ಬಾವಿ ಬ್ರೈಡ್ ಕಿಚನ್ – ಇದು ಪಾರ್ಸಿ ಕಲೆಯ ಅದ್ಭುತ

ಟೀಮ್​​ ವೈ.ಎಸ್​​.

ಬಾವಿ ಬ್ರೈಡ್ ಕಿಚನ್ – ಇದು ಪಾರ್ಸಿ ಕಲೆಯ ಅದ್ಭುತ

Sunday November 08, 2015,

3 min Read

ಪ್ರೀತಿಯನ್ನು ಆಸ್ವಾದಿಸಿ, ಆಸ್ವಾದವನ್ನು ಪ್ರೀತಿಸಿ. ಇದು ಬಾವಿ ಬ್ರೈಡ್ ಕಿಚನ್​ನ ಟ್ಯಾಗ್​ಲೈನ್. ಇದು ಅಪ್ಪಟ ಪಾರ್ಸಿ ಅಡುಗೆ ಮನೆಯಾಗಿದ್ದು, ಸಮುದಾಯದ ಅತ್ಯಂತ ಜನಪ್ರಿಯ ಖಾದ್ಯಗಳನ್ನು ಉಣಬಡಿಸುತ್ತಿದೆ.

ಇದೆಲ್ಲದರ ಹಿಂದಿನ ಶಕ್ತಿ ಪರ್ಜೇನ್ ಪಟೇಲ್. ಆತಿಥ್ಯ ನಿರ್ವಹಣೆ ಮತ್ತು ಮಾರ್ಕೆಟಿಂಗ್ ಪದವೀಧರರು.

ಈ ಹೆಸರೇನೋ ವಿಚಿತ್ರವಾಗಿದೆ ಎಂದುಕೊಂಡಿದ್ದೀರಾ? ಅಲ್ಲೇ ಇರೋದು ವಿಶೇಷ. “ಬಾವಿ ಅಂದರೆ ಪಾರ್ಸಿ ಭಾಷೆಯಲ್ಲಿ ಮಹಿಳೆ ಎಂದೂ, ಬಾವಾ ಎಂದರೆ ಪುರುಷ ಎಂದು ಅರ್ಥ. ನಾನು ಆಗ ತಾನೇ ಮದುವೆಯಾಗಿದ್ದೆ, ಹೀಗಾಗಿ ಇದಕ್ಕೆ ಬಾವಿ ಬ್ರೈಡ್ ಕಿಚನ್ ಎಂದು ಹೆಸರಿಟ್ಟೆ” ಎನ್ನುತ್ತಾ ನಾಚುತ್ತಾರೆ ಪರ್ಜೇನ್.

image


ಮೊದಲಿಗೆ ಇದನ್ನು ವಾರಾಂತ್ಯದ ಪರಿಕಲ್ಪನೆಯಾಗಿ ಆರಂಭಿಸಲಾಗಿತ್ತು. ವಾರವಿಡೀ ಆರ್ಡರ್​​ಗಳನ್ನು ತೆಗೆದುಕೊಳ್ಳುತ್ತಿದ್ದ ಪರ್ಜೇನ್ ವಾರಾಂತ್ಯದಲ್ಲಿ ಆ ಅಡುಗೆ ತಯಾರಿಸಿ ಮನೆಗಳಿಗೆ ಕಳುಹಿಸುತ್ತಿದ್ದರು. ಆಗ ಅವರು ಬೇರೆ ಕಡೆ ಕೆಲಸ ಮಾಡುತ್ತಿದ್ದುದರಿಂದ ವಾರಾಂತ್ಯದ ವ್ಯವಹಾರ ನಡೆಸುತ್ತಿದ್ದರು. ಇದು ಕೈ ಹಿಡಿಯುತ್ತದೆ ಎಂಬುದು ಖಾತ್ರಿಯಾಗುತ್ತಿದ್ದಂತೆಯೇ, ಕೆಲಸಕ್ಕೆ ಗುಡ್​​ಬೈ ಹೇಳಿ ಉದ್ಯಮಕ್ಕೆ ಇಳಿಯಲು ನಿರ್ಧರಿಸಿದರು.

