"ಬಿಪಿಎಲ್'' ಪುನರಾಗಮನದ ಅದ್ಭುತ ಕಹಾನಿ - ಫ್ಲಿಪ್‍ಕಾರ್ಟ್ ಹೆಗಲ ಮೇಲೆ ಸವಾರಿ 

ಟೀಮ್​ ವೈ.ಎಸ್​. ಕನ್ನಡ

0

ಬಿಪಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಿತ್.ಜಿ.ನಂಬಿಯಾರ್ ಅವರ ಪಾಲಿಗೆ 2015ರ ಜೂನ್ ತಿಂಗಳು ಅತ್ಯಂತ ಉತ್ಸಾಹ ಮತ್ತು ಹೆದರಿಕೆಯಿಂದ ಕೂಡಿತ್ತು. ಯಾಕಂದ್ರೆ ಬಿಪಿಎಲ್‍ನ 32 ಇಂಚಿನ ಟಿವಿಗಳ ಮಾರಾಟ ಫ್ಲಿಪ್‍ಕಾರ್ಟ್​ನಲ್ಲಿ ಆರಂಭವಾಗಿತ್ತು, ಗೃಹ ಬಳಕೆ ವಸ್ತುಗಳ ನಾಯಕ ಎಂದೇ ಕರೆಸಿಕೊಳ್ಳುತ್ತಿದ್ದ ಬಿಪಿಎಲ್ 10 ವರ್ಷಗಳ ನಂತರ ಮತ್ತೆ ಮಾರುಕಟ್ಟೆ ಪ್ರವೇಶಿಸಿತ್ತು. ಬೆಂಗಳೂರಿನ ಹೃದಯಭಾಗ ಚರ್ಚ್‍ಸ್ಟ್ರೀಟ್‍ನಲ್ಲಿರುವ ಕಚೇರಿಯಲ್ಲಿ ಕುಳಿತು ಮಧ್ಯಾಹ್ನ ಊಟ ಮಾಡುತ್ತಿದ್ದ ಅಜಿತ್ ಮತ್ತವರ ಸಹೋದ್ಯೋಗಿಗಳ ಚಿತ್ತ ಕಂಪ್ಯೂಟರ್ ಸ್ಕ್ರೀನ್ ಮೇಲಿತ್ತು. ಬಿಪಿಎಲ್ ಉತ್ಪನ್ನಗಳಿಗೆ ಗ್ರಾಹಕರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತಿದೆ ಅನ್ನೋದನ್ನು ತಿಳಿಯುವ ಕುತೂಹಲ ಹೆಚ್ಚಾಗಿತ್ತು. ಆ ದಿನದ ಅಂತ್ಯಕ್ಕೆ ಅವರಿಗೆ ಸಿಕ್ಕ ಉತ್ತರ `ಬಿಪಿಎಲ್ ಈಸ್ ಬ್ಯಾಕ್'. ಐದು ದಶಕಗಳಷ್ಟು ಹಳೆಯ ಕಂಪನಿ ಬಿಪಿಎಲ್ ರಿಲಾಂಚ್ ಆಗಿ 4 ತಿಂಗಳುಗಳೊಳಗೆ ಫ್ಲಿಪ್‍ಕಾರ್ಟ್‍ನಲ್ಲಿ ಟಿವಿಗಳ ಒಟ್ಟು ಮಾರಾಟದಲ್ಲಿ ಶೇ.10ರಷ್ಟು ಪಾಲನ್ನು ತನ್ನದಾಗಿಸಿಕೊಂಡಿತ್ತು. ಒಟ್ಟಾರೆ ಅಪ್ಲಾಯೆನ್ಸ್​​ಗಳ ಮಾರಾಟದಲ್ಲಿ ಬಿಪಿಎಲ್ ಪಾಲು ಶೇ.5ರಷ್ಟಿತ್ತು.

``ಈಗ ಫ್ಲಿಪ್‍ಕಾರ್ಟ್​ನ ಟಾಪ್-3 ಬ್ರಾಂಡ್‍ಗಳಲ್ಲಿ ಬಿಪಿಎಲ್ ಕೂಡ ಒಂದು. ಇದು ನಮ್ಮ ಅತಿ ದೊಡ್ಡ ಯಶಸ್ಸು'' ಎನ್ನುತ್ತಾರೆ ಫ್ಲಿಪ್‍ಕಾರ್ಟ್​ನ ಅಮಿತ್ ಬನ್ಸಲ್. ಬಿಪಿಎಲ್ ಅನ್ನು ಮರಳಿ ತರುವಲ್ಲಿ ಇವರ ಪ್ರಯತ್ನ ಶ್ಲಾಘನೀಯ.

