ದೃಷ್ಟಿಮಾಂದ್ಯರಿಗೆ ಭಾರತದ ಮೊದಲ ಪತ್ರಿಕೆಯನ್ನು ನಡೆಸಿದ ಸ್ವಾಗತ್ ಥೋರಾಟ್

ಟೀಮ್​ ವೈ.ಎಸ್​. ಕನ್ನಡ

0


ಸ್ವಾಗತ್ ಥೋರಾಟ್ ಅವರು ಫೆಬ್ರುವರಿ 2008ರಿಂದ ಭಾರತದ ಮೊದಲ ಬ್ರೈಲ್ ಲಿಪಿಯ ಪಾಕ್ಷಿಕವನ್ನು ನಡೆಸುತ್ತಿದ್ದಾರೆ. 50 ಪುಟಗಳ ‘ಸ್ಪರ್ಷಜ್ಞಾನ’ವೆಂಬ ಇವರ ಮರಾಠಿ ಪಾಕ್ಷಿಕವು ಪ್ರತಿ ತಿಂಗಳ 1ನೇ ಮತ್ತು 15ನೇ ತಾರೀಖಿನಂದು ಪ್ರಕಟಗೊಳ್ಳುತ್ತಿದ್ದು ನಿಷ್ಠಾವಂತ ಓದುಗರ ತಳಹದಿಯನ್ನು ಹೊಂದಿದೆ. ಸ್ವಾಗತ್ ಹೇಳುವಂತೆ “ನಾವು 100 ಪ್ರತಿಗಳಿಂದ ಆರಂಭಿಸಿದ ಪ್ರಕಟಣೆಯು ಇಂದು 400 ಪ್ರತಿಗಳಿಗೆ ಮುಟ್ಟಿದ್ದು ಮಹಾರಾಷ್ಟದಾದ್ಯಂತ 31 ಜಿಲ್ಲೆಗಳ ಶಾಲೆಗಳಿಗೆ ಮತ್ತು ದೃಷ್ಟಿಹೀನರಿಗಾಗಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ಉಡುಗೊರೆಯಾಗಿ ಈ ಪ್ರತಿಗಳನ್ನು ಹಂಚಲಾಗುತ್ತಿದೆ. ಒಂದು ಪ್ರತಿಗೆ ಬಹುತೇಕ 60ರಂತೆ, ಈ ಪತ್ರಿಕೆಯ ಓದುಗರ ಸಂಖ್ಯೆ 24000 ದಾಟಿದೆ.

ಸ್ವಾಗತ್ ಅವರ ಬಾಲ್ಯವು ಪೂರ್ಣತೆಯಿಂದ ಕೂಡಿದ್ದು ಇಂದು ಇವರು ಪರಿಹರಿಸುತ್ತಿರುವ ಯಾವುದೇ ತರಹದ ಸಮಸ್ಯೆಗಳಿಗೆ ಮುಖಾಮುಖಿಯಾಗಿರಲಿಲ್ಲ. ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕ, ನಾಟಕಕಾರ, ನಿರ್ದೇಶಕ, ಮತ್ತು ವರ್ಣಚಿತ್ರಕಾರರಾಗುವ ತಮ್ಮ ಆಕಾಂಕ್ಷೆಯ ಬೆನ್ನುಬಿದ್ದಿದ್ದರು.

ಕತ್ತಲಿನೊಂದಿಗಿನ ಇವರ ಒಡನಾಟ 1993ರಲ್ಲಿ, ಕಾಳೋಖಾತಿಲ್ ಚಾಂದಣೆ (ಕತ್ತಲೆಯಲ್ಲಿನ ಬೆಳದಿಂಗಳು) ಎಂಬ ದೃಷ್ಟಿಮಾಂದ್ಯರ ಶೈಕ್ಷಣಿಕ ಪದ್ಧತಿಯ ಮೇಲೆ ಇವರು ಬರೆದ ಸಾಕ್ಷಚಿತ್ರದೊಂದಿಗೆ, ಆರಂಭಗೊಂಡಿತು. ದೂರದರ್ಶನದ ಬಾಲಚಿತ್ರ ವಾಹಿನಿಗಾಗಿ ಸಾಕ್ಷಚಿತ್ರವನ್ನು ಮಾಡುವಾಗ ಇವರು ಅಂಧರ ಬಾಳಿಗೆ ಪರಿಚಿತರಾದರು.

