ಪೊಲೀಸ್ ಅಧಿಕಾರಿಗೆ ಫ್ಯಾನ್ ಫಾಲೋವರ್ಸ್ ಇದ್ದಾರೆ..!

ಟೀಮ್​ ವೈ.ಎಸ್​.ಕನ್ನಡ

ಪೊಲೀಸ್ ಅಧಿಕಾರಿಗೆ ಫ್ಯಾನ್ ಫಾಲೋವರ್ಸ್ ಇದ್ದಾರೆ..!

Wednesday March 16, 2016,

3 min Read

ರಾಜಕಾರಣಿಗಳು, ಸಿನಿತಾರೆಯರು, ನೆಚ್ಚಿನ ಕ್ರಿಕೆಟಿಗರು ಜನತೆಯ ಸ್ಟಾರ್ ಐಕಾನ್ ಆಗೋದು ಸರ್ವೇ ಸಾಮಾನ್ಯ. ಆದ್ರೆ ಒಬ್ಬ ಜಿಲ್ಲಾ ಪೊಲೀಸ್ ಅಧೀಕ್ಷರೊಬ್ಬರಿಗೆ ಒಂದಿಡೀ ಜಿಲ್ಲೆಯ ಜನ ಅಭಿಮಾನಿಗಳಾಗ್ತಾರೆ ಅನ್ನೋದು ನಿಜಕ್ಕೂ ವಿಶೇಷ ಹಾಗೂ ವಿಶಿಷ್ಟ. ಈ ಅಧಿಕಾರಿಗೆ ಸೋಶಿಯಲ್ ಮೀಡಿಯಾ ಫೇಸ್​​ಬುಕ್​ನಲ್ಲಿ ಪ್ರತ್ಯೇಕ ಪೇಜ್ ತೆರೆಯಲಾಗಿದೆ. ಅಷ್ಟ ಮಠಗಳ ನಾಡು ಉಡುಪಿಯಲ್ಲಿ ಇವರು ಕಾರ್ಯನಿರ್ವಹಿಸುತ್ತಿದ್ದಾಗ ಇವರ ಕಚೇರಿ ಯಾವಾಗಲೂ ಗಿಜಿಗುಡುತ್ತಿತ್ತು. ಒಬ್ಬ ಪೊಲೀಸ್ ಮೇಲಾಧಿಕಾರಿ ಅಂದಾಗ ಸಹಜವಾಗಿ ಜನರಲ್ಲಿ ಒಂದು ಮಟ್ಟಿನ ಭೀತಿಯಿರುತ್ತದೆ. ಆದರೆ ಈ ಅಧಿಕಾರಿಯ ಬಗ್ಗೆ ಭಯದ ಜಾಗದಲ್ಲಿ ಕೇವಲ ಗೌರವ ಹಾಗೂ ಅಭಿಮಾನಗಳಿದ್ದವು. ಇವರು ಯಾವುದಾದರೂ ಶಾಪಿಂಗ್ ಮಾಲ್ ಅಥವಾ ಸಾರ್ವಜನಿಕ ಸ್ಥಳಗಳಿಗೆ ತೆರಳಿದರೆ ಮುಗಿಬೀಳ್ತಿದ್ದ ಜನತೆ ಜೊತೆಯಲ್ಲಿ ನಿಂತು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೆ ಅವರ ಜನ್ಮದಿನದಂದು ಸಾವಿರಾರು ಶುಭಾಶಯದ ಕರೆಗಳನ್ನು ಅವರು ಸ್ವೀಕರಿಸಿದ್ದರಂತೆ. ಒಬ್ಬ ಪೊಲೀಸ್ ಅಧಿಕಾರಿಯ ಬಗ್ಗೆ ಈ ಪ್ರಮಾಣದ ಆರಾಧನೆ ಸಾಧ್ಯವೆ ಅನ್ನುವ ಪ್ರಶ್ನೆ ಯಾರಿಗಾದರೂ ಮೂಡಿದರೇ ಅದಕ್ಕೆ ಉತ್ತರವಾಗಿ ನಿಲ್ತಾರೆ ಕರ್ನಾಟಕದ ದಕ್ಷ ಅಧಿಕಾರಿಗಳ ಪಟ್ಟಿಯಲ್ಲಿ ಪ್ರಥಮ ಸಾಲಿನಲ್ಲಿ ಗುರುತಿಸಿಕೊಳ್ಳುವ ಖಡಕ್ ಅಧಿಕಾರಿ ಕೆ. ಅಣ್ಣಾಮಲೈ.

