ಇದು ಹಾಟ್ ವಾಚ್..! ಆದ್ರೆ ಕೆಲಸ ಮಾತ್ರ ಕೂಲ್

ಅಗಸ್ತ್ಯ

ಇದು ಹಾಟ್ ವಾಚ್..! ಆದ್ರೆ ಕೆಲಸ ಮಾತ್ರ ಕೂಲ್

Friday January 08, 2016,

2 min Read

ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದಂತೆಲ್ಲಾ ಚಿಕ್ಕದಾಗಿದ್ದ ಮೊಬೈಲ್‍ಗಳು ಸಣ್ಣ ಟಿವಿ ಗಾತ್ರಕ್ಕೆ ತಿರುಗಿವೆ. ಕೀಪ್ಯಾಡ್‍ಗಳಿದ್ದ ಬೇಸಿಕ್ ಫೋನ್​​ಗಳು ಟಚ್ ಸ್ಕ್ರೀನ್ ಅಳವಡಿಸಿಕೊಂಡು ಸ್ಮಾರ್ಟ್​ಫೋನ್‍ಗಳಾಗಿ ಮಾರ್ಪಟ್ಟಿವೆ. ಆದರೆ ಈಗ ಸ್ಮಾರ್ಟ್​ಫೋನ್​​ಗಳು ಮಾಡುವ ಕೆಲಸ ಕೈಗಡಿಯಾರಗಳು ಮಾಡಲು ಶುರು ಮಾಡಿವೆ. ಅಂತಹ ದೇಸಿ ವಾಚ್ ಫೋನ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. `ಹಾಟ್ ಸ್ಮಾರ್ಟ್ ವಾಚ್ ಅಮೊಲೆಡ್' ಹೆಸರಿನ ಈ ವಾಚ್ ಫೋನ್ ತಯಾರಾಗುತ್ತಿರುವುದು ಬೆಂಗಳೂರಿನಲ್ಲಿ.

image


ಸುಂದರ ಕೈಗಡಿಯಾರದಂತೆ ಕಾಣುವ `ಹಾಟ್ ಸ್ಮಾರ್ಟ್ ವಾಚ್ ಅಮೊಲೆಡ್' ಬಹುಪಯೋಗಿ. ರಾಮು ಪತ್ತಿಕೊಂಡ ಮತ್ತು ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರೊಬ್ಬರು ಸೇರಿ ಹುಟ್ಟು ಹಾಕಿರುವ ಹಾಟ್ ಸ್ಮಾರ್ಟ್ ವಾಚ್ ತಯಾರಿಕಾ ಕಂಪನಿಯ ಸೃಷ್ಟಿ ಈ `ಹಾಟ್ ಸ್ಮಾರ್ಟ್ ವಾಚ್ ಅಮೊಲೆಡ್'. ಅಪ್ಪಟ ಮೇಕ್ ಇನ್ ಇಂಡಿಯಾ ಉತ್ಪನ್ನವಾಗಿರುವ ಈ ಬಹುಪಯೋಗಿ ಕೈಗಡಿಯಾರ ಬೆಂಗಳೂರಿನಲ್ಲಿ ತಯಾರಾಗುತ್ತಿದ್ದರೂ, ಬೇಡಿಕೆ ಇರೋದು ಮಾತ್ರ ಅಮೆರಿಕದಲ್ಲಿ. ಸುಂದರ ಕೈಗಡಿಯಾರ ಬಹುಪಯೋಗಿಯಾಗಿದ್ದು, ಸೆಲ್‍ ಫೋನ್‍ನಂತೆ ಕಾರ್ಯ ನಿರ್ವಹಿಸುತ್ತದೆ. ಮಾತನಾಡಬಹುದು, ಸಂಗೀತ ಕೇಳಬಹುದು, ಸಂದೇಶ ನೋಡಬಹುದು. ನಿಮ್ಮ ಸ್ಮಾರ್ಟ್ ಫೋನ್‍ನಲ್ಲಿ ಮಾಡಬಹುದಾದ ಕೆಲಸ ಎಲ್ಲವೂ ಈ ಕೈಗಡಿಯಾರದ ಮೂಲಕ ಮಾಡಬಹುದು. ಇತ್ತೀಚೆಗೆ ಇದು ಭಾರತೀಯ ಮಾರುಕಟ್ಟೆಯಲ್ಲೂ ಲಭ್ಯವಾಗಿದೆ.

