ವಾಣಿಜ್ಯೋದ್ಯಮಿಯ ಸಂದಿಗ್ಧತೆ-ಯಾರಿಂದ ಸಲಹೆ ಪಡೆಯಬೇಕು - ಯಾರನ್ನು ನಿರ್ಲಕ್ಷಿಸಬೇಕು?

ಟೀಮ್​​ ವೈ.ಎಸ್​​. ಕನ್ನಡ

ವಾಣಿಜ್ಯೋದ್ಯಮಿಯ ಸಂದಿಗ್ಧತೆ-ಯಾರಿಂದ ಸಲಹೆ ಪಡೆಯಬೇಕು - ಯಾರನ್ನು ನಿರ್ಲಕ್ಷಿಸಬೇಕು?

Tuesday December 01, 2015,

3 min Read

ಭಾರತದಲ್ಲಿ ಉದ್ಯಮಗಳು ಯಶಸ್ವಿಯಾಗ್ತಾ ಇವೆ. ಹಾಗಾಗಿ ಹಲವರು ಈಗ ಉದ್ಯಮದ ಭಾಗವಾಗಲು ಇಚ್ಛಿಸುತ್ತಿದ್ದಾರೆ. ಒಬ್ಬ ಉದ್ಯಮಿಯಾಗಿ ಅಥವಾ ಹೂಡಿಕೆದಾರನಾಗಿ, ಇಲ್ಲವೇ ಉದ್ಯೋಗಿಯಾಗಿ ಉದ್ಯಮ ಜಗತ್ತಿಗೆ ಎಂಟ್ರಿ ಕೊಡಲು ಬಯಸುತ್ತಿದ್ದಾರೆ. ನಿಜವಾಗಲೂ ಇದೊಂದು ಒಳ್ಳೆಯ ಬೆಳವಣಿಗೆ. ಒಬ್ಬ ಉದ್ಯಮಿ ತನ್ನ ಪಯಣದುದ್ದಕ್ಕೂ ನೂರಾರು ಜನರನ್ನು ಭೇಟಿಯಾಗ್ತಾನೆ, ಅವರಿಂದ ಸಲಹೆ ಸೂಚನೆಗಳನ್ನು ಪಡೆಯುತ್ತಾನೆ. ಸೂಕ್ತ ವ್ಯಕ್ತಿಯ, ಸೂಕ್ತ ಸಲಹೆ ನಿಜಕ್ಕೂ ಸಹಕಾರಿ. ಆದ್ರೆ ಕೆಲವರು ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆಗಳೂ ಇರುತ್ತವೆ. ಉದ್ಯಮಿ ನಿಖಿಲೇಶ್ ಕೂಡ ಎರಡು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಇಂತಹ ವ್ಯಕ್ತಿಗಳ ಕೆಲ ವರ್ಗಗಳನ್ನೂ ಸೃಷ್ಟಿಸಿದ್ದಾರೆ. ಇಂಥವರ ಜೊತೆ ಹೆಚ್ಚು ಸಮಯ ಕಳೆಯದಂತೆ ಅವರು ಉದ್ಯಮಿಗಳನ್ನು ಎಚ್ಚರಿಸಿದ್ದಾರೆ.

image


ನಕಲಿ ಹೂಡಿಕೆದಾರರು : ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮನ್ನು ಏಂಜೆಲ್ ಇನ್‍ವೆಸ್ಟರ್‍ಗಳೆಂದು ಕರೆದುಕೊಳ್ತಾರೆ. ಆದ್ರೆ ನಿಜವಾಗಿಯೂ ಅವರು ಹೂಡಿಕೆಯನ್ನೇ ಮಾಡುವುದಿಲ್ಲ. ನಿಮಗೆ ತಮ್ಮ ಅರೆಬೆಂದ ಜ್ಞಾನವನ್ನು ಧಾರೆ ಎರೆಯಲು ಪ್ರಯತ್ನಿಸ್ತಾರೆ. ಎಲ್ಲ ದಾಖಲೆಗಳನ್ನೂ ತಮಗೆ ಕಳಿಸಿಕೊಡುವಂತೆ ಕೇಳುತ್ತಾರೆ. ಅವರಿಗೆ ನಿಮ್ಮ ಉದ್ಯಮದಲ್ಲಿ ಹೂಡಿಕೆ ಮಾಡುವ ಆಸಕ್ತಿಯಿರುವುದಿಲ್ಲ, ಸುಖಾಸುಮ್ಮನೆ ನಿಮ್ಮ 3-4 ತಿಂಗಳ ಸಮಯವನ್ನು ವ್ಯರ್ಥ ಮಾಡುತ್ತಾರಷ್ಟೆ. `ಎಕನಾಮಿಕ್ಸ್ ಟೈಮ್ಸ್'ನ `ಸ್ಟೇಜ್‍ಫಾಡ್ ಡಾಟ್ ಕಾಮ್'ನಲ್ಲಿ ಕೂಡ ಹೂಡಿಕೆ ಮಾಡುವುದಾಗಿ ನಕಲಿ ಬಂಡವಾಳಗಾರರು ಮುಂದೆ ಬಂದಿದ್ರು. ಅವರಿಗೆ ಉದ್ಯಮದ ಬಗ್ಗೆ ಜ್ಞಾನವೇ ಇರಲಿಲ್ಲ. ಅವರಿಗೆ ಮೊದಲೂ ಇಂತಹ ಅನುಭವವಾಗಿದ್ರಿಂದ ಮತ್ತೊಮ್ಮೆ ಮೋಸ ಹೋಗಲಿಲ್ಲ, ಅವರ ಪರಿಶ್ರಮ ಹಾಗೂ ಸಮಯವನ್ನು ಕಾಪಾಡಿಕೊಂಡ್ರು.

