ಸ್ಲಂ ವಾಸಿಗಳು, ಚಿಂದಿ ಆಯುವವರ ಬದುಕಿಗೆ ಬೆಳಕಾದ ಟ್ರ್ಯಾಶ್ ಟು ಕ್ಯಾಶ್

ಟೀಮ್​​ ವೈ.ಎಸ್​​

ಸ್ಲಂ ವಾಸಿಗಳು, ಚಿಂದಿ ಆಯುವವರ ಬದುಕಿಗೆ ಬೆಳಕಾದ ಟ್ರ್ಯಾಶ್ ಟು ಕ್ಯಾಶ್

Sunday October 25, 2015,

5 min Read

ದಕ್ಷಿಣ ಏಷಿಯಾ ಪ್ರಾಕೃತಿಕ ಫೋರಂ(ಎಸ್‌ಎಎಫ್‌ಇ)ನ ಯೋಜನಾ ಮುಖ್ಯಸ್ಥೆ ಅಮೃತಾ ಚಟರ್ಜಿ. ಕಳೆದ ಕೆಲವು ಕಾಲದಿಂದ ಅಮೃತಾ ಕೋಲ್ಕತ್ತಾದ ಚಿಂದಿ ಆಯುವವರಿಗಾಗಿ ಕಸದಿಂದ ಹಣಗಳಿಕೆ ಎಂಬ ಯೋಜನೆ ಅನ್ವಯ ಸಮಾಜಮುಖಿ ಕೆಲಸದಲ್ಲಿದ್ದಾರೆ. ಇದೊಂದು ಭಿನ್ನವಾದ ಹಾಗೂ ಅಚ್ಚರಿಯ ಯೋಜನೆ. ಉತ್ತಮ ಪ್ರಾಕೃತಿಕ ಸಮತೋಲನ ಹಾಗೂ ಸಕಾರಾತ್ಮಕ ಅಭಿವೃದ್ಧಿಗೆ ಸಾಮಾಜಿಕ ವಲಯದಲ್ಲಿ ನಿರ್ಮಲ ವಾತಾವರಣ ಸೃಷ್ಟಿಸುವುದು ಅತ್ಯಗತ್ಯ. ಇದೇ ವೇಳೆ ಇದಕ್ಕೊಂದು ಆರ್ಥಿಕತೆಯ ಛಾಯೆ ದೊರಕಿಸಿಕೊಡುವುದರಿಂದ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತದೆ. ಘನತ್ಯಾಜ್ಯ ವಿಲೇವಾರಿಯಂತಹ ಸವಾಲಿನ ಕೆಲಸಕ್ಕಾಗಿಯೇ ರೂಪುಗೊಂಡ ಯೋಜನೆ ಕಸದಿಂದ ಹಣ ಗಳಿಕೆ. ಅಮೃತಾ ಚಟರ್ಜಿ ಈ ನಿಟ್ಟಿನಲ್ಲಿ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಅದೇ ರಿಸಾಲ್ವ್ ಟ್ರ್ಯಾಶ್ ಟು ಕ್ಯಾಶ್.

ರಿಸಾಲ್ವ್ ಟ್ರ್ಯಾಶ್ ಟು ಕ್ಯಾಶ್ ಸಂಸ್ಥೆಯ ಅತೀ ಮುಖ್ಯ ಉದ್ದೇಶ ಘನತ್ಯಾಜ್ಯ ವಿಲೇವಾರಿ ಹಾಗೂ ನಗರ ನೈರ್ಮಲ್ಯದ ನಿರ್ವಹಣೆ. ಇದರ ಜೊತೆ ಈ ಸಂಸ್ಥೆ ಸ್ಲಂ ವಾಸಿಗಳು ಹಾಗೂ ಅತ್ಯಂತ ಹಿಂದುಳಿದ ಕೊನೆಯ ಸಾಮಾಜಿಕ ವರ್ಗಕ್ಕೆ ಆರ್ಥಿಕವಾಗಿ ಸಬಲತೆ ನೀಡುವ ಕೆಲಸ ಮಾಡುತ್ತಿದೆ. ಅಂದರೆ ತ್ಯಾಜ್ಯ ಉತ್ಪನ್ನಗಳನ್ನು ಮರುನವೀಕರಿಸಬಹುದಾದ, ಮರುಬಳಕೆ ಮಾಡಬಹುದಾದ ಹಾಗೂ ಮರು ಉಪಯೋಗಿಸಬಹುದಾದ ಆಯಾಮದಡಿ ಸ್ಲಂನ ಮಹಿಳೆಯರು ಹಾಗೂ ಚಿಂದಿ ಆಯುವ ಮಕ್ಕಳನ್ನು ತೊಡಗಿಸುವುದು. ಈ ನಿಟ್ಟಿನಲ್ಲಿ ಆ ವರ್ಗಕ್ಕೂ ಕೊಂಚ ಆರ್ಥಿಕ ನೆರವು ಒದಗಿಸುವುದು.