ಪಾಲುದಾರಿಕೆಯ ಜನನ

ಎಲ್‍ಜಿ, ಸ್ಯಾಮ್‍ಸಂಗ್, ಹಾಗೂ ಸೋನಿ ಕಂಪನಿಗಳ ಆನ್‍ಲೈನ್ ರಿಟೈಲ್ ಅನಾಸಕ್ತಿಯ ಫಲವೇ ಬಿಪಿಎಲ್ ಹಾಗೂ ಫ್ಲಿಪ್‍ಕಾರ್ಟ್ ನಡುವಣ ಪಾಲುದಾರಿಕೆಗೆ ಮೂಲ. ``ಈ ಮೂರು ದೊಡ್ಡ ಕಂಪನಿಗಳು ನಮ್ಮೊಂದಿಗೆ ಕೆಲಸ ಮಾಡಲು ಸಿದ್ಧವಿರಲಿಲ್ಲ. ಆದ್ರೆ ಗ್ರಾಹಕರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಅದನ್ನೇ ನಾವು ಮಾಡುತ್ತಿದ್ದೇವೆ'' ಎನ್ನುತ್ತಾರೆ ಅಮಿತ್. ದಶಕದ ಕಾಲ ಉತ್ತರ ಅಮೆರಿಕದಲ್ಲಿದ್ದ ಅಮಿತ್, ರಿಲಯನ್ಸ್ ರಿಟೇಲ್ ಇಂಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ್ದಾರೆ. 2014ರಲ್ಲಿ ಅಮಿತ್ ಫ್ಲಿಪ್‍ಕಾರ್ಟ್ ಸೇರಿದ್ದರು. ``ನನಗಿನ್ನೂ ನೆನಪಿದೆ ಪಂಜಾಬ್‍ನಲ್ಲಿ ನನ್ನ ತಂದೆ ತಾಯಿ ಬಳಿ ಫ್ಲಾಟ್ ಟಿವಿ ಇದೆ, ಆದರೂ ಅವರು ಹಳೆಯ ಬಿಪಿಎಲ್ ಟಿವಿಯನ್ನು ಜೊತೆಗಿಟ್ಟುಕೊಂಡಿದ್ದಾರೆ. ಹಿಂದೊಮ್ಮೆ ಯಶಸ್ವಿಯಾಗಿದ್ದ ಇಂತಹ ಪಾರಂಪರಿಕ ಬ್ರಾಂಡ್‍ಗಳ ಜೊತೆಗೇಕೆ ಕೆಲಸ ಮಾಡಬಾರದು ಎಂದು ನನಗನಿಸಿತ್ತು. ಇದು ನನಗೆ ಬಂದ ಕ್ರೇಝಿ ಐಡಿಯಾಗಳಲ್ಲೊಂದು'' ಅಂತಾ ಅಮಿತ್ ವಿವರಿಸ್ತಾರೆ.

