ಕುಸ್ತಿ ಅಖಾಡದಲ್ಲಿ ಚಿನ್ನದ ಪಂಚ್: ಸರ್ಕಾರಕ್ಕೆ ಕೇಳುತ್ತಿಲ್ಲ ಮೂಕ ಪೈಲ್ವಾನನ ಕೂಗು...

ಟೀಮ್​​ ವೈ.ಎಸ್​​.

0

ಮಣ್ಣು ಮೆತ್ತಿಕೊಂಡ ಕಟ್ಟುಮಸ್ತಾದ ದೇಹ..ಹೊಳೆಯುವ ಕಣ್ಣುಗಳು..ಎದುರಾಳಿಗೆ ಮಣ್ಣು ಮುಕ್ಕಿಸುವ ಹುಮ್ಮಸ್ಸು..ಇವರೇ ದೇಸಿ ಫೈಲ್ವಾನ್ ವೀರೇಂದ್ರ ಸಿಂಗ್. ಜಗಜಟ್ಟಿಗಳನ್ನೂ ಕುಸ್ತಿಯಲ್ಲಿ ಮಣಿಸಬಲ್ಲ ಸಾಹಸಿ ಇವರು. ವೀರೇಂದ್ರ ವಿಶಿಷ್ಟ ಪಟ್ಟುಗಳನ್ನ ಪ್ರದರ್ಶಿಸ್ತಾ ಮಲ್ಲಯುದ್ಧದಲ್ಲಿ ಎದುರಾಳಿಯನ್ನು ಮಣಿಸ್ತಾ ಇದ್ರೆ ಸುತ್ತಲೂ ನೆರೆದಿದ್ದವರ ಕೇಕೆ, ಚಪ್ಪಾಳೆ ಮುಗಿಲು ಮುಟ್ಟುತ್ತಿರುತ್ತೆ. ಆದ್ರೆ ಅದ್ಯಾವುದೂ ವೀರೇಂದ್ರ ಸಿಂಗ್‍ಗೆ ಕೇಳಿಸೋದೇ ಇಲ್ಲ. ತಮ್ಮನ್ನು ಹುರಿದುಂಬಿಸಿದ ಪ್ರೇಕ್ಷಕರಿಗೆ ಧನ್ಯವಾದ ಹೇಳುವ ಪರಿಸ್ಥಿತಿಯಲ್ಲೂ ಅವರಿಲ್ಲ. ಯಾಕಂದ್ರೆ 28 ವರ್ಷದ ಈ ಕುಸ್ತಿ ಪಟು ಮೂಗ ಮತ್ತು ಕಿವುಡ.

ಈ ಅಂಗವೈಕಲ್ಯ ವೀರೇಂದ್ರ ಸಿಂಗ್ ಅವರ ಸಾಧನೆಗೆ ಅಡ್ಡಿಯಾಗಿಲ್ಲ. ಸ್ಪರ್ಧಿಸಿದ 5 ಅಂತರಾಷ್ಟ್ರೀಯ ಟೂರ್ನಿಯಲ್ಲಿ ವೀರೇಂದ್ರ ಸಿಂಗ್ 5 ಪದಕಗಳನ್ನು ಗೆದ್ದಿದ್ದಾರೆ. 2005ರಲ್ಲಿ ಮೆಲ್ಬರ್ನ್‍ನಲ್ಲಿ ನಡೆದ ಡೆಫ್‍ಒಲಿಂಪಿಕ್ಸ್​​​ನಲ್ಲಿ ಭಾಗವಹಿಸಿದ್ದ ಅವರು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. 2013ರ ಬಲ್ಗೇರಿಯಾ ಡೆಫ್‍ಒಲಿಂಪಿಕ್ಸ್​​​ನಲ್ಲೂ ಚಿನ್ನದ ಪದಕ್ಕೆ ಕೊರಳೊಡ್ಡಿದ್ದಾರೆ. ಇವರನ್ನು ಭಾರತದ ಮೂಕ ಫೈಲ್ವಾನ ಎಂದೇ ಬಣ್ಣಿಸಲಾಗುತ್ತೆ. ಅವರು ಕೂಡ ಅದನ್ನು ಯಾವುದೇ ಕೀಳರಿಮೆ, ಹಿಂಜರಿಕೆಯಿಲ್ಲದೆ ಸನ್ನೆಯ ಮೂಲಕವೇ ವ್ಯಕ್ತಪಡಿಸ್ತಾರೆ.

