ಕಣ್ಣಿಲ್ಲದಿದ್ದರೂ ಕಣ್ಣರಳಿಸಿ ನೋಡುವಂತಹ ಸಾಧನೆ ಮಾಡಿದ..!

ಕೃತಿಕಾ

0

ದೈಹಿಕ ನ್ಯೂನತೆಗಳು ಸಾಧಿಸುವ ಛಲವಿದ್ದವರಿಗೆ ಅಡ್ಡಿಯಾಗುವುದೇ ಇಲ್ಲ. ಎರಡೂ ಕಣ್ಣಿಲ್ಲದ ವ್ಯಕ್ತಿಯೊಬ್ಬ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿ ಸಾಧನೆಯ ಶಿಖರವೇರಿದ್ದಾನೆ. ಈತನ ಸಾಧನೆ ವಿಕಲಚೇತನರಿಗಷ್ಟೇ ಇಲ್ಲ ಎಲ್ಲರಿಗೂ ಸ್ಫೂರ್ತಿಯಾಗುವಂತದ್ದು.

ಬೀದರ್ ತಾಲ್ಲೂಕಿನ ಪುಟ್ಟ ಹಳ್ಳಿ ಕಾಡವಾದ. ನಾಗಪ್ಪ ಭೂಸಾ ದಂಪತಿಗೆ ಹುಟ್ಟಿದ ಮಗು ಬಹಳ ಲವಲವಿಕೆಯಿಂದ ಇತ್ತು. ತಮ್ಮ ಮಗುವಿಗೆ ದಿಲೀಪ ಅನ್ನೋ ಹೆಸರನ್ನಿಟ್ಟಿದ್ದರು. ಹುಟ್ಟಿದ ಎಷ್ಟು ದಿನ ಕಳೆದರೂ ಆ ಮಗುವಿನ ಕಣ್ಣಿನ ರೆಪ್ಪೆ ಬಿಚ್ಚಿಕೊಳ್ಳಲೇ ಇಲ್ಲ. ತಮ್ಮ ಮಗುವಿಗೆ ಕಣ್ಣು ಕಾಣಿಸುತ್ತಿಲ್ಲ ಅನ್ನೋ ವಿಷಯ ಖಚಿತವಾಗುತ್ತಿದ್ದಂತೆ ಆ ಕುಟುಂಬಕ್ಕೆ ನಿಂತ ನೆಲವೇ ಕುಸಿದುಬಿದ್ದಂತಾಗಿತ್ತು. ಮುದ್ದು ಮುದ್ದಾಗಿದ್ದ ಮಗುವಿಗೆ ಕಣ್ಣೇ ಕಾಣಿಸುತ್ತಿಲ್ಲ ಅಂದ್ರೆ ಯಾವ ತಂದೆ ತಾಯಿಯಾದರೂ ನೆಮ್ಮದಿಯಾಗಿರುತ್ತಾರೆ ಹೇಳಿ. ಆದ್ರೂ ಸತ್ಯವನ್ನು ಅರಗಿಸಿಕೊಳ್ಳಲೇಬೇಕಲ್ಲ. ಕಣ್ಣಿಲ್ಲದಿದ್ದರೂ ತಮ್ಮ ಮಗುವನ್ನು ಎಲ್ಲ ಮಕ್ಕಳಂತೆಯೇ ಸಾಕಬೇಕು ಅನ್ನೋಸು ನಾಗಪ್ಪ ಭೂಸ ದಂಪತಿಗಳ ಕನಸಾಗಿತ್ತು. ತಮ್ಮ ಮಗುವಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಅನ್ನೋ ಆಸೆಯಿಂದ ಬೀದರ್​ನ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ಸೇರಿಸಿದರು. 1996 ರಲ್ಲಿ ಹೈ ಸ್ಕೂಲ್ ಓದುತ್ತಿದ್ದಾಗ ಸಂಗೀತ ಶಿಕ್ಷಕರೊಬ್ಬರ ಮೂಲಕ ಸಂಗೀತದ ಗೀಳು ಹಚ್ಚಿಕೊಂಡರು ದಿಲೀಪ್. ರೇಡಿಯೊ ಹಾಗೂ ಟಿ.ವಿಗಳಲ್ಲಿ ಬರುವ ಸಂಗೀತ ಕಾರ್ಯಕ್ರಮಗಳನ್ನು ಆಸಕ್ತಿಯಿಂದ ಆಲಿಸತೊಡಗಿದರು. ಹಿಂದೂಸ್ತಾನಿ ರಾಗಗಳ ಅಧ್ಯಯನ ಮಾಡಿ ಹಾಡುವ ಅಭ್ಯಾಸ ರೂಡಿಸಿಕೊಂಡರು. ಗದಗಿನ ಪುಟ್ಟರಾಜ್ ಗವಾಯಿಗಳ ಬಳಿ ಸಂಗೀತ ಕಲಿಯುವ ಕನಸು ದಿಲೀಪ್ ಗಿತ್ತು. ಆದ್ರೆ ಆ ಕನಸು ಸಾಕಾರವಾಗಲೇ ಇಲ್ಲ. ಸಂಗೀತಾಭ್ಯಾಸದ ಜೊತೆಗೆ ಶಿಕ್ಷಣವೂ ಮುಂದುವರೆದಿತ್ತು. ಡಿಗ್ರಿ ಮೊದಲ ವರ್ಷ ಓದುತ್ತಿದ್ದ ದಿಲೀಪ್ ಅವರಿಗೆ ವೈಯಕ್ತಿಕ ಕಾರಣಗಳಿಂದಾಗಿ ಓದಿಗೆ ತಿಲಾಂಜಲಿಯಿಟ್ಟರು.