ಇದನ್ನು ಓದಿ: ಉತ್ತಮ ಸೇವೆಗೆ ಮುಂದಾದ ಭಾರತೀಯ ರೈಲ್ವೇ

ಈ ಬ್ರಾಂಡ್‍ಗಳ ಬಗ್ಗೆ ಗ್ರಾಹಕರು ಹೆಚ್ಚಾಗಿ ಏನನ್ನು ನೆನಪಿಟ್ಟುಕೊಳ್ತಾರೆ ಅನ್ನೋ ಬಗ್ಗೆ ಅಮಿತ್ ಬನ್ಸಲ್ ಸಂಶೋಧನೆ ನಡೆಸಿದ್ರು. ``ಹೋಮ್ ಅಪ್ಲಾಯನ್ಸ್​​ಗಳನ್ನು ಖರೀದಿಸಿದ 30-35 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರೆಲ್ಲ ತಮ್ಮ ಪೋಷಕರ ಬಳಿಯಿರುವ ಹಳೆಯ ಬಿಪಿಎಲ್ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್‍ಗಳೆಲ್ಲ ಇನ್ನೂ ಚೆನ್ನಾಗಿವೆ ಎನ್ನುತ್ತಿದ್ರು. `ಬಿಲೀವ್ ಇನ್ ದಿ ಬೆಸ್ಟ್' ಅನ್ನೋ ಹಳೆಯ ಟ್ಯಾಗ್‍ಲೈನ್ ಅನ್ನು ಕೂಡ ಎಷ್ಟೋ ಮಂದಿ ನೆನಪಿಟ್ಟುಕೊಂಡಿದ್ದಾರೆ'' ಎನ್ನುತ್ತಾರೆ ಅಮಿತ್. 2015ರ ಆರಂಭದಲ್ಲಿ ಅಮಿತ್ ಬನ್ಸಲ್, ಬಿಪಿಎಲ್ ಮುಖ್ಯಸ್ಥ ಅಜಿತ್ ಅವರನ್ನು ಭೇಟಿ ಮಾಡಿದ್ರು. ದಶಕದ ಹಿಂದೆ 2000ನೇ ಇಸ್ವಿಯಲ್ಲಿ ಸೋನಿ, ಎಲ್‍ಜಿ, ಸ್ಯಾಮ್‍ಸಂಗ್‍ನಂತಹ ಹೊಸ ಕಂಪನಿಗಳ ಸ್ಪರ್ಧೆಯನ್ನು ಎದುರಿಸಲಾಗದೆ ಹಿಂದೆ ಸರಿದಿತ್ತು. ಗ್ರೂಪ್ ನಡುವಣ ಕಲಹದಿಂದ ಕೂಡ ಬಿಪಿಎಲ್ ಹಿನ್ನಡೆ ಅನುಭವಿಸುವಂತಾಯ್ತು. ತಂತ್ರಜ್ಞಾನ ಪಾಲುದಾರ ಸನ್ಯೋ ಕೂಡ ತೊಂದರೆಗೆ ಸಿಲುಕಿತ್ತು. ಅಂತಿಮವಾಗಿ 2006-07ರಲ್ಲಿ ಲಾರ್ಜ್ ಅಪ್ಲಾಯನ್ಸಸ್ ಬ್ಯುಸಿನೆಸ್‍ನಿಂದಲೇ ಬಿಪಿಎಲ್ ಹಿಂದೆ ಸರಿಯಿತು. ಬಳಿಕ ವೈದ್ಯಕೀಯ ಉಪಕರಣಗಳು ಹಾಗೂ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಕಡೆಗೆ ಹೆಚ್ಚು ಗಮನಹರಿಸಿತ್ತು. ಹೋಮ್ ಆಟೋಮೇಶನ್ ಉತ್ಪನ್ನಗಳು ಹಾಗೂ ಸೊಲ್ಯೂಶನ್‍ಗಳನ್ನು ಮಾಡಲಾರಂಭಿಸಿತ್ತು.

ಇ-ಕಾಮರ್ಸ್ ಹೆಚ್ಚು ಜನಪ್ರಿಯವಾಗ್ತಿರೋದ್ರಿಂದ ಅಜಿತ್ ಕೂಡ ಕಳೆದ 2 ವರ್ಷಗಳಿಂದ ಆನ್‍ಲೈನ್ ಉದ್ಯಮದತ್ತ ಗಮನಹರಿಸಿದ್ದಾರೆ. ನಾಲ್ಕಾರು ಮೀಟಿಂಗ್‍ಗಳ ಬಳಿಕ ಉಭಯ ಕಂಪನಿಗಳ ನಡುವಣ ಪಾಲುದಾರಿಗೆ ಅಂತಿಮ ಹಂತ ತಲುಪಿತ್ತು. ``ನಾವು ವಿತರಣೆ ನಿಲ್ಲಿಸಿದಾಗ ಹಲವು ಡೀಲರ್‍ಗಳು ಕರೆ ಮಾಡುತ್ತಿದ್ರು. ಬೇಡಿಕೆ ಇದ್ರೂ ನಾವೇಕೆ ವಿತರಣೆ ನಿಲ್ಲಿಸಿದ್ದೇವೆ ಅನ್ನೋದು ಅವರಿಗೆ ಅರ್ಥವಾಗುತ್ತಿರಲಿಲ್ಲ. ಕಳೆದ ವರ್ಷ ಫ್ಲಿಪ್‍ಕಾರ್ಟ್ ಮತ್ತು ಅಮಿತ್ ಅವರನ್ನು ಸಂಪರ್ಕಿಸಿದಾಗ ಸಧ್ಯ ವೇಗವಾಗಿ ಅಭಿವೃದ್ಧಿ ಹೊಂದಲು ಕಂಪನಿಗಳಿಗೆ ಆನ್‍ಲೈನ್ ಮಾದರಿ ಉತ್ತಮ ಅನ್ನೋದು ಅರಿವಾಯ್ತು. ಹಾಗಾಗಿ ಮತ್ತೊಮ್ಮೆ ನಮ್ಮ ಬ್ರಾಂಡ್‍ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆವು'' ಅಂತಾ ಅಜಿತ್ ವಿವರಿಸಿದ್ದಾರೆ.