ವಿಶೇಷ ಅಂದ್ರೆ ಮಾತನಾಡಬಲ್ಲ ಹಾಗೂ ಕಿವುಡರಲ್ಲದ ಫೈಲ್ವಾನರ ಜೊತೆಗೆ ವೀರೇಂದ್ರ ಸಿಂಗ್ ತರಬೇತಿ ಪಡೆಯುತ್ತಾರೆ. ಛತ್ರಶಾಲಾ ಮೈದಾನದಲ್ಲಿ ಸುಶೀಲ್ ಕುಮಾರ್ ಸೇರಿದಂತೆ ಎಲ್ಲ ಖ್ಯಾತ ಕುಸ್ತಿ ಪಟುಗಳ ಜೊತೆ ಸಮರಾಭ್ಯಾಸ ಮಾಡ್ತಾರೆ. ಬಾಲ್ಯದಲ್ಲಿ ಸುಶೀಲ್ ಕುಮಾರ್ ಜೊತೆ ವೀರೇಂದ್ರ ಸಿಂಗ್ ಕುಸ್ತಿ ನಡೆಸ್ತಾ ಇದ್ರು. ಈಗ ಇಬ್ಬರೂ ಒಟ್ಟಾಗಿ ತರಬೇತಿ ಪಡೆಯುತ್ತಾರೆ. ಆದ್ರೆ ಇದುವರೆಗೂ ವೀರೇಂದ್ರ ಸಿಂಗ್ ಭಾರತದಲ್ಲಿ ನಡೆದ ಅಧಿಕೃತ ಸ್ಫರ್ಧೆಯಲ್ಲಿ ಪಾಲ್ಗೊಂಡಿಲ್ಲ.

ದುರಂತ ಅಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಈ ಮೂಕ ಕುಸ್ತಿ ಪಟುವಿನತ್ತ ಸರ್ಕಾರ ಇದುವರೆಗೂ ಚಿತ್ತ ಹರಿಸಿಲ್ಲ. ಅವರ ಮೂಕ ವೇದನೆ, ಸಾಧನೆಗೆ ಅಡ್ಡಿಯಾಗುತ್ತಿರುವ ಆರ್ಥಿಕ ಸಂಕಷ್ಟ ಸರ್ಕಾರಕ್ಕಾಗ್ಲಿ, ಇಲಾಖೆಗಾಗ್ಲಿ ಅರ್ಥವಾಗಿಲ್ಲ. ವೀರೇಂದ್ರ ಸಿಂಗ್ ಅವರ ಸಾಧನೆಗೆ ಸರ್ಕಾರದಿಂದ ಯಾವ ಪ್ರಶಸ್ತಿಯೂ ಲಭಿಸಿಲ್ಲ. ನಯಾಪೈಸೆ ಪರಿಹಾರವಾಗ್ಲಿ, ಪ್ರೋತ್ಸಾಹ ಧನವಾಗ್ಲಿ ಸಿಕ್ಕಿಲ್ಲ. ಹರಿಯಾಣದ ವಿದ್ಯುತ್ ಇಲಾಖೆಯಲ್ಲಿ ಅವರು ಕ್ಲರ್ಕ್ ಆಗಿ ಕೆಲಸ ಮಾಡ್ತಿದ್ದಾರೆ. ದುರಂತ ಅಂದ್ರೆ 2004ರಲ್ಲಿ ಡೆಫ್‍ಒಲಿಂಪಿಕ್ಸ್​​ನಲ್ಲಿ ಪಾಲ್ಗೊಳ್ಳಲು ವೀರೇಂದ್ರ ಸಿಂಗ್ ಅವರಿಗೆ ಸರ್ಕಾರ ನಯಾಪೈಸೆ ಸಹಾಯ ಮಾಡಿರ್ಲಿಲ್ಲ. ತಮ್ಮದೇ ಸ್ವಂತ ಖರ್ಚಿನಲ್ಲಿ ಅವರು ತೆರಳಬೇಕಾಗಿ ಬಂದಿತ್ತು. 2008ರಲ್ಲೂ ಇದೇ ಸ್ಥಿತಿ. ಚಿನ್ನದ ಪದಕ ಗೆದ್ದು ಬಂದಿದ್ರೂ ಸರ್ಕಾರಕ್ಕೆ ಅವರ ಮೂಕ ವೇದನೆ ಅರ್ಥವಾಗಿರಲಿಲ್ಲ. ಕೊನೆಗೆ 2013ರಲ್ಲಿ ಕ್ರೀಡಾ ಪ್ರಾಧಿಕಾರಕ್ಕೆ ಅಲೆದು ಅಲೆದು ಸುಸ್ತಾದ ಮೇಲೆ ವೀರೇಂದ್ರ ಸಿಂಗ್ ಅವರಿಗೆ ನೆರವು ಸಿಕ್ಕಿದೆ.

