ಸಕ್ಕರೆ ಮತ್ತು ಜವಳಿಯಲ್ಲಿ ಮುಂಚೂಣಿಯಲ್ಲಿದೆ ಬಾಗಲಕೋಟೆ

ಟೀಮ್​ ವೈ.ಎಸ್​. ಕನ್ನಡ

ಸಕ್ಕರೆ ಮತ್ತು ಜವಳಿಯಲ್ಲಿ ಮುಂಚೂಣಿಯಲ್ಲಿದೆ ಬಾಗಲಕೋಟೆ

Monday February 01, 2016,

4 min Read

ಬಾಗಲಕೋಟೆ ಜಿಲ್ಲಾ ಸಮೀಕ್ಷೆ

ಜಿಲ್ಲಾ ಅವಲೋಕನ- ಬಾಗಲಕೋಟೆ ವಾಸ್ತುಶಿಲ್ಪದ ಪ್ರಯೋಗಾಲಯ ಅಂದ್ರೆ ಅತಿಶಯೋಕ್ತಿಯಲ್ಲ. ವಿಜಯಪುರ ಜಿಲ್ಲೆಯಿಂದ ಬೇರ್ಪಟ್ಟು ಇತ್ತೀಚೆಗಷ್ಟೇ ರೂಪುಗೊಂಡ ಹೊಸ ಜಿಲ್ಲೆ ಇದು. ಸುಣ್ಣದ ಕಲ್ಲು, ಗ್ರಾನೈಟ್, ತಿಳಿಗೆಂಪು ಗ್ರಾನೈಟ್, ಡಾಲಮೈಟ್ ಇನ್ನೂ ಮುಂತಾದ ನೈಸರ್ಗಿಕ ಸಂಪತ್ತಿನ ಸ್ವರ್ಗ ಎಂದೇ ಹೇಳಬಹುದು. ಇದೆಲ್ಲಾ ನೈಸರ್ಗಿಕ ಸಂಪತ್ತಿನ ಕಾರಣದಿಂದ ಇಲ್ಲಿ ಸಿಮೆಂಟ್ ಉತ್ಪಾದನೆ ಸುಲಭವಾಗಿದೆ. ಅಲ್ಲದೇ ಹಲವು ಸಿಮೆಂಟ್ ಕಂಪನಿಗಳು ಇಲ್ಲಿ ನೆಲೆಯೂರಿದೆ. ಕರ್ನಾಟಕದ ಉತ್ತರ ಭಾಗದಲ್ಲಿ ಇರೋ ಬಾಗಲಕೋಟೆ ಜಿಲ್ಲೆಯಲ್ಲಿ 6 ತಾಲ್ಲೂಕುಗಳಿವೆ. ಬಾದಾಮಿ, ಬೀಳಗಿ, ಬಾಗಲಕೋಟೆ, ಹುನಗುಂದ, ಜಮಖಂಡಿ ಮತ್ತು ಮುಧೋಳ್ ತಾಲ್ಲೂಕುಗಳು 6,552 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ ಮತ್ತು 1.9 ದಶಲಕ್ಷ ಜನಸಂಖ್ಯೆಯನ್ನು ಹೊಂದಿರೋ ಜಿಲ್ಲೆಯಲ್ಲಿ 75.77 ಪ್ರತಿಶತ ಸಾಕ್ಷರತೆ ಇದೆ.

