ಕೊಡಗಿನ ವಾಕಿಂಗ್ ಕಿಲ್ಲರ್ : ಕರ್ನಾಟಕ ರಣಜಿ ತಂಡಕ್ಕೆ ಇವನೇ ಪಿಲ್ಲರ್..

ಪಿ.ಆರ್​​.ಬಿ

0

ಅದು 2005ರ ಸಮಯ. ಇಂಡಿಯಾ ಎ ಹಾಗೂ ಇಂಡಿಯಾ ಬಿ ತಂಡಗಳ ನಡುವೆ ನಡೆಯುತ್ತಿದ್ದ ಚಾಲೆಂಜರ್ಸ್ ಟ್ರೋಫಿಯ ಪಂದ್ಯವದು. ಜಹೀರ್ ಖಾನ್, ಆರ್.ಪಿ.ಸಿಂಗ್ ಹಾಗೂ ಮುರಳಿ ಕಾರ್ತಿಕ್ ಅವರತಂಹ ಸ್ಟಾರ್ ಬೌಲರ್ ಗಳನ್ನ ಹೊಂದಿದ್ದ ಇಂಡಿಯಾ ಎ ಮೇಲುಗೈ ಸಾಧಿಸಿತ್ತು. ಆದ್ರೆ ಹೋರಾಟ ಬಿಟ್ಟುಕೊಡಲೊಲ್ಲದ ಇಂಡಿಯಾ ಬಿ ತಂಡದ ಆ ಯುವ ಬ್ಯಾಟ್ಸಮನ್ ಬೌಲರ್ ಗಳ ಬೆಂಡೆತ್ತಿದ. ಬಿರುಸಿನ ಬ್ಯಾಟಿಂಗ್ ಮೂಲಕ ಬಲಿಷ್ಠ ಬೌಲಿಂಗ್ ಪಡೆಯನ್ನು ತಬ್ಬಿಬ್ಬುಗೊಳಿಸಿದ. ಮುಂಬೈನ ವಾಂಖೆಡೆಲ್ಲಿ ಮಿಂಚಿದ ಆ ಯಂಗ್ ಬ್ಯಾಟ್ಸ್ ಮನ್ 66 ರನ್ ಸಿಡಿಸಿದ.

ಆತನ ಆ ಅದ್ಭುತ ಬ್ಯಾಟಿಂಗ್ ಭಾರತೀಯ ಕ್ರಿಕೆಟ್ ಗುರುತಿಸಿತು. ಅಷ್ಟಕ್ಕೇ ಪ್ರತಾಪ ನಿಲ್ಲಿಸದ ಆ ಯುವ ಆಟಗಾರ 2006ರಲ್ಲಿ ಮೊಹಾಲಿಯಲ್ಲಿ ನಡೆದ ಚಾಲೆಂಜರ್ಸ್ ಸರಣಿಯ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿದ . ಕೇವಲ 93 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ.. ಅಲ್ಲಿಗೆ ಆ ಆಟಗಾರನ ಹೆಸರು ಡ್ಯಾಶಿಂಗ್ ಹಿಟ್ಟರ್​​ಗಳ ಲಿಸ್ಟ್ ಗೆ ಸೇರ್ಪಡೆಯಾಯ್ತು. ಆ ಕನ್ನಡದ ಹುಡುಗನ ಹೆಸರು ರಾಬಿನ್ ಉತ್ತಪ್ಪ...