image


ಮೂಲತಃ ತಮಿಳುನಾಡಿನ ಕೊಯಮತ್ತೂರಿನವರಾದ ಅಣ್ಣಾಮಲೈಯವರ ತಂದೆ ಜೆ.ಆರ್ ಕುಪ್ಪಸ್ವಾಮಿ ಹಾಗೂ ತಾಯಿ ಕೆ.ಪರಮೇಶ್ವರಿ. ಅಣ್ಣಾಮಲೈ ತಮ್ಮ ಉನ್ನತ ವ್ಯಾಸಂಗದ ವರೆಗಿನ ಕಲಿಕೆ ಮುಗಿಸಿದ್ದು ಕೊಯಮತ್ತೂರಿನಲ್ಲಿಯೇ. ಅವರ ಜೀವನ ಸಾಧನೆಯ ವಿಶೇಷತೆ ಇರುವುದೇ ಇಲ್ಲ. ತಿಂಗಳಾಂತ್ಯದಲ್ಲಿ ಲಕ್ಷಗಳವರೆಗೆ ಸಂಬಳ ಪಡೆಯುವ ಅರ್ಹತೆ ಅವರಿಗಿತ್ತು. 2007ರ ಬ್ಯಾಚ್​ನಲ್ಲಿ ಕೊಯಮತ್ತೂರಿನ ಪಿಎಸ್​ಜಿ ತಾಂತ್ರಿಕ ಕಾಲೇಜ್​ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ್ದ ಅವರು ಬಳಿಕ 2010ರಲ್ಲಿ ಲಕ್ನೋದ ಪ್ರತಿಷ್ಠಿತ ಐಐಎಂ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಮತ್ತು ಸ್ಟ್ರಾಟೆಜಿ ವಿಷಯದಲ್ಲಿ ಎಂಬಿಎ ಮುಗಿಸಿದ್ದರು. ಬೇರೆ ಯಾರಾದರೂ ಆಗಿದ್ದರೆ ವಿದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕೆಲಸ ಅರಸುತ್ತಿದ್ದರು ಇಲ್ಲವೇ ತಾವೇ ಸ್ವಂತದ್ದೊಂದು ಸಂಸ್ಥೆಯನ್ನು ಆರಂಭಿಸುತ್ತಿದ್ದರು. ಆದರೆ ಅಣ್ಣಾಮಲೈ ಅನ್ನೋ ವ್ಯಕ್ತಿಯ ಹಂಬಲಗಳೇ ಡಿಫರೆಂಟ್. 2011ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು ಇಂಡಿಯನ್ ಪೊಲೀಸ್ ಫೋರ್ಸ್ ಸೇರುವ ನಿರ್ಧಾರಮಾಡಿದ್ದರು. 2013ರ ಸೆಪ್ಟೆಂಬರ್​ನಲ್ಲಿ ಕಾರ್ಕಳದಲ್ಲಿ ಅಸಿಸ್ಟೆಂಟ್ ಸೂಪರಿಟೆಂಡಂಟ್ (ಎಎಸ್ಪಿ)ಯಾಗಿ ಮೊದಲ ಪೋಸ್ಟಿಂಗ್ ನಿರ್ವಹಿಸಿದರು. ಮೊದಲ ಬಾರಿಗೆ ಅಣ್ಣಾಮಲೈ ಅನ್ನುವ ಪೊಲೀಸ್ ಅಧಿಕಾರಿಯ ಕರ್ತವ್ಯಪ್ರಜ್ಞೆ ಹಾಗೂ ಪ್ರಾಮಾಣಿಕ ಸೇವೆ ಜಗತ್ತಿನೆದರು ಅನಾವರಣವಾಗಿದ್ದೇ ಆಗ. ಕಾರ್ಕಳದಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾಗ, ಕಾರ್ಕಳವನ್ನು ಮಾದರಿ ಪೊಲೀಸ್ ಠಾಣೆಯನ್ನಾಗಿಸಿದ್ದರು. ಅವರ ಕೆಲಸಕ್ಕೆ ಉತ್ತೇಜನ ನೀಡುವ ಸಲುವಾಗಿ ನವೆಂಬರ್ 2014ರಲ್ಲಿ ಅವರಿಗೆ ಕುಂದಾಪುರ ಠಾಣೆಯ ಅಧಿಕೃತ ಹೆಚ್ಚುವರಿ ಜವಬ್ದಾರಿ ಸಹ ನೀಡಲಾಯಿತು. ಅಲ್ಲಿಯೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಅಣ್ಣಾಮಲೈ, ಕುಂದಾಪುರದಲ್ಲಿಯೂ ರೌಡಿಗಳ ಹುಟ್ಟಡಗಿಸಿ, ಜನತೆ ಸ್ನೇಹಿ ವಾತಾವರಣ ಮೂಡಿಸಿದರು.