image


ಆರ್ಥಿಕ ಸ್ಥಿತಿಗತಿ

ಬಾಗಲಕೋಟೆಯ ಒಟ್ಟು ಡಿಜಿಪಿ ರೂ 59.02 ಶತಕೋಟಿ ಇದ್ದು ಇದು ರಾಜ್ಯದ ಒಟ್ಟು ಜಿಎಸ್‍ಡಿಪಿಗೆ 1.9% ಕೊಡುಗೆ ನೀಡಿದೆ. ಜಿಲ್ಲೆಯ ವಾರ್ಷಿಕ ತಲಾ ಆದಾಯವು ರೂ 50,765 ಇದ್ದು 2007-08 ರಿಂದ 2012-13ರ ವರೆಗೆ ಜಿಡಿಡಿಪಿ ಬೆಳವಣಿಗೆ 3% ಇದೆ. ಎರಡನೇ ಹಂತದ ಉತ್ಪಾದನಾ ವಲಯ ಬೆಳೆಯಲು 2012-13ರಲ್ಲಿ ನಿರ್ಮಾಣ ಮತ್ತು ಉತ್ಪಾದನಾ ವಲಯ 44% ಮತ್ತು 43% ಕೊಡುಗೆ ನೀಡಿದೆ.

ಕೃಷಿ ಅವಲೋಕನ

ಬಾಗಲಕೋಟೆ ಜಿಲ್ಲೆಯು ಕೃಷಿ ಆಧಾರಿತ ಆರ್ಥಿಕತೆ ಹೊಂದಿದ್ದು ಶೇಕಡಾ 67.36 ಪ್ರದೇಶವು ಕೃಷಿವಲಯದಲ್ಲಿದೆ. 4.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಮತ್ತು ಹತ್ತಿ ಬೆಳೆಯುತ್ತಿದ್ದು ಇದು ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದರ ಜತೆ ಗೋಧಿ, ಜೋಳ ಮತ್ತು ಮೆಕ್ಕೆ ಜಿಲ್ಲೆಯ ಪ್ರಮುಖ ಆಹಾರ ಬೆಳೆಗಳಾಗಿವೆ. ಕಡಲೆಕಾಯಿ ಮತ್ತು ಸೂರ್ಯಕಾಂತಿ ಎಣ್ಣೆಜೀಜಗಳನ್ನೂ ಸಹ ಇಲ್ಲಿ ಬೆಳೆಯಲಾಗುತ್ತದೆ. ಒಟ್ಟಾರೆಯಾಗಿ ಜಿಲ್ಲೆಯ 59% ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ.

ಕೈಗಾರಿಕಾ ಅವಲೋಕನ

ಕೃಷಿ, ಆಹಾರ ಸಂಸ್ಕರಣೆ, ಜವಳಿ ಮತ್ತು ಕೈಮಗ್ಗ ಉದ್ಯಮ, ಸಕ್ಕರೆ ಹಾಗೂ ಇಥನಾಲ್ ಉತ್ಪಾದನೆ, ಸಾಮಾನ್ಯ ಎಂಜಿನಿಯರಿಂಗ್ ಹಾಗೂ ಕಟ್ಟಡ ನಿರ್ಮಾಣ ವಸ್ತುಗಳು ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 4269 ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಸರ್ಕಾರ ಪ್ರಸ್ತಾವಿತ ಕೈಗಾರಿಕಾ ಪಾರ್ಕ್, ಐಟಿ ಮತ್ತು ಬಿಟಿ ಪಾರ್ಕ್‍ಗಳ ಜತೆಗೆ ಜನಪ್ರಿಯ 100.40 ಎಕರೆ ಜಾಗದಲ್ಲಿ ಆಗ್ರೋ ಫುಡ್ ಪಾರ್ಕ್ ಶುರುಮಾಡುವ ಪ್ರಸ್ತಾವನೆ ಸರ್ಕಾರಕ್ಕಿದೆ. ಈಗಾಗಲೇ ಜಲ್ಲೆಯಲ್ಲಿ 6 ಕೈಗಾರಿಕಾ ಪ್ರದೇಶ ಮತ್ತು 3 ಕೈಗಾರಿಕಾ ಎಸ್ಟೇಟ್‍ಗಳಿವೆ.