ಚಾಲೆಂಜರ್ ಟ್ರೋಫಿ ಹಾಗೂ ದೇಸಿ ಕ್ರಿಕೆಟ್ ನಲ್ಲಿ ಉತ್ತಮ ದಾಖಲೆ ಹೊಂದಿದ್ದ ಕೊಡಗಿನ ಕುವರನಿಗೆ ಸಹಜವಾಗೇ ಟೀಂಇಂಡಿಯಾದಲ್ಲಿ ಅವಕಾಶ ಸಿಕ್ಕಿತು. ವಾಕಿಂಗ್ ಕಿಲ್ಲರ್ ಅನ್ನೋ ಪೆಟ್ ನೇಮ್ ಹೊಂದಿದ್ದ ಉತ್ತಪ್ಪ 2006ರಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದ್ರು. ಅದೂ ಡ್ಯಾಶಿಂಗ್ ಬ್ಯಾಟ್ಸ್ ಮನ್ ವಿರೇಂದ್ರ ಸೆಹವಾಗ್ ಅನುಪಸ್ಥಿತಿಯಲ್ಲಿ. ಸಾಕಷ್ಟು ನಿರೀಕ್ಷೆಗಳೊಂದಿಗೆ ಬ್ಯಾಟಿಂಗ್ ಗೆ ಇಳಿದ ಉತ್ತಪ್ಪ ನಿರಾಸೆ ಮೂಡಿಸಲಿಲ್ಲ. ಇಂಗ್ಲೀಷ್ ಬೌಲರ್​​ಗಳನ್ನ ಅಟ್ಟಾಡಿಸಿದ ರಾಬಿನ್ ಮಿಂಚಿದ್ರು. 86 ರನ್ ಗಳಿಸಿ ರನೌಟ್ ಆದ್ರೂ ಮೊದಲ ಏಕದಿನ ಪಂದ್ಯದಲ್ಲೇ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾದ್ರು.

ಅಲ್ಲಿಂದ ಮಿಂಚತೊಡಗಿದ ರಾಬಿನ್, ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದ್ರು. ದೇಸಿ ಕ್ರಿಕೆಟ್ ನಲ್ಲಿ ಓಪನರ್ ಆಗಿದ್ರೂ, ಟೀಂಇಂಡಿಯಾದಲ್ಲಿ ಲೋವರ್ ಆರ್ಡರ್ ಆಟಗಾರನಾಗಿ ಕಣಕ್ಕಿಳಿಯುತ್ತಿದ್ರು. ಹೀಗಿದ್ರೂ ದೊಡ್ಡ ಹೊಡೆತಗಳ ಮೂಲಕ ಚುರುಕಾಗಿ ರನ್ ಗಳಿಸುತ್ತಿದ್ದ ಈ ಹಾರ್ಡ್ ಹಿಟ್ಟರ್ ಕೆಲವೊಂದು ಅವಿಸ್ಮರಣೀಯ ಗೆಲುವುಗಳನ್ನ ತಂದುಕೊಟ್ರು. ಅಲ್ಲದೆ 2007ರ ಟಿ-290 ವಿಶ್ವಕಪ್ ನ ಕೆಲವು ಪಂದ್ಯಗಳಲ್ಲಿ ರಾಬಿನ್ ಉತ್ತಪ್ಪ ಮಿಂಚಿದ್ರು.

ಇನ್ನೇನು ಟೀಂಇಂಡಿಯಾದಲ್ಲಿ ಸ್ಥಾನ ಗಟ್ಟಿಯಾಯ್ತು ಅಂದುಕೊಳ್ಳುತ್ತಿರುವಾಗ್ಲೇ ಇವರಿಗೆ ಕಾಡಿದ್ದು ಫಾರ್ಮ್ ಸಮಸ್ಯೆ. 2008ರಿಂದ ತಂಡದಿಂದ ಡ್ರಾಪ್ ಔಟ್ ಆದ್ರು. ಆಗಾಗ್ಗೆ ಟೀಂಇಂಡಿಯಾದಲ್ಲಿ ಅವಕಾಶ ಸಿಕ್ಕುತ್ತಿದ್ರೂ ಅದನ್ನ ಉಳಿಸಿಕೊಳ್ಳೋಗದಿಕ್ಕೆ ರಾಬಿನ್ ಗೆ ಸಾಧ್ಯವಾಗುತ್ತಿಲ್ಲ. ಕ್ರಿಕೆಟ್ ಬುಕ್ ನಲ್ಲಿ ಇರುವಂತೆ ಶಾಟ್ಸ್ ಗಳನ್ನ ಬಲವಾಗಿ ಪ್ರಯೋಗಿಸೋ ರಾಬಿನ್ ಆಟವನ್ನ ನೋಡುವುದೇ ಚೆಂದ. ಆದ್ರೆ ಪ್ರತೀ ಬಾರಿಯೂ ದೊಡ್ಡ ಸಿಕ್ಸರ್​​ನ ನಿರೀಕ್ಷೆ ಇಟ್ಟುಕೊಳ್ಳುವ ರಾಬಿನ್ ಫಾರ್ಮ್ ಸಮಸ್ಯೆ ಎದುರಿಸಲು ಪ್ರಮುಖ ಕಾರಣ.

