ಶ್ವಾನಗಳಿಗೊಂದು ಗುರುಕುಲ..!

ಕೃತಿಕಾ

0

ಮೋಸ್ಟ್ಲಿ ಶಾಲೆಯಲ್ಲಿ ನಿಮ್ಮ ಮಕ್ಕಳು ಕೂಡಾ ಇಷ್ಟು ಶಿಸ್ತಿನಲ್ಲಿ ಹೇಳಿದ ಮಾತು ಕೇಳಲ್ವೇನೋ.. ಆದ್ರೆ ಈ ಶಾಲೆಯ ವಿದ್ಯಾರ್ಥಿಗಳನ್ನ ನೋಡಿದ್ರೆ ನಿಜಕ್ಕೂ ಆಶ್ಚರ್ಯ ಆಗತ್ತೆ. ಮಾಲೀಕರು ಅಥವಾ ತರಬೇತುದಾರರು ಒಂದು ಸಿಗ್ನಲ್ ನೀಡಿದ್ರೆ ಸಾಕು ಚಾಚೂ ತಪ್ಪದೆ ಪಾಲಿಸ್ತವೆ. ಅದು ಗುರುಕುಲ ಪದ್ಧತಿ. ಅಂದ ಹಾಗೇ ನಾವು ಹೆಳ್ತಾ ಇರೊದು ಒಂದು ವಿಶಿಷ್ಟ ಗುರುಕುಲದ ಬಗ್ಗೆ.

ಅಲ್ಲಿ ಸ್ಕೂಬಿ, ರಾಕಿ, ಬ್ಲಾಕಿ, ಜಿಮ್ಮಿ ಹೀಗೆ ಹತ್ತಾರು ವಿದ್ಯಾರ್ಥಿಗಳಿದ್ದಾರೆ. ಹೌದು ಇದು ಮಕ್ಕಳಿಗೆ ಪಾಠ ಕಲಿಸೋ ಗುರುಕುಲ ಅಲ್ಲ.. ನಿಮ್ಮ ಮನೆಯ ಮುದ್ದು ನಾಯಿಗಳಿಗೆ ಸನ್ನಡತೆಯನ್ನ ಹೇಳಿಕೊಡೋ ಶ್ವಾನಗುರುಕುಲ. ನಗರದ ಶಂಕರಮಠದಲ್ಲಿ ಈ ಗುರುಕುಲ ಇದೆ. ಬರೀ ಐದು ಆರು ತಿಂಗಳಲ್ಲಿ ನಿಮ್ಮ ನಾಯಿ ನಿಮ್ಮ ಮಾತನ್ನ, ಬರೀ ಸನ್ನೆಯಲ್ಲೇ ನೀವು ಹೇಳಿದ್ದನ್ನ ಕೇಳೋ ರೀತಿಯ ತರಬೇತಿ ನೀಡಲಾಗುತ್ತದೆ. ಇನ್ನು ಬರೀ ನಾಯಿಗಳಿಗಷ್ಟೇ ಅಲ್ಲಾ ನಾಯಿ ಮಾಲೀಕರಿಗೂ ಇಲ್ಲಿ ತರಬೇತಿ ಇರುತ್ತದೆ. ಶಿವಸ್ವಾಮಿ ಎಂಬುವವರು ಇಂತದ್ದೊಂದು ಶ್ವಾನ ಗುರುಕುಲವನ್ನು ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗರ ಬ್ಯುಸಿ ಶೆಡ್ಯೂಲ್​​ನಲ್ಲಿ ಜನರೊಂದು ಮಾತಾಡೋದೇ ಕಷ್ಟಕರವಾಗಿದೆ. ಹೀಗಾಗಿ ಅನೇಕರು ಮನೆಯಲ್ಲಿ ನಾಯಿಗಳನ್ನ ಸಾಕಿಕೊಂಡಿರ್ತಾರೆ. ಅದೂ ಮನೆಯ ಸದಸ್ಯರಂತೆ ಇರತ್ತೆ. ಆದ್ರೆ ಅನೇಕ ನಾಯಿಗಳಿಗೆ ಅಪರಿಚಿತರೊಂದಿಗೆ ಹೇಗೆ ವರ್ತಿಸ್ಬೇಕು, ಅನ್ಯ ಪ್ರಾಣಿಗಳೊಂದಿಗೆ ಹೇಗೆ ವರ್ತಿಸ್ಬೇಕು ಅನ್ನೋದು ತಿಳಿಸಿದರಲ್ಲ. ಇಂತಹ ನಾಯಿಗಳಿಗೆ ಮನುಷ್ಯರಂತೆ ವರ್ತನೆ ಹಾಗೂ ಸನ್ನಡತೆಯಲ್ಲಿ ಕಲಿಸಿಕೊಡಲಾಗುತ್ತದೆ.