ದೃಷ್ಟಿಹೀನರೊಂದಿಗೆ ಹೆಚ್ಚು ಹೆಚ್ಚು ಕಾಲ ಕಳೆದಂತೆ, ಅವರು ಅಂಧರ ಜಾಣ್ಮೆ ಮತ್ತು ಕಲಾಕ್ಮಕತೆಯನ್ನು ಕೂಡಲೇ ಕಂಡುಕೊಂಡರು. ಸ್ವಾಗತ್ ಅವರೊಂದಿಗೆ ಕೆಲಸ ಮಾಡತೊಡಗಿದರು ಮತ್ತು 1997ರಲ್ಲಿ ಸ್ವಾತಂತ್ರ್ಯಾಚಿ ಯಶೋಗಾಥಾ (ಸ್ವಾತಂತ್ರ್ಯದ ಯಶೋಗಾಥೆ) ಎಂಬ ನಾಟಕವನ್ನು ನಿರ್ದೇಶಿಸಿದರು. ಈ ನಾಟಕದಲ್ಲಿ 88 ದೃಷ್ಟಿಹೀನರು ಭಾಗವಹಿಸಿ ವೀಕ್ಷಕ ಮತ್ತು ವಿಮರ್ಶಕರ ಪ್ರಶಂಸೆ ಪಡೆಯುವುದರ ಜೊತೆಗೆ ಗಿನ್ನಿಸ್​​ ವಿಶ್ವದಾಖಲೆಯ ಪುಸ್ತಕದಲ್ಲಿ ಪ್ರವೇಶ ಪಡೆದರು.

ಈ ನಾಟಕವನ್ನು ಪ್ರದರ್ಶಿಸುತ್ತ ಸ್ವಾಗತ್ ತಮ್ಮ ಕಲಾವಿದರ ಗುಂಪಿನೊಂದಿಗೆ ಪ್ರವಾಸ ಮಾಡುತ್ತ ಓದಿನಲ್ಲಿನ ಅವರ ಆಸಕ್ತಿಯನ್ನು ಕಂಡು ಚಕಿತರಾದರು. ಅವರು ಬ್ರೈಲ್ ಲಿಪಿಯ ಪುಸ್ತಕದ ಗಂಭೀರ ಅಭಾವದಲ್ಲಿದ್ದರು. “ಅವರು ಓದಲು ಬಯಸುತ್ತಿದ್ದರು. ಆದರೆ ಅವರಿಗೆ ಪುಸ್ತಕಗಳು ಲಭ್ಯವಿರಲಿಲ್ಲ. ಅವರು ನನ್ನ ಸಹಾಯ ಕೋರಿದರು ಮತ್ತು ನಾನು ಒಪ್ಪಿಕೊಂಡೆ” ಎಂದು ಸ್ವಾಗತ್ ನೆನಪಿಸಿಕೊಳ್ಳುತ್ತಾರೆ.

ಸ್ವಾಗತ್ ಕೂಡಲೇ ತಾವು ಆರಂಭಿಸಿದ ‘ಸ್ಪರ್ಶಗಂಧ’ ನಿಯತಕಾಲಿಕೆಯ ಮೂರು ವಿಶೇಷ ಬ್ರೈಲ್ ಆವೃತ್ತಿಗಳನ್ನು ಸಂಪಾದಿಸಿ ಪ್ರಕಟಿಸಿದರು ಹಾಗೂ ಅವರಿಗೆ ಉಡುಗೊರೆಯಾಗಿ ನೀಡಿದರು. ಸ್ವಾಗತ್, ಪ್ರಖ್ಯಾತ ಲೇಖಕಿಯೂ ಮತ್ತು ಪ್ರಖ್ಯಾತ ಲೇಖಕರೊಬ್ಬರ ಪತ್ನಿಯೂ ಆದ ಸುನಿತಾ ಠಾಕುರ್ ಅವರ ಸಹಾಯದಿಂದ ಪು. ಲ. ದೇಶಪಾಂಡೆ ಇವರ ಬರಹಗಳ ವಿಶೇಷ ಸಂಚಿಕೆಯನ್ನೂ ಸಂಪಾದಿಸಿದರು. ಇವರು ಬೆರೋಲ್ಟ್ ಬ್ರೆಟ್ಚರ ‘ಥ್ರೀ ಪೆನ್ನಿ ಒಪೇರಾ’ ಆಧಾರಿತ ಪು. ಲ. ದೇಶಪಾಂಡೆಯವರ ‘ತೀನ್ ಪೈಶಾಚಾ ತಮಾಶಾ’ (ಮೂರು ಪೈಸೆಯ ಪ್ರಹಸನ) ಎಂಬ ನಾಟಕವನ್ನು 44 ಅಂಧ ಕಲಾವಿದರೊಂದಿಗೆ ನಿರ್ದೇಶಿಸಿದರು.