ಸಂಗೀತದ ಮೇಲೆ ಆಸಕ್ತಿ ಬೆಳೆಸಿಕೊಂಡ ದಿಲೀಪ್ ಏಕಲವ್ಯನಂತೆ ಸ್ವತಃ ವಿದ್ಯೆ ಕಲಿಯಲಾರಂಭಿದರು. ಒಂದಿಷ್ಟು ಹಣ ಕೂಡಿಟ್ಟು ಒಳ್ಳೆಯ ತಬಲಾ ಕೊಂಡುಕೊಂಡರು. ಹಾಗೇ ಕೀಬೋರ್ಡ್ ಕೂಡ ಖರೀದಿಸಿದರು. ನಂತರ ಗೆಳೆಯರನ್ನು ಕಟ್ಟಿಕೊಂಡು ನಗರದಲ್ಲಿ ಸಣ್ಣಪುಟ್ಟ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದರು. ಹೀಗೆ ಆರಂಭವಾದ ಸಂಗೀತದ ಪಯಣ ಇಂದು ದೊಡ್ಡ ಮಟ್ಟದಲ್ಲಿ ಮುಂದುವರೆದಿದೆ.

ಕಾಲೇಜು ಬಿಟ್ಟ ಮೇಲೆ ದಿಲೀಪ್ ಗೆ ಸಂಗೀತವೇ ಜೀವನವಾಯಿತು. ಸಂಗೀತ ಕಲಿಯುವ ಆಸಕ್ತಿಯಿದ್ದವರಿಗೆ ಬೀದರ್ ನಲ್ಲಿ ಸಂಗೀತದ ಪಾಠ ಹೇಳಿಕೊಡಿವವರಿರಲಿಲ್ಲ. ಇಂಗ್ಲಿಷ್ ಶಿಕ್ಷಕಿಯಾಗಿದ್ದ ಎಸ್ತೇರ್ ಅವರು ದಿಲೀಪ್ ಆಸಕ್ತಿ ಗುರುತಿಸಿ ಸಂಗೀತದ ಬಗೆಗಿನ ಪುಸ್ತಕಗಳನ್ನು ಶೋಧಿಸಿ ಕೆಲವು ವಿಷಯಗಳನ್ನು ದಿಲೀಪರಿಗೆ ಓದಿ ಹೇಳುತ್ತಿದ್ದರು. ಶಿಕ್ಷಕಿ ಎಸ್ತೇರ್ ಹಾಗೂ ದಿಲೀಪ್ ಅವರ ನಡುವೆ ಬಾಂಧವ್ಯ ದಿನದಿಂದ ದಿನಕ್ಕೆ ಹೆಚ್ಚಿತು. ಈ ಬಾಂಧವ್ಯಕ್ಕೆ ನಾಲ್ಕು ವರ್ಷಗಳ ಹಿಂದೆ ಮದುವೆ ಎಂಬ ಅಂಕಿತವೂ ಬಿತ್ತು. ಮದುವೆ ನಂತರ ಎಸ್ತೇರ್ ಅವರ ನೆರವು ದಿಲೀಪ್ ಅವರ ಸಂಗೀತ ಸಾಧನೆಗೆ ಇನ್ನಷ್ಟು ಸಹಕಾರಿಯಾಯಿತು. ಸಂಗೀತ ಪರೀಕ್ಷೆಯಲ್ಲಿ ಹಿರಿಯ ಶ್ರೇಣಿಯಲ್ಲಿ ಉತ್ತೀರ್ಣರಾದರು. ಪಾಶ್ಚಾತ್ಯ ಸಂಗೀತದಲ್ಲಿ 5ನೇ ಶ್ರೇಣಿ ಪಡೆದರು. ಸ್ವಯಂ ಅಭ್ಯಾಸ ಮಾಡುತ್ತಿದ್ದ ದಿಲೀಪ್ ಗೆ ಪತ್ನಿಯ ಸಹಕಾರದಿಂದ ಸಂಗೀತವನ್ನು ಶಾಸ್ರೋಕ್ತವಾಗಿ ಕಲಿಯುವ ಅವಕಾಶ ಸಿಕ್ಕಿತು. ತಬಲಾ, ಡೋಲಕ್, ರಿದಮ್ ಪ್ಯಾಡ್, ಕೀಬೋರ್ಡ್ ಹಾಗೂ ಕೊಳಲನ್ನು ಸಲೀಸಾಗಿ ನುಡಿಸುತ್ತಾರೆ. ಮಂತ್ರಮುಗ್ಧಗೊಳಿಸುವಂಥ ಕಂಠ ಹೊಂದಿರುವ ದಿಲೀಪ್ ಗಾಯನದಲ್ಲಿಯೂ ಮುಂಚೂಣಿಯಲ್ಲಿದ್ದಾರೆ.

