ಬೆಂಗಳೂರಿನಲ್ಲಿ ಉದ್ಯಮದ ಆರಂಭ ಹೇಗೆ ವಿಭಿನ್ನ..?

ಟೀಮ್​​ ವೈ.ಎಸ್​​.

0

ಭಾರತದ ಮಧ್ಯಮ ವರ್ಗದ ಜನತೆ ಹಾಗೂ ಉದ್ಯೋಗಿಗಳು ಟೈರ್ 2 ಹಾಗೂ ಟೈರ್ 3 ನಗರದಿಂದ ಕೆಲಸ ಅರಸಿ ಟೈರ್ 1 ಸಿಟಿಗಳಾದ ಬೆಂಗಳೂರು ಹಾಗೂ ದೆಹಲಿಗೆ ವಲಸೆ ಬರುತ್ತಾರೆ. ಅದೇ ರೀತಿ ಉದ್ಯಮಿಗಳು ಕೂಡ ಯಶಸ್ಸಿಗಾಗಿ ಇನ್ನಿಲ್ಲದ ಕಸರತ್ತು ನಡೆಸುವುದು ಸಾಮಾನ್ಯ. ಟೈರ್ 2 ಸಿಟಿಗಳಲ್ಲಿ ಕೆಲಸ ಮಾಡುವುದರಲ್ಲಿರೋ ಒಳ್ಳೆಯ ವಿಚಾರ ಅಂದ್ರೆ ಇಲ್ಲಿ ಪ್ರತಿನಿತ್ಯ ಪೀಕ್ ಅವರ್‍ಗಳಲ್ಲಿ ಟ್ರಾಫಿಕ್ ಜಂಜಾಟವಿರುವುದಿಲ್ಲ. ಒಂದೂವರೆ ಗಂಟೆಗಳಲ್ಲಿ ನಗರದ ಒಂದು ಮೂಲೆಯಿಂದ ಇನ್ನೊಂದು ಮೂಲೆ ತಲುಪಬಹುದು. ಶಾಂತ ಮನಸ್ಸಿನ ಪ್ರಶಾಂತ ಬದುಕು ನಿಮ್ಮದಾಗುತ್ತದೆ.

ಬೆಂಗಳೂರಿನಂತಹ ನಗರಗಳಲ್ಲಿ ಜನಸಂದಣಿ ಹೆಚ್ಚು, ಜೀವನ ನಿರ್ವಹಣಾ ವೆಚ್ಚವೂ ಅಧಿಕ. ಜೈಪುರದಂಥ ನಗರಗಳಲ್ಲಿ ಜೀವನಮಟ್ಟವೂ ಉತ್ತಮವಾಗಿರುತ್ತೆ, ನಿರ್ವಹಣಾ ವೆಚ್ಚ ಕೂಡ ಕಡಿಮೆ. ಕೈಗೆಟುಕುವ ದರದಲ್ಲಿ ಇಂಟರ್ನೆಟ್ ಸಂಪರ್ಕ ಕೂಡ ಸಿಗುತ್ತೆ. ಇನ್ನು ಉದ್ಯಮ ಆರಂಭಿಸಲು ಬಯಸುವವರಿಗೆ ಟೈರ್ 2 ಸಿಟಿಗಳಲ್ಲಿ ಕಡಿಮೆ ಬಾಡಿಗೆಗೆ ಕಚೇರಿ ಕೂಡ ದೊರೆಯುತ್ತೆ. ಈ ಮೆಟ್ರೋ ರಹಿತ ಸಿಟಿಗಳು ವಿಸ್ತಾರದಲ್ಲಿ ಚಿಕ್ಕದಾಗಿರಬಹುದು. ಆದ್ರೆ ಉದ್ಯಮಿಗಳ ಗುರಿ ಹಾಗೂ ಕನಸು ಚಿಕ್ಕದೇನಲ್ಲ. ಭಾರತದ ಟೈರ್2 ಮತ್ತು ಟೈರ್ 3 ನಗರಗಳಿಂದಲೇ ಕಾರ್ಯನಿರ್ವಹಿಸುವ ಅದೆಷ್ಟೋ ಯಶಸ್ವಿ ಉದ್ಯಮಗಳಿವೆ. ಬೆಂಗಳೂರು ಸಾಫ್ಟ್​​ವೇರ್ ತವರು, ಉದ್ಯಮಗಳ ಕೇಂದ್ರಬಿಂದು. ತಂತ್ರಜ್ಞಾನ ಉದ್ಯಮವನ್ನು ಆರಂಭಿಸಲು ಬೆಂಗಳೂರು ಹೇಳಿ ಮಾಡಿಸಿದಂಥ ತಾಣ. ಈ ಬಗ್ಗೆ ಟೈರ್2 ನಗರಗಳಲ್ಲಿ ಉದ್ಯಮ ಸ್ಥಾಪಿಸಿದವರು ಏನ್ಹೇಳ್ತಾರೆ ನೋಡೋಣ.