ಅಷ್ಟೇನೂ ನಿಷ್ಕಪಟಿಗಳಲ್ಲದ ಉದ್ಯಮಿಗಳು : ಇವರು ಉದ್ಯಮವನ್ನೇನೋ ಆರಂಭಿಸಿದ್ದಾರೆ, ಆದ್ರೆ ಅವರನ್ನು ಅದಕ್ಕೆ ಅಳವಡಿಸಿಕೊಂಡಿಲ್ಲ, ಕಾರ್ಯರೂಪಕ್ಕೆ ತಂದಿಲ್ಲ. ಕೆಲವೇ ತಿಂಗಳುಗಳಲ್ಲಿ ಸಂಸ್ಥೆಯನ್ನೇ ಮುಚ್ಚಿದ್ದಾರೆ. ಇಂಥವರ ಬಳಿ ಹಂಚಿಕೊಳ್ಳಲು ಸಾಮಾನ್ಯ ಜ್ಞಾನವಿದೆ. ಆದ್ರೆ ಹೆಚ್ಚೇನೂ ವಿಷಯ ವಸ್ತುಗಳಿಲ್ಲ, ಅದನ್ನೆಲ್ಲ ಕಾರ್ಯರೂಪಕ್ಕೆ ತಂದ ಅನುಭವವಿಲ್ಲ. ಇಂತಹ ಜನರೊಂದಿಗಿನ ಮಾತುಕತೆ ಕೂಡ ನಿಮ್ಮನ್ನು ದಾರಿ ತಪ್ಪಿಸಬಹುದು.

ನಕಲಿ ದುರ್ಬಲ ಉದ್ಯಮಿಗಳು : ದುರ್ಬಲತೆಯಲ್ಲಿ ಸಮಸ್ಯೆ ಅಡಗಿದೆ. ಉದ್ದೇಶಪೂರ್ವಕವಾಗಿ ಅಥವಾ ಅನುದ್ದೇಶಿತವಾಗಿ ತಮ್ಮ ಅರೆಬೆಂದ ಜ್ಞಾನದ ಮೂಲಕ ಜನರ ಹಾದಿ ತಪ್ಪಿಸಲು ಆರಂಭಿಸಿದ್ರೆ ಅಲ್ಲಿಂದಲೇ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಬಹುತೇಕ ಎಲ್ಲ ಉದ್ಯಮಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲೂ ಇಂಥವರು ಸಿಗುತ್ತಾರೆ. ಆದ್ರೆ ಅವರಲ್ಲಿ ಉದ್ಯಮ ಆರಂಭಿಸುವ ಉದ್ದೇಶವಾಗ್ಲಿ, ಧೈರ್ಯವಾಗ್ಲಿ ಇರುವುದಿಲ್ಲ. ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಬಗ್ಗೆ ಅವರು ಮಾತನಾಡ್ತಿರ್ತಾರೆ. ಆದ್ರೆ ಯಾವುದು ಪರಿಣಾಮಕಾರಿ, ಯಾವುದು ಅಲ್ಲ ಅನ್ನೋದು ಅವರಿಗೇ ಅರಿವಿರುವುದಿಲ್ಲ.