ಸ್ಪರ್ಧಾ ಕಣಕ್ಕೆ ಮರಳಿದ ಬಿಪಿಎಲ್...

ಅಪ್ಲಾಯನ್ಸ್​​ಗಳ ಉತ್ಪಾದನೆಗೆ ಮತ್ತೆ ಮರಳಿರುವುದು ನಿಜಕ್ಕೂ ವಿಭಿನ್ನ ಕಹಾನಿ. ಯಾಕಂದ್ರೆ ತನ್ನ ಬಹುತೇಕ ಕಾರ್ಖಾನೆಗಳನ್ನೆಲ್ಲ ಬಿಪಿಎಲ್ ಮಾರಾಟ ಮಾಡಿತ್ತು. ಹಳೆಯ ಸ್ಥಳೀಯ ಪೂರೈಕೆದಾರರು ಯಾರೂ ಸಂಪರ್ಕದಲ್ಲಿರಲಿಲ್ಲ. ಸೀಮಿತ ಮಾದರಿ ಮತ್ತು ಸೀಮಿತ ಘಟಕಗಳ ಮೂಲಕ ಪ್ರಯೋಗ ಮಾಡಲು ಫ್ಲಿಪ್‍ಕಾರ್ಟ್ ಹಾಗೂ ಬಿಪಿಎಲ್ ಕಂಪನಿಗಳು ನಿರ್ಧರಿಸಿದವು. ಆದ್ರೆ ದೊಡ್ಡ ಮಟ್ಟದ ಓಇಎಮ್‍ಗಳು ಹಾಗೂ ಪೂರೈಕೆದಾರರು ಕಡಿಮೆ ಸಂಖ್ಯೆಯಲ್ಲಿ ಉತ್ಪನ್ನಗಳನ್ನು ಪಡೆಯಲು ಸಿದ್ಧರಿರಲಿಲ್ಲ, ಫ್ಲಿಪ್‍ಕಾರ್ಟ್ ಅವರ ಮನವೊಲಿಸುವಲ್ಲಿ ಸಫಲವಾಗಿದೆ. ಕೆಲವು ತಜ್ಞರನ್ನು ನೇಮಕ ಮಾಡಿಕೊಂಡ ಬಿಪಿಎಲ್ ಹೋಮ್ ಆಟೋಮೇಶನ್ ಕ್ಷೇತ್ರಕ್ಕೆ ಮರು ಪ್ರವೇಶ ಮಾಡಿತು. ಫ್ಲಿಪ್‍ಕಾರ್ಟ್ ಕೂಡ ಬಿಪಿಎಲ್ ರಿಎಂಟ್ರಿಗೆ ಸಾಥ್ ಕೊಟ್ಟಿದೆ.