ಪಾರ್ಸಿ ಖಾದ್ಯಗಳ ಪ್ರೀತಿ

ಪಾರ್ಸಿ ಕುಟುಂಬದಲ್ಲಿ ಹುಟ್ಟಿದ ಪರ್ಜೇನ್, ಸಾಂಪ್ರದಾಯಿಕ ಅಡುಗೆಗಳನ್ನು ಇಷ್ಟಪಡುತ್ತಿದ್ದರು. ಆದರೆ ತಯಾರಿಸುವುದು ಹೇಗೆ ಎನ್ನುವುದು ಗೊತ್ತಿರಲಿಲ್ಲ. ನ್ಯೂಜಿಲೆಂಡ್​​ನಲ್ಲಿ ಉನ್ನತ ಶಿಕ್ಷಣ ಪಡೆಯಲೆಂದು 9 ವರ್ಷಗಳ ಕಾಲ ಅಲ್ಲೇ ನೆಲೆಸಿದ್ದರು. ಅಲ್ಲಿ ಅವರ ತಾಯಿ ಕಟ್ಲೆಟ್, ಕಬಾಬ್ ಮಾರುತ್ತಿದ್ದರು. ಪರ್ಜೇನ್ ಅಮ್ಮನಿಗೆ ಸಹಾಯ ಮಾಡುತ್ತಿದ್ದರು. ಆದರೆ, ಎಂದೂ ಪಾರ್ಸಿ ಅಡುಗೆ ಮಾಡಲು ಕಲಿಯಲೇ ಇಲ್ಲ.

ಮದುವೆಯಾದ ಬಳಿಕ, ಅವರು ಮುಂಬೈಗೆ ವಾಪಸ್ಸಾದರು. ಅಲ್ಲಿ ಅಡುಗೆ ಮಾಡುವುದು ಅನಿವಾರ್ಯವಾಗಿತ್ತು. ಮಧ್ಯರಾತ್ರಿಗಳಲ್ಲಿ ಅಮ್ಮನಿಗೆ ಕರೆ ಮಾಡಿ ಅಡುಗೆಯ ವಿಧಾನಗಳನ್ನು ತಿಳಿದುಕೊಳ್ಳುತ್ತಿದ್ದರು.

image


“ನನ್ನ ಅತ್ತೆ-ಮಾವರನ್ನು ಖುಷಿ ಪಡಿಸಲೇಬೇಕಿತ್ತು. ಒಂದರ್ಥದಲ್ಲಿ ಆ ಕರೆಗಳು ನನ್ನ ಜೀವನವನ್ನೇ ರಕ್ಷಿಸುವಂತಿದ್ದವು. ಅದೆಷ್ಟೋ ಬಾರಿ ನನ್ನ ಅಮ್ಮ ನನ್ನನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ಅಡುಗೆ ವಿಧಾನಗಳನ್ನು ಬರೆದಿಟ್ಟುಕೊಳ್ಳುವುದು ಒಂದು ರೀತಿಯಲ್ಲಿ ಮಜವಾಗಿತ್ತು. ಹೀಗಾಗಿ ನಾನು ಫುಡ್ ಬ್ಲಾಗ್ ಆರಂಭಿಸಿದೆ.” ಎನ್ನುತ್ತಾರೆ ಪರ್ಜೇನ್. ಕೆಲವು ತಿಂಗಳಲ್ಲೇ ಹಲವು ಓದುಗರು ಖುದ್ದಾಗಿ ಅಡುಗೆಗಾಗಿ ಸಂಪರ್ಕಿಸಲು ಆರಂಭಿಸಿದರು. ಖುದ್ದು ಪತಿಯೇ ಬಾವಿ ಬ್ರೈಡ್ ಕಿಚನ್ ಆರಂಭಿಸಲು ಒತ್ತಾಯಿಸಿದರು.

ಆದರೆ ತಮ್ಮ ಬಳಿ ಸರಿಯಾದ ಮೆನು ಇರಲಿಲ್ಲ. ಹೀಗಾಗಿ ವಾರಾಂತ್ಯದಲ್ಲಿ ಕ್ಯಾಟರಿಂಗ್ ಮಾದರಿಯಲ್ಲಿ ಆಹಾರ ಒದಗಿಸಲು ಆರಮಭಿಸಿದರು. 2013ರಲ್ಲಿ ಈ ವ್ಯವಹಾರ ಆರಂಭವಾಯಿತು. ಸ್ಟಾರ್ಟರ್ಸ್, ಮೇನ್ ಕೋರ್ಸ್ ಮತ್ತು ಡೆಸೆರ್ಟ್​ಗಳೊಂದಿಗೆ ಉದ್ಯಮ ಆರಂಭಿಸಿದರು. ಇದೇ ರೀತಿಯಲ್ಲಿ 2013ರ ಡಿಸೆಂಬರ್ ಅಂತ್ಯದವರೆಗೂ ವಹಿವಾಟು ನಡೆಸಿದರು.