ಉದ್ಯಮ ಆರಂಬಿಸುವ ಉತ್ಸಾಹಿಗಳು : ಇನ್ನು ಕೆಲವರು ಉದ್ಯಮ ಆರಂಭಿಸುವ ಉತ್ಸಾಹದಲ್ಲಿರುವವರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಅವರಿಗೆ ಉದ್ಯಮದ ಬಗ್ಗೆ ಅಥವಾ ಭಾರತದಲ್ಲಿ ಬ್ಯುಸಿನೆಸ್ ನಡೆಸುವ ಬಗ್ಗೆ ವ್ಯಾವಹಾರಿಕ ಅನುಭವ ಇರುವುದಿಲ್ಲ. ಇವರು ಹೆಚ್ಚಾಗಿ ಮಾಹಿತಿ ತಂತ್ರಜ್ಞಾನ ಮತ್ತು ಕನ್ಸಲ್ಟಿಂಗ್ ಕಂಪನಿಗಳಲ್ಲಿ ಹಿರಿಯ ಹುದ್ದೆಗಳಲ್ಲಿರುತ್ತಾರೆ. ಕೆಲವರು ಉದ್ಯಮಗಳು, ಹೂಡಿಕೆ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಸ್ನೇಹಿತರಿಂದ ಕೇಳಿ ತಿಳಿದುಕೊಂಡಿದ್ದನ್ನು, ಬ್ಲಾಗ್‍ಗಳಲ್ಲಿ ಓದಿದ್ದನ್ನು, ಈವೆಂಟ್‍ಗಳಲ್ಲಿ ಕೇಳಿದ್ದನ್ನು ತಮ್ಮದೇ ಅನುಭವ ಎಂಬಂತೆ ಪ್ರದರ್ಶಿಸುತ್ತಾರೆ.

ಇಂತಹ ಸಂದರ್ಭಗಳಲ್ಲಿ ಧ್ವನಿಯನ್ನು ಗದ್ದಲದಿಂದ ಬೇರ್ಪಡಿಸುವುದು ಹೇಗೆ ಎಂಬುದೇ ಪ್ರಶ್ನೆ. ನಾವು ಯಾರನ್ನು ನಂಬಬೇಕು? ಯಾರಿಂದ ಸಲಹೆ ಪಡೆಯಬೇಕು ಅನ್ನೋದು ಸವಾಲಿನ ವಿಚಾರ. ನಿಜವಾಗಿಯೂ ಉದ್ಯಮ ಲೋಕದಲ್ಲಿ ತೊಡಗಿಸಿಕೊಂಡಿರುವವರಲ್ಲಿ ಮಾತ್ರ ನೀವು ವಿಶ್ವಾಸವಿಡಿ. ನಿಜವಾಗಿಯೂ ತಮ್ಮ ಕೈಕೆಸರು ಮಾಡಿಕೊಳ್ಳುತ್ತಿರುವವರು, ಬರೀ ಮಾತಿನಲ್ಲಿ ಕಾಲ ಕಳೆಯದೆ ಅದನ್ನು ಸಾಧಿಸಿ ತೋರಿಸುತ್ತಿರುವವರಿಂದ ಮಾತ್ರ ಸಲಹೆ ಪಡೆಯಿರಿ. ಅವರಲ್ಲಿ ಕೆಲವರೆಂದ್ರೆ,

ಹೂಡಿಕೆದಾರರಾಗಿ ಬದಲಾದ ಉದ್ಯಮಿಗಳು : ಸಹಜವಾಗಿಯೇ ಇವರು ಗುಣಮಟ್ಟದ ಹಾಗೂ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ಅವರಿಗೆ ಉದ್ಯಮಿಗಳು ನಿಜವಾಗಿ ಎದುರಿಸುವ ಸವಾಲುಗಳ ಅರಿವಿರುತ್ತದೆ. ನಿಮ್ಮ ಬ್ಯುಸಿನೆಸ್ ಮಾದರಿಯನ್ನು ಸುಧಾರಿಸುವ ಮೂಲಕ ಅವರು ನಿಮಗೆ ಸಹಾಯ ಮಾಡಬಲ್ಲರು. ಅದನ್ನೆಲ್ಲ ಕಾರ್ಯರೂಪಕ್ಕೆ ತರಲು ಟಿಪ್ಸ್ ಕೂಡ ನೀಡಬಲ್ಲರು.

ಕಂಪನಿಯೊಂದನ್ನು ಕಟ್ಟಿ ಬೆಳೆಸಿದ ಅಥವಾ ಆ ಪ್ರಯತ್ನದಲ್ಲಿರುವ ಉದ್ಯಮಿಗಳು : ಅವರಿಗೆ ಭಾರತದಲ್ಲಿ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಲು ಏನು ಮಾಡಬೇಕೆಂಬುದರ ಅರಿವಿರುತ್ತದೆ. ಉದ್ಯಮದ ಅಂತರಾಳವನ್ನು ಅರಿತಿರುವ ಅವರು ಸೂಕ್ತ ವ್ಯಕ್ತಿ ಹಾಗೂ ಪ್ರಕ್ರಿಯೆಯನ್ನು ನಿಮಗೆ ಪರಿಚಯಿಸುತ್ತಾರೆ.