ಕೇವಲ ವೈಯಕ್ತಿಕ ಕಾರ್ಯಾಚರಣೆಯಿಂದಲೇ ತೃಪ್ತಿಗೊಳ್ಳದ ಸ್ವಾಗತ್, ಏಕಕಾಲದ ಚಟುವಟಿಕೆಯನ್ನು ಮೀರಿ ತಮ್ಮ ಅಂಧ ಮಿತ್ರರಿಗಾಗಿ ಏನಾದರೂ ದೃಢವಾದ ಮತ್ತು ಮೂಲಭೂತವಾದದ್ದನ್ನು ಮಾಡಲು ಹಾತೊರೆಯುತ್ತಿದ್ದರು. ಇವರು ಭಾರತದ ಮೊಟ್ಟ ಮೊದಲ ಬ್ರೈಲ್ ಲಿಪಿಯ ಸುದ್ದಿ ಪತ್ರಿಕೆಯನ್ನು ಆರಂಭಿಸಲು ನಿರ್ಧರಿಸಿ ಇದಕ್ಕಾಗಿ ಅವಶ್ಯಕವಿರುವ ನಿಧಿ ಮತ್ತು ಬ್ರೈಲ್ ಅಚ್ಚಿನ ಯಂತ್ರವನ್ನೊಳಗೊಂಡಂತೆ ಎಲ್ಲಾ ಮೂಲ ಸೌಕರ್ಯಗಳ ರಚನೆಗೆ ಸಿದ್ಧತೆ ನಡೆಸಿದರು. ಇವರ ಸ್ಪರ್ಶಜ್ಞಾನ ವಾರ್ತಾಪತ್ರಿಕೆಯ ಮೊದಲ ಆವೃತ್ತಿಯು ಫೆಬ್ರುವರಿ 2008ರಲ್ಲಿ ಪ್ರಕಟಗೊಂಡಿತು.

