ಈಶಾನ್ಯ ರಾಜ್ಯಗಳ ಕುಶಲಕರ್ಮಿಗಳಿಗೆ ಹೊಸ ಬದುಕು-ಭಾರತದ ಕಲೆಯನ್ನು ವಿಶ್ವಕ್ಕೆ ಪರಿಚಯಿಸಿದ `ದಿ ಆಂಟ್ಸ್'

ಟೀಮ್​​​ ವೈ.ಎಸ್​​.ಕನ್ನಡ

ಈಶಾನ್ಯ ರಾಜ್ಯಗಳ ಕುಶಲಕರ್ಮಿಗಳಿಗೆ ಹೊಸ ಬದುಕು-ಭಾರತದ ಕಲೆಯನ್ನು ವಿಶ್ವಕ್ಕೆ ಪರಿಚಯಿಸಿದ `ದಿ ಆಂಟ್ಸ್'

Tuesday November 24, 2015,

3 min Read

`ದಿ ಆಂಟ್ಸ್' ಒಂದು ನ್ಯಾಯೋಚಿತ ವ್ಯಾಪಾರ ಸಂಸ್ಥೆ. ಈಶಾನ್ಯ ರಾಜ್ಯಗಳ ಮಹಿಳೆಯರು ತಯಾರಿಸಿದ ಸಗಟು ಉತ್ಪನ್ನಗಳನ್ನು `ದಿ ಆಂಟ್ಸ್' ಮಾರಾಟ ಮಾಡ್ತಿದೆ. ಬೆಂಗಳೂರಿನಲ್ಲಿ `ದಿ ಆಂಟ್ಸ್ ಕೆಫೆ' ಕೂಡ ಇದೆ. 14 ವರ್ಷಗಳ ಹಿಂದೆ ಸುನಿಲ್ ಕೌಲ್, ಮತ್ತವರ ಪತ್ನಿ ಜೆನ್ನಿಫರ್ ಲಿಯಾಂಗ್ ಹಾಗೂ ದಿವಂಗತ ರವೀಂದ್ರನಾಥ್ ಉಪಾಧ್ಯಾಯ `ದಿ ಆಂಟ್' ಅನ್ನು ಆರಂಭಿಸಿದ್ರು. ಅಸ್ಸಾಂ ರಾಜ್ಯದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳತ್ತ ಈ ಸಂಸ್ಥೆ ಹೆಚ್ಚಿನ ಗಮನಹರಿಸುತ್ತಿತ್ತು. ಆದ್ರೆ ಈಶಾನ್ಯ ಭಾರತದ ಅಭಿವೃದ್ಧಿಗಾಗಿ ಇನ್ನೇನಾದ್ರೂ ಮಾಡಲೇಬೇಕೆಂದು ದಿ ಆಂಟ್ ತಂಡಕ್ಕೆ ಅನಿಸಿತ್ತು. ತಪ್ಪು ಗ್ರಹಿಕೆ ಮತ್ತು ಬಡತನದಿಂದಾಗಿ ಈ ಪ್ರದೇಶ ರಾಜಕೀಯ ಮತ್ತು ಆರ್ಥಿಕ ಪ್ರತ್ಯೇಕತೆಗೆ ಗುರಿಯಾಗಿದೆ ಎಂಬುದನ್ನು ಅರ್ಥಮಾಡಿಕೊಂಡ ಪ್ರದೀಪ್ ಕೃಷ್ಣಪ್ಪ ಹಾಗೂ ಸ್ಮಿತಾ ಮೂರ್ತಿ 2002ರಲ್ಲಿ . ಕೊಂಚ ಬಂಡವಾಳ ಹಾಕಿ `ದಿ ಆಂಟ್ಸ್' ಸಂಸ್ಥೆಯನ್ನು ಕಟ್ಟಿದ್ರು. ಈಶಾನ್ಯ ರಾಜ್ಯದಲ್ಲಿ ಅಡಗಿರುವ 7 ಸಹೋದರಿಯರ ಸಂಸ್ಕೃತಿಯನ್ನು ಭಾರತ ಹಾಗೂ ಇಡೀ ವಿಶ್ವಕ್ಕೆ ತೋರಿಸಿಕೊಡುವ ಉದ್ದೇಶ ಇವರದ್ದಾಗಿತ್ತು.