ನನಗೆ ಚಿಕ್ಕಂದಿನಿಂದಲೂ ಸಂಗೀತ ಅಂದರೆ ಅದೇನೋ ಸೆಳೆತ. ಬಹುಶಃ ಕಣ್ಣಿಲ್ಲ ಅನ್ನೋ ಕಾರಣಕ್ಕೆ ಸಂಗೀತ ನನಗೆ ಇಷ್ಟವಾಗಿರಬಹುದು. ಸಂಗೀತವನ್ನೇ ವೃತ್ತಿಯನ್ನಾಗಿ ಪರಿಗಣಿಸಬೇಕು ಅನ್ನಿಸೋಕೆ ಆರಂಭವಾಯಿತು. ಕಣ್ಣಿಲ್ಲದಿದ್ದರೂ ಸಾಧಿಸಬಹುದು ಅನ್ನಿಸಿತು. ಅಂದಿನಿಂದ ಕಷ್ಟಪಟ್ಟು ಸಂಗೀತಾಭ್ಯಾಸ ನಡೆಸಿದೆ. ನನ್ನ ಹೆಂಡತಿ ನನ್ನ ಪಾಲಿಗೆ ಕಣ್ಣು ಅಂತಾರೆ ದಿಲೀಪ್.

600 ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ಅನೇಕ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಬೀದರ ಜಿಲ್ಲೆಯಲ್ಲಿ ನಡೆದ 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೀಬೋರ್ಡ್ ನುಡಿಸುವ ಮೂಲಕ ಗುರುತಿಸಿಕೊಂಡರು. ಬೀದರ್ ಉತ್ಸವದಲ್ಲಿ ಕೀಬೋರ್ಡ್ ನುಡಿಸಿ ಜನರ ಮನಸ್ಸನ್ನು ರಂಜಿಸಿದರು. ಹಂಪಿ ಉತ್ಸವದಲ್ಲಿಯೂ ಪಾಲ್ಗೊಂಡ ಹಿರಿಮೆ ಇವರದು. ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾವಗೀತೆ, ಜಾನಪದ ಗೀತೆ ಹಾಡಿ ಶ್ರೋತೃಗಳ ಮನ ತಣಿಸಿದ್ದಾರೆ. ಕೇಂದ್ರ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗದ ವತಿಯಿಂದ ನೂರಾರು ಕಾರ್ಯಕ್ರಮ ನೀಡಿದ್ದಾರೆ. ಕಣ್ಣಿಲ್ಲದಿದ್ದರೂ ದಿಲೀಪ್ ಸವೆಸಿದ ಬದುಕಿನ ಹಾದಿಯನ್ನು ನೋಡಿದರೆ ಎಂಥವರಿಗೂ ಮಾದರಿಯಾಗುತ್ತಾರೆ.

ಬೀದರ್ ನಲ್ಲಿ ತಮ್ಮದೇ ಆದ ಸಂಗೀತದ ಸ್ಟುಡಿಯೋ ಹೊಂದಿರುವ ದಿಲೀಪ್ ಗೆ ಅಂದರಿಗಾಗಿಯೇ ಒಂದು ಸಂಗೀತ ಶಾಲೆ ಆರಂಭಿಸುವ ಕನಸಿದೆ. 2004 ರಲ್ಲಿ ಶಾಲೆ ಆರಂಭಿಸಿ ಅಂದ ಮಕ್ಕಳಿಗೆ ಸಂಗೀತದ ಪಾಠ ಕಲಿಸಿಕೊಡಲು ಪ್ರಯತ್ನಿಸಿದರಾದರೂ ಹಣವಿಲ್ಲದೇ ನಡೆಸಲು ಸಾಧ್ಯವಾಗದೇ ಕೈ ಚೆಲ್ಲಿದರು. ಆದ್ರೆ ಆ ಕನಸು ಮಾತ್ರ ಇನ್ನೂ ಹಸಿಯಾಗಿಯೇ ಇದೆ. ತಾನು ಪಟ್ಟ ಕಷ್ಟ ತನ್ನಂತೆಯೇ ಕಣ್ಣಿಲ್ಲದವರು ಪಡಬಾರದು ಅನ್ನೋ ಆಸೆ ದಿಲೀಪ್ ರದ್ದು. ಸಂಗೀತದ ಶಾಲೆ ಆರಂಭಿಸುವ ಕನಸು ನನಸಾಗಲಿ. ಸಂಗೀತದ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಏರಿ ಮತ್ತಷ್ಟು ಜನಕ್ಕೆ ಸ್ಪೂರ್ತಿಯಾಗಲಿ ಅನ್ನೋದು ನಮ್ಮ ಹಾರೈಕೆ.