ದೇಗುಲಗಳ ಕದ ತಟ್ಟಿದ ಸಾಮಾಜಿಕ ಕಾರ್ಯಕರ್ತೆಯರು... ಮಹಿಳೆಯರ ಪ್ರವೇಶಕ್ಕಾಗಿ ತೀವ್ರಗೊಂಡ ಹೋರಾಟ  

ಟೀಮ್​ ವೈ.ಎಸ್​. ಕನ್ನಡ

1

ಶನಿ ಶಿಂಗ್ಣಾಪುರ ದೇವಸ್ಥಾನದಲ್ಲಿ 400 ವರ್ಷಗಳಷ್ಟು ಹಳೆಯ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿದೆ. ಮಹಿಳೆಯರಿಗೆ ದೇವಸ್ಥಾನ ಗರ್ಭಗುಡಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ. ಇದರ ಬೆನ್ನಲ್ಲೇ ಹಿಮಾಚಲದ ಹಮಿರ್ಪುರ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಬಾಬಾ ಬಾಲಕ್‍ನಾಥ್ ಟ್ರಸ್ಟ್ ಹಾಗೂ ಮಹಾರಾಷ್ಟ್ರದ ತ್ರಯಂಬಕೇಶ್ವರ ದೇವಸ್ಥಾನ ಟ್ರಸ್ಟ್ ಕೂಡ ದೇವಾಲಯದೊಳಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಿವೆ.

ಬಾಬಾ ಬಾಲಕನಾಥ ಟ್ರಸ್ಟ್, ಹಮಿರ್ಪುರ್ ಮತ್ತು ಬಿಲಾಸ್ಪುರ್ ಗಡಿಯಲ್ಲಿರುವ ಧೌಳಗಿರಿ ಪರ್ವತದಲ್ಲಿದೆ. ಸರ್ಕಾರದ ನಿಯಂತ್ರಣದಲ್ಲಿರುವ ಈ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಗರ್ಭಗುಡಿಯೊಳಕ್ಕೆ ಭಕ್ತೆಯರಿಗೆ ಎಂಟ್ರಿ ಇರಲಿಲ್ಲ. ಮುಖ್ಯ ಗುಹೆಯಿಂದ ಕೆಲವು ಮೀಟರ್ ದೂರದಲ್ಲಿ ನಿಂತೇ ಅವರು ದರ್ಶನ ಪಡೆಯಬೇಕಿತ್ತು. ಭಗವಾನ್ ಶಿವನ ಹಿರಿಯ ಪುತ್ರ, ಜೀವನದುದ್ದಕ್ಕೂ ಬ್ರಹ್ಮಚಾರಿಯಾಗಿದ್ದ ಕಾರ್ತಿಕೇಯ ಇಲ್ಲಿ ನೆಲೆ ನಿಂತಿದ್ದಾನೆ ಅನ್ನೋ ನಂಬಿಕೆ ಇದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕಾಗಿ ಬರುತ್ತಾರೆ. ಆದ್ರೆ ಅಲ್ಲಿನ ಸಂಪ್ರದಾಯದ ದೇವರ ಮೂರ್ತಿಯನ್ನು ಸ್ಪರ್ಷಿಸಲು ಅಥವಾ ಹತ್ತಿರದಿಂದ ನೋಡಲು ಮಹಿಳೆಯರಿಗೆ ಅವಕಾಶವಿರಲಿಲ್ಲ.