ಏಕದಿನ ಕ್ರಿಕೆಟ್ ನಲ್ಲಿ ಫಾರ್ಮ್ ಕಳೆದುಕೊಂಡ್ರೂ, ಉತ್ತಪ್ಪ ಟಿ-20ಯಲ್ಲಿ ಅದೇ ಖದರ್ ಉಳಿಸಿಕೊಂಡ್ರು. ಕೆಕೆಆರ್ ಪರ ಸೀಸನ್ 7ರಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದ್ರು. ಅಲ್ಲದೆ 2013ರ ಇಂಡಿಯಾ ಎ ತಂಡದಲ್ಲಿ ಸ್ಥಾನ ಪಡೆದು ಟೀಂಇಂಡಿಯಾಕ್ಕೆ ಮರಳುವ ಪ್ರಯತ್ನ ನಡೆಸಿದ್ರು. ಇದು ಅಂತರಾಷ್ರೀಯ ಕ್ರಿಕೆಟ್ ನಲ್ಲಿ ಕನ್ನಡಿಗನ ಮಿಂಚಾದ್ರೆ, ರಣಜಿಯಲ್ಲೂ ರಾಬಿನ್ ಅಬ್ಬರ ಇದ್ದೇ ಇದೆ. 117 ಪ್ರಥಮ ದರ್ಜೆ ಪಂದ್ಯಗಳನ್ನ ಆಡಿರುವ ರಾಬಿನ್ ಸುಮಾರು 40ರ ಸರಾಸರಿಯಲ್ಲಿ 8 ಸಾವಿರ ರನ್ ಸನಿಹದಲ್ಲಿದ್ದಾರೆ. ಇದ್ರಲ್ಲಿ 17 ಶತಕಗಳು ಒಳಗೊಂಡಿರುವುದು ವಿಶೇಷ..

ಸಿಕ್ಕ ಅವಕಾಶಗಳನ್ನ ಬಳಸಿಕೊಂಡು ರಾಬಿನ್ ಮಿಂಚುವ ಲೆಕ್ಕಾಚಾರದಲ್ಲಿದ್ದಾರೆ. ಈ ಮೂಲಕ ಮತ್ತೆ ಟೀಂಇಂಡಿಯಾದಲ್ಲಿ ಆಡುವ ಕನಸು ಹೊತ್ತಿದ್ದಾರೆ. ಈಗಾಗಲೇ ಧೋನಿ ನಿವೃತ್ತಿ ನಂತ್ರ ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ಸೂಕ್ತ ವಿಕೆಟ್ ಕೀಪರ್ ಬ್ಯಾಟ್ಸ್​​​ಮನ್​​ಗಾಗಿ ಹುಡುಕಾಟ ಶುರುವಾಗಿದೆ. ಹೀಗಾಗಿ ಈ ಸಂದರ್ಭವನ್ನ ಬಳಸಿಕೊಳ್ಳಲು ಉತ್ತಪ್ಪ ರಣಜಿಯಲ್ಲೂ ವಿಕೆಟ್ ಕೀಪಿಂಗ್ ಮಾಡ್ತಿದ್ದಾರೆ. ಇವರ ಈ ಪ್ರಯತ್ನ ಯಶಸ್ವಿಯಾಗಿ ಮತ್ತೆ ಟೀಂಇಂಡಿಯಾದಲ್ಲಿ ಅವಕಾಶ ಪಡೆಯಲಿ.. ಭಾರತ ಕ್ರಿಕೆಟ್ ತಂಡದಲ್ಲಿ ಕನ್ನಡಿಗರ ಪರಂಪರೆ ಮುಂದುವರಿಸಲಿ ಅನ್ನೋದು ಕರುನಾಡಿಗರ ಆಶಯ.