ಉದ್ಯಮ ವೆಚ್ಚ ಅಧಿಕವಾಗಬಹುದು...

ಜೈಪುರದಲ್ಲಿ ಫುಡ್ ಡೆಲಿವರಿ ಸೇವೆ ಕೊಡ್ತಾ ಇರೋ `ಫ್ರೀಡೆಲ್' ಕಂಪನಿಯ ಸಂಸ್ಥಾಪಕ ಅಖಿಲ್ ಅವರ ಪ್ರಕಾರ, ಜೈಪುರದ ಬದಲು ಬೆಂಗಳೂರಲ್ಲಿ ಉದ್ಯಮ ಆರಂಭಿಸಿದ್ರೆ ಐದು ಪಟ್ಟು ಹೆಚ್ಚು ಹಣ ಹೂಡಿಕೆ ಮಾಡಬೇಕಾಗುತ್ತೆ. ನೇಮಕಾತಿ ಹಾಗೂ ಕಚೇರಿಗೆ ಹೆಚ್ಚು ವೆಚ್ಚವಾಗುತ್ತೆ. ಜೈಪುರದಲ್ಲಿ ಫ್ರೀಡೆಲ್ ಒಂದೇ ಕಚೇರಿ ಮೂಲಕ ದಿನಕ್ಕೆ 250 ಆರ್ಡರ್ ಪೂರ್ಣಗೊಳಿಸ್ತಿದೆ. ಆದ್ರೆ ಮೆಟ್ರೋ ಸಿಟಿಗಳಲ್ಲಿ ವಹಿವಾಟು ಆರಂಭಿಸುವುದು ಸುಲಭದ ಮಾತಲ್ಲ.

ಜೈಪುರದಲ್ಲಿದ್ದಾರೆ ಉದ್ದೇಶಿತ ಗ್ರಾಹಕರು...