image


ಈಶಾನ್ಯ ರಾಜ್ಯಗಳಲ್ಲಿ ಕೃಷಿಯನ್ನು ಬಿಟ್ರೆ ಜನರು ಹೆಚ್ಚು ಅವಲಂಬಿತರಾಗಿರೋದು ಕರಕುಶಲ ಕಲೆಗಳ ಮೇಲೆ. ಆದ್ರೆ ಕುಶಲಕರ್ಮಿಗಳಿಗೆ ತಮ್ಮ ರಾಜ್ಯವನ್ನು ಹೊರತುಪಡಿಸಿದ್ರೆ ಬೇರೆಡೆಗೆ ಮಾರ್ಕೆಟಿಂಗ್‍ಗೆ ಅವಕಾಶ ಸಿಗುತ್ತಿಲ್ಲ. ಈಶಾನ್ಯ ರಾಜ್ಯಗಳ ಕುಶಲಕರ್ಮಿಗಳಿಗೆ ಗುಣಮಟ್ಟದ ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಿಕೊಡಲು `ದಿ ಆಂಟ್ಸ್' ಪಣತೊಟ್ಟಿತ್ತು. ಪಾರದರ್ಶಕತೆಯ ಜೊತೆಗೆ ಉತ್ಪಾದಕರು ಹಾಗೂ ಗ್ರಾಹಕರ ಮಧ್ಯೆ ನಿಕಟ ಸಂಪರ್ಕ ಬೆಳೆಸುವ ಗುರಿ `ದಿ ಆಂಟ್ಸ್' ಮುಂದಿತ್ತು. ಈ ಉದ್ಯಮದಲ್ಲಿರುವುದು ಕೇವಲ ಮೂವರು ಪಾಲುದಾರರು ಮಾತ್ರ. ಕುಶಲಕರ್ಮಿಗಳು, `ದಿ ಆಂಟ್ಸ್' ಮತ್ತು ಗ್ರಾಹಕರು. ಖರೀದಿದಾರರಿಂದ ಪಡೆಯುವ ಅರ್ಧದಷ್ಟು ಹಣಕ್ಕೆ `ದಿ ಆಂಟ್ಸ್' ಕುಶಲಕರ್ಮಿಗಳಿಂದ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತದೆ. ಈ ಆದಾಯದಿಂದ ಬೆಂಗಳೂರಿನಲ್ಲಿರುವ ಅಂಗಡಿಯ ಬಾಡಿಗೆ, ಸಿಬ್ಬಂದಿಗೆ ವೇತನ ಹಾಗೂ ಸಾರಿಗೆ ವೆಚ್ಚವನ್ನು ಭರಿಸಲಾಗ್ತಿದೆ. ಇದ್ರಿಂದಾಗಿ ಕೆಲಸಗಾರರಿಗೆ ಶೇಕಡಾ 80ರಷ್ಟು ಕನಿಷ್ಠ ವೇತನದ ಖಾತರಿ ಇರುತ್ತದೆ. ಆದಾಯವಿಲ್ಲದೆ ಕಂಗಾಲಾಗಿದ್ದ ಕುಶಲಕರ್ಮಿಗಳ ಬಾಳಲ್ಲಿ `ದಿ ಆಂಟ್ಸ್' ಹೊಸಬೆಳಕು ಮೂಡಿಸಿದೆ.