image


ಅಲ್ಲಿಂದ ಬಳಿಕ ಆರೇ ತಿಂಗಳಿನಲ್ಲಿ ಅಣ್ಣಾಮಲೈಯವರಿಗೆ ಉಡುಪಿ ಜಿಲ್ಲೆಯ ಎಸ್ಪಿ ಹುದ್ದೆಗೆ ಭಡ್ತಿ ನೀಡಲಾಯಿತು. ಆನಂತರ ಉಡುಪಿಯಲ್ಲಿರುವಷ್ಟೂ ದಿನವೂ ಅವರು ಅದೆಷ್ಟು ದಕ್ಷತೆಯಿಂದ ಕೆಲಸ ಮಾಡಿದರೆಂದರೇ, ಅವರನ್ನು ಉಡುಪಿಯಿಂದ ವರ್ಗಾವಣೆ ಮಾಡಿದ್ದಾಗ ಜನ ಅಕ್ಷರಶಃ ರೊಚ್ಚಿಗೆದ್ದಿದ್ದರು. ಅಣ್ಣಾಮಲೈ ಕೇವಲ ಜನರ ನಂಬಿಕೆ ಮತ್ತು ಅಭಿಮಾನವನ್ನು ಮಾತ್ರ ಗಳಿಸಿಕೊಂಡಿರಲಿಲ್ಲ, ಜೊತೆಗೆ ಉಡುಪಿಯ ನಾಗರೀಕರು ಕಂಡು ಕೇಳರಿಯದಷ್ಟು ಅನನ್ಯ ಪ್ರೀತಿಯನ್ನು ಅಣ್ಣಾಮಲೈರವರಿಗೆ ಕೊಟ್ಟಿದ್ದರು. ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಉಡುಪಿಯ ಸಿಂಗಂ, ಅಣ್ಣ ಅನ್ನುವ ಪೇಜ್​ಗಳೇ ಅವರ ಮೇಲೆ ಜನತೆ ಇಟ್ಟಿರುವ ಆರಾಧನೆಗೆ ಸಾಕ್ಷಿ. ಬೆಂಗಳೂರಿನ ಪಶ್ಚಿಮ ವಲಯದ ಡಿಸಿಪಿಯಾಗಿ ಅವರನ್ನು ಭಡ್ತಿ ನೀಡಿ ವರ್ಗ ಮಾಡಿದರೂ ಉಡುಪಿಯ ಮಂದಿ ಮಾತ್ರ ಅವರನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ.

