ಭಾರತದ ವೇಗಿ, ಫ್ಯಾಶನ್ ಲೋಕದ ಉದ್ಯಮಿ..! ಉಮೇಶ್ ಯಾದವ್ ಹೊಸ ಹೆಜ್ಜೆ...

ಟೀಮ್​​ ವೈ.ಎಸ್​.

0

ಮೈದಾನದಲ್ಲಿ ಚೆಂಡು ಹಿಡಿದು ಬ್ಯಾಟ್ಸ್​​​ಮನ್‍ಗಳ ವಿಕೆಟ್ ಉರುಳಿಸುತ್ತಿದ್ದ ವೇಗಿ ಉಮೇಶ್ ಯಾದವ್ ಈಗ ಉದ್ಯಮಿಯಾಗಿದ್ದಾರೆ. ಕೊಲ್ಕತ್ತಾ ಮೂಲದ ಫ್ಯಾಷನೋವ್ ಎಂಬ ಆನ್‍ಲೈನ್ ಕಂಪನಿಗೆ ಬಂಡವಾಳ ಹೂಡಿದ್ದಾರೆ. ಶರದ್ ಕುಮಾರ್ ಹಾಗೂ ತನುಶ್ರೀ ಖಂಡೇಲ್ವಾಲ್ ಸಹ-ಮಾಲೀಕತ್ವದ ಫ್ಯಾಷನೋವ್, ಗ್ರಾಹಕರಿಗೆ ಸ್ಥಳೀಯ ಫ್ಯಾಷನ್ ಅಂಗಡಿಗಳ ಕುರಿತ ಸಂಪೂರ್ಣ ಮಾಹಿತಿ ನೀಡುತ್ತದೆ. ಆಯಾ ಅಂಗಡಿಗಳಲ್ಲಿರುವ ಫ್ಯಾಷನ್ ಬಟ್ಟೆಗಳ ಕುರಿತು ಮಾತ್ರವಲ್ಲ, ಅವುಗಳ ವಿಮರ್ಶೆ ಸಹ ಫ್ಯಾಷನೋವ್ ವೆಬ್‍ಸೈಟ್‍ನಲ್ಲಿ ಲಭ್ಯವಿದೆ. ಈ ಮೂಲಕ ಗ್ರಾಹಕರಿಗೆ, ಬೇಕಾದ ವಸ್ತು ಎಲ್ಲಿ ಸಿಗುತ್ತದೆ? ಎಲ್ಲಿ ಖರೀದಿಸಿದರೆ ಒಳ್ಳೆಯದು? ಅನ್ನೋ ಮಾಹಿತಿ ಬೆರಳಂಚಲ್ಲಿ ಲಭ್ಯ.

‘ಆಫ್‍ಲೈನ್ ಮತ್ತು ಆನ್‍ಲೈನ್ ನಡುವಿನ ಅಂತರವನ್ನು ತಗ್ಗಿಸುವ ನಿಟ್ಟಿನಲ್ಲಿ ಫ್ಯಾಷನೋವ್ ಅಸಂಘಟಿತ ಭಾರತೀಯ ಫ್ಯಾಷನ್ ಮಾರುಕಟ್ಟೆಗೆ ನೆರವಾಗಿದೆ. ಈ ನಿಟ್ಟಿನಲ್ಲಿ ಇವರ ಕೌಶಲ್ಯ, ಬದ್ಧತೆ, ಹುಮ್ಮಸ್ಸು ನನಗೆ ಇಷ್ಟವಾಯ್ತು. ಹೀಗಾಗಿಯೇ ಇದರಲ್ಲಿ ಬಂಡವಾಳ ಹೂಡಲು ಮುಂದಾದೆ’ ಅಂತ ಫ್ಯಾಷನೋವ್ ಕುರಿತು ಹೇಳ್ತಾರೆ ಉಮೇಶ್ ಯಾದವ್.

ಅಸಂಘಟಿತ ಫ್ಯಾಷನ್ ಅಂಗಡಿಗಳನ್ನು ಆನ್‍ಲೈನ್ ಮೂಲಕ ಸಂಘಟಿಸಿದಲ್ಲಿ ಅತ್ಯುತ್ತಮ ಅವಕಾಶಗಳಿವೆ. ಕೊಲ್ಕತ್ತಾ ಮೂಲದ ಫ್ಯಾಷನೋವ್ ಈ ನಿಟ್ಟಿನಲ್ಲಿ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಭಾರತದ ಏಕಮಾತ್ರ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊಲ್ಕತ್ತಾ, ಮುಂಬೈ ಹಾಗೂ ದೆಹಲಿಯ 8000ಕ್ಕೂ ಹೆಚ್ಚು ಅಂಗಡಿಗಳ ಮಾಹಿತಿ ಈಗಾಗಲೇ ಫ್ಯಾಷನೋವ್‍ನಲ್ಲಿ ಲಭ್ಯವಿದೆ.