ತಮ್ಮ ಉದ್ಯಮದ ದೃಷ್ಟಿಕೋನ ಕುಶಲಕರ್ಮಿಗಳೊಂದಿಗೆ ಗ್ರಾಹಕರನ್ನು ಸಂಪರ್ಕಿಸುವುದನ್ನೂ ಮೀರಿದ್ದು ಎನ್ನುತ್ತಾರೆ ಪ್ರದೀಪ್. ಕೇವಲ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು ಮಾತ್ರವಲ್ಲ, ವಿನ್ಯಾಸದಿಂದ ಆರಂಭವಾಗಿ ಉತ್ಪನ್ನ ಗ್ರಾಹಕರನ್ನು ತಲುಪುವವರೆಗಿನ ಪ್ರಕ್ರಿಯೆಯನ್ನು ಸರಿಯಾಗಿ ನಿರ್ವಹಿಸುವುದು ನಮ್ಮ ಜವಾಬ್ಧಾರಿ ಅನ್ನೋದು ಪ್ರದೀಪ್ ಅವರ ಮಾತು. ಇದರಿಂದ ಗುಣಮಟ್ಟ ಆಧಾರಿತ ಬ್ರ್ಯಾಂಡ್ ಸೃಷ್ಟಿಯಾಗಲಿದೆ. ಜೊತೆಗೆ ಮಾರುಕಟ್ಟೆ ವೈಪರೀತ್ಯಗಳ ನಡುವೆಯೂ ಕುಶಲಕರ್ಮಿಗಳಿಗೆ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯ ಅನ್ನೋದು ಅವರ ವಿಶ್ವಾಸ. ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಉದ್ಯಮ ಮಾದರಿ ಅನುಸರಿಸುವುದು ಅನಿವಾರ್ಯವಾಗಿತ್ತು ಎನ್ನುತ್ತಾರೆ ಪ್ರದೀಪ್. ಇಲ್ಲವಾದಲ್ಲಿ ವಾಲ್‍ಮಾರ್ಟ್‍ನಂತಹ ದೊಡ್ಡ ಕಂಪನಿಗಳಿಗೆ ಪೈಪೋಟಿ ನೀಡಲು ಸಾಧ್ಯವಾಗ್ತಿರ್ಲಿಲ್ಲ. ಆರ್ಡರ್‍ಗಳನ್ನು ಅವಲಂಬಿಸಿರಲು ಅಸಾಧ್ಯವಾದ್ದರಿಂದ, ಸ್ಥಿರ ಮಾರುಕಟ್ಟೆಯ ಅಗತ್ಯವಿದೆ ಎನ್ನುತ್ತಾರೆ ಅವರು.

`ದಿ ಆಂಟ್ಸ್' ಅತ್ಯಲ್ಪ ಅವಧಿಯಲ್ಲೇ ಒಂದು ಸಮಾಜವಾಗಿ ಪರಿವರ್ತಿತವಾಗಿದೆ. ನೇಕಾರ ಮಂಡಳಿಯ ಮಹಿಳೆಯರು ತಾವು ತಯಾರಿಸುವು ಉತ್ಪನ್ನಗಳ ಬಗೆಯನ್ನು ಗುರುತಿಸಲು ಬಯಸಿದ್ರು. ಹಾಗಾಗಿ `ದಿ ಆಂಟ್ಸ್' ಸಮಿತಿ ಈ ಎಲ್ಲ ಪ್ರಕ್ರಿಯೆಗಳು ಸರಾಗವಾಗಿ ನಡೆಯುವಂತೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಸಮಾಜ ಆಧರಿತ ಮಾದರಿಯನ್ನಿಟ್ಟುಕೊಂಡೇ ಹೊಸ ಆರ್ಡರ್ ಪಡೆಯಲು ಮತ್ತು ಸರಿಯಾದ ಘಟಕ ಹೊಂದಲು 2005ರಲ್ಲಿ `ದಿ ಆಂಟ್ಸ್' ಯೋಜನೆ ಹಾಕಿಕೊಂಡಿತ್ತು. 500 ಮಹಿಳೆಯರು `ದಿ ಆಂಟ್ಸ್' ಜೊತೆಗೆ ಕೆಲಸ ಮಾಡ್ತಿದ್ರು. ಅಧಿಕ ಸಂಖ್ಯೆಯಲ್ಲಿರೋದ್ರಿಂದ ಅವರಿಗೆ ನಿರಂತರವಾಗಿ ಕೆಲಸ ಸಿಗುತ್ತಿರಲಿಲ್ಲ. ಕ್ರಮಾನುಗತ ಕೊರತೆಯಿಂದ ವೈಯಕ್ತಿಕ ಪ್ರದರ್ಶನಗಳ ಮೇಲೆ ನಿಯಂತ್ರಣವೂ ಸಾಧ್ಯವಾಗುತ್ತಿರ್ಲಿಲ್ಲ ಅನ್ನೋದು ಪ್ರದೀಪ್ ಅವರ ಅಳಲು.

ಈಗ ಖಾಯಂ ಸದಸ್ಯರ ಸಂಖ್ಯೆಯನ್ನು ನೂರಕ್ಕೆ ಇಳಿಸಲಾಗಿದೆ. ಉಳಿದವರನ್ನು ಹಂಗಾಮಿ ನೌಕರರೆಂದು ಪರಿಗಣಿಸಲಾಗಿದೆ. ಹಂಗಾಮಿ ನೌಕರರಿಗೆ `ದಿ ಆಂಟ್ಸ್'ನಿಂದ ನಿರಂತರ ಕೆಲಸ ದೊರೆಯುವುದಿಲ್ಲ. ಫುಲ್‍ಟೈಮ್ ಕೆಲಸ ಕುಶಲಕರ್ಮಿಗಳ ಅಗತ್ಯ, ಆರ್ಥಿಕ ಸ್ಥಿತಿಯನ್ನು ಅವಲಂಬಿಸಿದೆ. ವಸತಿ ರಹಿತ ಮಹಿಳೆಯರಿಗೆ ಕೂಡ ದಿ ಆಂಟ್ಸ್ ನೆರವಿನ ಹಸ್ತ ಚಾಚಿದೆ. ಮಾಡಿದ ಸಾಲ ತೀರುವವರೆಗೂ ಅವರು ಇಲ್ಲಿ ಕೆಲಸ ಮಾಡಬಹುದು ಜೊತೆಗೆ ಕರಕುಶಲ ಉತ್ಪನ್ನ ತಯಾರಿಕೆಗೆ ಬೇಕಾದ ಯಂತ್ರಗಳನ್ನು ಕೊಂಡುಕೊಳ್ಳಲು ಕೂಡ ಹಣ ವಿನಿಯೋಗಿಸಬಹುದು. ಸ್ವಂತವಾಗಿ ಉತ್ಪನ್ನ ತಯಾರಿಸಲು ಮಹಿಳೆಯರು ಆರಂಭಿಸಿದ ಮೇಲೆ, ಅವರ ಹೂಡಿಕೆ ಮತ್ತು ಬದ್ಧತೆ ಸಮರ್ಥನೀಯ ವ್ಯಾಪಾರಕ್ಕೆ ಆಧಾರವಾಗಿದ್ಯಾ ಅನ್ನೋದನ್ನು ಕೂಡ `ದಿ ಆಂಟ್ಸ್' ಗಮನಿಸುತ್ತದೆ.