ಅಂದಿನಿಂದ ಸ್ವಾಗತರ ಸ್ಪರ್ಶಜ್ಞಾನವು ದೃಷ್ಟಿಮಾಂದ್ಯರನ್ನು ಪ್ರಚಲಿತ ವಿದ್ಯಮಾನಗಳು, ವನ್ಯಜೀವಿಗಳ ಬಗೆಗಿ ಕಾಳಜಿ, ಪರಿಸರ, ರಾಜಕೀಯ ಚಳುವಳಿಗಳು, ಸಾಮಾಜಿಕ ಸಮಸ್ಯೆಗಳು, ಅಂತರಾಷ್ಟ್ರೀಯ ವಿದ್ಯಮಾನಗಳು, ಜೀವನಚರಿತ್ರೆಗಳು, ಶಿಕ್ಷಣ ಹಾಗೂ ವೃತ್ತಿ ಆಯ್ಕೆಯ ವಿಷಯಗಳಿಗೆ ಪರಿಚಯಿಸುತ್ತ, ಅವರು ಬಾಳುತ್ತಿರುವ ಪ್ರಪಂಚವನ್ನು ಸ್ಪರ್ಶಿಸಿ ಅನುಭವಿಸಲು ಸಹಾಯ ಮಾಡುತ್ತಿದೆ. ರಿಲಯನ್ಸ್ ಪ್ರತಿಷ್ಠಾನ ಪ್ರಕಟಿಸುತ್ತಿರುವ ‘ರಿಲಯನ್ಸ್ ದೃಷ್ಟಿ’ ಎಂಬ ಹಿಂದೀ ಬ್ರೈಲ್ ಪಾಕ್ಷಿಕಕ್ಕೂ ಸ್ವಾಗತ್ ಮುಖ್ಯ ಸಂಪಾದಕರಾಗಿದ್ದಾರೆ. ಸ್ವಾಗತ್ ಅವರು ಎದುರಿಸಿದ ಸವಾಲುಗಳ ಕುರಿತು ಕೇಳಿದಾಗ, “ನಾನು ಯಾವಾಗಲೂ ಸವಾಲುಗಳನ್ನು ಅವಕಾಶಗಳೆಂದೇ ನೋಡಲು ಪ್ರಯತ್ನಿಸುತ್ತೇನೆ. ನಮ್ಮ ಮರಾಠಿಯಲ್ಲಿ ‘ನೀವು ಓದಿದರೇ ಬದುಕು’ ಎಂಬರ್ಥದ ಗಾದೆಯಿದೆ. ಮಾನವನ ಹೋರಾಟವು ಕೇವಲ ರೋಟಿ, ಕಪಡಾ, ಮಕಾನ್ (ಆಹಾರ, ಬಟ್ಟೆ ಮತ್ತು ಸೂರು) ಗಾಗಿ ಮಾತ್ರ ಸೀಮಿತವಾಗಿಲ್ಲವೆಂದು ನಾನು ಪ್ರಬಲವಾಗಿ ನಂಬಿದ್ದೇನೆ. ಇದು ಅದನ್ನು ಮೀರಿ ಹೋಗುವಂತಹುದು. ನನ್ನ ಓದುಗರಿಗೆ, ಓದು ಅವರ ದೈನಂದಿನ ಜೀವನವನ್ನು ಸುಧಾರಿಸಲು ಸಹಕರಿಸಿ ಅವರಲ್ಲಿ ಹೆಚ್ಚು ಆತ್ಮವಿಶ್ವಾಸವನ್ನು ಮೂಡಿಸಿದೆ. ವರ್ಷಗಳು ಉರುಳಿದಂತೆ ನಾನು ಅವರ ವ್ಯಕ್ತಿತ್ವವು ಬದಲಾಗುವುದನ್ನು ಕಂಡಿದ್ದೇನೆ.” ಎಂದು ಮುಗುಳ್ನಕ್ಕು ಹೇಳುತ್ತಾರೆ.