ನಗರದಲ್ಲಿ ನಾಯಿಗಳಿಗಾಗೇ ಇರೋ ಡಾಗ್ ಬೇಕರಿ, ಡಾಗ್ ಸ್ಪಾ, ಡಾಗ್ ಹಾಸ್ಪಿಟಲ್, ಡಾಗ್ ರೆಸ್ಟೋರೆಂಟ್ನ ಜೊತೆಗೆ ಪೆಟ್ಸ್ ಸ್ಕೂಲ್ ಕೂಡಾ ಪ್ರಾರಂಭವಾಗಿರೋದು ವಿಶೇಷ. 2011ರಲ್ಲಿ ಪ್ರಾರಂಭವಾಗಿರೋ ಈ ‘ಕೆ9 ಗುರುಕುಲ- ಎ ಸ್ಕೂಲ್ ಫಾರ್ ಪೆಟ್ಸ್’ ಇರೋದು ಬೆಂಗಳೂರಿನ ಶಂಕರಮಠದಲ್ಲಿ. ಪೊಲೀಸ್ ಕುಟುಂಬದಿಂದ ಬಂದಿರೋ ಶಿವಸ್ವಾಮಿ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ನಾಯಿಗಳ ತರಬೇತಿ ನೋಡಿ ಪ್ರೇರಿಪಿತರಾಗಿ ಈ ಗುರುಕುಲ ಪ್ರಾರಂಭಿಸಿದ್ದಾರೆ. ಕೆ9ನ ಪಕ್ಕದಲ್ಲಿರೋ ಮೈದಾನದಲ್ಲಿ ಬೆಳಗ್ಗೆ 5:30ರಿಂದ 7:30ರ ವರೆಗೆ ತರಬೇತಿ ನಡೆಯುತ್ತದೆ. ಇಲ್ಲಿ ಕೇವಲ ವಿದೇಶದ ಹೈಫೈ ನಾಯಿಗಳಿಗಷ್ಟೇ ಅಲ್ಲಾ ಸಾಮಾನ್ಯ ನಾಯಿಗಳಿಗೂ ತರಬೇತಿ ನೀಡಲಾಗುತ್ತದೆ.

ನನ್ನ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದವರು. ನಾನು ಬೆಳೆದದ್ದೆಲ್ಲವೂ ಪೊಲೀಸ್ ಕ್ವಾಟ್ರರ್ಸ್​ನಲ್ಲಿ. ಚಿಕ್ಕಂದಿನಿಂದಲೂ ಪೊಲೀಸ್ ನಾಯಿಗಳ ಶಿಸ್ತು ನೋಡಿಕೊಂಡೇ ಬೆಳೆದವನು ನಾನು. ನನಗೆ ಚಿಕ್ಕಂದಿನಿಂದಲೂ ನಾಯಿಗಳೆಂದರೆ ತುಂಬಾ ಇಷ್ಟ. ಪೊಲೀಸ್ ನಾಯಿಗಳಿಗೆ ತರಬೇತಿ ನೀಡೋದನ್ನ ನಾನು ಕಣ್ಣಾರೆ ನೋಡಿದ್ದೆ. ನಾನೂ ಕೂಡ ಪೊಲೀಸ್ ನಾಯಿಗಳಿಗೆ ಕೆಲವು ಶಿಸ್ತಿನ ಪಾಠ ಹೇಳಿಕೊಡುತ್ತಿದ್ದೆ. ಸಿಟಿಯಲ್ಲಿ ನಾಯಿಗಳನ್ನು ಸಾಕುವ ಟ್ರೆಂಡ್ ಹೆಚ್ಚಾಗುತ್ತಿದ್ದಾಗ ನನಗೆ ನಾಯಿಗಳಿಗಾಗಿಯೇ ಒಂದು ಶಾಲೆ ತೆರೆಯುವ ಮನಸ್ಸಾಯ್ತು. ಇವತ್ತಿನ ಬ್ಯುಸಿ ಶೆಡ್ಯೂಲ್ ನಲ್ಲಿ ನಾಯಿಗಳಿಗೆ ಶಿಸ್ತಿನ ಪಾಠ ಹೇಳಿಕೊಡುವ ಟೈಂ ನಮ್ಮ ಜನರಲ್ಲಿಲ್ಲ. ಹಾಗಾಗಿ ನಾನು ಈ ಗುರುಕುಲವನ್ನು ಆರಂಭಿಸಿದೆ ಅಂತಾರೆ ಶಿವಸ್ವಾಮಿ.