``ಗ್ರಾಹಕರ ಅಂಕಿ-ಅಂಶ, ಗ್ರಾಹಕರ ಲಭ್ಯತೆ, ಬೆಲೆ ನಿಗದಿ ಈ ಎಲ್ಲ ವಿಷಯಗಳಲ್ಲೂ ಫ್ಲಿಪ್‍ಕಾರ್ಟ್ ನಮಗೆ ನೆರವಾಗಿದೆ. ನಾವು ಕೂಡ ಫ್ಲಿಪ್‍ಕಾರ್ಟ್‍ಗಾಗಿ ಉತ್ಪನ್ನಗಳನ್ನು ತಯಾರಿಸಲು ನಮ್ಮೆಲ್ಲ ಅನುಭವಗಳನ್ನು ಬಳಸಿಕೊಂಡಿದ್ದೇವೆ. ಹಾಗಾಗಿ ನಮ್ಮದು ಅದ್ಭುತ ಪಾಲುದಾರಿಕೆ. ಇನ್ನಷ್ಟು ನವೀನ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತೇವೆ'' ಎನ್ನುತ್ತಾರೆ ಅಜಿತ್. ಬಿಪಿಎಲ್ ಈಗಾಗ್ಲೇ 15 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತಹ ಉತ್ಪನ್ನಗಳನ್ನು ತಯಾರಿಸುವುದು ಮತ್ತು ಆನ್‍ಲೈನ್ ಲಭ್ಯತೆ ಸುಲಭದ ಮಾತಲ್ಲ. ಕನ್ಸ್ಯೂಮರ್ ಅಪ್ಲಾಯನ್ಸ್ ಹಾಗೂ ಹಗುರ ಟಿವಿಗಳ ಸಾಗಣೆ ಕೂಡ ಬಹಳ ಕಷ್ಟಕರ. ಇನ್‍ಸ್ಟಾಲೇಶನ್, ಮಾರಾಟದ ನಂತರದ ಸರ್ವೀಸ್ ಎಲ್ಲದರಲ್ಲೂ ಸಮಸ್ಯೆ ಇದ್ದೇ ಇದೆ. ಫ್ಲಿಪ್‍ಕಾರ್ಟ್ ಈ ಕಠಿಣ ಹಾದಿಗಳನ್ನೆಲ್ಲ ಕ್ರಮಿಸಿದೆ, 2012ರಲ್ಲಿ ಈ ವಿಭಾಗದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿತ್ತು. ಮಾರಾಟ ಉತ್ತಮವಾಗಿದ್ದರೂ, ಸರಿಯಾದ ಡೆಲಿವರಿ, ಮಾರಾಟದ ನಂತರದ ಸರ್ವೀಸ್ ಇಲ್ಲದೇ ಇದ್ದಿದ್ರಿಂದ ಈ ವಿಭಾಗವನ್ನೇ ಫ್ಲಿಪ್‍ಕಾರ್ಟ್ ಮುಚ್ಚಿತ್ತು.

2014ರಲ್ಲಿ ಮತ್ತೊಮ್ಮೆ ಈ ವಿಭಾಗದಲ್ಲಿ ಮಾರಾಟ ಪುನರಾರಂಭ ಮಾಡಲು ನಿರ್ಧರಿಸಿದ ಫ್ಲಿಪ್‍ಕಾರ್ಟ್ ಅದಕ್ಕಾಗಿಯೇ ಪೂರೈಕೆ ಸರಣಿ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿತ್ತು. ಸಾಮಾನ್ಯ ಪೂರೈಕೆ ಸರಪಳಿಯ ಮೂಲಸೌಕರ್ಯಗಳನ್ನು ಬಳಸಿಕೊಂಡು ವೇಗ ಮತ್ತು ಉತ್ತಮ ಡೆಲಿವರಿ ಸಾಧ್ಯವಿಲ್ಲ ಅನ್ನೋದು ಫ್ಲಿಪ್‍ಕಾರ್ಟ್‍ಗೆ ಬಹುಬೇಗ ಅರ್ಥವಾಗಿತ್ತು. ಹಾಗಾಗಿ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾದಲ್ಲಿ ಟಿವಿ ಹಾಗೂ ಅಪ್ಲಾಯನ್ಸ್‍ಗಾಗಿ ಪ್ರತ್ಯೇಕ ಗೋದಾಮುಗಳನ್ನು ನಿರ್ಮಿಸಲಾಗಿದೆ. ಸಾಗಣೆಯ ಜವಾಬ್ಧಾರಿ ಇಕಾರ್ಟ್ ಹೆಗಲೇರಿದೆ. ಮಾರಾಟದ ನಂತರದ ಸರ್ವೀಸ್‍ಗಾಗಿ ಫ್ಲಿಪ್‍ಕಾರ್ಟ್, ಜೀವ್ಸ್ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ.

