ಸಿಗ್ನಲ್‍ಗಳಲ್ಲಿ ವಾಹನ ನಿಲ್ಲಿಸುವುದಕ್ಕೆ, ರಸ್ತೆಯಲ್ಲಿ ಎಡಕ್ಕೆ, ಬಲಕ್ಕೆ ತಿರುಗಬೇಕೆಂದರೆ ಹೇಗೆ ಸನ್ನೆ ಮಾಡಬೇಕು ಹೀಗೆ ಸಾಕಷ್ಟು ಪ್ರಶ್ನೆಗಳು ನಿಮ್ಮೊಳಗೆ ಇರುತ್ತದೆ. 18 ವರ್ಷದ ನಂತರವಾದರೆ ಚಾಲನಾ ಪರವಾನಗಿ ಪಡೆದುಕೊಳ್ಳುವಾಗ ಅದನ್ನೆಲ್ಲಾ ಕಲಿತುಕೊಳ್ಳಬಹುದು. ಆದರೆ ಅದಕ್ಕೂ ಮುನ್ನವೇ ನಿಮಗೆ ಸಂಚಾರಿ ನಿಯಮದ ಬಗ್ಗೆ ಅರಿವು ಬೇಕೆಂದರೆ ನೀವು ಬೆಂಗಳೂರು ಸಂಚಾರಿ ಪೊಲೀಸರನ್ನು ಸಂಪರ್ಕಿಸಬೇಕು. ಸಂಚಾರಿ ನಿಯಮಗಳ ಬಗ್ಗೆ ತಿಳಿಸಿಕೊಡಲೆಂದೇ ಸಂಚಾರಿ ಪೊಲೀಸ್ ಇಲಾಖೆ ಬೆಂಗಳೂರಿನಲ್ಲಿ ಸಂಚಾರ ಪೊಲೀಸ್ ಉದ್ಯಾನ ನಿರ್ಮಿಸಿದೆ. ಅಲ್ಲಿ ಸಂಚಾರಿ ನಿಯಮದ ಬಗ್ಗೆ ನಿಮಗಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆಯಲಿದೆ.

ಇದನ್ನು ಓದಿ: ಕನ್ನಡಕ್ಕೊಬ್ಬರೇ ಲೇಡಿ ಕೊರಿಯೋಗ್ರಾಫರ್..!

ಹೌದು, ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಹಾಗೂ ಸುಗಮ ಸಂಚಾರ ಕುರಿತು ಶಿಕ್ಷಣ ಕೊಡಲು ಸಿಲಿಕಾನ್ ಸಿಟಿಯಲ್ಲಿ ಸಂಚಾರ ಪೊಲೀಸ್ ಉದ್ಯಾನವನ ನಿರ್ಮಾಣಗೊಂಡಿದೆ. ಕಳೆದ 12 ವರ್ಷಗಳ ಹಿಂದೆಯೇ ಈ ಟ್ರಾಫಿಕ್ ಪಾರ್ಕ್ ನಿರ್ಮಾಣಗೊಂಡಿದ್ದು, ಈಗಾಗಲೆ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಸಂಚಾರ ನಿಯಮದ ಬಗ್ಗೆ ತರಬೇತಿ ಪಡೆದು ತಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ಪ್ರಾಕ್ಟಿಕಲ್ ಮತ್ತು ಥಿಯರಿ:

ಸೇಂಟ್ ಮಾಕ್ರ್ಸ್ ರಸ್ತೆಯಲ್ಲಿರುವ ಈ ಟ್ರಾಫಿಕ್ ಪಾರ್ಕ್‍ನಲ್ಲಿ ಸಂಚಾರ ನಿಯಮ ಪಾಲನೆ ಹಾಗೂ ಸುಗಮ ಸಂಚಾರ ಕುರಿತು ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಟ್ರಾಫಿಕ್ ವಾರ್ಡನ್‍ಗಳಿಗೆ ತಿಳಿಸಿಕೊಡಲಾಗುತ್ತದೆ. ಅದಕ್ಕೆ ಪೂರಕವಾಗಿ ಇಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಂಚಾರ ಸುರಕ್ಷತೆ ಕುರಿತು ಉಪನ್ಯಾಸ ನೀಡಲು ಅನುಕೂಲವಾಗುವಂತೆ ಬಯಲು ಸಭಾಂಗಣ, ಅಟದ ಮೈದಾನ, ವಾಯುವಿಹಾರ ಪಥ ನಿರ್ಮಾಣ ಮಾಡಲಾಗಿದೆ. ಸಂಚಾರ ನಿಯಮ ಒಳಗೊಂಡ ರಸ್ತೆ ನಿರ್ಮಾಣ ಮಾಡಿ ಸಿಗ್ನಲ್‍ಲೈಟ್, ಸಂಚಾರ ನಿಯಮ ಫಲಕ, ಸಂಚಾರ ಸೂಚನೆಗಳು, ರಸ್ತೆ ಗುರುತುಗಳು, ಚಾಲಕರಿಗೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