‘ಈಗಾಗಲೇ ನಾವು ಫ್ಯಾಷನೋವ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್‍ಅನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದು ನಮ್ಮ ಸಂಸ್ಥೆಯನ್ನು ಮತ್ತಷ್ಟು ಬಲಶಾಲಿಗೊಳಿಸಲಿದೆ ಹಾಗೂ ಹೆಚ್ಚಿನ ಮಾಹಿತಿಯನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸಹಕಾರಿಯಾಗಲಿದೆ. ಇದು ನಮಗೊಂದು ಮೈಲಿಗಲ್ಲೇ ಸರಿ’ ಅಂತ ಸಂತಸ ವ್ಯಕ್ತಪಡಿಸುತ್ತಾರೆ ತನುಶ್ರೀ.

ಆನ್‍ಲೈನ್ ಮೂಲಕ ಫ್ಯಾಷನ್ ಉಡುಗೆಗಳನ್ನು ಖರೀದಿಸಲು ಇಚ್ಛಿಸುವ 18ರಿಂದ 40 ವಯೋಮಿತಿಯ ಪುರುಷರು ಮತ್ತು ಮಹಿಳೆಯರೇ ಫ್ಯಾಷನೋವ್‍ನ ಟಾರ್ಗೆಟ್. ಹಾಗೇ ನಗರಗಳಿಗೆ ಹೊಸದಾಗಿ ಬಂದು, ಫ್ಯಾಷನ್ ಉಡುಗೆಗಳನ್ನು ಖರೀದಿಸಲು ಉತ್ತಮ ಅಂಗಡಿಗಳನ್ನು ನೋಡುತ್ತಿರುವವರಿಗೂ ಫ್ಯಾಷನೋವ್ ಮಾರ್ಗದರ್ಶಿ. ಇನ್ನು ಶಾಪಿಂಗ್ ಪ್ರಿಯರಿಗೆ ತಾವು ಖರೀದಿಸಬೇಕಾದ ಬಟ್ಟೆಗಳನ್ನು ಮೊದಲೇ ಪ್ಲಾನ್ ಮಾಡಿಕೊಳ್ಳಲು, ಹಾಗೂ ಅತೀ ಕಡಿಮೆ ಬೆಲೆಯಲ್ಲಿ ತಮಗಿಷ್ಟವಾದ ಬಟ್ಟೆ ಕೊಂಡುಕೊಳ್ಳಲು ಫ್ಯಾಷನೋವ್ ಸಹಕಾರಿ.

‘ತಂತ್ರಜ್ಞಾನದ ಅಭಿವೃದ್ಧಿ ಇಲ್ಲಿನ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ. ಅದ್ಭುತ ಸಾಮರ್ಥ್ಯವುಳ್ಳ ಯುವರಾಷ್ಟ್ರವಾದ ಕಾರಣ ಭಾರತದಲ್ಲಿ ಇಂತಹ ಆನ್‍ಲೈನ್ ಕಂಪನಿಗಳ ಪ್ರಾರಂಭಕ್ಕೆ ಹಾಗೂ ಪ್ರಗತಿಗೆ ಅತ್ಯುತ್ತಮ ಅವಕಾಶಗಳಿವೆ...’ ಹೀಗೆ ಇ-ಕಾಮರ್ಸ್ ಕಂಪನಿಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಉಮೇಶ್ ಯಾದವ್.

ಕಳೆದ ಕೆಲ ತಿಂಗಳಿನಿಂದ ಭಾರತೀಯ ಕ್ರಿಕೆಟಿಗರು ಉದಯೋನ್ಮುಖ ಉದ್ಯಮಗಳ ಕುರಿತು ವಿಶೇಷ ಒಲವು ತೋರುತ್ತಿದ್ದಾರೆ. ಇದೇ ಏಪ್ರಿಲ್‍ನಲ್ಲಿ ಭಾರತದ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್, ತಮ್ಮ ಒಡೆತನ ಯುವಿಕ್ಯಾನ್ ವೆಂಚರ್ ವತಿಯಿಂದ ವ್ಯೋಮೋ ಎಂಬ ಸೌಂದರ್ಯ ಹಾಗೂ ಆರೋಗ್ಯ ಸಂಬಂಧೀ ಕಂಪನಿಯೊಂದನ್ನು ಪ್ರಾರಂಭಿಸಿದ್ದರು. ಇನ್ನು ಪೇಟಿಎಂ, ಭಾರತ ಮುಂದಿನ 4 ವರ್ಷಗಳ ಕಾಲ ಆಡುವ ಎಲ್ಲಾ ಕ್ರಿಕೆಟ್ ಪಂದ್ಯಗಳಿಗೂ ಪ್ರಾಯೋಜಕತ್ವ ನೀಡಿದೆ.

ಹೀಗೆ ಉಮೇಶ್ ಯಾದವ್ ಹೊಸ ಉದ್ಯಮಕ್ಕೆ ಕಾಲಿಡುವ ಮೂಲಕ ಆನ್‍ಲೈನ್ ಹಾಗೂ ಕ್ರಿಕೆಟ್ ನಡುವಿನ ಸಂಬಂಧ ವೃದ್ಧಿಯಾಗಲಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟರ್‍ಗಳು ಉಮೇಶ್ ಅವರನ್ನೇ ಹಿಂಬಾಲಿಸುವ ನಿರೀಕ್ಷೆಗಳಿವೆ.

Related Stories