ಇಂತಹ ಸೌಲಭ್ಯಗಳು ಕಂಪನಿಯ ಬ್ರಾಂಡ್ ನೇಮ್‍ಗೆ ಇನ್ನಷ್ಟು ಜನಪ್ರಿಯತೆ ತಂದುಕೊಡುತ್ತವೆ ಅನ್ನೋದು ಅಜಿತ್ ಅವರ ಅಭಿಪ್ರಾಯ. ದೇಶದ ಮೂಲೆ ಮೂಲೆಯಿಂದ್ಲೂ ಆರ್ಡರ್‍ಗಳು ಬರುತ್ತಿರುವುದರಿಂದ ತ್ವರಿತ ಇನ್‍ಸ್ಟಾಲೇಶನ್ ಮತ್ತು ಗ್ರಾಹಕರ ಸಮಸ್ಯೆಗಳನ್ನು ಬೇಗ ಬಗೆಹರಿಸಲು ಬಿಪಿಎಲ್ ಜೀವ್ಸ್ ಜೊತೆ ಕೈಜೋಡಿಸಿದೆ. ಪ್ರತಿ ವಾರವೂ ಸಭೆ ನಡೆಸಿ ಚರ್ಚೆ ನಡೆಸಲಾಗುತ್ತದೆ.

ದೊಡ್ಡ ಮಹತ್ವಾಕಾಂಕ್ಷೆಗಳು...

ಪೈಲಟ್ ಪ್ರಾಜೆಕ್ಟ್ ಯಶಸ್ವಿಯಾಗುತ್ತಿದ್ದಂತೆ ಬಿಪಿಎಲ್ ಹೊಸ ಹೊಸ ಪ್ರಯತ್ನಗಳಿಗೆ ಕೈಹಾಕಿದೆ. 32 ಇಂಚಿನ ಬಿಪಿಎಲ್ ಟಿವಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, 40 ಇಂಚಿನ ಟಿವಿ ಹಾಗೂ ಸ್ಮಾರ್ಟ್ ಟಿವಿ ಲಾಂಚ್‍ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟಿವಿಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ರೆಫ್ರಿಜರೇಟರ್, ವಾಶಿಂಗ್ ಮಷಿನ್, ಏರ್ ಕಂಡಿಷನರ್‍ಗಳು ಕೂಡ ಲಭ್ಯವಿವೆ. ಈ ಹಿಂದೆ ಅತ್ಯಮೂಲ್ಯ ಬ್ರಾಂಡ್ ಎನಿಸಿಕೊಂಡಿದ್ದ ಬಿಪಿಎಲ್ ಈಗ ಹೊಸ ಯುಗದ ಆನ್‍ಲೈನ್ ಬ್ರಾಂಡ್ ಆಗಿ ಬದಲಾಗಿದೆ.

``ಆನ್‍ಲೈನ್‍ನಲ್ಲಿ ನಾವು ತಕ್ಷಣಕ್ಕೆ ಗ್ರಾಹಕರ ಪ್ರತಿಕ್ರಿಯೆ ಪಡೆಯಬಹುದು. ಅವರ ಬೇಡಿಕೆಗಳೇನು? ಯಾವ ಬಗೆಯ ಉತ್ಪನ್ನಗಳನ್ನು ಇಷ್ಟಪಡುತ್ತಾರೆ ಅನ್ನೋದನ್ನೆಲ್ಲ ತಿಳಿದುಕೊಳ್ಳಬಹುದು. ಜೊತೆಗೆ ಯಾವ ಉತ್ಪನ್ನ ಹೆಚ್ಚು ಮಾರಾಟವಾಗ್ತಿದೆ ಅನ್ನೋದನ್ನು ಪ್ರತಿನಿತ್ಯ ತಿಳಿದುಕೊಳ್ಳಬಹುದು. ಆದ್ರೆ ಸಾಂಪ್ರದಾಯಿಕ ಮಾದರಿಯಲ್ಲಿ ಈ ಪ್ರಕ್ರಿಯೆ ವಿಳಂಬವಾಗುತ್ತದೆ'' ಅನ್ನೋದು ಅಜಿತ್ ಅವರ ಅಭಿಪ್ರಾಯ. ಸಹಯೋಗ ಫ್ಲಿಪ್‍ಕಾರ್ಟ್ ಮತ್ತು ಬಿಪಿಎಲ್ ಕಂಪನಿಗಳಲ್ಲಿ ಹೆಚ್ಚು ಮಹತ್ವಾಕಾಂಕ್ಷೆಗಳನ್ನು ಹುಟ್ಟುಹಾಕಿದೆ. ಸ್ಯಾನ್‍ಸೂಯಿ ಕೂಡ ಫ್ಲಿಪ್‍ಕಾರ್ಟ್ ಬಳಗ ಸೇರುವ ಸಾಧ್ಯತೆಯಿದ್ದು, ದೇಶದ ಅತ್ಯಂತ ಪ್ರಬಲ ಲಾರ್ಜ್ ಅಪ್ಲಾಯನ್ಸ್‍ಗಳ ಆನ್‍ಲೈನ್ ಮಾರುಕಟ್ಟೆ ಎಂಬ ಖ್ಯಾತಿಗೆ ಫ್ಲಿಪ್‍ಕಾರ್ಟ್ ಪಾತ್ರವಾಗಲಿದೆ.