image


ಈ ರೀತಿಯ ವಿಶಿಷ್ಟ ಕಾರ್ಯ ಸಂಘಟಿಸುವ ಮೂಲಕ ಸಂಸ್ಥೆ ಸಂಯುಕ್ತ ರಾಷ್ಟ್ರಗಳ ಗಮನ ಸೆಳೆದಿದೆ. ಅಷ್ಟೇ ಅಲ್ಲ, ಪೆರುವಿನ ಲಿಮಾದಲ್ಲಿ ನಡೆದ 2014ರ ಯುಎನ್‌ಎಫ್‌ಸಿಸಿಸಿ ವಾತಾವರಣ ಬದಲಾವಣೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಕಾರ್ಯಾಗಾರದಲ್ಲಿ ಲೈಟ್ ಹೌಸ್ ಆ್ಯಕ್ಟಿವಿಟಿ ಅವಾರ್ಡ್(ವಿಭಿನ್ನ ಸಾಮಾಜಿಕ ಚಟುವಟಿಕೆಗಳಿಗೆ ನೀಡುವ ಪ್ರಶಸ್ತಿ) ಗಳಿಸಿಕೊಂಡಿದೆ.

ಮೆಟ್ರೋ ಪಾಲಿಟನ್ ನಗರಗಳಲ್ಲಿ ಸಮರ್ಪಕ ಘನತ್ಯಾಜ್ಯ ನಿರ್ವಹಣೆ ಅತ್ಯಂತ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅಸಮರ್ಪಕ ನಿರ್ವಹಣೆ ಹಾಗೂ ಅವೈಜ್ಞಾನಿಕ ಕಾರ್ಯಯೋಜನೆಗಳಿಂದ ರಾಷ್ಟ್ರದ ಕೆಲವು ಮುಖ್ಯಪಟ್ಟಣಗಳಲ್ಲಿ ಈ ಘನತ್ಯಾಜ್ಯ ವಿಲೇವಾರಿ ಪರಿಸರಕ್ಕೆ ಹಾನಿಯುಂಟುಮಾಡಿದ್ದಷ್ಟೇ ಅಲ್ಲದೇ, ಸಾಮಾಜಿಕ ಆರೋಗ್ಯವನ್ನು ಹದಗೆಡಿಸುತ್ತಿದೆ. ಕೊಲ್ಕತ್ತಾ ನಗರವೊಂದೇ ಪ್ರತಿನಿತ್ಯ 5,000 ಟನ್‌ಗಳಷ್ಟು ಕಸ ಉತ್ಪತ್ತಿ ಮಾಡುತ್ತಿದೆ. 2010ರಲ್ಲಿ ಎಸ್‌ಎಎಫ್‌ಇ(ಸೇಫ್) ಕೊಲ್ಕತ್ತಾ ನಗರಾಢಳಿತ ಶೇ. 86ರಷ್ಟು ತ್ಯಾಜ್ಯ ವಸ್ತುಗಳನ್ನು ಅವೈಜ್ಞಾನಕವಾಗಿ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತಿದೆ ಎಂದು ವರದಿ ನೀಡಿತ್ತು. ಶೇ.50ರಷ್ಟು ಕೆಳವರ್ಗದ ಹಾಗೂ ಸ್ಲಂ ವಾಸಿಗಳು ಕೊಲ್ಕತ್ತಾ ನಗರದ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಆರೋಗ್ಯ ಸಂಬಂಧಿ ತೊಂದರೆಗಳನ್ನು ಲೆಕ್ಕಿಸದೇ ಅತ್ಯಂತ ಕಡಿಮೆ ಆದಾಯಕ್ಕಾಗಿ ಕಸ ವಿಂಗಡಿಸುವ ಕೆಲಸದಲ್ಲಿದ್ದರು. ಆ ಅಸಂಘಟಿತ ವಲಯದ ಕಾರ್ಮಿಕರ ಆದಾಯ ಕೇವಲ ಶೇ.2-5 ಮಾತ್ರವಿತ್ತು. ಹಾಗಾಗಿ ರಿಸಾಲ್ವ್ ಟ್ರ್ಯಾಶ್ ಟು ಕ್ಯಾಶ್ ಸಂಸ್ಥೆಯನ್ನು ಆರಂಭಿಸಲಾಯಿತು ಎಂದು ಅಮೃತಾ ಮಾಹಿತಿ ಮಾಡಿದ್ದಾರೆ.

