ಬೆಂಗಳೂರಲ್ಲೊಬ್ಬ ಮಾಡರ್ನ್ ಶಹಜಾಹಾನ್..!

ಕೃತಿಕಾ

0

ಅಂದು ಶಹಜಾಹನ್ ತನ್ನ ಪತ್ನಿ ಮೇಲಿನ ಪ್ರೀತಿಯ ಸಂಕೇತವಾಗಿ ತಾಜ್ ಮಹಲ್ ಕಟ್ಟಿಸಿದ. ಇವತ್ತಿಗೂ ಪ್ರೀತಿಯ ಸಂಕೇತ ಅಂದ್ರೆ ನೆನಪಾಗೋದೆ ತಾಜ್ ಮಹಲ್. ಅಷ್ಟರ ಮಟ್ಟಿಗೆ ಪ್ರೀತಿಯ ದ್ಯೋತಕವಾಗಿ ಕಟ್ಟಿಸಿದ್ದ ತಾಜ್ ಮಹಲ್ ಇವತ್ತು ವಿಶ್ವಕ್ಕೇ ಪ್ರೀತಿಯ ಮಹತ್ವ ಸಾರುತ್ತಿದೆ. ಇದೇ ರೀತಿಯ ಮಾಡರ್ನ್ ಶಹಜಹಾನ್ ಒಬ್ರು ನಮ್ಮ ಬೆಂಗಳೂರಿನಲ್ಲಿದ್ದಾರೆ. ತಮ್ಮ ಮಡದಿಯ ಮೇಲಿನ ಪ್ರೀತಿಗಾಗಿ ಕಂಚಿನ ಪುತ್ಥಳಿಯನ್ನೇ ನಿರ್ಮಿಸಿ ಆರಾಧಿಸುತ್ತಿದ್ದಾರೆ. ಹೀಗೆ ಪತ್ನಿಯ ನೆನಪಿನಲ್ಲಿ ಪುತ್ಥಳಿಯನ್ನು ನಿರ್ಮಿಸಿ ಸ್ಪೂರ್ತಿಯಾದವರ ಹೆಸರು ವೆಂಕಟೇಶ್ ಮೂರ್ತಿ.

ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸಿಯಾಗಿರೋ ವೆಂಕಟೇಶ್ ಮೂರ್ತಿ ಪತ್ನಿ ನಾಗರತ್ನ ಅಗಲಿದ ಬಳಿಕ ಕಂಚಿನ ಪುತ್ಥಳಿ ನಿರ್ಮಿಸಿ ಮೂರು ಹೊತ್ತು ಹೂವಿನ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. 2 ವರ್ಷಗಳ ಹಿಂದೆ ನಾಗರತ್ನ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಕಡುಬಡತನದಲ್ಲಿದ್ದ ನಾಗರತ್ನರನ್ನು ಪ್ರೀತಿಸಿ ಸೋದರ ಮಾವನೇ ಆಗಬೇಕಿದ್ದ ವೆಂಕಟೇಶ್ ಮೂರ್ತಿಯನ್ನು ಪ್ರೀತಿಸಿ ಮದ್ವೆಯಾಗಿದ್ರು. ಎರೆಡೂ ಮನೆಯವರ ವಿರೋಧದ ನಡುವೆಯೇ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ವೆಂಕಟೇಶ್ ಮೂರ್ತಿ ಮತ್ತು ನಾಗರತ್ನ ಮದುವೆಯ ಬಳಿಕ ಸಾಕ್ಷಾತ್ ರಾಮ ಸೀತೆಯಂತಿದ್ರು. ಇವರಿಬ್ವರ ದಾಂಪತ್ಯಕ್ಕೆ ಮೂವರು ಹೆಣ್ಣು ಮಕ್ಕಳು. ಸದಾ ಅತಿಥಿ ಸತ್ಕಾರ ಮಾಡುತ್ತಿದ್ದ ದಿ.ನಾಗರತ್ನ ಮನೆಗೆಬಂದವರ ಪಾಲಿಗೆ ಸಾಕ್ಷಾತ್ ಅನ್ನಪೂರ್ಣೇಶ್ವರಿ. ಮನೆಗೆ ಬಂದವರು ಇವ್ರ ಕೈತುತ್ತು ತಿನ್ನದೇ ಹೋದವರಿಲ್ಲ. ಇಂತಹ ನಾಗರತ್ನ ತಮ್ಮ 55ನೇ ವಯಸ್ಸಿನಲ್ಲಿ ಅನಾರೋಗ್ಯಕ್ಕೊಳಗಾಗಿ ಸಾವನ್ನಪ್ಪಿದ್ರು. ಪತ್ನಿಯ ಸಾವು ವಂಕಟೇಶ್ ಮೂರ್ತಿಯನ್ನು ಅಘಾದವಾಗಿ ಕಾಡಿತ್ತು. ತನ್ನ ತಾಯಿಯ ನಂತರ ಯಾರನ್ನಾದರೂ ಅಷ್ಟು ಗಾಡವಾಗಿ ಪ್ರೀತಿಸಿದ್ದು ಅಂದರೆ ಅದು ನಾಗರತ್ನ ಅವರನ್ನು ಮಾತ್ರ. ಇದ್ದಕ್ಕಿದ್ದಂತೆ ತನ್ನ ಹೆಂಡತಿ ಸತ್ತು ಹೋದಳು ಅನ್ನೋದನ್ನ ಅರಗಿಸಿಕೊಳ್ಳೋದೇ ವೆಂಕಟೇಶ್ ಮೂರ್ತಿ ಪಾಲಿಗೆ ಸಾಧ್ಯವಾಗಲಿಲ್ಲ. ಪತ್ನಿ ಸಾವನ್ನಪ್ಪಿದ ನಂತರ ಹಲವು ದಿನಗಳ ಕಾಲ ಖಿನ್ನತೆಗೆ ಒಳಗಾಗಿದ್ದ ವೆಂಕಟೇಶ್ ಮೂರ್ತಿ ಮಕ್ಕಳ ಪ್ರೀತಿ, ಹಾರೈಕೆಯಿಂದ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡರು. ಆಗ ಹೊಳೆದದ್ದೇ ಹೆಂಡತಿಯ ಪುತ್ಥಳಿ ನಿರ್ಮಿಸೋ ಆಸೆ. ಅಗಲಿ ಹೋದ ಪತ್ನಿಯ ನೆನಪಿಗಾಗಿ ಸುಮಾರು 2ಲಕ್ಷ ಮೌಲ್ಯದಲ್ಲಿ 55 ಕೆ.ಜಿ ತೂಕದ ಕಂಚಿನ ಪುತ್ಥಳಿ ರೆಡಿ ಮಾಡಿಸಿದ್ದಾರೆ.

“ನಾನು ಮತ್ತು ನಾಗರತ್ನ ಸಂಬಂಧಿಕರಾದ್ರೂ ಪ್ರೀತಿಸಿ ಮದುವೆಯಾಗಿದ್ದೆವು. ಎರೆಡೂ ಮನೆಗಳಲ್ಲಿನ ವಿರೋಧ ಲೆಕ್ಕಿಸದೇ ಆಕೆಯನ್ನು ನಾನು ಮದುವೆಯಾಗಿದ್ದೆ. ನನಗೆ ಈ ಪ್ರಪಂಚದಲ್ಲಿ ಯಾರಾದ್ರೂ ಪ್ರಾಣಕ್ಕಿಂತ ಇಷ್ಟ ಅಂದ್ರೆ ಒಂದು ನನ್ನ ತಾಯಿ ಮತ್ತೊಂದು ನನ್ನ ಪತ್ನಿ. ಎರಡು ವರ್ಷದ ಹಿಂದೆ ನನ್ನ ಹೆಂಡತಿ ಕಾಯಿಲೆ ಬಂದು ಆಸ್ಪತ್ರೆ ಸೇರಿದವಳು ಮನೆಗೆ ಮರಳಿದ್ದು ಹೆಣವಾಗಿ. ಆಗಲೇ ನನಗೂ ಸತ್ತು ಹೋಗಬೇಕು ಅಂತ ಹಲವು ಸಾರಿ ಅನ್ನಿಸಿತ್ತು. ಯಾಕಂದ್ರೆ ಅವಳಿಲ್ಲದ ದಿನಗಳನ್ನು ನಾನು ಕಲ್ಪಿಸಿಕೊಂಡೂ ಇರಲಿಲ್ಲ. ಆದರೆ ವಿಧಿ ಆಕೆಯ ಪಾಲಿಗೆ ಕ್ರೂರವಾಗಿದ್ದ. ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ತಾನೆ ಅನ್ನೋದಕ್ಕೆ ನನ್ನ ಹೆಂಡತಿಯ ಸಾವೇ ಉದಾಹರಣೆ. ಅಷ್ಟು ಪ್ರೀತಿಸುತ್ತಿದ್ದ ಹೆಂಡತಿ ಇಲ್ಲವಾದಮೇಲೆ ಅವಳಿಗಾಗಿ ಏನನ್ನಾದರೂ ಮಾಡಬೇಕು ಅನ್ನಿಸಿತು. ಆಗ ನಾಗರತ್ನಳ ಕಂಚಿನ ಪುತ್ಥಳಿ ನಿರ್ಮಿಸುವ ಯೋಚನೆ ಮಾಡಿದೆ. ಮನೆಯವರಿಗೂ ನನ್ನ ಯೋಜನೆ ಇಷ್ಟವಾಯಿತಿ. ಈಗ ನನ್ನ ಹೆಂಡತಿ ಕಂಚಿನ ರೂಪದಲ್ಲಿ ನನ್ನೆದುರೇ ಇದ್ದಾಳೆ. ಆಕೆ ನನ್ನಿಂದ ದೂರವಾಗಿಲ್ಲ ಅಂತಾರೆ ವೆಂಕಟೇಶ್ ಮೂರ್ತಿ.

