ಸಾಮಾಜಿಕ ಪಿಡುಗಿಗೆ ಸವಾಲೊಡ್ಡಿದ ದಿಟ್ಟೆ..

ಟೀಮ್ ವೈ.ಎಸ್.ಕನ್ನಡ 

ಸಾಮಾಜಿಕ ಪಿಡುಗಿಗೆ ಸವಾಲೊಡ್ಡಿದ ದಿಟ್ಟೆ..

Tuesday October 04, 2016,

2 min Read

ಆಕೆ ಬಾಲ್ಯದಲ್ಲಿ ಅವರಿವರ ಮನೆಯ ಕೆಲಸ ಮಾಡಿಕೊಂಡು ನರಕವನ್ನು ನೈಜವಾಗಿ ನೋಡಿದ ನತದೃಷ್ಟೆ. ಬಡತನ ಅನ್ನೋದು ಆಕೆಯ ಬದುಕಿಗೆ ಶಾಪವಾಗಿತ್ತು. ಆದ್ರೀಗ ಕಠಿಣ ಪರಿಸ್ಥಿತಿಗಳಿಗೆ ಸವಾಲೊಡ್ಡಿದ 18ರ ಯುವತಿ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ ಹೆಸರು ಮಾಡಿದ್ದಾಳೆ. ಪಶ್ಚಿಮ ಬಂಗಾಳದ ಸುಂದರ್ಬನ್ಸ್​ನ ಅನೊಯರಾ ಖತೂನ್​ಳ ಬದುಕಿನ ಸಾಗಸಗಾಥೆ ಇದು. ಎರಡು ಬಾರಿ ವಿಶ್ವಸಂಸ್ಥೆಯಲ್ಲಿ ಮಾತನಾಡುವ ಅವಕಾಶ ಅವಳಿಗೆ ಸಿಕ್ಕಿದೆ. ಖುದ್ದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಬಿಲ್ ಮತ್ತು ಮೆಲಿಂದಾ ಗೇಟ್ಸ್ ಅವರಿಂದ ಆಹ್ವಾನ ಸ್ವೀಕರಿಸಿದ್ದ ಅನೊಯರಾ ಈಗ 24 ಪರಗಣ ಜಿಲ್ಲೆಯ ಸಂದೇಶ್ಖಲಿ ಗ್ರಾಮದ ಹೀರೋ ಅಂದ್ರೆ ತಪ್ಪಾಗಲಿಕ್ಕಿಲ್ಲ.

image


``ಅಂತರಾಷ್ಟ್ರೀಯ ಪ್ರೇಕ್ಷಕರೆದುರು ನನ್ನ ಗ್ರಾಮದ ಕಥೆ ಹೇಳುವುದು ಮತ್ತು ಜಗತ್ತಿನ ಮೂಲೆ ಮೂಲೆಗಳಲ್ಲಿ ನಡೆಯುವ ಘಟನೆಗಳ ಬಗ್ಗೆ ಕೇಳುತ್ತ ಕೇಳುತ್ತ ನಾನು ಇನ್ನಷ್ಟು ಸ್ಟ್ರಾಂಗ್ ಕಾರ್ಯಕರ್ತೆ ಆಗಿದ್ದೇನೆ'' ಎನ್ನುತ್ತಾಳೆ ಅನೊಯರಾ. ಅಂತರಾಷ್ಟ್ರೀಯ ಮಟ್ಟದ ಎನ್ಜಿಓ ಒಂದರ ಸಲಹೆ ಮೇರೆಗೆ ಅನೊಯರಾ ಮಕ್ಕಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಮಕ್ಕಳ 80 ಗುಂಪುಗಳನ್ನವರು ಮುನ್ನಡೆಸುತ್ತಿದ್ದಾರೆ, ಪ್ರತಿ ಗುಂಪಿನಲ್ಲೂ 10-12 ಮಕ್ಕಳಿದ್ದಾರೆ. ಬಾಲ್ಯವಿವಾಹ, ಮಾನವ ಕಳ್ಳಸಾಗಣೆ, ಬಾಲಕಾರ್ಮಿಕ ಪದ್ಧತಿ ವಿರುದ್ಧ ಇವರೆಲ್ಲ ಸಮರ ಸಾರಿದ್ದಾರೆ. ಅಷ್ಟೇ ಅಲ್ಲ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕಾಗಿಯೂ ಹೋರಾಟ ಮಾಡುತ್ತಿದ್ದಾರೆ.