ಕೊಲ್ಕತ್ತಾದ ಬೆಳೆಯುತ್ತಿರುವ ಮೂಲಸೌಕರ್ಯ ಹಾಗೂ ನಗರ ವ್ಯವಸ್ಥೆಯಲ್ಲಿ ತಲೆ ಎತ್ತಿ ನಿಂತ ಸಾಮಾಜಿಕ ವಲಯದ ವಿಸ್ತಾರ, ಆರ್ಥಿಕ ಪ್ರಗತಿ ಹಾಗೂ ಪ್ರಾಕೃತಿಕ ಅಸಮತೋಲನಗಳನ್ನು ಏರುಪೇರಾಗದಂತೆ ನೋಡಿಕೊಂಡು ಹೊಂದಾಣಿಕೆ ಸಾಧಿಸಿದ ಜಾಡಮಾಲಿಗಳ ಯಶೋಗಾಥೆಯೇ ರಿಸಾಲ್ವ್ ಟ್ರಾಶ್ ಟು ಕ್ಯಾಶ್. ಬಹುತೇಕರಿಗೆ ಕೊಲ್ಕತ್ತಾದ ಶಾಂತಿ ನಗರದಲ್ಲಿ ಕೊಳೆಯುವ ಮಹಿಳೆಯರು ಹಾಗೂ ಫುಟ್​​ಪಾತ್​​ನಲ್ಲಿ ಕಾಣಿಸಿಕೊಳ್ಳುವ ಚಿಂದಿ ಆಯುವ ಮಕ್ಕಳ ನಿಜಸ್ಥಿತಿ ತಿಳಿದಿಲ್ಲ. ಈ ವರ್ಗವನ್ನು ಕಸದೊಂದಿಗೆ ಬದುಕುವ ನಾಗರೀಕತೆ ಎಂದು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಈ ವರ್ಗ ಉನ್ನತ ನಾಗರೀಕ ಸಮಾಜದಿಂದ ಬಹಿಷ್ಕೃತಗೊಂಡವರು. ರಿಸಾಲ್ವ್ ಟ್ರಾಶ್ ಟು ಕ್ಯಾಶ್ ಈ ಕೊಳಕು ವರ್ಗದ ಮಹಿಳೆಯರನ್ನೇ ಸ್ವತಂತ್ರ್ಯ ಉದ್ದಿಮೆದಾರರನ್ನಾಗಿ ರೂಪಿಸುವ ಯೋಜನೆ ರೂಪಿಸಿತು. ಈ ಮಹಿಳೆಯರಿಗೆ ಪ್ರೋತ್ಸಾಹ, ತಾಂತ್ರಿಕ ನೆರವು ಹಾಗೂ ಸಣ್ಣ ಪ್ರಮಾಣದ ಮೂಲ ಬಂಡವಾಳದ ಅಗತ್ಯವಿತ್ತಷ್ಟೆ. ಇವುಗಳು ದೊರೆತಿದ್ದೇ ಆದಲ್ಲಿ ಅವರು ಜಗತ್ತಿನ ವಿಭಿನ್ನ ಉದ್ಯಮಿಗಳಾಗುವುದರಲ್ಲಿ ಸಂದೇಹವೇ ಇರಲಿಲ್ಲ. ನಗರೀಕರಣ ವ್ಯವಸ್ಥೆಯಲ್ಲಿ ಬೃಹತ್ ಬದಲಾವಣೆ ಮಾಡುವ ಯೋಜನೆ ಇದಾಗಿತ್ತು. ಜೊತೆಗೆ ಪ್ರಾಕೃತಿಕ ಸಮತೋಲನ ಹಾಗೂ ನಗರ ನೈರ್ಮಲ್ಯ ಕಾಪಾಡಬೇಕಾದ ಆದ್ಯತೆಯ ಅನಿವಾರ್ಯತೆಯೂ ಇತ್ತು. ಮುನ್ಸಿಪಾಲಿಟಿಯ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆಗೊಂದು ತಾರ್ಕಿಕ ಪರಿಹಾರ ಒದಗಿಸಬೇಕಾದ ಅಗತ್ಯವಿತ್ತು. ಈ ಮೂಲಕ ಕಸದಿಂದ ರಸ ಅನ್ನುವಂತೆ ಮರು ಉತ್ಪಾದನೆ ಹಾಗೂ ಮರು ಬಳಕೆಯ ಮೂಲಕ ವಾತಾವರಣ ರಕ್ಷಣೆಗೆ ಸಮರ್ಪಕವಾದ ಕಾರ್ಯಸೂಚಿಯನ್ನು ತಯಾರಿಸಲಾಯಿತು. ಕೊನೆಯ ವರ್ಗದ ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಆಶಯದಂತೆ ಅವರಿಗೆ ಮರುಬಳಕೆಯ ಕಲೆಯನ್ನು ಹಾಗೂ ವಿಧಾನವನ್ನು ಹೇಳಿಕೊಡಲಾಯಿತು. ಇದರಿಂದ ಆ ಮಹಿಳೆಯರು ಕೇವಲ ತಮ್ಮ ನಿತ್ಯದ ಅನ್ನ ಮಾತ್ರ ಗಳಿಸಿಕೊಳ್ಳಲಿಲ್ಲ. ಜೊತೆಗೆ ಸಾಮಾಜಿಕ ಗೌರವವನ್ನೂ ಹಾಗೂ ಅವರ ಮಕ್ಕಳಿಗೆ ಸುಭದ್ರ ಭವಿಷ್ಯದ ಆಕಾಂಕ್ಷೆಯನ್ನೂ ಕಂಡರು ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆ ಅಮೃತಾ ಚಟರ್ಜಿ.

