ಮೋಜು, ಪಾರ್ಟಿ, ನೈಟ್ ಕ್ಲಬ್ ಬೇಕಿದ್ದರೆ ಸಂಪರ್ಕಿಸಿ: ದಿ ಸೋಶಿಯಲ್ ಆ್ಯಪ್

ಟೀಮ್​ ವೈ.ಎಸ್​​

ಮೋಜು, ಪಾರ್ಟಿ, ನೈಟ್ ಕ್ಲಬ್ ಬೇಕಿದ್ದರೆ ಸಂಪರ್ಕಿಸಿ: ದಿ ಸೋಶಿಯಲ್ ಆ್ಯಪ್

Tuesday November 10, 2015,

3 min Read

ಮುಂಬೈನಂತಹ ವಾಣಿಜ್ಯ ನಗರಿಗಳಲ್ಲಿ ರಾತ್ರಿಗಳೆಂದರೇ ನಿದ್ದೆಗೆ ಜಾರುವುದಕ್ಕಿಂತ ಕಲರ್​​ಫುಲ್ ಪಾರ್ಟಿಗಳಲ್ಲಿ ಮೋಜು ಮಾಡುವುದೇ ಹೆಚ್ಚು. ಅದರಲ್ಲೂ ವೀಕೆಂಡ್ ಶನಿವಾರ ಮುಂಬೈನ ಬಹುತೇಕ ಪಾರ್ಟಿ ಹೌಸ್​​ಗಳು ಕಿಕ್ಕಿರಿದು ತುಂಬಿರುತ್ತವೆ. ಕೆಲವೊಮ್ಮೆ ಕೆಲವು ಗ್ರಾಹಕರಿಗೆ ಕ್ಲಬ್​​ಗಳಲ್ಲಿ ಪಾರ್ಟಿ ನಡೆಸಲು ಅವಕಾಶವೇ ಸಿಗುವುದಿಲ್ಲ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಗ್ರಾಹಕರ ಈ ಸಮಸ್ಯೆ ನಿವಾರಿಸಲು ಆರಂಭವಾದ ಆ್ಯಪ್ ದಿ ಸೋಶಿಯಲ್. ನೈಟ್ ಪಾರ್ಟಿ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ಆದ್ಯತೆಗೆ ತಕ್ಕಂತೆ ಅಭಿವೃದ್ಧಿಪಡಿಸಲಾದ ಮೊಬೈಲ್ ಅಪ್ಲಿಕೇಶನ್ ಇದು.

ಸಾಮಾನ್ಯವಾಗಿ ಈ ವಿಚಾರದಲ್ಲಿ ಗ್ರಾಹಕರಿಂದ ಪದೇ ಪದೇ ಕೇಳಿಬರುತ್ತಿದ್ದ ದೂರೆಂದರ, ಮೊದಲೇ ಬುಕ್ ಮಾಡಿದ್ದರೂ ಕೊನೆಯ ಕ್ಷಣದಲ್ಲಿ ಅವಕಾಶ ಸಿಗದೇ ಹೋಗುತ್ತಿತ್ತು. ಮುಖ್ಯವಾದ ಸಂದರ್ಭಗಳಲ್ಲಿ ತನ್ನ ಅವಶ್ಯಕತೆಗಿಂತ ಹೆಚ್ಚು ಗ್ರಾಹಕರನ್ನು ಕ್ಲಬ್ ತುಂಬಿಸಿಕೊಂಡಿದ್ದು ಗ್ರಾಹಕರ ಅಸಮಧಾನಕ್ಕೆ ಕಾರಣವಾಗುತ್ತಿತ್ತು.