ಸ್ವಾಗತ್ ಒಬ್ಬ ಮೆಚ್ಚಿನ ವನ್ಯಜೀವಿ ಛಾಯಾಗ್ರಾಹಕರೂ ಆಗಿದ್ದಾರೆ. ಇವರು ದೇಶದಾದ್ಯಂತ 50ಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಉದ್ಯಾನಗಳನ್ನು ಮತ್ತು 300ಕ್ಕೂ ಅಧಿಕ ವನ್ಯಜೀವಿಧಾಮಗಳಿಗೆ ಭೇಟಿ ನೀಡಿ, ವನ್ಯಜೀವಿಗಳನ್ನು ಕುರಿತ ಒಂದು ಲಕ್ಷಕ್ಕೂ ಹೆಚ್ಚು ಚಿತ್ರಗಳನ್ನು ತೆಗೆದಿದ್ದು, 400 ಗಂಟೆಗಳ ವೃತ್ತಿಪರ ವಿಡಿಯೋಗಳನ್ನೂ ತೆಗೆದಿದ್ದಾರೆ. ಇವರು ತಾವು ತೆಗೆದಿರುವ ಛಾಯಾಚಿತ್ರ ಮತ್ತು ವಿಡಿಯೋಗಳೊಂದಿಗೆ 300ಕ್ಕೂ ಹೆಚ್ಚಿನ ಶಾಲೆಗಳನ್ನು ಸಂದರ್ಶಿಸಿ ಮಕ್ಕಳಿಗೆ ವನ್ಯಜೀವಿ ರಕ್ಷಣೆಯ ಬಗ್ಗೆ ತರಬೇತಿ ನೀಡಿದ್ದಾರೆ. ಇವರು ರಣಥಂಬೋರಿನ ರಾಷ್ಟ್ರೀಯ ಉದ್ಯಾನ, ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಮತ್ತು ಸುಂದರಬನ್ಸ್ ಕಾಡುಗಳಲ್ಲಿ ವನ್ಯಜೀವಿಗಳ ಗಣತಿಯನ್ನೂ ನಡೆಸಿದ್ದಾರೆ. ಇವರು ಪ್ರಸ್ತುತ ಕಾಶ್ಮೀರದ ವನ್ಯಜೀವಿಗಳ ವೈವಿಧ್ಯತೆಯ ಕುರಿತ ವರದಿಗಳ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ವಾಗತರ ರಂಗಭೂಮಿಯ ಪ್ರತಿ ಪ್ರೀತಿ ಇಂದಿಗೂ ಮುಂದುವರೆದಿದೆ. ಇವರು ಜ್ಯೋತಿಬಾ ಫುಲೆಯವರಿಂದ ರಚಿತವಾದ, ದಲಿತರನ್ನು ಶಿಕ್ಷಣದಿಂದ ವಂಚಿತಗೊಳಿಸುತ್ತಿರುವ ಅವರ ಮೇಲಿನ ದಬ್ಬಾಳಿಕೆಯನ್ನು ಬಿಂಬಿಸುವ ಒಂದು ಸಾಮಾಜಿಕ ನಾಟಕವಾದ ‘ತ್ರಿತಿಯ ನೇತ್ರ’ವನ್ನು ನಿರ್ದೇಶಿಸಿ ಅದಕ್ಕೆ ವೇದಿಕೆ ಕಲ್ಪಿಸಿದ್ದಾರೆ. ಈ ನಾಟಕವು ರಚನೆಯಾದ 146 ವರ್ಷಗಳ ನಂತರ ಮೊದಲ ಬಾರಿಗೆ ವೇದಿಕೆಯೇರುತ್ತಿರುವುದು ಸ್ವಾಗತರ ಪ್ರಯತ್ನದಿಂದಲೇ. ಸದ್ಯಕ್ಕೆ ಇವರು ನಾಟಕವನ್ನಾಧರಿಸಿದ ಒಂದು ಮರಾಠಿ ಮತ್ತು ಹಿಂದಿ ಚಲನಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇವರ ಕೆಲಸವು ನಾಟ್ಯಗೌರವ ಪುರಸ್ಕಾರ, ಮಹಾರಾಷ್ಟದೀಪ, ಸ್ನೇಹ ಪುರಸ್ಕಾರ, ರಾಜೀವ ಗಾಂಧಿ ಪುರಸ್ಕಾರ, ಇನ್ ವಾಹಿನಿಯ ಸೆಲ್ಯುಟ್ ಮುಂಬೈ ಅವಾರ್ಡಗಳನ್ನೇ ಅಲ್ಲದೇ, CNN IBN ವಾಹಿನಿಯ ರಿಯಲ್ ಹೀರೊ ಇತ್ಯಾದಿ ಪ್ರಶಸಿಗಳನ್ನೂ ಪಡೆದುಕೊಂಡಿದೆ. ಈ ಎಲ್ಲಾ ಪ್ರಶಸ್ತಿಗಳ ಹೊರತಾಗಿಯೂ ಇವರು ವಿನಮ್ರತೆಯನ್ನು ಕಾಪಾಡಿಕೊಂಡಿದ್ದಾರೆ.

ಇಂದಿಗೂ ಕೂಡ ಸ್ವಾಗತರು ತಮ್ಮ ಸಮಯದ ಬಹುಭಾಗವನ್ನು ತಮ್ಮ ಪ್ರಕಟಣೆಯನ್ನು ನಡೆಸುವದಕ್ಕಾಗಿ ಮತ್ತು ಬ್ರೈಲ್ ಭಾಷೆಯನ್ನು ಅನೇಕರಿಗೆ ಕಲಿಸುವ ಮೂಲಕ ಅದರ ಸುಧಾರಣೆ ಹಾಗೂ ಪ್ರಸಾರಕ್ಕಾಗಿ ಮೀಸಲಿಟ್ಟಿದ್ದಾರೆ. ಕಾಯಕ ಮತ್ತು ಕರುಣೆಗಳು ಮಾತ್ರ ಉಜ್ವಲ ಭವಿಷ್ಯಕ್ಕೆ ದಾರಿಗಳಾಗಿವೆ ಎಂದು ಇವರು ನಂಬಿದ್ದಾರೆ.


ಲೇಖಕರು: ಸೌರವ್​ ರಾಯ್​

ಅನುವಾದಕರು: ಸುಘೋಶ್​​

Related Stories

Stories by YourStory Kannada