ಅಮೃತಾ ಚಟರ್ಜಿಯವರ ಈ ಸಮಾಜಮುಖಿ ಕೆಲಸವನ್ನು ವಿಶ್ವ ಸಂಸ್ಥೆಯ ಪ್ರಾಕೃತಿಕ ಘಟಕ ಯುನೆಪ್(ಯುಎನ್ಇಪಿ) ಗುರುತಿಸಿತು. ಅಷ್ಟೇ ಅಲ್ಲ ಅದರ ಕ್ಲೀನ್ ಅಪ್ ವರ್ಲ್ಡ್ ಅಭಿಯಾನದಲ್ಲಿ ಅಮೃತಾರಿಗೆ ವೇದಿಕೆ ಸಹ ಒದಗಿಸಿತು. ಘನ ತ್ಯಾಜ್ಯ ಮರು ನವೀಕರಣ ಯೋಜನೆಗೆ ಸಂಬಂಧಪಟ್ಟಂತೆ ಸ್ಲಂ ವಾಸಿಗಳಿಗೆ ಮೈಕ್ರೋ ಬಂಡವಾಳ ಒದಗಿಸುವ ಮೂಲಕ ಸಣ್ಣ ಪ್ರಮಾಣದ ಆರ್ಥಿಕ ನೆರವೂ ನೀಡಿತು. ಸೇಫ್ ಸ್ಲಂಗಳಲ್ಲಿಯೇ ಕಾರ್ಯಾರ್ಗಾರಗಳನ್ನು ನಡೆಸುತ್ತಾ ಅಲ್ಲಿನ ನಿವಾಸಿಗಳಿಗೆ ಮಾರ್ಗದರ್ಶನ ನೀಡತೊಡಗಿತು. ಕಸದಿಂದ ಹಣ ಗಳಿಸುವ ಮಾರ್ಗ ಹೇಗೆ ಅಂತ ಹೇಳಿಕೊಟ್ಟಿತು. ಅವರೊಂದಿಗೆ ಸಂವಾದಿಸಿ ತನ್ನ ಯೋಜನೆಯತ್ತ ಸೆಳೆದುಕೊಂಡಿತು. ಸ್ವಯಂ ಸೇವಕರಾಗಬಯಸುವವರಿಗೆ ಪ್ರಯತ್ನಿಸಲು ಸವಕಾಶ ನೀಡಿತು. ಇದರ ಜೊತೆಗೆ ಜಂಟಿ ಹೊಣೆಗಾರಿಕೆಯ ತಂಡ ಅನ್ನುವ ವಿಶೇಷ ತಂಡಗಳನ್ನು ರಚನೆ ಮಾಡಿತು. ಪ್ರತೀ ತಂಡದಲ್ಲಿ 10 ಸದಸ್ಯರನ್ನು ನಿಯೋಜಿಸಿತು.