ಇಂತಹ ದೌರ್ಜನ್ಯಗಳ ವಿರುದ್ಧ ಮೊದಮೊದಲು ಅನೊಯರಾ ಧ್ವನಿಯೆತ್ತಿದಾಗ ಗ್ರಾಮದಲ್ಲಿ ಯಾರೂ ಅವಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ``ಆಗ ನಾನು ಬಹಳಷ್ಟು ಟೀಕೆಗಳನ್ನು ಎದುರಿಸಬೇಕಾಯ್ತು. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ, ಜನರು ನನ್ನ ಮಾತುಗಳನ್ನು ಆಲಿಸುತ್ತಾರೆ'' ಎನ್ನುತ್ತಾರೆ ಅನೊಯರಾ. ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ ನಡೆದ `ಸಸ್ಟೇನೇಬಲ್ ಡೆವಲಪ್ಮೆಂಟ್ ಗೋಲ್ ಸಮಿಟ್'ನಲ್ಲಿ ಪಾಲ್ಗೊಂಡಿದ್ದ ಅನೊಯರಾ ಈ ವರ್ಷ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಮಕ್ಕಳನ್ನು ಪ್ರತಿನಿಧಿಸಿದ್ದಾರೆ.

``ಮಕ್ಕಳ ಹಕ್ಕುಗಳಿಗಾಗಿ ವಾದ ಮಾಡುವುದು ನನ್ನ ಬಯಕೆ. ಕೆಲಸ ಹಾಗೂ ಮದುವೆ ಹೆಸರಲ್ಲಿ ನಡೆಸುತ್ತಿರುವ ಕಳ್ಳಸಾಗಣೆ ಬಹುದೊಡ್ಡ ಸಮಸ್ಯೆ. ನಾನು ಕೂಡ ಅಂತಹ ಸ್ಥಿತಿ ಎದುರಿಸಿರುವುದರಿಂದ ಅದು ಎಷ್ಟು ಭಯಾನಕ ಎಂಬುದರ ಅರಿವಿದೆ'' ಅಂತಾ ಅನೊಯರಾ ಹೇಳಿದ್ದಾರೆ. ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ರೂ ಅದನ್ನೆಲ್ಲ ಮೆಟ್ಟಿ ನಿಂತು ಸಮಾಜದ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ವಿಶ್ವದ ಅನೇಕ ನಾಯಕರನ್ನು ಅನೊಯರಾ ಭೇಟಿಯಾಗಿದ್ದಾರೆ. ಇರಾಕ್ನ 23 ವರ್ಷದ ಯುವತಿ ನಾದಿಯಾ ಮುರದ್ ಅವರ ಭೇಟಿ ಅನೊಯರಾ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. ಐಸಿಸ್ ಕೈಗೆ ಸಿಕ್ಕು ನಲುಗಿದ್ದ ನಾದಿಯಾ ಈಗ ಗೌರವ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

``ನಾದಿಯಾ ತನ್ನ ಬದುಕಿನಲ್ಲಿ ಬಹಳಷ್ಟನ್ನು ಕಳೆದುಕೊಂಡಿದ್ದಾಳೆ. ಆದ್ರೂ ಹೋರಾಟ ನಡೆಸುತ್ತಿರುವ ಆಕೆಯ ಛಲವನ್ನು ಮೆಚ್ಚಲೇಬೇಕು. ನನ್ನ ಬದುಕಿಗೆ ಆಕೆ ಅತಿ ದೊಡ್ಡ ಪ್ರೇರಣೆ'' ಅನ್ನೋದು ಅನೊಯರಾಳ ಮನದಾಳದ ಮಾತು. ದೇಶಗಳು ಬೇರೆಬೇರೆಯಾಗಿದ್ದರೂ ಎಲ್ಲಾ ಕಡೆ ಸಮಸ್ಯೆಗಳು ಒಂದೇ ಎನ್ನುತ್ತಾರೆ ಅನೊಯರಾ. 

ಇದನ್ನೂ ಓದಿ..

ದಿಟ್ಟ ಧೀರೆ ಈ ಪುಟ್ಟ ದಿಯಾ..!

ದೇಶ ಸುತ್ತಿ ನೋಡಿ.. ಕೋಶ ಓದಿ ನೋಡಿ