“ಮಾರ್ಕೆಟಿಂಗ್ ಉದ್ಯೋಗದಲ್ಲಿದ್ದುದರಿಂದ ನನಗೆ ಮನೆಯಿಂದಲೇ ಉದ್ಯೋಗ ಮಾಡಲು ಸಾಕಷ್ಟು ಸಮಯ ಒದಗಿಸಿತ್ತು. ನಾನು ಅಡುಗೆ ಮತ್ತು ಕೆಲಸ ಎರಡನ್ನೂ ನಿಭಾಯಿಸುತ್ತಿದ್ದೆ. 2014ರ ಅಂತ್ಯದ ವೇಳೆಗೆ ನಾನು ಇದನ್ನೇ ಉದ್ಯಮವಾಗಿ ಪರಿವರ್ತಿಸಲು ತೀರ್ಮಾನಿಸಿದೆ. ಪಾರ್ಸಿ ಖಾದ್ಯಗಳ ಮೇಲೆ ಜನರಿಗೆ ಪ್ರೀತಿ ಮತ್ತು ಬೇಡಿಕೆ ಎರಡೂ ಹೆಚ್ಚಾಗತೊಡಗಿತ್ತು. ನಾನು ಕೆಲಸ ಬಿಟ್ಟು ಇದನ್ನೇ ಪೂರ್ಣಾವಧಿ ನಡೆಸಲು ನಿರ್ಧರಿಸಿದೆ.” ಎನ್ನುತ್ತಾರೆ ಪರ್ಜೇನ್.

ಈಗ ಬಾವಿ ಬ್ರೈಡ್ ಕಿಚನ್​​ನಲ್ಲಿ 6 ಜನರ ತಂಡವಿದೆ. ಡೈಲಿ ಡಬ್ಬಾಗಳು ಮತ್ತು ಪಾಪ್ ಅಪ್​​ಗಳನ್ನೂ ಸರಬರಾಜು ಮಾಡುತ್ತಿದ್ದಾರೆ.

ಧನ್ಸಕ್ ಮೇಲೆ ಒಲವು

ಪಾರ್ಸಿ ಆಹಾರವೆಂದರೆ ಕೇವಲ ಧನ್ಸಕ್ ಮಾತ್ರವಲ್ಲ. ಅದರಾಚೆಗೂ ಸಾಕಷ್ಟು ವೈವಿಧ್ಯಗಳಿವೆ ಎನ್ನುತ್ತಾರೆ ಪರ್ಜೇನ್. “ನನಗೆ ಪಾರ್ಸಿ ಅಡುಗೆಗಳನ್ನು ತಯಾರಿಸುವುದು ಹೇಗೆ ಎನ್ನುವುದು ಗೊತ್ತಿರಲಿಲ್ಲ. ಆದರೆ, ಅವುಗಳು ತಯಾರಾದ ಬಳಿಕ ಯಾವ ರುಚಿ ಇರುತ್ತವೆ ಎನ್ನುವುದು ಚೆನ್ನಾಗಿ ಗೊತ್ತಿತ್ತು. ಹೀಗಾಗಿ, ಸಾಮಗ್ರಿಗಳನ್ನು ತಯಾರಿಸಿ, ರುಚಿಕರವಾಗಿ ಮಾಡುವುದು ತುಂಬಾ ಕಷ್ಟವಾಗಲಿಲ್ಲ.” ಎನ್ನುತ್ತಾರೆ ಪರ್ಜೇನ್.

ಅಜ್ಜಿ ಮಾಡುತ್ತಿದ್ದ ಅನ್ನ ಮತ್ತು ಕರಿಯನ್ನು ಇವರು ತುಂಬಾ ನೆನಪಿಟ್ಟುಕೊಂಡಿದ್ದರು. “ಎಲ್ಲಾ ಹಿರಿಯರು ಮಾತನಾಡುವಂತೆ, ನಾನು ಸಾಯುವ ಮುನ್ನ ನೀನು ಏನು ಬಯಸುತ್ತಿ ಎಂದು ನನ್ನ ಅಜ್ಜಿಯೂ ಕೇಳಿದ್ದರು. ನಾನು ಆಗ ಇನ್ನೂ ಚಿಕ್ಕವಳು. ನಾನು ನನಗೆ ಅನ್ನ ಮತ್ತು ಕರಿ ಮಾಡುವಂತೆ ಕೇಳಿದೆ. ಅದನ್ನು ನಾನು ಜೀವನಪರ್ಯಂತ ಮರೆಯಲಾರೆ,” ಎನ್ನುತ್ತಾರೆ ಪರ್ಜೇನ್. ಅಜ್ಜಿಯ ನೆನಪಿಗಾಗಿ ಪರ್ಜೇನ್ ತಮ್ಮ ಮೆನುವಿನಲ್ಲೂ ಅನ್ನ-ಕರಿಯನ್ನು ಸೇರಿಸಿದರು. ಅಜ್ಜ ಇಷ್ಟ ಪಡುತ್ತಿದ್ದ ಕೀಮಾ ಕಬಾಬ್ ಕೂಡಾ ಇವರ ವೈವಿಧ್ಯಮಯ ಮೆನುವಿನಲ್ಲಿದೆ. ಅಜ್ಜಿಯ ಗೆಳತಿ ಶಿರಿನಿಬಾಯಿ ಮಾಡಿದ ಚೀಸ್ ಮತ್ತು ಮೊಟ್ಟೆಯ ಕಟ್ಲೆಟ್​​ಗಳನ್ನೂ ತಮ್ಮ ಮೆನುವಿನಲ್ಲಿ ಸೇರಿಸಿಕೊಂಡಿದ್ದಾರೆ.

