ಬಣ್ಣಗಳೇ ಭಾವವಾದಾಗ.....

ಉಷಾ ಹರೀಶ್​​​​

ಬಣ್ಣಗಳೇ ಭಾವವಾದಾಗ.....

Friday October 09, 2015,

2 min Read

ಬದುಕು ನೀಡಿದ ಕುಂಚಗಳನ್ನು ಬಿಟ್ಟಿಲಾರದ ಭಾವ. ಮಾತಿನಲ್ಲಿ ಹೇಳಲಾರದ, ವ್ಯವಸ್ಥೆಯನ್ನು ಪ್ರಶ್ನಿಸುವ ಆ ಮೂಲಕ ಸಾಮಾಜಿಕ ಕಳಕಳಿ ಪ್ರದರ್ಶನಕ್ಕೆ ಬಳಸಿಕೊಂಡಿದ್ದು ಕುಂಚಗಳನ್ನು ಅದರಲ್ಲಿನ ಬಣ್ಣಗಳನ್ನು. ಇಂದು ಬಣ್ಣಗಳೇ ಬದುಕಿಗೆ ಕಾಮನಬಿಲ್ಲು ಬರೆದಿದೆ. ಹೌದು ಈ ಮಾತು ಅಕ್ಷರಶಃ ಬಾದಲ್​​ಗೆ ಒಪ್ಪುತ್ತದೆ ಅರ್ಥಾತ್ ಬಾದಲ್ ನಂಜುಂಡಸ್ವಾಮಿಗೆ.

ಕಲಾಕೃತಿ ಬಿಡಿಸೋದ್ರಲ್ಲಿ ನಿರತರಾಗಿರುವ ಬಾದಲ್​​​

ಕಲಾಕೃತಿ ಬಿಡಿಸೋದ್ರಲ್ಲಿ ನಿರತರಾಗಿರುವ ಬಾದಲ್​​​


ಮೈಸೂರಿನ ಎಲ್ಲೋ ಮೂಲೆಯ ಅಂಗಡಿಯೊಂದರಲ್ಲಿ ಸೈನ್ ಬೋರ್ಡ್ ಬರೆಯುತ್ತಿದ್ದ ಯುವಕನೀಗ ಖ್ಯಾತನಾಮನಾಗಿದ್ದಾನೆ. ಬಾಲ್ಯದಲ್ಲಿ ಬಣ್ಣದ ಗೀಳು ನಂಟಿಸಿಕೊಂಡಿದ್ದಾಗ, ಮನಸ್ಸಿನಲ್ಲಿದ್ದ ಆಸೆಗೆ ಕುಂಚ ಹಿಡಿಯಲು ಅಡ್ಡಿಯಾದದ್ದು ಬಡತನ. ಮೈಸೂರಿನ ಕುಕ್ಕರಹಳ್ಳಿಯಲ್ಲಿ ಬಾಲ್ಯ ಕಳೆದ ಬಾದಲ್ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಅಲ್ಲಿಯೇ. ಚಿಕ್ಕಂದಿನಲ್ಲಿಯೇ ಕಲೆಯ ಕುರಿತು ಕನಸು ಕಾಣುತ್ತಿದ್ದ ಹುಡುಗನಿಗೆ ಬೆಂಗಾವಲಾಗಿ ನಿಂತಿದ್ದು ಆತನ ಸ್ನೇಹಿತರು. ಮುಂದಿನ ಶಿಕ್ಷಣಕ್ಕೆ ಬಡತನ ಅಡ್ಡಗಾಲಾದಾಗ ಆತನ ಆಸಕ್ತಿಯನ್ನು ಗುರುತಿಸಿದ ಸಹಪಾಠಿಗಳು ಅವನ ಶಿಕ್ಷಣಕ್ಕಾಗಿ ಸಹಕಾರ ನೀಡಿ ಬಾಲ್ಯದ ಕನಸಿಗೆ ಪೋಷಣೆ ನೀಡಿದರು. ಇದರ ಪ್ರತಿಪಲವಾಗಿ ಬಾದಲ್ ಮೈಸೂರಿನ ಖಾವಾಗೆ ಸೇರಿದಾಗ ಅಲ್ಲಿನ ಕಾಲೇಜು ಸಿಬ್ಬಂದಿ, ಇಲ್ಲಿ ಕಲಿಯಬೇಕಾದರೆ ಬಣ್ಣ, ಕುಂಚಗಳಿಗೆ ಹಣ ಸುರಿಯಬೇಕು ನಿನ್ನಿಂದ ಸಾಧ್ಯವೇ ಎಂದು ಅನುಮಾನಿಸಿದರು. ಅಂದಿನ ಆ ಮಾತು ಬಾದಲ್​​ಗೆ ಪುಟ್ಟದಾದ ಸೈನ್ ಬೋರ್ಡ್ ಅಂಗಡಿ ತೆರೆಯಲು ಪ್ರೇರಣೆ ನೀಡಿರು. ಪರಿಣಾಮ 2 ಸಾವಿರ ರೂಗೆ ಕೊಂಡು ಕೊಂಡ ಪುಟ್ಟ ಅಂಗಡಿ ಅವರ ಜೀವನಕ್ಕೆ , ಆಸೆಗಳಿಗೆ ಆಸರೆಯಾಗಿ ನಿಂತಿತು. ಅಂಗಡಿಯಲ್ಲಿನ ಕೆಲಸದಿಂದ ಬರುತಿದ್ದ ಹಣದಲ್ಲೇ ಫೈನ್ ಆರ್ಟ್ಸ್ ಪದವಿ ಪೂರೈಸಿದಾಗ ದೊರೆತದ್ದು, 2 ಚಿನ್ನದ ಪದಕ.