image


ಅಕಾರ್ ಮಾಥುರ್ ಅಲಿ ಬಾಲಿವುಡ್ ಪ್ರಸಿದ್ಧ ಗಾಯಕ ಲಕ್ಕಿ ಅಲಿಯ ಸಹೋದರ. ಇವರು ಮಾಯಾಂಕ್ ಪೇಶ್ವಾನಿಯವರೊಂದಿಗೆ ಎರಡನೇ ಬಾರಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಅವರು ಮೊದಲ ಬಾರಿ ಸ್ಥಾಪಿಸಿದ ಸಣ್ಣ ಸಂಸ್ಥೆ ಸ್ಲಿಕ್ ವ್ರಾಪ್ಸ್, ಭಾರತೀಯ ಮಾರುಕಟ್ಟೆಯ ಅಂತರವನ್ನು ಗುರುತಿಸುವ ಕೆಲಸ ಮಾಡುತ್ತಿತ್ತು. ಮೊದಲ ಉದ್ಯಮ ಅಷ್ಟು ಯಶ ದೊರಕಿಸಿಕೊಟ್ಟಿರಲಿಲ್ಲ ಹಾಗಾಗಿ ಅವರು ದಿ ಸೊಶಿಯಲ್ ಅನ್ನುವ ವಿನೂತನ ಎರಡನೇ ಉದ್ಯಮದ ಕಡೆಗೆ ಚಿತ್ತ ನೆಟ್ಟಿದ್ದರು. ಸಾಕಷ್ಟು ಮಾರುಕಟ್ಟೆ ಅಧ್ಯಯನ ಹಾಗೂ ಗ್ರಾಹಕರ ಅಭಿಪ್ರಾಯ ಪಡೆದ ನಂತರವೇ ಅವರು ಮುಂದಿನ ಹೆಜ್ಜೆ ಇಟ್ಟಿದ್ದರು.

ಭಾರತದಾದ್ಯಂತ ಬಹುತೇಕ ಪಟ್ಟಣಗಳಲ್ಲಿ ರಾತ್ರಿ ಪಾರ್ಟಿ ಕ್ಲಬ್​​ಗಳ ಜೊತೆ ಗ್ರಾಹಕರು ನೇರ ಸಂಪರ್ಕ ಇಟ್ಟುಕೊಳ್ಳಬೇಕಿದೆ. ಆದರೆ ಅಲ್ಲಿಗೆ ತೆರಳುವ ಮುಂಚೆ ಆ ಕ್ಲಬ್​​ನ ಸೌಕರ್ಯಗಳು, ಶುಲ್ಕ ಅಥವಾ ಇನ್ಯಾವುದೇ ರೀತಿಯ ಮಾಹಿತಿಗಳೂ ಅವರಿಗೆ ಗೊತ್ತಿರುವುದಿಲ್ಲ. ಇಂತಹ ಕ್ಲಬ್​​ಗಳನ್ನು ಹುಡುಕಲು ಗ್ರಾಹಕರು ತಮ್ಮ ಸಂಪರ್ಕಗಳನ್ನೋ, ಸ್ನೇಹಿತರನ್ನೋ ವಿಚಾರಿಸಬೇಕು. ಇದರಿಂದ ಸಮರ್ಪಕ ಉತ್ತರ ಬಹುತೇಕ ಸಂದರ್ಭಗಳಲ್ಲಿ ಸಿಗುವುದಿಲ್ಲ ಜೊತೆಗೆ ಕೆಲವು ಗುಣಮಟ್ಟವಿಲ್ಲದ ಕ್ಲಬ್​​ಗಳು ಗ್ರಾಹಕರನ್ನು ತೃಪ್ತಿಪಡಿಸುವಲ್ಲಿ ವಿಫಲಗೊಳ್ಳುತ್ತವೆ. ಮುಂಚಿತವಾಗಿ ಗ್ರಾಹಕರಿಗೆ ಇವುಗಳ ಮಾಹಿತಿಯ ಕೊರತೆ ಇರುವುದರಿಂದ ಇಷ್ಟೆಲ್ಲಾ ತೊಂದರೆಗಳಿವೆ. ತಮ್ಮ ಪಟ್ಟಣಗಳಲ್ಲಿ ತಮಗೆ ಅನುಕೂಲವಾದ ನೈಟ್​​​ಕ್ಲಬ್​​ಗಳನ್ನು ಹುಡಿಕೊಳ್ಳುವಲ್ಲಿ ಹಾಗೂ ಅವುಗಳ ಬಗ್ಗೆ ತಿಳಿದುಕೊಳ್ಳುವುದೇ ಹೆಚ್ಚಿನ ಬಾರಿ ಗ್ರಾಹಕರಿಗೆ ಅತಿ ದೊಡ್ಡ ಸಮಸ್ಯೆಯಾಗುತ್ತಿತ್ತು. ಹಾಗಾಗಿಯೇ ತಾವು ಈ ಬಗ್ಗೆ ಆ್ಯಪ್ ನಿರ್ಮಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಮುಂದಾದೆವು ಅಂತ ಅಕಾರ್ ಹೇಳಿದ್ದಾರೆ.