ಪೊಲೀಸ್ ನಾಯಿಯನ್ನ ನೋಡಿದಾಗ ಎಲ್ಲರಿಗೂ ನಮ್ಗೂ ಒಂದು ನಾಯಿ ಸಾಕ್ಬೆಕು ಅನ್ನೋ ಮನಸಾಗತ್ತೆ. ಯಾಕಂದ್ರೆ ಅದು ಮಾಲೀಕನ ಮಾತನ್ನ ಚಾಚೂ ತಪ್ಪದೆ ನಡೆಸೋ ಪರಿ ಅಂಥದ್ದು. ಆದ್ರೆ ತರಬೇತಿ ಪಡೆಯದ ನಾಯಿಗಳ ಪಾಡೋ ಹೆಳತೀರದು. ಮನೆಗೆ ಅಪರಿಚಿತರು ಬಂದ್ರೆ ಸಾಕು ಕಿವಿ ತಮಟೆ ಒಡೆಯೋ ತನ್ಕಾ ಬಾಯಿ ಮುಚ್ಚಲ್ಲ. ಎಷ್ಟೇ ಹೇಳಿದ್ರೂ ಮಾತು ಕೇಳಲ್ಲ. ಇನ್ನು ಬೀದಿಯಲ್ಲಂತೂ ಕರೆದುಕೊಂಡು ಹೋಗೋದೇ ಡೇಂಜರ್. ಬೇರೆ ನಾಯೀನಾ ಕಂಡ್ರೆ ಸಾಕು ಹುಲಿ ತರಾ ಹಾರಲು ಬರುತ್ತವೆ. ಹೀಗಾಗಿ ಅನೇಕ ಮಾಲೀಕರಿಗೆ ತಮ್ಮ ನಾಯಿಯೂ ಹೇಳಿದ ಹಾಗೇ ಕೇಳ್ಬೇಕು ಅನ್ನೂ ಆಸೆ ಇರತ್ತೆ. ಇಂತಹ ನಾಯಿಗಳಿಗೆ ಶೀವು ತಮ್ಮ ಗುರುಕುಲದಲ್ಲಿ ತಬೇತಿ ನೀಡ್ತಾರೆ. ನಾಯಿಗಳ ಪ್ರಾಥಮಿಕ ಸ್ವಭಾವ ಬದಲಾಯಿಸಲು ಸುಮಾರು 3-4 ತಿಂಗಳು ಬೇಕಾಗುತ್ತದೆ.

ಇಲ್ಲಿ ಒಮ್ಮ ತರಬೆತಿ ಪಡೆದ ನಾಯಿ ಬಳಿಕ ತನ್ನೆಲ್ಲಾ ಕೆಲಸಗಳನ್ನ ತಾನೇ ಮಾಡಿಕೊಳ್ಳುತ್ತದೆ. ಅದಕ್ಕೇ ನಿಗದಿಪಡಿಸಿದ ಸ್ಥಳದಲ್ಲಿ ಮಲಗೋದು, ಅತಿಥಿಗಳನ್ನ ಆಹ್ವಾನಿಸೋದು, ವಾಕ್ ಹೋಗೋದು, ಬಹಿರ್ದೆಸೆಗೆ ಹೋಗೋದು ಹೀಗೆ ಅನೇಕ ಸನ್ನಡತೆಗಳನ್ನ ರೂಢಿಸಿಕೊಳ್ಳುತ್ತದೆ. ಸದ್ಯ ಸ್ವಾಮಿ ಅವರ ಸ್ಕೂಲ್ನಲ್ಲಿ 40-50 ನಾಯಿಗಳಿವೆ. ನಾಯಿಗಳಿಗೆ ಮೂಲ ತರಬೆತಿ ನೀಡಲು 3000 ದಿಂದ 5000 ಶುಲ್ಕ ನಿಗಧಿಪಡಿಸಿದ್ದಾರೆ. ಇನ್ನು ಆರ್ಥಿಕವಾಗಿ ಸಮಸ್ಯೆ ಇರೋರರ ನಾಯಿಗಳಿಗೆ ಉಚಿತ ತರಬೇತಿಯನ್ನೂ ನೀಡ್ತಾರೆ ಸ್ವಾಮಿ. ಇನ್ನು ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ತಮ್ಮ ನಾಯಿಗೆ ತರಬೇತಿ ನೀಡಲು ಅನೆಕರು ಇಲ್ಲಿಗೆ ಬರ್ತಾರೆ. ವಿಭಿನ್ನವಾಗಿ ಆಲೋಚಿಸಿದರೆ ವಿಶಿಷ್ಟತೆಯನ್ನ ಮೆರೆಯಬಹುದು ಅನ್ನೊದಕ್ಕೆ ಈ ಶಿವಸ್ವಾಮಿ ಅತ್ಯುತ್ತಮ ಉದಾಹರಣೆ. ಇವರ ಈ ವಿಭಿನ್ನ ಪರಿಕಲ್ಪನೆ ಹಲವರಿಗೆ ಸ್ಫೂರ್ತಿಯಾಗುವಂತದ್ದು.

Related Stories