ಇಷ್ಟೊಂದು ತೀವ್ರವಾಗಿ ಹೆಂಡತಿಯನ್ನು ಪ್ರೀತಿಸುವ, ಆರಾಧಿಸುವ ಗಂಡಸರು ಸಿಗೋದು ಅಪರೂಪದಲ್ಲಿ ಅಪರೂಪ. ತಮ್ಮ ಮನೆಯ ಮುಂದೆಯೇ ಪತ್ನಿಯ ಪುತ್ಥಳಿ ಪ್ರತಿಷ್ಠಾಪಿಸಿರೋ ವೆಂಕಟೇಶ್ ಮೂರ್ತಿ ಪ್ರತಿದಿನವೂ ಪತ್ನಿಯ ಪುತ್ಥಳಿಯನ್ನು ಹೂಗಳಿಂದ ಸಿಂಗರಿಸಿ ಪೂಜಿಸುತ್ತಾರೆ. ಆಕೆ ತನ್ನಿಂದ ದೂರವಾಗಿದ್ದರೂ ಜೊತೆಯಲ್ಲೇ ಇದ್ದಾರೆ ಎಂಬಂತೆ ಪ್ರೀತಿಸುತ್ತಿದ್ದಾರೆ. ಈ ರೀತಿಯಾಗಿಯೂ ಕೂಡ ಒಬ್ಬ ಮನುಷ್ಯ ತನ್ನ ಪ್ರೀತಿ ಪಾತ್ರರನ್ನ ಅವರು ಸತ್ತ ನಂತರವೂ ಪ್ರೀತಿಸಬಹುದು ಅನ್ನೋದಕ್ಕೆ ಈ ವೆಂಕಟೇಶ್ ಮೂರ್ತಿಯೇ ಸಾಕ್ಷಿ. ಇವರ ಪ್ರೀತಿಯ ತೀವ್ರತೆ, ಪತ್ನಿಯೆಡೆಗಿನ ಆಗಾಧ ಅನುಬಂಧ ಈಗಿನ ಕಾಲದ ಪ್ರೇಮಿಗಳಿಗೆ, ದಂಪತಿಗಳಿಗೆ ಸ್ಪೂರ್ತಿಯಾಗುವಂತದ್ದು...ತಾಯಿಯನ್ನ ಪೂಜೆ ಮಾಡೋ ಮಕ್ಕಳನ್ನ ನೋಡಿರ್ತೀರಾ ಆದ್ರೆ ಪತ್ನಿಯನ್ನ ಪೂಜಿಸೋ ಪತಿ ಇವ್ರೇ ಅನ್ಸತ್ತೆ. ಅಂದು ಶಹಜಹಾನ್ ಮಡದಿಯ ಮೆಲಿನ ಪ್ರತೀಗಾಗಿ ರಾಜ್ಯ ಮುಖ್ಯ ಕಟ್ಟಿಸಿದ್ದ ಈ ಆಧುನಿಕ ಶಹಜಾಹಾನ್ ಪತ್ನಿಯ ಪುತ್ಥಳಿ ನಿರ್ಮಿಸಿ ಪತ್ನಿಯ ಮೇಲಿರಿಸಿ ಪ್ರೀತಿಯನ್ನೆತ್ತಿ ಹಿಡಿದಿದ್ದಾರೆ.