ಬಾಗಲಕೋಟೆಯಲ್ಲಿ 19 ದೊಡ್ಡ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿದ್ದು ಒಟ್ಟಾರೆಯಾಗಿ ಇಲ್ಲಿ 58.4165 ಶತಕೋಟಿ ರೂ ಹೂಡಿಕೆಯಾಗಿದೆ. ಜಿಲ್ಲೆಯಲ್ಲಿ ಸಿಗುವ ನೈಸರ್ಗಿಕ ಸಂಪನ್ಮೂಲ, ಕಚ್ಚಾ ವಸ್ತುಗಳು ಹಾಗೂ ಮೂಲಸೌಕರ್ಯಗಳಿಂದ ಇಲ್ಲಿ ಸಿಮೆಂಟ್ ಇಂಡಸ್ಟ್ರಿ ಇತರೆ ಕೈಗಾರಿಕೆಗಳಿಗಿಂತ ಮೇಲುಗೈ ಸಾಧಿಸಿದೆ. ಇದರಿಂದ ಪ್ರತಿಶತ 20ಕ್ಕೂ ಹೆಚ್ಚು ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಖಾನೆಗಳು ಕಟ್ಟಡ ನಿರ್ಮಾಣ ವರ್ಗಕ್ಕೆ ಸೇರಿದ್ದಾಗಿದೆ.

ಕಚ್ಚಾ ಪದಾರ್ಥವಾದ ಹತ್ತಿ ಮತ್ತು ಪರಿಣಿತ ನೇಕಾರರು ಜಿಲ್ಲೆಯಲ್ಲಿ ಹೆಚ್ಚಾಗಿ ಸಿಗೋದ್ರಿಂದ 15%ಗೂ ಹೆಚ್ಚು ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಖಾನೆಗಳು ಜವಳಿ ಮತ್ತು ಕೈಮಗ್ಗ ಉದ್ಯಮದಲ್ಲಿದೆ. ಇಳಕಲ್‍ನಲ್ಲಿರೋ ಜವಳಿ-ಕೈಮಗ್ಗ ಮತ್ತು ಪವರ್‍ಲೂಮ್ ಸಮೂಹದಿಂದ ಪ್ರಖ್ಯಾತ ಇಳಕಲ್ ಸೀರೆ ನೇಯ್ಗೆಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗಿದೆ.

9 ಸಕ್ಕರೆ ಕಾರ್ಖಾನೆಗಳು ಮತ್ತು ಹಿಟ್ಟಿನ ಗಿರಣಿ ಹಾಗೂ ಎಣ್ಣೆ ಉತ್ಪಾದನಾ ಘಟಕಗಳು ಇಲ್ಲಿನ ಆಹಾರ ಸಂಸ್ಕರಣ ವಲಯದ ಪ್ರಮುಖ ಕೈಗಾರಿಕೆಗಳಾಗಿವೆ. ಇವುಗಳೇ ಶೇಕಡಾ 12% ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಖಾನೆಗಳು ಈ ವಲಯದಲ್ಲಿದೆ. ಅಲ್ಲದೆ ಇತರೆ 9% ಘಟಕಗಳು ಸಾಮಾನ್ಯ ಎಂಜಿನಿಯರಿಂಗ್ ಮತ್ತು ಗ್ರಾನೈಟ್ ಇಂಡಸ್ಟ್ರಿಗಳಾಗಿದೆ.

ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳು

ಭೂಮಿ ಮತ್ತು ಮಣ್ಣು: ಬಾಗಲಕೋಟೆ ವಿವಿಧ ಹವಾಮಾನ ಪರಿಸ್ಥಿತಿ ಹೊಂದಿದ್ದು ಜಿಲ್ಲೆಯಲ್ಲಿ ಎರಡು ರೀತಿಯ ಮಳೆ ಪದ್ಧತಿ ಇದೆ. ಇದರಿಂದ ಭೂಮಿಯ ಉಳುಮೆ ಸುಲಭವಾಗಿದೆ. ಜಿಲ್ಲೆಯಲ್ಲಿ 6,552 ಚದರ ಕಿಮೀ ಭೂಮಿ ಹೊಂದಿದ್ದು ಇದರಲ್ಲಿ 12.31% ಅರಣ್ಯ ಹೊಂದಿದೆ. ಜಿಲ್ಲೆಯ ಭೂಮಿಯಲ್ಲಿ ಅತ್ಯುತ್ತಮ ಖನಿಜಗಳಿದ್ದು ಕೈಗಾರಿಕೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಜಲಾಶಯಗಳು

ಕೃಷ್ಣ, ಮಲಪ್ರಭ ಮತ್ತು ಘಟಪ್ರಭ ನದಿಗಳು ಜಿಲ್ಲೆಯ ಜೀವನದಿಗಳಾಗಿದ್ದು ಹಿಪ್ಪರಗಿ ಮತ್ತು ಹಿರೇಪಡಸರಗಿ ಬ್ಯಾರೇಜ್‍ಗಳು ವ್ಯವಸಾಯಕ್ಕೆ ಬಳಕೆಯಾಗುತ್ತಿದೆ. 189ಕಿ ಮೀ ಉದ್ದದ ಕಾಲುವೆಗಳು, 44 ನೀರಿನ ಟ್ಯಾಂಕ್‍ಗಳು ಹಾಗೂ 29,530 ಬೋರ್‍ವೆಲ್‍ಗಳು ಜಿಲ್ಲೆಯಲ್ಲಿದೆ. ಅಲ್ಲದೇ 11,636 ಬಾವಿಗಳು ಹಾಗೂ 19 ಏತ ನೀರಾವರಿ ವ್ಯವಸ್ಥೆ ಜಿಲ್ಲೆಯ ಒಟ್ಟು ಒಟ್ಟು ಉಳುಮೆಯ 59% ವ್ಯವಸಾಯಕ್ಕೆ ಕೊಡುಗೆ ನೀಡುತ್ತದೆ. ಜಿಲ್ಲೆಯ ಸರಾಸರಿ ನೀರಿನ ಬೇಡಿಕೆ 122.59 ಎಂಎಲ್‍ಡಿ ಇದ್ದು ಇದರಲ್ಲಿ ಸರಾಸರಿ ಬಳಕೆ 101.4 ಎಂಎಲ್‍ಡಿ ಗಳಾಗಿದೆ.

ವಿದ್ಯುತ್ ಸರಬರಾಜು

ಬಾಲಗಕೋಟೆಯ ಆಲಮಟ್ಟಿ ಅಣೆಕಟ್ಟೆಯಲ್ಲಿ ಪ್ರಮುಖ ಜಲವಿದ್ಯುತ್ ಘಟಕವಿದ್ದು 6 ವಿದ್ಯುತ್ ಜನರೇಟರ್‍ಗಳು 290 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಜಿಲ್ಲೆಗೆ ಹೆಸ್ಕಾಂನಿಂದ ವಿದ್ಯುತ್ ಲಭ್ಯವಾಗುತ್ತಿದೆ. ಜಿಲ್ಲೆಯ ಸರಾಸರಿ ವಿದ್ಯುತ್ ಬೇಡಿಕೆ ವ್ಯವಸಾಯಕ್ಕೆ 873.124 ಮಿಲಿಯನ್ ಯೂನಿಟ್ ಹಾಗೂ ಸ್ಥಳೀಯವಾಗಿ 160.74 ಮಿಲಿಯನ್ ಯೂನಿಟ್‍ಗಳಿದ್ದರೂ ಬಳಕೆ ಪ್ರಮಾಣ ಕಡಿಮೆ ಇದ್ದು ವಾರ್ಷಿಕವಾಗಿ 727.602 ಮಿಲಿಯನ್ ಯೂನಿಟ್‍ಗಳನ್ನು ಕೈಗಾರಿಕೆಗೂ ಹಾಗೂ 133.95 ಮಿಲಿಯನ್ ಯೂನಿಟ್ ಸ್ಥಳೀಯವಾಗೂ ಬಳಕೆಯಾಗುತ್ತಿದೆ.