3ಡಿ ಚಿತ್ರಗಳು

3ಡಿ ಚಿತ್ರಗಳು


ಇನ್ನು ಚಿನ್ನದ ಪದಕ ಪಡೆದು ಉದರ ನಿಮಿತ್ತ ಮಾಯಾ ನಗರಿ ಬೆಂಗಳೂರಿಗೆ ಬಂದು ಓ ಆಂಡ್ ಎಮ್ ಕಂಪನಿಗೆ ಸೇರಿ ಕೆಲ ದಿನ ಅಲ್ಲಿ ಕಾರ್ಯ ನಿರ್ವಹಿಸಿದರು. ಬಾದಲ್ ಒಳಗಿದ್ದ ಕಲಾವಿದ ನಾಲ್ಕು ಗೋಡೆಗಳ ನಡುವೆ ಸಿಲುಕಿಕೊಳ್ಳಲು ಇಚ್ಚಿಸದೇ, ಅವರಲ್ಲಿದ್ದ ಸೃಜನಶೀಲತೆ ಮುಕ್ತ ಹಾರಾಟಕ್ಕೆ ಹಾತೊರೆಯುತ್ತಿತ್ತು. ಹೀಗಾಗಿ ಕೈ ಹಿಡಿದಿದ್ದ ಕಂಪನಿಗೆ ರಾಜೀನಾಮೆ ಕೊಟ್ಟು ಹೊರ ಬಂದು ಸ್ವತಂತ್ರವಾಗಿ ದುಡಿಮೆಗೆ ಒಗ್ಗಿಸಿಕೊಂಡರು.

image


3ಡಿ ಚಿತ್ರಗಳ ಸರದಾರ:

ಬಾದಲ್ ನಂಜುಂಡಸ್ವಾಮಿಯ ವಿಶೇಷ ಎಂದರೆ ಅವರ 3 ಡಿ ಚಿತ್ರ ರಚನೆ. ಮೈಸೂರಿನಲ್ಲಿ ಹಲವು ನಾಟಕಗಳಿಗೆ ಕಲಾನಿರ್ದೇಶನ ಮಾಡುತ್ತಿರುವ ಬಾದಲ್, ಇತ್ತೀಚಿಗೆ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಲೈಫು ಇಷ್ಟೇನೆ, ಲೂಸಿಯಾ,ಸೇರಿದಂತೆ ಮತ್ತಿತರ ಚಿತ್ರಗಳಲ್ಲಿ ಬಾದಲ್ ತಮ್ಮ ಕುಂಚದ ಚಳಕ ತೋರಿಸಿದ್ದಾರೆ.

ಮೈಸೂರಿಗೆ ಸೀಮಿತವಾಗಿದ್ದ ಬಾದಲ್​ಗೆ ಈಗ ಬೆಂಗಳೂರು ಕೂಡ ನೂರಾರು ಅಭಿಮಾನಿಗಳನ್ನು ನೀಡಿದೆ. ಕಾರಣ ಅವರಲ್ಲಿರುವ ಸಾಮಾಜಿಕ ಕಳಕಳಿ. ಅದರ ಪ್ರಸ್ತುರಕ್ಕೆ ಉಪಯೋಗಿಸಿದ್ದು ತಮ್ಮ ಕುಂಚಗಳನ್ನು. ಬೆಂಗಳೂರಿನ ಆರ್​.ಟಿ ನಗರದಲ್ಲಿ ತೆರೆದ ಮ್ಯಾನ್ ಹೋಲ್​​ನಿಂದಾಗಿ ಆಗುವ ಅಪಾಯ ಅರಿತ ಬಾದಲ್, ಅದನ್ನು ಬಿಬಿಎಂಪಿ ಅವರ ಗಮನಕ್ಕೆ ತಂದಿದ್ದು ಇದೇ ಕುಂಚಗಳಿಂದ. ಮ್ಯಾನ್​​ಹೋಲನ್ನು ಯಮನ ಬಾಯಿಯಂತೆ ಚಿತ್ರಿಸಿ, ಅದನ್ನು ಸಾಮಾಜಿಕ ತಾಣ ಪೇಸ್ ಬುಕ್​​ಗೆ ಹಾಕಿದ್ದೇ ಹಾಕಿದ್ದು. ನೂರಾರು ಲೈಕ್​​ಗಳ ಸುರಿಮಳೆಯೊಂದಿಗೆ ಬಾದಲ್​​ ಚಿತ್ರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದರು. ಇದರಿಂದ ಎಚ್ಚೆತ್ತ ಬಿಬಿಎಂಪಿ ಮ್ಯಾನ್ ಹೋಲ್ ಬಾಯಿಯನ್ನು ಬಂದ್ ಮಾಡಿತು. ಇದಲ್ಲವೇ ಸಾಮಾಜಿಕ ಜವಾಬ್ದಾರಿ ಎಂದರೆ ಗುಂಡಿ ಬಿದ್ದ ರಸ್ತೆಯನ್ನು ಒಂದು ಸಮುದ್ರದವಾಗಿಸಿ ಅದರಲ್ಲಿ ಮೊಸಳೆಯ ಪ್ರತಿಕೃತಿಯನ್ನು ತಂದು ಬಿಟ್ಟು ಅಧಿಕಾರಿಗಳ ಗಮನ ಸೆಳೆಯುವಂತೆ ಮಾಡಿದ್ದರು.ಇದೇ ರೀತಿ ಸಾಕಷ್ಟು ಸಾಮಾಜಿಕ ವಿಷಯಗಳಿಗೆ ಬಾದಲ್ ಧನಿಯಾಗಿದ್ದಾರೆ. ತನ್ನ ಕುಂಚದ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿ ಎಲ್ಲೆಲ್ಲಿ ಸಮಾಜದ ಅಂಕುಡೊಂಕುಗಳು ಕಾಣುತ್ತವೋ ಅಲ್ಲಿ ಬಾದಲ್​​ನ ಕಲೆ ಅನಾವರಣಗೊಳ್ಳುತ್ತದೆ.

image


ಅಷ್ಟೇ ಅಲ್ಲದೆ ದೇಶದ ಕೆಲವೇ ಕೆಲವು 3ಡಿ ಚಿತ್ರ ರಚನೆಕಾರರಲ್ಲಿ ಬಾದಲ್ ಕೂಡಾ ಒಬ್ಬರು. ಇಂಟರ್​​ನೆಟ್​​ ನೋಡಿಕೊಂಡೆ 3ಡಿ ಚಿತ್ರ ಬರೆಯುವ ಬಗೆಯನ್ನು ತಿಳಿದುಕೊಂಡು ಬಾದಲ್ ಈಗಾಗಲೇ ಸಾಕಷ್ಟು ಚಿತ್ರಗಳನ್ನು ರಚಿಸಿದ್ದಾರೆ. ಕಡೆಯವರೆಗೂ ಕಲಾವಿದನಾಗೆ ಬದುಕಬೇಕು ಹಾಗೆ ಬದುಕುತ್ತೇನೆ ಎನ್ನುವ ಬಾದಲ್ ಆತ್ಮವಿಶ್ವಾದ ಖನಿಯೂ ಹೌದು.

"ನಾನೊಬ್ಬ ಸಾಮಾನ್ಯ ಕಲಾವಿದ. ಹಾಗಾಗಿ ಸಮಾಜದ ತಪ್ಪುಗಳಿಗೆ ನನ್ನ ಕುಂಚದಿಂದ ಉತ್ತರ ನೀಡುತ್ತೇನೆ. ನನ್ನ ಬದುಕಿನ ಕೊನೆ ಕ್ಷಣದವರೆಗೂ ಸಾಮಾಜಿಕ ಸಮಸ್ಯೆಗಳಿಗೆ ಇದೇ ರೀತಿ ಪ್ರತಿಭಟನೆ ನಡೆಸುತ್ತೇನೆ." 

ಬಾದಲ್​​ ನಂಜುಂಡಸ್ವಾಮಿ, ಕಲಾವಿದ