ಸಿದ್ಧಬಾಬಾ ಬಾಲಕನಾಥನನ್ನು ಉತ್ತರಭಾರತದಾದ್ಯಂತ ಆರಾಧಿಸಲಾಗುತ್ತದೆ. ಆದ್ರೆ ಸಂಪ್ರದಾಯ ಮುರಿದು ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕೊಡಬೇಕೆಂಬ ಒತ್ತಾಯ ಸ್ಥಳೀಯ ಮಟ್ಟದಲ್ಲಿ ಇರಲಿಲ್ಲ. ಕೆಲ ವರ್ಷಗಳ ಹಿಂದೆ ಇಂತಹ ಅಲೆಯನ್ನು ಸೃಷ್ಟಿಸಿದವರು ಪಂಜಾಬ್‍ನ ಬಿಜೆಪಿ ಮುಖಂಡ ಲಕ್ಷ್ಮಿ ಕಾಂತ ಚಾವ್ಲಾ. ಮಹಿಳೆಯರಿಗೂ ಭಗವಂತನ ಆರಾಧನೆಗೆ ಸಮಾನ ಹಕ್ಕಿದೆ ಅನ್ನೋದು ಅವರ ವಾದವಾಗಿತ್ತು. ಇದೊಂದು ಹಳೆಯ ಮತ್ತು ಎಲ್ಲರೂ ಒಪ್ಪಿಕೊಂಡ ಸಂಪ್ರದಾಯ ಎಂಬ ಕಾರಣಕ್ಕೆ ಅವರ ಅರ್ಜಿ ಸ್ವೀಕೃತವಾಗಿರಲಿಲ್ಲ.

ದೇವಸ್ಥಾನ ಟ್ರಸ್ಟ್‍ನ ಮುಖ್ಯಸ್ಥ ಅಕ್ಷಯ್ ಸೂದ್ ಹೇಳುವುದೇ ಬೇರೆ. ಮಹಿಳೆಯರು ಪ್ರವೇಶಿಸದಂತೆ ನಿರ್ಬಂಧ ಹೇರಿರಲಿಲ್ಲ. ಆದ್ರೆ ಮಹಿಳೆಯರೇ ಗರ್ಭಗುಡಿಯಿಂದ ದೂರದಲ್ಲೇ ನಿಂತು ದರ್ಶನ ಪಡೆಯಲು ಇಚ್ಛಿಸುತ್ತಿದ್ದರು ಎನ್ನುತ್ತಾರೆ ಅವರು. ಆದ್ರೆ ಈ ಬಗ್ಗೆ ಅಧಿಕೃತ ಪ್ರಕಟಣೆಯೇನೂ ಹೊರಬಿದ್ದಿಲ್ಲ, ಮಹಿಳೆಯರು ಒಳ ಪ್ರವೇಶಿಸಿ ಪೂಜೆ ಸಲ್ಲಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ದೇವಸ್ಥಾನ ಆಡಳಿತಮಂಡಳಿ ಸ್ಪಷ್ಟಪಡಿಸಿದೆ. ಬಾಬಾಜಿ ಭ್ರಹ್ಮಚಾರಿಯಾಗಿದ್ದರಿಂದ ಮಹಿಳೆಯರು ಹತ್ತಿರ ಹೋಗಬಾರದೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದರು, ಇದೇ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ ಅಂತಾ ದೇವಸ್ಥಾನದ ಮಹಾಂತ ರಾಜಿಂದರ್ ಗಿರಿ ಸ್ಪಷ್ಟಪಡಿಸಿದ್ದಾರೆ.

ಧಾರ್ಮಿಕ ಮುಖಂಡರನ್ನು ಕರೆದು ಈ ವಿಚಾರದ ಬಗ್ಗೆ ಚರ್ಚಿಸುವ ಅಗತ್ಯವಿದೆ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ, ಅದರಿಂದ ಭಕ್ತರ ಭಾವನೆಗೆ ಧಕ್ಕೆಯಾಗಬಹುದು ಎನ್ನುತ್ತಾರೆ ಅವರು. ಹಳೆ ಸಂಪ್ರದಾಯಗಳನ್ನು ಪಾಲಿಸುವುದು ಒಳಿತು, ಅದಕ್ಕೆ ರಾಜಕೀಯ ಬೆರೆಸುವುದು ಸರಿಯಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ರೀತಿ ಮಹಾರಾಷ್ಟ್ರದ ತ್ರಯಂಬಕೇಶ್ವರ ದೇವಸ್ಥಾನ ಆಡಳಿತ ಮಂಡಳಿ ಕೂಡ ಪ್ರತಿನಿತ್ಯ ಒಂದು ಗಂಟೆ ಕಾಲ ಮಹಿಳೆಯರಿಗೆ ಶಿವದರ್ಶನಕ್ಕೆ ಅನುವು ಮಾಡಿಕೊಡಲು ನಿರ್ಧರಿಸಿದೆ. ಆದ್ರೆ ಒಳ ಪ್ರವೇಶಿಸಿ ಪೂಜೆ ಸಲ್ಲಿಸಲು ಅವರು ಒದ್ದೆಯಾದ ಹತ್ತಿ ಸೀರೆ ಅಥವಾ ರೇಷ್ಮೆ ಸೀರೆಯನ್ನೇ ಧರಿಸಿರಬೇಕೆಂದು ಡ್ರೆಸ್ ಕೋಡ್ ಮಾಡಲಾಗಿದೆ. ಆದ್ರೆ ಈ ಷರತ್ತನ್ನು ವಿರೋಧಿಸಿರುವ ಸಾಮಾಜಿಕ ಕಾರ್ಯಕರ್ತೆಯರು ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬುಧವಾರ ಸಭೆ ಸೇರಿದ ದೇವಸ್ಥಾನ ಆಡಳಿತ ಮಂಡಳಿ, ಬೆಳಗ್ಗೆ 6-7 ಗಂಟೆವರೆಗೆ ದೇವಾಲಯದ ಗರ್ಭಗೃಹಕ್ಕೆ ಪ್ರವೇಶಿಸಲು ಮಹಿಳೆಯರಿಗೆ ಷರತ್ತುಪೂರ್ವ ಅನುಮತಿ ನೀಡಲು ನಿರ್ಧರಿಸಿರುವಾಗಿ ಟ್ರಸ್ಟ್ ಸದಸ್ಯೆ ಲಲಿತಾ ಶಿಂಧೆ ತಿಳಿಸಿದ್ದಾರೆ. ಒದ್ದೆ ಬಟ್ಟೆ ಉಟ್ಟು ಒಳಪ್ರವೇಶಿಸಲು ವನಿತಾ ಗುತ್ತೆ ನೇತೃತ್ವದ ಪುಣೆ ಮೂಲದ ಸ್ವರಾಜ್ಯ ಸಂಘಟನ ನಿರಾಕರಿಸಿದ್ದರಿಂದ ಗೊಂದಲ ಏರ್ಪಟ್ಟಿತ್ತು. ಅದೇ ಸಂದರ್ಭದಲ್ಲಿ ರೇಷ್ಮೆ ಬಟ್ಟೆ ಧರಿಸಿದ ಸ್ಥಳೀಯ ಅರ್ಚಕರು ಪೂಜೆ ಮಾಡಲು ಗರ್ಭಗುಡಿ ಪ್ರವೇಶಿಸಿದರು. ಕೇವಲ ಒಂದು ಗಂಟೆ ಮಾತ್ರ ಮಹಿಳೆಯರಿಗೆ ಪ್ರವೇಶಾವಕಾಶ ನೀಡಿರುವ ಸಂಬಂಧ ದೇವಾಲಯ ಅಧಿಕಾರಿಗಳು ಹಾಗೂ ಸ್ವರಾಜ್ಯ ಸಂಘಟನ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಕೂಡ ನಡೀತು.

ಇನ್ನು ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ, ಗುತ್ತೆ ಅವರು ಸಲ್ಲಿಸಿದ ದೂರಿನನ್ವಯ 250 ಮಂದಿ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಸ್ಥಳಿಯ ಅರ್ಚಕರು, ದೇವಸ್ಥಾನ ಕೆಲಸಗಾರರ ಮೇಲೆ ತ್ರಯಂಬಕೇಶ್ವರ ಪೊಲೀಸರು ಹಲವು ಸೆಕ್ಷನ್‍ಗಳ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

Related Stories