ಬೇಡಿಕೆ ನಿರಂತರವಾಗಿರಲಿ ಎಂಬ ಕಾರಣಕ್ಕೆ `ದಿ ಆಂಟ್ಸ್' 2007ರಲ್ಲಿ ಬೆಂಗಳೂರಲ್ಲಿ ಮಳಿಗೆಯೊಂದನ್ನು ತೆರೆದಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿದ್ದು, ಇಲ್ಲಿರುವ ಸುಶಿಕ್ಷಿತರು ಈಶಾನ್ಯ ರಾಜ್ಯದ ಕುಶಲಕರ್ಮಿಗಳ ಕಲೆಯನ್ನು ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ಪ್ರದೀಪ್ ಅವರದ್ದು. ರಿಸೆಶನ್ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಬಳಲಿದ್ದ ದಿ ಆಂಟ್ಸ್ ಈಗ ಕೆಫೆಯೊಂದನ್ನು ಆರಂಭಿಸಿ ಆದಾಯ ಸಂಗ್ರಹಿಸುತ್ತಿದೆ. ಸದ್ಯ ಮಳಿಗೆ ಹಾಗೂ ಕೆಫೆ ಮೂಲಕ ಸಂಸ್ಥೆ ಲಾಭ ಗಳಿಸ್ತಾ ಇದೆ. ಇತ್ತೀಚೆಗಷ್ಟೇ `ದಿ ಆಂಟ್ಸ್' ಸಗಟು ವ್ಯಾಪಾರವನ್ನೂ ಆರಂಭಿಸಿದೆ. ಯುರೋಪ್ ರಾಷ್ಟ್ರಗಳು, ಅಮೆರಿಕ ಸೇರಿದಂತೆ ವಿವಿಧೆಡೆಯಿಂದ ಬೇಡಿಕೆ ಬರುತ್ತಿದ್ದು, ಖಾಯಂ ರಫ್ತು ವ್ಯಾಪಾರವನ್ನು ಮುಂದುವರಿಸುವ ನಿಟ್ಟಿನಲ್ಲಿ ಆಂಟ್ಸ್, ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸುತ್ತಿದೆ.

image


`ದಿ ಆಂಟ್ಸ್' ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸಲು ಪ್ರದೀಪ್ ಮುಂದಾಗಿದ್ದಾರೆ. 2009ರಿಂದ್ಲೂ ಆಂಟ್ಸ್ ಚಾರಿಟೇಬಲ್ ಟ್ರಸ್ಟ್‍ನಂತೆ ಕಾರ್ಯನಿರ್ವಹಿಸ್ತಿದ್ದು, ಇದರಿಂದ ಸಂಸ್ಥೆಗೆ ಲಾಭವಾಗ್ತಾ ಇಲ್ಲ. ಸಾಲ ಹಾಗೂ ಸರ್ಕಾರದ ಸ್ಕೀಮ್‍ಗಳ ಆಧಾರದ ಮೇಲೆ ಸಂಸ್ಥೆ ಮುನ್ನಡೆಯುತ್ತಿದೆ. 30,000 ಡಾಲರ್ ಬಂಡವಾಳ ಸಂಗ್ರಹಕ್ಕಾಗಿ ಆಂಟ್ಸ್ ತಂಡ ಕ್ರೌಡ್ ಫಂಡಿಂಗ್ ಕ್ಯಾಂಪೇನ್ ಹಮ್ಮಿಕೊಂಡಿದೆ. ಪ್ರದೀಪ್ ಅವರ ಪ್ರಕಾರ ಯಶಸ್ಸು ಅನ್ನೋದು, ಕುಶಲಕರ್ಮಿಗಳ ಆರ್ಥಿಕ ಸ್ವಾತಂತ್ರ್ಯ ಹಾಗೂ ಕ್ರಮೇಣ ದಿ ಆಂಟ್ಸ್ ಪಾತ್ರವನ್ನು ಕಡಿಮೆ ಮಾಡುವುದರ ಮೇಲೆ ನಿಂತಿದೆ. ಅದು ಸಂಸ್ಥೆಯ ಪಾಲಿಗೆ ಮೈಲಿಗಲ್ಲಾಗಲಿದೆ.

ಲೇಖಕರು: ಫ್ರಾನ್ಸೆಸ್ಕೋ ಫೆರಾರೊ

ಅನುವಾದಕರು: ಭಾರತಿ ಭಟ್​​​​​