ಇವರಿಬ್ಬರ ಜೋಡಿ ರಾತ್ರಿಗಳ ಪಾರ್ಟಿಗಳಿಗಾಗಿ ದಿ ಸೋಶಿಯಲ್ ಅನ್ನುವ ಉಚಿತ ಆ್ಯಪ್ ಒಂದನ್ನು ನಿರ್ಮಿಸಿದರು. ಕೇವಲ ಒಂದು ಕ್ಲಿಕ್​​ನಲ್ಲಿಯೇ ನಗರದ ಅತ್ಯುತ್ತಮ ನೈಟ್ ಪಾರ್ಟಿ ಕ್ಲಬ್​​ಗಳ ಮಾಹಿತಿ ನೀಡುವ ಸೌಕರ್ಯ ಈ ಆ್ಯಪ್ ಹೊಂದಿತ್ತು.

ದಿ ಸೋಶಿಯಲ್ ಬಳಕೆದಾರರಿಗೆ ಉಪಯೋಗಿಸಲು ಸರಳವಾಗಿತ್ತು ಹಾಗೂ ನೈಟ್ಔಟ್ ಪಾರ್ಟಿಗಳ ಕ್ಲಬ್ ಹಾಗೂ ಗ್ರಾಹಕರಿಗೆ ಸುಲಭವಾಗಿ ಸಂಪರ್ಕ ಕಲ್ಪಿಸುವ ವೇದಿಕೆಯಾಗಿತ್ತು. ಇದರಿಂದ ಗ್ರಾಹಕರು ಅತ್ಯುತ್ತಮ ಸ್ಥಳಗಳನ್ನು ಹುಡುಕಲು ಸುಲಭವಾಯಿತು. ತಮಗೆ ಅನುಕೂಲವಾದ ಶ್ರೇಣಿಗಳಲ್ಲಿ ಅವರು ನೈಟ್ ಔಟ್ ಕ್ಲಬ್​​ಗಳನ್ನು ಗುರುತಿಸುವಂತೆ ಆ್ಯಪ್ ನಿರ್ಮಿಸಲಾಗಿದೆ ಅಂತ ಮಾಹಿತಿ ನೀಡಿದ್ದಾರೆ. ಇದರ ಸಿಇಓ ಹಾಗೂ ಸಹಮಾಲಿಕರಾದ ಅಕಾರ್.

image


ಈ ಆಲೋಚನೆಯಿಂದ ಮಧ್ಯವರ್ತಿಗಳನ್ನು ತಡೆದಂತಾಯಿತಾದರೂ, ಮೊದಮೊದಲು ಬಾರ್ ಹಾಗೂ ಕ್ಲಬ್ ಮಾಲೀಕರ ಮನವೊಲಿಸುವುದು ದೊಡ್ಡ ಸವಾಲಾಗಿತ್ತು. ಈ ರೀತಿಯ ಯಾವುದೇ ಮತ್ತೊಂದು ಅವಕಾಶಗಳಿಲ್ಲದೇ ಇರುವುದು ಒಂದು ರೀತಿಯಲ್ಲಿ ಅವರಿಗೆ ಅನುಕೂಲವೂ ಆಗಿತ್ತು. ಆದರೆ ಕ್ಲಬ್ ಹಾಗೂ ನೈಟ್ ಔಟ್ ತಾಣಗಳ ಮಾಲೀಕರನ್ನು ಸಂಪರ್ಕಿಸಿ ದಿ ಸೋಶಿಯಲ್ ಆ್ಯಪ್ ಸೇವೆಗಳ ಬಗ್ಗೆ ಹೇಳುವುದೇ ದೊಡ್ಡ ಸವಾಲಾಗಿತ್ತು ಅಂತಾರೆ ಚೀಫ್ ಟೆಕ್ನಿಕಲ್ ಆಫೀಸರ್ ಹಾಗೂ ಇನ್ನೊಬ್ಬ ಸಹ ಮಾಲೀಕ ಮಾಯಾಂಕ್.