ಒಂದು ವಾಚ್ ಹಲವು ವಿಶೇಷತೆ

ವಾಚ್ ಧರಿಸಿದಾಗ ನಿಮ್ಮ ಕೈಯೇ ಹ್ಯಾಂಡ್‍ಸೆಟ್ ಆಗಿರುತ್ತದೆ. ಪ್ರತಿ ಸಲ ಕರೆ ಬಂದಾಗ ಹಸ್ತವನ್ನು ಕಿವಿಯ ಬಳಿಗೆ ತಂದರೆ ಸಾಕು. ಕೈಯ ಕೆಲವು ಭಂಗಿಗಳೇ ಹಾಟ್‍ವಾಚ್ ಅನ್ನು ನಿರ್ವಹಣೆ ಮಾಡುತ್ತದೆ. ರಿಂಗ್ ಆದ ತಕ್ಷಣ ಕೈಯನ್ನು ಕಿವಿಯ ಬಳಿಗೆ ಒಯ್ದರೆ ಕಾಲ್ ಪಿಕ್ ಆಗುತ್ತದೆ. ಟಾಟಾ ಮಾಡುವಂತೆ ಕೈ ಬೀಸಿದರೆ ಸಾಕು ಕಾಲ್ ಡಿಸ್‍ಕನೆಕ್ಟ್ ಆಗುತ್ತದೆ. ಮನೆಯಲ್ಲಿ ಯಾವುದೇ ಕೋಣೆಯಲ್ಲಿ ಇರಿ, ಸ್ನಾನ ಮಾಡುತ್ತಿರುವಾಗ, ಜಾಗ್ ಮಾಡುವಾಗ, ಗೆಳೆಯರ ಜತೆ ತಮಾಷೆಯಾಗಿ ಹರಟುವಾಗ ಸಂಗೀತ ಕೇಳಬೇಕು ಎನಿಸಿದರೆ ಮ್ಯೂಸಿಕ್ ಪ್ಲೇಯರ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಸಂಗೀತ ಕೇಳಲು ಅಥವಾ ನಿಲ್ಲಿಸಲು ರಿಮೋಟ್ ಕಂಟ್ರೋಲ್‍ನಂತೆ ಕೆಲಸ ಮಾಡುತ್ತದೆ. ಧ್ವನಿಯನ್ನು ಪತ್ತೆ ಮಾಡುವ ಸೌಲಭ್ಯವೂ ಇದೆ. ಹಾಟ್ ವಾಚ್ ಮೂಲಕ ಸಿರಿ ಅಥವಾ ಗೂಗಲ್ ವಾಯ್ಸನ್ನು ನೇರವಾಗಿ ನಿಯಂತ್ರಿಸಬಲ್ಲದು.

image


ತಿಂಗಳವರೆಗೆ ಬ್ಯಾಟರಿ ಬ್ಯಾಕ್-ಅಪ್..!

ಹಾಟ್ ಸ್ಮಾರ್ಟ್ ವಾಚ್‍ಅನ್ನು ಅಮೆರಿಕದ ಮಾರುಕಟ್ಟೆಗೆ ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಸದ್ಯವೇ ದೇಶದಲ್ಲೂ ಬಿಡುಗಡೆ ಮಾಡಲಾಗುವುದು. ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 1 ತಿಂಗಳ ಕಾಲ ಚಾಲನೆಯಲ್ಲಿರುತ್ತದೆ. ಅಮೆರಿಕಾದಲ್ಲಂತೂ ವಿಪರೀತ ಬೇಡಿಕೆ ಬಂದಿದೆ. ಇದರ ಬೆಲೆ 7ರಿಂದ 9 ಸಾವಿರ ರೂ.ಗಳಿಗೆ ಮಾರಾಟವಾಗುತ್ತಿದೆ.

ವಾಟರ್ ಪ್ರೂಫ್..!

ಹಾಟ್ ಸ್ಮಾರ್ಟ್ ವಾಚ್‍ನಲ್ಲಿ ಟಚ್ ಸ್ಕ್ರೀನ್ ಇರುತ್ತದೆ. ಇದರ ಮೂಲಕ ಎಸ್‍ಎಂಎಸ್, ಇ-ಮೇಲ್ ಮೆಸೇಜ್‍ಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಸೋಷಿಯಲ್ ಮೀಡಿಯಾ ಮೂಲಕ ಸಂವಾದ ನಡೆಸಲೂ ಸಾಧ್ಯವಿದೆ. ಸೋಷಿಯಲ್ ಮೀಡಿಯಾದ ನೋಟಿಫಿಕೇಷನ್‍ಗಳನ್ನು ವೀಕ್ಷಿಸಬಹುದು. ಸ್ನೇಹಿತರು, ಗೆಳೆಯರೊಂದಿಗೆ ಅಪ್‍ಡೇಟ್ ಆಗಿರಬಹುದು. ಇನ್ನೊಂದು ಮಹತ್ವದ ವಿಶೇಷತೆ ಎಂದರೆ, ