ಸ್ಮಶಾನದಲ್ಲಿ ಸಂಜೀವಿನಿ...!

ಕೃತಿಕಾ

0

ಸ್ಮಶಾನ ಎಂದರೆ ಸಾಕು ಹೆದರಿ ಓಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದ್ರೆ ಇಲ್ಲೊಬ್ಬರು ಸ್ಮಶಾನದಲ್ಲೇ ಜೀವ ಉಳಿಸುವ ಸಂಜೀವಿನಿ ಬೆಳೆಸಿ ಸೈ ಎನಿಸಿಕೊಂಡಿದ್ದಾರೆ. ಸ್ಮಶಾನ ಎಂದರೆ ಅದೊಂದು ಯಾರಿಗೂ ಬೇಡವಾದ ಸ್ಥಳ. ಅಂತ್ಯ ಸಂಸ್ಕಾರಕ್ಕೆ ಮಾತ್ರ ಸೀಮಿತವಾದ ಸ್ಥಳ. ಅಂತ್ಯಸಂಸ್ಕಾರದ ವೇಳೆ ಬಿಟ್ಟರೆ ಆ ಕಡೆ ಬಹುತೇಕರು ಕಣ್ಣೆತ್ತಿಯೂ ನೋಡಲ್ಲ. ಆದರೆ, ಇಲ್ಲೊಬ್ಬರು ಸ್ಮಶಾನದಲ್ಲೇ ಔಷಧಿ ಗಿಡಗಳನ್ನು ಬೆಳೆಸಿ ಎಲ್ಲರೂ ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ.ಇಲ್ಲಿ ಸ್ಮಶಾನ ಅಂದ್ರೆ ಸತ್ತು ಹೋದವರ ಅಂತ್ಯ ಸಂಸ್ಕಾರ ಮಾಡುವ ಜಾಗವಷ್ಟೇ ಅಲ್ಲ. ಸ್ಮಶಾನ ಅಂದ್ರೆ ಅದು ರೋಗಗ್ರಸ್ಥ ದೇಹಕ್ಕೆ ಸಂಜೀವಿನಿಯೂ ಹೌದು! ಇದೇನಪ್ಪಾ ಹೊಸ ವರಸೆ ಅಂತೀರಾ.. ಹೌದು, ಇದು ಆಶ್ಚರ್ಯ ಎನಿಸಿದರೂ ನೂರಕ್ಕೆ ನೂರು ಸತ್ಯ. ಹಾವೇರಿ ತಾಲೂಕಿನ ಕಾಟೇನಹಳ್ಳಿಯಲ್ಲಿರುವ ಸ್ಮಶಾನ, ಮನುಷ್ಯರಿಗೆ ಬರುವ ಕಾಯಿಲೆಗಳಿಗೆ ಔಷಧಿ ಕೊಡುವ ಉದ್ಯಾನವನ. ಬದುಕಿದ್ದಾಗಲೇ ಒಂದು ಸಲ ಬಂದರೆ ನಿಮ್ಮ ಆಯಸ್ಸು ಹೆಚ್ಚಾಗಬಹುದು.

ಸ್ಮಶಾನದಲ್ಲಿ ಔಷಧ ಸಸ್ಯಗಳನ್ನು ಬೆಳೆಸಿ, ಔಷಧ ವನವನ್ನಾಗಿ ಮಾಡಿದವರು ಅದೇ ಗ್ರಾಮದ ಅಕ್ಬರ್ ಅಲಿ ಮುಲ್ಲಾನವರ. ಆಯುರ್ವೇದ ಔಷಧಿಗೆ ಅವಶ್ಯವಿರುವ ಸುಮಾರು 80ಕ್ಕೂ ಅಧಿಕ ಸಸಿಗಳನ್ನು ಬೆಳೆಸುವ ಮೂಲಕ ಮಾದರಿ ಸ್ಮಶಾನವನ್ನಾಗಿ ಮಾಡಿದ್ದಾರೆ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಅಕ್ಬರ್​ಅಲಿ ಅವರ ಕುಟುಂಬದ ಹಿರಿಯರು, ಗ್ರಾಮದ ಮುಸ್ಲಿಂ ಸಮುದಾಯದಲ್ಲಿ ಮರಣ ಹೊಂದಿದವರ ಅಂತ್ಯ ಸಂಸ್ಕಾರಕ್ಕಾಗಿ ನಾಲ್ಕು ಎಕರೆ ಭೂಮಿ ನೀಡಿದ್ದರು. ಈ ಸ್ಮಶಾನದ ಪಕ್ಕದಲ್ಲಿಯೇ ಶಾಲೆಯೂ ಇತ್ತು. ಸ್ಮಶಾನದ ಸಮೀಪವೇ ಶಾಲೆ ಇರುವುದರಿಂದ ಮಕ್ಕಳಲ್ಲಿ ಭಯದ ವಾತಾವರಣ ಮೂಡಿ, ಶಾಲೆಗೆ ಬರಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಅರಿತ ಅಕ್ಬರ್ ಅಲಿ, ಶಾಲೆಯ ಪಕ್ಕದಲ್ಲಿ ಪಾಳು ಬಿದ್ದಿರುವ ಸ್ಮಶಾನದ 20 ಗುಂಟೆ ಜಾಗದಲ್ಲಿ ಔಷಧವನ ನಿರ್ಮಿಸಿ ಶಾಲಾ ಮಕ್ಕಳನ್ನು ಆಕರ್ಷಿಸುವಂತೆ ಮಾಡಿದ್ದಾರೆ.

ಇಂಗ್ಲೀಷ್ ಔಷದಿಗಳ ಪ್ರಭಾವ ಹೆಚ್ಚಾಗಿ ಆಯುರ್ವೇದ ಔಷಧಿಯ ಸಸ್ಯಗಳು ನಶಿಸಿ ಹೋಗುತ್ತಿವೆ. ಗಿಡಮೂಲಿಕೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸ್ಮಶಾನದ ಜಾಗದಲ್ಲಿ ಔಷಧಿ ವನ ಮಾಡಿದ್ದೇನೆ. ಆಯುರ್ವೇದದಿಂದ ಅತ್ಯಂತ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡಬಹುದು. ಅಲ್ಲದೇ ರೋಗವನ್ನು ಶಾಶ್ವತವಾಗಿ ಗುಣಪಡಿಸುವ ಶಕ್ತಿ ಆಯುರ್ವೇದದಲ್ಲಿದೆ. ಇಂತಹ ಆಯುರ್ವೇದದ ಔಷದಿಗಳು ನಮ್ಮ ಮುಂದಿನ ಪೀಳಿಗೆಗೆ ಲಭ್ಯವಾಗಬೇಕು. ಆ ಉದ್ದೇಶವಿಟ್ಟುಕೊಂಡು ಸ್ಮಶಾನದಲ್ಲಿ ಔಷದಿ ಸಸ್ಯಗಳನ್ನು ಬೆಳೆಸುತ್ತಿದ್ದೇನೆ ಎನ್ನುತ್ತಾರೆ ಅಕ್ಬರ್ ಅಲಿ.

ಸ್ಮಶಾನದಲ್ಲಿ ಅಕ್ಬರ್ ಆಲಿ ಹಲವು ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಅಶ್ವಗಂಧಿ, ಸರ್ಪಗಂಧಿ, ಶತಾವರಿ, ಶಂಕಪುಷ್ಟಿ, ಕಿರಿನೆಲ್ಲಿ, ಕಾಡಬೃಷ್ಟಿ, ರಂಜಕಬಳ್ಳಿ, ಈಶ್ವರಿ ಬಳ್ಳಿ, ಅಮೃತ ಬಳ್ಳಿ, ಚಕ್ರಮುನಿ, ಮದುನಾಶಿನಿ, ಹಲಗತ್ತಿ, ಕಸ್ತೂರಿ ಜಾಲಿ, ಬೆಟ್ಟದ ನೆಲ್ಲಿ, ಮುಕಹಾಲಿಂ, ಬಿಳೆ ಗುಲಗಂಜಿ, ತಾಳಿಸರಾ, ಕಾಡ ಅರಿಶಿನ, ಸರಸ್ವತಿ ಬಳ್ಳಿ, ಸುಗಂಧಿ ಬಳ್ಳಿ, ಚಿತ್ರಮೂಲ ಕರಿಲೆಕ್ಕಿ ಸೇರಿದಂತೆ 80ಕ್ಕೂ ಅಧಿಕ ಆಯುರ್ವೇದ ಔಷಧಿ ಸಸಿಗಳನ್ನು ಬೆಳೆಸಿದ್ದಾರೆ. ಕಾಟೇನಳ್ಳಿ ಮತ್ತು ಸತ್ತಮುತ್ತಲಿನ ಗ್ರಾಮಸ್ಥರು ಯಾವುದೇ ಕಾಯಿಲೆ ಬಂದರೂ ಅಕ್ಬರ್ ಅಲಿಯೇ ಅವರಿಗೆ ಚಿಕಿತ್ಸೆ ನೀಡುತ್ತಾರೆ. ಇಂಗ್ಲೀಷ್ ಔಷಧಿಗಳಿಗಿಂತ ಅಕ್ಬರ್ ಅಲಿ ಕೊಡುವ ಗಿಡಮೂಲಿಕೆ ಔಷಧಿಗಳು ರಾಮಬಾಣ ಅಂತಾರೆ ಗ್ರಾಮಸ್ಥರು.

ಸ್ಮಶಾನವಾಗಿದ್ದ ಜಮೀನು ಈಗ ಸುಂದರ ಔಷಧೀಯ ತೋಟವಾಗಿದೆ. ಅಕ್ಬರ್ ಅಲಿಯವರು ನಾಟಿ ಔಷಧಿ ನೀಡಲು ಸ್ಮಶಾನದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿ, ಔಷಧೀಯ ವನವನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಸ್ಮಶಾನದ ಬಗ್ಗೆ ಇದ್ದ ಭಯ ದೂರವಾಗಿದೆ. ಇದರ ಜೊತೆಗೆ ಎಂತಹದ್ದೇ ಕಾಯಿಲೆ ಬಂದರೂ ಅಕ್ಬರ್ ಆಲಿ ತಾವು ಬೆಳೆಸಿರುವ ಔಷಧೀಯ ಸಸ್ಯಗಳಿಂದ ಗ್ರಾಮಸ್ಥರ ಕಾಯಿಲೆಗಳನ್ನು ಗುಣಪಡಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಮದ ಯುವಕ ಸಂತೋಷ ಕುಮಾರ ಪಾಟೀಲ.

ಆಯುರ್ವೇದ ಔಷಧಿ ನೀಡುವುದನ್ನೇ ವೃತ್ತಿಯಾಗಿಸಿಕೊಂಡಿರುವ ಅಕ್ಬರ್ ಅಲಿ ಸ್ಮಶಾನದಲ್ಲಿ ಬೆಳೆದ ಸಸಿಗಳಿಂದ ಔಷಧಿ ತಯಾರಿಸಿ ಮಾರಾಟ ಮಾಡುತ್ತಾರೆ. ಕರ್ನಾಟಕ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ ಮತ್ತು ಅಂಧ್ರಪ್ರದೇಶದಲ್ಲೂ ಇವರ ಔಷಧಿಗಳಿಗೆ ತುಂಬಾ ಬೇಡಿಕೆಯಿದೆ. ಅಲ್ಲದೇ ಮುಂದಿನ ಪೀಳಿಗೆಗೂ ಆಯುರ್ವೇದ ಚಿಕಿತ್ಸೆ ಲಭ್ಯವಾಗಬೇಕು ಎನ್ನುವ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸ ಇನ್ನಷ್ಟು ದೇಸೀ ವೈದ್ಯರಿಗೆ ಮಾದರಿಯಾಗಬೇಕಿದೆ.