ವೇಸ್ಟ್ ಪೇಪರ್ ಚೂರುಗಳಿಂದ ಅಥವಾ ಅನುಪಯುಕ್ತ ಕಾಗದಗಳಿಂದ ಗಿಫ್ಟ್ ಐಟಂ ತಯಾರಿಸುವುದು ಇದರ ಮೊದಲ ಹಂತದ ಯೋಜನೆಯಾಗಿತ್ತು. ಬ್ಯಾಂಕ್ನಲ್ಲಿ ಖಾತೆ ತೆರೆಯಲು ಈ ಸದಸ್ಯರಿಗೆ ದಾಖಲಾತಿಯ ಅಗತ್ಯವಿತ್ತು. ಆದರೆ ಯಾವ ಸ್ಲಂ ವಾಸಿಗಳ ಬಳಿಯೂ ಸಮರ್ಪಕವಾದ ದಾಖಲೆಗಳೇ ಇರಲಿಲ್ಲ. ಆದರೆ ಸೇಫ್ ಅಧಿಕಾರಿಗಳ ಪ್ರಯತ್ನದಿಂದಾಗಿ ಯೂಕೋ ಬ್ಯಾಂಕ್ ದಾಖಲೆಗಳಿಲ್ಲದೆಯೇ ಖಾತೆ ತೆರೆಯಲು ಅವಕಾಶ ನೀಡಿತು. ವಿಶೇಷ ತರಬೇತುದಾರರಿಂದ ಈ ತಂಡದ ಎಲ್ಲಾ ಸದಸ್ಯರಿಗೆ ಮಾರುಕಟ್ಟೆ ಹಾಗೂ ವ್ಯವಹಾರದ ಪ್ರಾಥಮಿಕ ಅಂಶಗಳ ಬಗ್ಗೆ ಮಾಹಿತಿ ನೀಡಲಾಯಿತು. ಜೊತೆಗೆ ವ್ಯಾವಹಾರಿಕ ತಂತ್ರಗಳು, ಮಾರ್ಕೆಟಿಂಗ್ ಅಂಶಗಳು, ಹಣಕಾಸಿನ ನಿರ್ವಹಣೆ, ಅಕೌಂಟಿಂಗ್‌ನ ಮೂಲಭೂತ ತತ್ವಗಳು ಬಗ್ಗೆಯೂ ತಿಳಿಸಿಕೊಡಲಾಯಿತು. ಅನುಪಯುಕ್ತ ಕಾಗದಗಳಿಂದ ಗಿಫ್ಟ್ ಐಟಂಗಳನ್ನು ತಯಾರಿಸುವ ತರಬೇತಿ ನೀಡಿ ಮಹಿಳೆಯರು ಮನೆಯಲ್ಲಿ ಕುಳಿತೇ ಇದನ್ನು ನಿರ್ವಹಿಸುವಂತೆ ನೋಡಿಕೊಳ್ಳಲಾಯಿತು. ಈ ಕೆಲಸಕ್ಕಾಗಿ ಕೆಲವು ಕಾರ್ಪೋರೇಟ್ ಕಂಪನಿಗಳ ಸ್ವಯಂ ಸೇವಕರು ಕೈಜೋಡಿಸಿದರು. ಅನುಪಯುಕ್ತ ಕಾಗದಗಳನ್ನು ಸಂಗ್ರಹಿಸಿ ಇವರಿಗೆ ನೀಡಲು ಕೆಲವು ಸಂಘಟನೆಗಳ ಸದಸ್ಯರು ನೆರವಾದರು. ಹೀಗಾಗಿ ಕಾಗದಗಳನ್ನು ಸಂಗ್ರಹಿಸಲೆಂದೇ ಡಸ್ಟ್‌ ಬಿನ್‌ಗಳನ್ನು ಇಡಲಾಯಿತು. ಈ ಸ್ಲಂ ವಾಸಿಗಳಲ್ಲಿ ಗಂಡಸರು ಹೊರಗೆ ತೆರಳಿ ದೊಡ್ಡ ಪ್ರಮಾಣದಲ್ಲಿ ಕಾಗದಗಳನ್ನು ಸಂಗ್ರಹಿಸಿ ತರುವ ಕೆಲಸಕ್ಕೆ ನಿಯೋಜಿಸಲ್ಪಟ್ಟರು. ಹೀಗೆ ತಯಾರಾದ ಅನುಪಯುಕ್ತ ಕಾಗದಗಳಿಂದ ರಚನೆಯಾದ ಗಿಫ್ಟ್‌ ಐಟಂ ಸಿದ್ಧಉತ್ಪನ್ನಗಳನ್ನು ಮಾರಾಟಮಾಡಲು ಸಮರ್ಪಕವಾದ ಯೋಜನೆ ರೂಪಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಯಿತು ಹಾಗೂ ಕೆಲವು ಕಾರ್ಪೋರೇಟ್ ಸಂಸ್ಥೆಗಳಲ್ಲಿ ವಿಶೇಷ ಸಮಾರಂಭಗಳಿಗೆ ಇದೇ ಗಿಫ್ಟ್‌ ಐಟಂಗಳನ್ನು ಖರೀದಿಸಲು ವಿನಂತಿ ಮಾಡಿಕೊಳ್ಳಲಾಯಿತು. ಈ ಯೋಜನೆಯ ಬಗ್ಗೆ ಅರಿತಿದ್ದ ಕಾರ್ಪೋರೇಟ್ ವಲಯ ಹಾಗೂ ಐಟಿ ಕ್ಷೇತ್ರ ಸಕಾರಾತ್ಮಕವಾಗಿ ಸ್ಪಂದಿಸಿತು. ರೀಸಾಲ್ವ್ ಟ್ರ್ಯಾಶ್ ಟು ಕ್ಯಾಶ್ ಯೋಜನೆಯಲ್ಲಿ ಮಹಿಳಾ ಸದಸ್ಯರೇ ಮುಖ್ಯ ಪ್ರತಿನಿಧಿಗಳೂ ಹೌದು ಹಾಗೂ ಈ ಸ್ವತಂತ್ರ ಉದ್ಯಮದ ಮಾಲೀಕರೂ ಹೌದು ಎನ್ನುತ್ತಾರೆ ಅಮೃತಾ.