image


“ನನ್ನ ಅಜ್ಜಿಯು ಇವನ್ನೆಲ್ಲಾ ತಮ್ಮ ಅಗತ್ಯಗಳನ್ನು ಪೋರೈಸಿಕೊಳ್ಳಲು ಮಾರಾಟ ಮಾಡುತ್ತಿದ್ದರು. ನಾನು ಇದನ್ನು ಬೇರೆ ರೀತಿಯಲ್ಲಿ ನೋಡಿದೆ. ಆಹಾರ ಹಿಂದಿನ ಕಥೆಗಳು ಇದನ್ನು ಮತ್ತಷ್ಟು ವಿಶೇಷವಾಗಿಸುತ್ತವೆ ಎನ್ನುವುದು ನನ್ನ ನಂಬಿಕೆ ಎನ್ನುತ್ತಾರೆ ಪರ್ಜೇನ್. ಇಂತಹ ಹಲವು ಕಥೆಗಳನ್ನು ಪರ್ಜೇನ್ ತಮ್ಮ ಬ್ಲಾಗ್​​ನಲ್ಲಿ ಹಂಚಿಕೊಂಡಿದ್ದಾರೆ. ಯಾವ ವಿಧಾನವೂ ರಹಸ್ಯವಲ್ಲ ಎನ್ನುತ್ತಾರವರು.

ಇಲ್ಲಿಯವರೆಗೆ ಇದು ಅದ್ಭುತ ಪ್ರಯಾಣ ಎನ್ನುತ್ತಾರೆ ಪರ್ಜೇನ್. ನಾನು ನವ್ಯೋದ್ಯಮಗಳೊಂದಿಗೆ ಕೆಲಸ ಮಾಡುವುದನ್ನು ಇಚ್ಚಿಸುತ್ತೇನೆ. ಆಹಾರ ಎನ್ನುವುದು ಆಗಿಂದಾಗ್ಗೆ ಬದಲಾಗುತ್ತಿರುವ ವ್ಯವಸ್ಥೆ ಎಂಬುದನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಉದ್ಯಮಿಯ ಪ್ರಯಾಣದಲ್ಲಿ ಯಾವುದೂ ನಿಗದಿತವಾಗಿರುವುದಿಲ್ಲ. ಎಲ್ಲವೂ ಕಲಿಕೆಯ ದಾರಿಗಳೇ ಆಗಿರುತ್ತವೆ.

ತಮ್ಮ ಉದ್ಯಮವನ್ನು ವಿಸ್ತರಿಸುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದರೆ. ನಗರ ಪೂರ್ತಿ ಸುತ್ತು ಹೊಡೆಯುವ ಮೊಬೈಲ್ ಟ್ರಕ್ ಆರಂಭಿಸುವುದು ಅಥವಾ, ಕೇಂದ್ರೀಕೃತ ಅಡುಗೆ ಮನೆ ಹೊಂದಿರುವ ಆನ್​​ಲೈನ್ ಸ್ಟೋರ್ ಆರಂಭಿಸುವುದು ಅವರ ಯೋಚನೆಯಾಗಿದೆ.

ಅಚ್ಚರಿಯೆಂದರೆ, ತಮ್ಮ ಮಗಳ ಅಡುಗೆ ಕೌಶಲ್ಯದ ಬಗ್ಗೆ ಅವರ ಅಮ್ಮನಿಗೇ ಸಂದೇಹಗಳಿದ್ದವು. ಯಾವುದಕ್ಕೂ ಸಹಾಯಕ್ಕಿರಲಿ ಎಂದು ಮದುವೆ ಸಂದರ್ಭದಲ್ಲಿ ಕ್ಯಾಟಿ ದಲಾಲ್ ಜಾಮ್ವಾ ಚಲೋಜಿ ಅಡುಗೆ ಪುಸ್ತಕವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ನಂಬಿ ಈಗ, ಪರ್ಜೇನ್ ಪಾರ್ಸಿ ಅಡುಗೆಯಲ್ಲಿ ಅದ್ಭುತವನ್ನೇ ಸಾಧಿಸಿದ್ದಾರೆ.