ವಿದ್ಯಾರ್ಥಿಗಳ ರಸ್ತೆ ಸುರಕ್ಷಾ ಸಂಘದಲ್ಲಿ ಹೆಸರು ನೊಂದಾಯಿಸಿಕೊಡಿರುವ ಶಾಲಾ ಮಕ್ಕಳನ್ನು ಆಯಾ ಶಾಲಾ ವ್ಯಾಪ್ತಿಯ ಠಾಣಾಧಿಕಾರಿಗಳು ಪಾರ್ಕ್‍ಗೆ ಕರೆತಂದು ಸಂಚಾರ ನಿಯಮಗಳ ಕುರಿತು ಪ್ರಾತ್ಯಕ್ಷಿಕೆ ನೀಡುತ್ತಾರೆ. ಜೂನ್‍ನಿಂದ ಡಿಸೆಂಬರ್​ ಅಂತ್ಯದವರೆಗೆ ಪ್ರತಿ ಶನಿವಾರ ತರಬೇತಿ ನೀಡಲಾಗುತ್ತದೆ. ನಂತರ ಜನವರಿಯಲ್ಲಿ ನಡೆಯುವ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ಸೇರ್ಪಡೆಗೊಳಿಸಿಕೊಳ್ಳಲಾಗುತ್ತದೆ. ಆ ವೇಳೆ ರಸ್ತೆಗಳಲ್ಲಿ ಸಂಚಾರ ಪೊಲೀಸರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಪಾಕ್ಟಿಕಲ್ ಆಗಿ ತಿಳಿಸಿಕೊಡಲಾಗುತ್ತದೆ. ಪ್ರಮುಖ ಜಂಕ್ಷನ್‍ಗಳಲ್ಲಿ ಸಂಚಾರ ಪೊಲೀಸರೊಂದಿಗೆ ಸೇರಿ ಸಂಚಾರ ನಿಯಂತ್ರಣ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ.

ಟ್ರಾಫಿಕ್ ಪೊಲೀಸ್ ಆಗ್ಬಹುದು:

ಬೆಂಗಳೂರಿನಲ್ಲಿ ಹೆಚ್ಚಗುತ್ತಿರುವ ಟ್ರಾಫಿಕ್ ನಿಯಂತ್ರಣಕ್ಕೆ ಟ್ರಾಪಿಕ್ ಪೆÇಲೀಸರಿಗೆ ನೆರವಾಗುವ ಟ್ರಾಫಿಕ್ ವಾರ್ಡನ್‍ಗಳ ರೂಪದಲ್ಲಿ ನೇಮಕವಾಗುವ ಸಾರ್ವಜನಿಕರಿಗೂ ಇಲ್ಲಿಯೇ ತರಬೇತಿ ನೀಡಲಾಗುತ್ತದೆ. ವೈದ್ಯರು, ಇಂಜಿನಿಯರ್, ವಕೀಲರು, ಶಿಕ್ಷಕರು, ಖಾಸಗಿ ಕಂಪನಿ, ಐಟಿ-ಬಿಟಿ ಉದ್ಯೋಗಿಗಳು ಹುದ್ದೆಯಲ್ಲಿರುವರು ಟ್ರಾಫಿಕ್ ವಾರ್ಡನ್‍ಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರನ್ನು ವಾರದಲ್ಲಿ 2 ದಿನ ಅಥವಾ ಕ್ರಿಕೆಟ್ ಪಂದ್ಯ, ಏರ್‍ಶೋ, ಧಾರ್ಮಿಕ ಕಾರ್ಯಕ್ರಮಗಳ ವೇಳೆ ಸಂಚಾರ ನಿಯಂತ್ರಣಕ್ಕೆ ತಮ್ಮೊಂದಿಗೆ ಸೇರಿಸಿಕೊಳ್ಳುತ್ತಾರೆ ಸಂಚಾರ ಪೊಲೀಸರು.

ವಿದ್ಯಾರ್ಥಿಗಳ ರಸ್ತೆ ಸುರಕ್ಷಾ ಸಂಘ

ವಿದ್ಯಾರ್ಥಿಗಳಿಗೆ ಸಂಚಾರ ತರಬೇತಿ ಕೊಡುವ ಉದ್ದೇಶದಿಂದಾಗಿಯೇ ಪ್ರತಿ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ವಿದ್ಯಾರ್ಥಿಗಳ ರಸ್ತೆ ಸುರಕ್ಷಾ ಸಂಘ ಸ್ಥಾಪನೆ ಮಾಡಲಾಗಿದೆ. ಶಾಲಾ ಕಾಲೇಜುಗಳ ಮುಖ್ಯಸ್ಥರು, ಅರ್ಹ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ 600 ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಇದರ ಸದಸ್ಯರಾಗಿವೆ. ಅಲ್ಲಿನ ವಿದ್ಯಾರ್ಥಿಗಳಿಗೆ ಈ ಉದ್ಯಾನದಲ್ಲಿ ಸಂಚಾರ ಸಿಗ್ನಲ್​ಗಳ ಹಾಗೂ ಕಾನೂನು ಪಾಲನೆ ಕುರಿತು ತಿಳಿವಳಿಕೆ ನೀಡುವುದರ ಜತೆಗೆ ಮುಖ್ಯರಸ್ತೆಗಳು ಸೇರುವ ಜಂಕ್ಷನ್‍ನಲ್ಲಿ ಸಂಚಾರ ನಿರ್ವಹಣೆ ಬಗ್ಗೆ ಶಿಕ್ಷಣ ಕೊಡಲಾಗುತ್ತದೆ.

ಇದನ್ನು ಓದಿ:

1. ನೆಮ್ಮದಿಯಿಂದ ನಿದ್ರಿಸಬೇಕಾದ್ರೆ ಮನೆಗೆ ತನ್ನಿ ಇನ್ವಿಸಿಬಲ್ ಬೆಡ್ 

2. ಸ್ಟಾರ್ಟ್ಅಪ್ ಪರಿಸರದಲ್ಲಿ ಸಮಗ್ರತೆಗೇಕೆ ಮಹತ್ವ?

3. ಸೆಲೆಬ್ರಿಟಿ ಬಾಲಿವುಡ್ ನಟರನ್ನು ಆಕರ್ಷಿಸುತ್ತಿರುವ ರೈಲ್ವೆ ಬಾಂಡ್