ಬೈಂದೂರಿನ ಕಾಲೇಜು ವಿದ್ಯಾರ್ಥಿನಿಯ ಹತ್ಯೆಗೆ ಸಂಬಂಧಿಸಿದಂತೆ ಉಂಟಾದ ಗಲಭೆಯನ್ನು ಅಣ್ಣಾಮಲೈ ಸಮರ್ಪಕವಾಗಿ ಹತ್ತಿಕ್ಕಿದ್ದು ಅವರ ಕಾರ್ಯಕ್ಷಮತೆ ಹಾಗೂ ಚಾಣಾಕ್ಷತೆಗೆ ಸೂಕ್ತ ನಿದರ್ಶನ. ಎಸ್ಪಿ ಸೀಟ್​ನಲ್ಲಿ ಅಣ್ಣಾಮಲೈ ಕುಳಿತಿದ್ದಷ್ಟೂ ದಿನ ಉಡುಪಿ ಪ್ರಶಾಂತವಾಗಿತ್ತು. ಅಬ್ಬರಿಸುತ್ತಿದ್ದ ಎಲ್ಲಾ ರೌಡಿಗಳು ಗುಹೆ ಸೇರಿಕೊಂಡು ತಣ್ಣಗೆ ಕುಳಿತುಬಿಟ್ಟಿದ್ದರು. ಉಡುಪಿಯ ಮಾಮೂಲಿ ಸಮಸ್ಯೆಗಳಾಗಿದ್ದ ಕೊಲೆಗಳು, ಮಟಕಾ ದಂಧೆ, ಕಳ್ಳತನದಂತಹ ಪ್ರಕರಣಗಳೂ ಸಹ ಆಲ್ಮೋಸ್ಟ್ ನಿಂತೇ ಹೋಗಿದ್ದವು. ಅಣ್ಣಾಮಲೈ ತಮ್ಮ ಕೆಳಗಿನ ಅಧಿಕಾರಿಗಳನ್ನು ಎಂದೂ ನಿಕೃಷ್ಟವಾಗಿ ಕಂಡವರಲ್ಲ ಹಾಗೂ ಸಾರ್ವಜನಿಕರಿಗೆ ಪೊಲೀಸ್ ರಕ್ಷಕ ಮಾತ್ರವಲ್ಲ ಸದಾ ಸ್ನೇಹಿತನಾಗಿರಬೇಕು ಅನ್ನುವ ಧ್ಯೇಯವನ್ನು ನಂಬಿದವರಾಗಿದ್ದರು. ಅಣ್ಣಾಮಲೈನಂತಹ ಅಧಿಕಾರಿಗಳು ಸಾವಿರ ಸಾವಿರಗಳಲ್ಲಿ ಒಬ್ಬರು ಮಾತ್ರವೇ ಆಗಿರುತ್ತಾರೆ ಅನ್ನುವುದು ಉಡುಪಿಯ ಪ್ರಜ್ಞ ನಾಗರಿಕರ ಅಭಿಮತ. ತಮ್ಮ ಸರಳ, ನಿಸ್ಪೃಹ, ಪ್ರಾಮಾಣಿಕ ಹಾಗೂ ನೇರ ನಡವಳಿಕೆಯಿಂದ ಇಂತಹ ಅಧಿಕಾರಿಗಳು ಯಾವ ತಾರೆಗಳಿಗೂ ಕಡಿಮೆ ಇಲ್ಲದಂತೆ ಫ್ಯಾನ್ ಫಾಲೋವರ್ಸ್​ಗಳನ್ನು ಗಿಟ್ಟಿಸಿಕೊಳ್ತಾರೆ ಅನ್ನೋದು ಸತ್ಯ.