image


ಘನತ್ಯಾಜ್ಯ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದ ಬಹುಪಾಲು ಮಾಧ್ಯಮಿಕ ಶಾಲೆಯನ್ನೂ ಪೂರ್ಣಗೊಳಿಸದವರು ಹಾಗೂ ಸಂಪೂರ್ಣ ಅನಕ್ಷರಸ್ಥ ಕೆಳವರ್ಗದ ಅಸಂಘಟಿತ ಕೂಲಿಕಾರ್ಮಿಕರು, ಚಿಂದಿ ಆಯುವವರು ಈ ಯೋಜನೆಯಡಿ ಬೆಳಕು ಕಂಡಿದ್ದಾರೆ. ಕೊಲ್ಕತ್ತಾದ 3 ಮುಖ್ಯ ಸ್ಲಂಗಳಲ್ಲಿ ವಾಸಿಸುತ್ತಿದ್ದ ಸುಮಾರು 350 ಚಿಂದಿ ಆಯುವವರು ಈ ಕಾರ್ಯಕ್ರಮದ ಮೂಲಕ ಗೌರವಾನ್ವಿತ ಬದುಕು ನಡೆಸಲು ಸಾಧ್ಯವಾಗುತ್ತಿದೆ.

ಕ್ರಮೇಣ ಲಾಭದಾಯಕವಾಗಿ ಪರಿವರ್ತನೆಗೊಂಡ ಈ ಯೋಜನೆ ಹಳೆಯ ಆದಾಯಕ್ಕಿಂತ ಶೇ.35ರಷ್ಟು ಅಧಿಕವಾಗಿದೆ. ಈ ಯೋಜನೆಯಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಸುಮಾರು 400 ಜನರಿಗೆ ಮೈಕ್ರೋ ಹಣಕಾಸಿನ ವಿಮೆ ಮಾಡಿಸಲಾಗಿದೆ. ಇಲ್ಲಿರುವ ಜೀವಹಾನಿ ಸಮಸ್ಯೆಗಳನ್ನು ಅರಿತುಕೊಂಡು ಟಾಟಾ-ಎಐಜಿ ಸಂಸ್ಥೆ ಇವರಿಗೆ ಜೀವವಿಮಾ ಪಾಲಿಸಿಯನ್ನೂ ನೀಡಿದೆ. ಪ್ರಾಕೃತಿಕ ಬದಲಾವಣೆಯನ್ನು ಗುರುತಿಸುವುದಾದರೆ ನಿಧಾನವಾಗಿ ಕೊಲ್ಕತ್ತಾದ ಘನತ್ಯಾಜ್ಯ ನಿರ್ವಹಣೆ ಸಮಸ್ಯೆ ನಿವಾರಣೆಯಾಗುತ್ತಿದೆ. ನಿರ್ಮಲ ಪರಿಸರ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಆಶಯ ನೆರವೇರುವತ್ತ ಸಾಗಿದೆ.