ವಿಶೇಷ ವಿಭಾಗವಲ್ಲದೆ ಸಾಮಾನ್ಯ ಕುಸ್ತಿ ಪಟುಗಳೊಂದಿಗೆ ಸ್ಪರ್ಧಿಸುವ ಆಸೆ ಅವರಿಗಿದೆ. ಮೂಕ ಅಥ್ಲೀಟ್‍ಗಳು ಒಲಿಂಪಿಕ್ಸ್​​​ನಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. 2012ರ ಲಂಡನ್ ಗೇಮ್ಸ್​​ನಲ್ಲಿ ಅಮೆರಿಕದ ಮೂಕ ಕ್ರೀಡಾಪಟುಗಳು ಭಾಗಿಯಾಗಿದ್ರು. ಈ ಬಗ್ಗೆ ಭಾರತೀಯ ಕುಸ್ತಿ ಒಕ್ಕೂಟ ಗಮನಹರಿಸಬೇಕಿದೆ. ವೀರೇಂದ್ರ ಸಿಂಗ್ ಅವರ ಬಹುದಿನಗಳ ಕನಸನ್ನು ಸಾಕಾರಗೊಳಿಸಲು ಕುಸ್ತಿ ಒಕ್ಕೂಟದ ಗ್ರೀನ್ ಸಿಗ್ನಲ್ ಬೇಕಿದೆ. ಚಿತ್ರ ನಿರ್ಮಾಪಕರಾದ ಮಿತ್ ಜಾನಿ, ಪ್ರತೀಕ್ ಗುಪ್ತಾ ಹಾಗೂ ವಿವೇಕ್ ಚೌಧರಿ, ವೀರೇಂದ್ರ ಸಿಂಗ್ ಅವರ ಬದುಕಿನ ಕಥೆಯನ್ನು ಜನರಿಗೆ ಹೇಳಲು ಬಯಸಿದ್ರು. ಗೂಂಗಾ ಫೈಲ್ವಾನ್ ಎಂಬ ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ರು. 2016ರ ಒಲಿಂಪಿಕ್ಸ್​​​ನಲ್ಲಾದ್ರೂ ವೀರೇಂದ್ರ ಸಿಂಗ್ ಅವರ ಕನಸನ್ನು ನನಸಾಗಿಸುವ ಪುಟ್ಟ ಪ್ರಯತ್ನ ಅಂತಾರೆ ಈ ನಿರ್ಮಾಪಕರು.

ವಿಪರ್ಯಾಸ ಅಂದ್ರೆ ಇಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡ್ರೂ ವೀರೇಂದ್ರ ಸಿಂಗ್ ಅವರಿಗೆ ಒಂದೇ ಒಂದು ನಗದು ಬಹುಮಾನ ಕೊಟ್ಟು ಗೌರವಿಸಿಲ್ಲ. ಹಣಕ್ಕಾಗಿ ಅವರು ಪ್ರತಿ ವರ್ಷ 20-25 ಫೈಲ್ವಾನರ ಜೊತೆ ಕಾದಾಡುತ್ತಾರೆ. ಅದರಲ್ಲಿ ಒಮ್ಮೆ ರೆಫ್ರಿ ತಪ್ಪು ತೀರ್ಪಿನಿಂದ ವೀರೇಂದ್ರ ಸಿಂಗ್ ಸೋತಿದ್ದು ಬಿಟ್ರೆ, ಇನ್ಯಾವುದರಲ್ಲೂ ಪರಾಜಯಗೊಂಡಿಲ್ಲ. 74 ಕೆಜಿ ವಿಭಾಗದ ಕುಸ್ತಿಪಟುವಾಗಿದ್ರೂ ವೀರೇಂದ್ರ ಸಿಂಗ್ ನೂರು ಕೆಜಿಗೂ ಅಧಿಕ ವಿಭಾಗದವರೊಂದಿಗೆ ಹೋರಾಡಿ ಗೆಲ್ಲುತ್ತಾರೆ. ವೀರೇಂದ್ರ ಸಿಂಗ್ ಅವರ ಕುರಿತಾದ ಸಾಕ್ಷ್ಯಚಿತ್ರವನ್ನು ಭಾರತದ ವಿವಿಧ ನಗರಗಳಲ್ಲಿ ಪ್ರದರ್ಶಿಸಲಾಗ್ತಿದೆ. ಇದನ್ನು ಗಮನಿಸಿಯಾದ್ರೂ ಸಂಬಂಧಪಟ್ಟ ಇಲಾಖೆ ವೀರೇಂದ್ರ ಸಿಂಗ್ ಅವರಿಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕೊಡಲಿ ಅನ್ನೋದು ಇವರ ಆಶಯ. ಆದಷ್ಟು ಬೇಗ ಈ ಮೂಕ ಪೈಲ್ವಾನನ ಕೂಗು ಸರ್ಕಾರಕ್ಕೆ ಕೇಳಲಿ ಅನ್ನೋದು ನಮ್ಮ ಆಶಯವೂ ಹೌದು.

Related Stories

Stories by YourStory Kannada