ಜ್ಞಾನಾರ್ಜನೆ

ಬಾಗಲಕೋಟೆಯಲ್ಲಿ ಹೆಚ್ಚು ಶೈಕ್ಷಣಿಕೆ ಸಂಸ್ಥೆಗಳಿದ್ದು 107 ಪಿಯು ಕಾಲೇಜು, 27 ಡಿಗ್ರಿ ಕಾಲೇಜು, 6 ಮೆಡಿಕಲ್ ಕಾಲೇಜು, 1 ಅಲೋಪತಿ ಮೆಡಿಕಲ್ ಕಾಲೇಜು, 1 ಡೆಂಟಲ್ ಹಾಗೂ 2 ಎಂಜಿನಿಯರಿಂಗ್ ಕಾಲೇಜುಗಳ ಜತೆ 11 ಪಾಲಿಟೆಕ್ನಿಕ್ ಕಾಲೇಜುಗಳು ಜಿಲ್ಲೆಯಲ್ಲಿದೆ. ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ, ಬಿವಿವಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಬಿವಿವಿಎಸ್ ಪಾಲಿಟೆಕ್ನಿಕ್ ಜಿಲ್ಲೆಯ ಇತರೆ ಶೈಕ್ಷಣಿಕ ಸಂಸ್ಥೆಗಳು.

ಸಂಪರ್ಕ

ಬಾಗಲಕೋಟೆ ಜಿಲ್ಲೆಗೆ ರಸ್ತೆಗಳು, ರೈಲ್ವೆ ಮೂಲಕ ಉತ್ತಮ ಸಂಪರ್ಕವಿದ್ದು ಎನ್‍ಎಚ್13 ಹಾಗೂ ಎನ್‍ಎಚ್ 218 ಜಿಲ್ಲಿಯನ್ನು ಹಾದುಹೋಗುತ್ತದೆ. ಬ್ರಾಡ್ ಗೇಜ್ ರೈಲ್ವೆ ಲೇನ್‍ಗಳು ಬಾಗಲಕೋಟೆಯನ್ನು ಬೆಂಗಳೂರು ಮುಂಬೈ ನಡುವೆ ಸಂಧಿಸುತ್ತದೆ. 3 ಅಂತರಾಷ್ಟ್ರೀಯ ಹಾಗೂ 2 ದೇಶೀಯ ವಿಮಾನ ನಿಲ್ದಾಣಗಳು ಹಾಗೂ 4 ಬಂದರುಗಳನ್ನು ಜಿಲ್ಲೆಯಿಂದ ಸುಲಭವಾಗಿ ಸಂಪರ್ಕಿಸಬಹುದು.

ಒಟ್ಟಾರೆ ಹತ್ತಿ ಬೆಳೆ ವ್ಯವಸಾಯದಲ್ಲಿ ಮುಂಚೂಣಿಯಲ್ಲಿರೋ ಬಾಲಕೋಟೆ ಜವಳಿ ಉದ್ಯಮ ಶುರುಮಾಡಲು ಪ್ರಶಸ್ತ ತಾಣ. ಅಲ್ಲದೇ ಸರ್ಕಾರದ ಹೊಸ ಜವಳಿ ನೀತಿ ಸಹ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಹೊಸ ಉದ್ಯಮಿಗಳಲ್ಲಿ ನವ ಚೇತನ ಕೊಡೋದ್ರಲ್ಲಿ ಅನುಮಾನವೇ ಇಲ್ಲ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯ ಸಾಧ್ಯತೆಯೂ ಇದೆ. ಅಲ್ಲದೇ ಕಬ್ಬು ಬೆಳೆಗಾರಿಗೆಗೆ ನೀರಿನ ಸಮಸ್ಯೆಯೂ ಇಲ್ಲದಿರೋರು ವ್ಯವಸಾಯಗಾರರಿಗೆ ವರದಾನವಾಗಿದೆ ಮತ್ತು ರೈತರಲ್ಲಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳ ಪ್ರಾರಂಭ ರೈತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡುತ್ತದೆ.