ಪ್ರಾಮಾಣಿಕವಾಗಿ ವಿಫಲವಾದ ಉದ್ಯಮಿಗಳು : ಕೆಲವರು ತಮ್ಮ ಉದ್ಯಮದ ಯಶಸ್ಸಿಗೆ ಶತಪ್ರಯತ್ನ ಮಾಡುತ್ತಾರೆ. ಸರ್ವಶಕ್ತಿಯನ್ನು ವ್ಯಯಿಸಿದ್ರೂ ಫಲಿತಾಂಶ ಮಾತ್ರ ವಿಭಿನ್ನವಾಗಿರುತ್ತದೆ. ಸಂಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವರ ಬಳಿ ಕೂಡ ನಿಮ್ಮೊಂದಿಗೆ ಹಂಚಿಕೊಳ್ಳಬಹುದಾದಂತಹ ದೃಷ್ಟಿಕೋನಗಳಿರುತ್ತವೆ.

ಡೊಮೇನ್ ತಜ್ಞರು : ಯಶಸ್ಸು ಪಡೆಯಬೇಕಂದ್ರೆ ಪ್ರತಿಯೊಂದು ಉದ್ಯಮವೂ ಕೆಲ ಸಮಸ್ಯೆಗಳನ್ನು ಎದುರಿಸಲೇಬೇಕು. ಸೇಲ್ಸ್ ಹೆಚ್ಚಿಸುವುದು ಹೇಗೆ, ಸಮರ್ಥ ತಂಡ ಕಟ್ಟುವುದು ಹೇಗೆ, ಬಳಕೆದಾರರನ್ನು ಇನ್ನಷ್ಟು ಕ್ರೀಯಾಶೀಲರಾಗಿಸುವುದು ಹೇಗೆ, ದರ ನಿಗದಿ ತಂತ್ರ ಹೇಗೆ ಮಾಡಬೇಕು ಅನ್ನೋ ಸವಾಲುಗಳು ಎದುರಾಗುತ್ತವೆ. ಡೊಮೈನ್ ತಜ್ಞ ಇದಕ್ಕೆಲ್ಲ ಪರಿಹಾರ ಒದಗಿಸಬಲ್ಲ ಸಲಹೆಗಳನ್ನು ಕೊಡಬಲ್ಲ. ಯಶಸ್ವಿ ಉದ್ಯಮಗಳ ಜೊತೆ ಅವರು ಆರಂಭಿಕ ಹಂತದಲ್ಲಿ ಕೈಜೋಡಿಸಿರುತ್ತಾರೆ. ನಿಮ್ಮ ಉದ್ಯಮಕ್ಕೆ ಎದುರಾಗುವ ಪ್ರಮುಖ ಸವಾಲುಗಳನ್ನು ನೀವು ಗುರುತಿಸಬೇಕು. ಸ್ಟಾರ್ಟ್‍ಅಪ್ ಗುರುಗಳನ್ನು ಭೇಟಿ ಮಾಡಿದ್ರೆ ಅವರಲ್ಲಿ ಈ ಪ್ರಶ್ನೆಗಳನ್ನು ಕೇಳಿ. ಅವರು ನಿಮಗೆ ಸಹಾಯ ಮಾಡುತ್ತಾರೆ.

ಕೊನೆಯದು ಆದ್ರೆ ಕನಿಷ್ಠವಲ್ಲ : ನಿಮ್ಮ ಬಗ್ಗೆ ನಿಮ್ಮನ್ನು ಬಿಟ್ರೆ ಬೇರ್ಯಾರಿಗೂ ಚೆನ್ನಾಗಿ ತಿಳಿದಿರುವುದಿಲ್ಲ. ನಿಮ್ಮ ಒಳಮನಸ್ಸು ಏನು ಹೇಳುತ್ತೆ ಅನ್ನೋದನ್ನೇ ಅನುಸರಿಸಿ. ನಿಮ್ಮ ಜೀವನದುದ್ದಕ್ಕೂ ಇದನ್ನೇ ನೀವು ಅಳವಡಿಸಿಕೊಳ್ಳಬೇಕು. ಸಲಹೆ ಪಡೆಯುವ ಸಂದರ್ಭ ಬಂದಾಗಲೆಲ್ಲ ಚೂಸಿಯಾಗಿರಿ. ಸೂಕ್ತವಾದವುಗಳನ್ನೇ ಆಯ್ಕೆ ಮಾಡಿಕೊಳ್ಳಿ.

ಅನುವಾದಕರು: ಭಾರತಿ ಭಟ್​​​​​​