`ಡಿಸೈನ್‍ಘರ್ ಡಾಟ್ ಕಾಮ್'ನ ಸಹ ಸಂಸ್ಥಾಪಕ ಕಪಿಲ್ ಮೆಂಘ್ರಾನಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. `ಡಿಸೈನ್‍ಘರ್ ಡಾಟ್ ಕಾಮ್' ಗೃಹಾಲಂಕಾರ ವಸ್ತುಗಳ ಆನ್‍ಲೈನ್ ಮಳಿಗೆ. ಸ್ವಂತ ಮನೆ ಕಟ್ಟುವ ಕನಸನ್ನು ಸಾಕಾರಗೊಳಿಸಲು ಹರಸಾಹಸಪಡುತ್ತಿರುವ ಮಧ್ಯಮ ವರ್ಗದ ಜನರೇ ಇವರ ಟಾರ್ಗೆಟ್. ಜೈಪುರದಲ್ಲಿ ಜನರ ಸ್ವಂತ ಮನೆಗೆ ಪ್ರಾಮುಖ್ಯತೆ ಕೊಟ್ರೆ, ಬೆಂಗಳೂರಲ್ಲಿ ಹೆಚ್ಚಾಗಿ ಎಲ್ಲರೂ ಬಾಡಿಗೆ ಫ್ಲ್ಯಾಟ್‍ಗಳಲ್ಲೇ ನೆಲೆಸ್ತಾರೆ. ಮನೆ ಕಟ್ಟಲು ಬೇಕಾದ ಕಚ್ಚಾ ವಸ್ತುಗಳಿಗಾಗ್ಲಿ, ಗೃಹಾಲಂಕಾರಿ ವಸ್ತುಗಳಿಗಾಗ್ಲಿ ಹೆಚ್ಚು ಬೇಡಿಕೆ ಇರೋದಿಲ್ಲ. ಹೂಡಿಕೆದಾರರಿಗೆ ಬೆಂಗಳೂರು ಪ್ರಶಸ್ಥ ಸ್ಥಳ. ಬೆಂಗಳೂರಿನಂಥ ನಗರಗಳಲ್ಲಿ ಬಂಡವಾಳ ಹೂಡುವವರಿಗೆ ಕೊರತೆಯಿಲ್ಲ. ಆದ್ರೆ ಜೈಪುರದಂಥ ನಗರಗಳಲ್ಲಿ ಹೂಡಿಕೆ ಮಾಡುವ ಮುನ್ನ ಹತ್ತು ಬಾರಿ ಯೋಚಿಸುವವರೇ ಹೆಚ್ಚು. ತಂಡ ಕಟ್ಟುವುದು ಕೂಡ ಬಹುದೊಡ್ಡ ಸವಾಲು. ನುರಿತ ಉದ್ಯೋಗಿಗಳು ಈಗಾಗ್ಲೇ ಹೆಸರು ಮಾಡಿರುವ ಕಂಪನಿ ಸೇರಲು ಬಯಸೋದು ಸಹಜ. ಜೈಪುರದಂಥ ನಗರಗಳಲ್ಲಿ ಸುದೀರ್ಘ ಸೇವೆಗೆ ಅವಕಾಶವಿದೆ. ಕಲಿಕೆಗೂ ಇದು ಹೇಳಿ ಮಾಡಿಸಿದಂಥ ಜಾಗ ಅನ್ನೋದನ್ನು ಅರ್ಥ ಮಾಡಿಕೊಳ್ಳುವವರೇ ಕಡಿಮೆ ಎನ್ನುತ್ತಾರೆ ಅಖಿಲ್.

ಉತ್ತಮ ತಂತ್ರಜ್ಞಾನ ಪ್ರತಿಭೆಗೆ ತ್ವರಿತ ಪ್ರವೇಶ...

ದೆಹಲಿ ಮತ್ತು ಜೈಪುರದ ಮಧ್ಯೆ ಕ್ಯಾಬ್ ಸೇವೆ ನೀಡ್ತಾ ಇರೋ `ಹಿಪ್ಪೋಕ್ಯಾಬ್ಸ್'ನ ಸಹ ಮಾಲೀಕ ಸಾಗರ್ ಅಗರ್ವಾಲ್ ಕೂಡ ತಮ್ಮದೇ ಅಭಿಪ್ರಾಯಗಳನ್ನು ಮುಂದಿಟ್ಟಿದ್ದಾರೆ. ಕೆಲ ತಿಂಗಳುಗಳ ಹಿಂದಷ್ಟೇ ಆರಂಭವಾಗಿರುವ ಹಿಪ್ಪೋಕ್ಯಾಬ್ಸ್ ಈ ಮಾರ್ಗದಲ್ಲಿ ಪ್ರಯಾಣಿಕರ ಫೇವರಿಟ್. ಬೆಂಗಳೂರಿನಲ್ಲಿ ಹಿಪ್ಪೋಕ್ಯಾಬ್ಸ್ ಆರಂಭಿಸಲು ಹೊರಟಿದ್ರೆ ಇದುವರೆಗೂ ಹೂಡಿಕೆದಾರರ ಹುಡುಕಾಟದಲ್ಲಿ ಇರಬೇಕಾಗಿತ್ತು ಎನ್ನುತ್ತಾರೆ ಸಾಗರ್.