``ಆನ್‍ಲೈನ್ ಲಾರ್ಜ್ ಅಪ್ಲಾಯನ್ಸ್ ಕ್ಷೇತ್ರದಲ್ಲಿ ಶೇ.60ರಷ್ಟು ಪಾಲು ನಮ್ಮದಿದೆ. ಮೊಬೈಲ್ ಹಾಗೂ ಫ್ಯಾಶನ್ ಬಿಟ್ರೆ ಅತ್ಯಂತ ಹೆಚ್ಚು ಮಾರಾಟವಾಗ್ತಿರೋದು ಲಾರ್ಜ್ ಅಪ್ಲಾಯನ್ಸ್‍ಗಳು. ಇನ್ನು 12-18 ತಿಂಗಳುಗಳಲ್ಲಿ ಫ್ಲಿಪ್‍ಕಾರ್ಟ್ ಮೂರು ಪಟ್ಟು ಅಭಿವೃದ್ಧಿ ಹೊಂದಲಿದೆ'' ಎಂಬ ವಿಶ್ವಾಸ ಅಮಿತ್ ಅವರದ್ದು. ಮೊದಲ ವರ್ಷ 60 ಕೋಟಿ ವಟಿವಾಟಿನ ನಿರೀಕ್ಷೆ ಬಿಪಿಎಲ್‍ಗಿತ್ತು. ಆದ್ರೆ ಆರಂಭಿಕ ಪ್ರತಿಕ್ರಿಯೆ ನೋಡ್ತಿದ್ರೆ 70 ಕೋಟಿ ವಹಿವಾಟು ನಡೆಯುವ ಸಾಧ್ಯತೆಗಳಿವೆ. ಅದೇನೇ ಆದ್ರೂ ಗ್ರಾಹಕರ ನೆಚ್ಚಿನ ಬಿಪಿಎಲ್ ಮತ್ತೆ ಬಂದಿದೆ. ದಶಕಗಳ ಹಿಂದೆ ಭಾರೀ ಜನಪ್ರಿಯವಾಗಿದ್ದ ಬ್ರಾಂಡ್ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸಂಚಲನ ಎಬ್ಬಿಸಿದೆ.

ಲೇಖಕರು: ರಾಧಿಕಾ ಪಿ. ನಾಯರ್

ಅನುವಾದಕರು: ಭಾರತಿ ಭಟ್ 

ಇದನ್ನು ಓದಿ

1. ಉರ್ದು ಭಾಷೆಯ ಸೌಂದರ್ಯ – ಶ್ರೀಮಂತಿಕೆ ಹೆಚ್ಚಿಸಿದ ರೆಹ್ಕ್ತಾ ಫೌಂಡೇಷನ್..

2. ಚೆನ್ನೈ ಪ್ರವಾಹ ಪೀಡಿತರಿಗಾಗಿ ಅಮರಿಕದಿಂದ ಹರಿದು ಬಂತು ನೆರವು - ಕಸ್ಟಮ್ಸ್ ಕಿರಿಕಿರಿಯಿಂದ ಸಂತ್ರಸ್ಥರನ್ನು ಇನ್ನೂ ತಲುಪಿಲ್ಲ..!

3. ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!

Related Stories