ತಮ್ಮ ಆರಂಭಿಕ ತೊಡಕುಗಳನ್ನು ಹಾಗೂ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಆ್ಯಪ್ ಅನ್ನು ಅಪ್​ಗ್ರೇಡ್ ಮಾಡಿದ ಈ ಜೋಡಿ, ತಮ್ಮ ಅಪ್ಲಿಕೇಶನ್ ಅನ್ನು ಪರಿಪೂರ್ಣ ಬಳಕೆದಾರರ ಸ್ನೇಹಿಯಾಗುವಂತೆ ಮಾರ್ಪಡಿಸಿದರು. ಇದರಿಂದ ಅವರಿಗೆ ಗ್ರಾಹಕರ ಅತ್ಯುತ್ತಮ ಪ್ರತಿಸ್ಪಂದನೆಯೂ ದೊರೆಯಿತು.

3 ತಿಂಗಳ ನಿರಂತರ ಸಂಶೋಧನೆ ಹಾಗೂ ಅಧ್ಯಯನಗಳ ಜೊತೆ ಆ್ಯಪ್ ಅಭಿವೃದ್ಧಿಪಡಿಸಿ, 2015ರ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕ್ರಮವಾಗಿ ಅವರು ತಮ್ಮ ದಿ ಸೋಶಿಯಲ್ ಆ್ಯಪ್ ಆ್ಯಂಡ್ರಾಯ್ಡ್ ಹಾಗೇ ಐಓಎಸ್ ವರ್ಷನ್ ಅನ್ನು ಲಾಂಚ್ ಮಾಡಿದರು. ಅಲ್ಲಿಂದ ಈಚೆಗೆ ಅವರು ಸಾಕಷ್ಟು ಯಶ ಸಾಧಿಸಿದ್ದಾರೆ. ಈ ವರೆಗೆ ಮುಂಬೈ ಒಂದರಲ್ಲೇ ಸುಮಾರು 130 ಅಸೋಸಿಯೇಟ್ಸ್ ಜೊತೆಗೆ ಮಾತುಕಥೆ ನಡೆಸಿ ತಮ್ಮ ಆ್ಯಪ್​ನಲ್ಲಿ ಅವರ ಕ್ಲಬ್​​ಗಳನ್ನು ದಾಖಲಿಸಿದ್ದಾರೆ. ದಿ ಸೋಶಿಯಲ್ ಆ್ಯಪ್ ಸುಮಾರು 4 ಸಾವಿರದಷ್ಟು ಡೌನ್ಲೋಡ್ ಕಂಡಿದೆ ಹಾಗೂ ಸುಮಾರು 700ರಷ್ಟು ರಿಸರ್ವೇಷನ್ ಸಹ ಈ ಆ್ಯಪ್ ಮೂಲಕ ಆಗಿದೆ.

ದಿ ಸೋಶಿಯಲ್ ಆ್ಯಪ್​​ನಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸೌಕರ್ಯವಿದೆ. ಇದು ಖಾಸಗಿಯಾಗಿ ಗ್ರಾಹಕರ ಬೇಕು ಬೇಡಗಳನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡುತ್ತದೆ. ಆ್ಯಪ್ ಮೂಲಕ ಬುಕ್ ಮಾಡಿದ 45 ನಿಮಿಷದೊಳಗೆ ಗ್ರಾಹಕರನ್ನು ಸಂಪರ್ಕಿಸಿ ಬುಕಿಂಗ್ ಅನ್ನು ನಿಗದಿಪಡಿಸುತ್ತದೆ. ಪಾಲಿಸಿಯಂತೆ ಆ್ಯಪ್​​ನ ಸಹಯೋಗದೊಂದಿಗಿರುವ ಯಾವುದೇ ಕ್ಲಬ್​​ನಲ್ಲಿಯೂ ಇದು ಕ್ಷಣಮಾತ್ರದಲ್ಲಿ ಸೇವೆಯನ್ನೊದಗಿಸುವ ಕೆಲಸ ಮಾಡುತ್ತಿದೆ. ಇದರಿಂದ ಗ್ರಾಹಕರು ಹೆಚ್ಚು ಹೆಚ್ಚು ದಿ ಸೋಶಿಯಲ್ ಬಳಕೆಯತ್ತ ಮನಸು ಮಾಡುತ್ತಿದ್ದಾರೆ ಎನ್ನುವುದು ಆ್ಯಪ್ ನಿರ್ಮಿಸಿದ ಜೋಡಿಯ ಹೆಮ್ಮೆಯ ಮಾತುಗಳು.