ಚಿಂದಿ ಆಯುವವರ ಮಾತು

20 ವರ್ಷಗಳ ಹಿಂದೆ ಸುಂದರಬನ್ಸ್ ಪ್ರದೇಶದಿಂದ ಉದ್ಯೋಗ ಅರಸಿ ಕೊಲ್ಕತ್ತಾಗೆ ಬಂದಿದ್ದ ಹಿಂದುಳಿದ ಬಡವ ಅಲ್ಲಾವುದ್ದೀನ್ ಶೇಖ್ ಬಹಳಷ್ಟು ವರ್ಷಗಳಿಂದ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಆದರಿಂದು ರಿಸಾಲ್ವ್ ಟ್ರ್ಯಾಶ್ ಟು ಕ್ಯಾಶ್ ದಯೆಯಿಂದ ಅವರ ಜೀವನಶೈಲಿಯಲ್ಲಿ ವ್ಯಾಪಕ ಬದಲಾವಣೆ ಕಂಡುಬಂದಿದೆ. ಒಂದು ದಿನ ನಾನು ಸಮವಸ್ತ್ರ ಹಾಗೂ ಐಡಿ ಕಾರ್ಡ್ ಧರಿಸಿ ಯಾವುದಾದರೂ ಕಚೇರಿಯೊಳಗೆ ಹೋಗುತ್ತೇನೆ ಎಂಬ ಕಲ್ಪನೆ ಕೂಡ ನನಗಿರಲಿಲ್ಲ. ಆದರೆ ಈ ಯೋಜನೆಯ ಕೃಪೆಯಿಂದಾಗಿ ಜಾಡಮಾಲಿಯಾಗಿದ್ದ ನನಗೆ ಇಂದು ಗೌರವಾನ್ವಿತ ಜೀವನ ಲಭಿಸಿದೆ. ಅಷ್ಟೇ ಅಲ್ಲ, ನನ್ನ ಕೆಲಸಕ್ಕೆ ಉತ್ತೇಜನ ನೀಡುವಂತೆ ಅಪೀಜಯ್ ಗ್ರೂಪ್ ಪ್ರಶಸ್ತಿಯನ್ನೂ ಕೊಟ್ಟಿದೆ. ನಾನು ಈ ಯೋಜನೆಯ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಅಂತ ಅಲ್ಲಾವುದ್ದೀನ್ ಖುಷಿಯಿಂದ ಹೇಳಿಕೊಳ್ತಾರೆ.

ಅಲ್ಲವುದ್ದೀನ್‌ರಂತೆ ಮಾಯಾ ಮಂಡಲ್ ಸಹ ಈ ಯೋಜನೆಯಿಂದ ಬದುಕನ್ನೇ ಬದಲಾಯಿಸಿಕೊಂಡಿದ್ದಾರೆ. ತಿಂಗಳಿಗೆ 750ರಿಂದ 1800 ರೂ. ಸಂಬಳಕ್ಕಾಗಿ ತ್ಯಾಜ್ಯ ನೀರಿನಲ್ಲಿ ಕಷ್ಟಪಡುತ್ತಿದ್ದವರು ಅವರು. ಅಂತಹ ಪರಿಸ್ಥಿತಿಯಲ್ಲಿ ಕೊಳಕು ನೀರಿನಲ್ಲಿ ದೇಹವನ್ನಿಟ್ಟು ದುಡಿಯುತ್ತಿದ್ದ ಕಾರಣ ಅವರಿಗೆ ಚರ್ಮರೋಗಗಳು ಬಾಧಿಸುತ್ತಿತ್ತು. ಆದರೆ ಇಂದು ಮಾಯಾಗೆ ಯಾವುದೇ ಚರ್ಮರೋಗವಿಲ್ಲ ಬದಲಿಗೆ ಅವರ ದೈಹಿಕ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಸುಧಾರಿಸಿದೆ. ಹಿಂದಿನ ಗಳಿಕೆಗಿಂತ 5 ಪಟ್ಟು ಹೆಚ್ಚು ಮನೆಯಲ್ಲಿ ಕುಳಿತೇ ಗಿಫ್ಟ್‌ ಉತ್ಪನ್ನಗಳನ್ನು ತಯಾರಿಸಿ ಗಳಿಸುತ್ತಿದ್ದಾರೆ. ಅಲ್ಲದೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ ಹಾಗೂ ಬಾಂಗ್ಲಾ ಭಾಷೆಯನ್ನು ಓದಲು ಹಾಗೂ ಬರೆಯಲು ಕಲಿಯುತ್ತಿದ್ದಾರೆ.