ಶಿಕ್ಷಣದ ಬಗ್ಗೆ ಮಾಹಿತಿಯುಳ್ಳ ವೆಬ್ ಪೋರ್ಟಲ್ `ಗುರುಪ್‍ಡೇಟ್ ಡಾಟ್ ಕಾಮ್'ನ ಸಂಸ್ಥಾಪಕ ರಿಶು ಮಲ್ಹೋತ್ರಾ ಅವರ ಪ್ರಕಾರ ಜೈಪುರದಲ್ಲಿ ನುರಿತ ತಂತ್ರಜ್ಞರನ್ನು ಹುಡುಕುವುದೇ ಸವಾಲಾಗಿತ್ತು. ಒಳ್ಳೆಯ ವೆಬ್ ಡೆವಲಪರ್ ಹುಡುಕಾಟದಲ್ಲಿ ರಿಶು ಬಹಳ ಸಮಯ ಕಳೆದಿದ್ರು. ಆದ್ರೆ ಬೆಂಗಳೂರಿನಲ್ಲಾಗಿದ್ರೆ ಅಷ್ಟು ಸಮಯ ಉಳಿಯುತ್ತಿತ್ತು ಎನ್ನುತ್ತಾರೆ ರಿಶು. ಆದ್ರೆ ಜೀವನ ವೆಚ್ಚ ಮಾತ್ರ ಜೈಪುರಕ್ಕಿಂತ ದುಪ್ಪಟ್ಟಾಗಿರುತ್ತಿತ್ತು ಅನ್ನೋದು ಅವರ ಅಭಿಪ್ರಾಯ.

ಆ್ಯಪ್ ಬಳಕೆಗೆ ಹೆಚ್ಚಿನ ಅವಕಾಶ...

ಅರ್ಬನ್‍ಧೋಬಿ ಸಂಸ್ಥಾಪಕ ಸತ್ಯಂ ಅವರ ಪ್ರಕಾರ ಬೆಂಗಳೂರಲ್ಲಿ ಜೈಪುರಕ್ಕಿಂತ ಹೆಚ್ಚು ಗ್ರಾಹಕರನ್ನು ಸಂಪಾದಿಸಬಹುದು. ಯಾಕಂದ್ರೆ ಬೆಂಗಳೂರಿನಂಥ ನಗರಗಳಲ್ಲಿ ಮೊಬೈಲ್ ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚು. ಆ್ಯಪ್ ಆಧಾರಿತ ಸೇವೆ ಜೈಪುರಕ್ಕಿಂತ ಬೆಂಗಳೂರಲ್ಲೇ ಹೆಚ್ಚು ವರ್ಕೌಟ್ ಆಗುತ್ತೆ ಅನ್ನೋದು ಅವರ ಅಭಿಮತ.

ತೀರ್ಮಾನ

ಉದ್ಯಮವನ್ನು ಎಲ್ಲೇ ಆರಂಭಿಸಿದ್ರೂ ಜೊತೆಯಾಗಿ ಒಂದು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ನಿಮ್ಮ ಐಡಿಯಾ ಕಾರ್ಯರೂಪಕ್ಕೆ ಬರೋದ್ರಲ್ಲಿ ಅನುಮಾನವಿಲ್ಲ. ಅದೇ ನಿಮ್ಮ ಉದ್ಯಮದ ಭವಿಷ್ಯ ನಿರ್ಧರಿಸುತ್ತೆ. ಈಗ ಇಡೀ ಜಗತ್ತು ಇಂಟರ್ನೆಟ್ ಮಯವಾಗಿರೋದ್ರಿಂದ ಸ್ಥಳ, ಮಹತ್ವದ ಪಾತ್ರ ವಹಿಸುವುದಿಲ್ಲ. ಬೆಂಗಳೂರು ಭಾರತದ ಔದ್ಯಮಿಕ ತಾಣ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಉದ್ಯಮದ ಮಾದರಿಯ ಆಧಾರದ ಮೇಲೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ.

Related Stories