ನಮ್ಮ ಇಡೀ ತಲೆಮಾರು ಕೊಳಕು ನೀರಿನಲ್ಲಿ ಕೆಲಸ ಮಾಡುತ್ತಲೇ ತಮ್ಮ ಜೀವನವನ್ನು ಸವೆಸಿತ್ತು. ನನ್ನ ಬದುಕಿಗಾಗಿ ಕಲಾತ್ಮಕ ಹಾಗೂ ಕ್ರಿಯಾತ್ಮಕ ಕೆಲಸ ಮಾಡುತ್ತೇನೆ ಅನ್ನುವ ಕನಸನ್ನೂ ಕಂಡಿರಲಿಲ್ಲ. ಆದರಿಂದು ನನಗೆ ಕೊಳಕು ಪರಿಸರದಿಂದ ಮುಕ್ತಿ ಸಿಕ್ಕಿದ್ದಷ್ಟೇ ಅಲ್ಲದೇ ಮನಸ್ಸಿಗೆ ಸಂತೋಷ ಉಂಟು ಮಾಡುವ ಕಾಯಕ ಲಭಿಸಿದೆ. ಅಮೃತಾ ದೀದಿ ಯಾವಾಗಲೂ ಒಟ್ಟಾಗಿ ಕೆಲಸ ಮಾಡೋಣ ಎನ್ನುತ್ತಿರುತ್ತಾರೆ. ನಾವು ಈ ಒಟ್ಟಾಗಿ ಕೆಲಸ ಮಾಡುವ ಪ್ರಕ್ರಿಯೆ ಕಲಿತಿದ್ದೇ ಈ ಯೋಜನೆಯಲ್ಲಿ. ಇಂದು ಇದೇ ರೀತಿ ಒಟ್ಟಾಗಿ ದುಡಿದು ಅತ್ಯುತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳುತ್ತಿದ್ದೇವೆ ಎಂದು ಮಾಯಾ ಹೇಳುತ್ತಾರೆ.

ಸೇಫ್ ಉತ್ತೇಜಿಸಲ್ಪಟ್ಟ ಅನುಪಯುಕ್ತ ಕಾಗದಗಳಿಂದ ಮರುಬಳಕೆಯ ಉತ್ಪನ್ನಗಳನ್ನು ತಯಾರಿಸುವ ಯೋಜನೆ ಯಶಸ್ಸು ಕಂಡಿದೆ. ಹೀಗಾಗಿ ಇನ್ನಿತರ ಬೇರೆ ಬೇರೆ ಯೋಜನೆಗಳನ್ನು ಇದು ರೂಪಿಸುತ್ತಿದೆ. ಹಸಿ ತ್ಯಾಜ್ಯದಿಂದ ಎರೆಹುಳ ಗೊಬ್ಬರ ತಯಾರಿಸಿ ಸಾವಯವ ಕೃಷಿಗೆ ಬಳಸುವಂತೆ ಒದಗಿಸುವುದು, ನಾಶವಾಗದ ಉತ್ಪನ್ನವಾದ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಿ ಮನೆಯಲ್ಲಿಯೇ ಚಿಕ್ಕಪುಟ್ಟ ಉದ್ಯಾನವನಗಳನ್ನು ನಿರ್ಮಿಸುವುದು ಮುಂತಾದ ಅನೇಕ ಸೃಜನಾತ್ಮಕ ಯೋಜನೆಗಳನ್ನೂ ಈ ಸಂಸ್ಥೆ ಹೆಣೆಯುತ್ತಿದೆ.

    Share on
    close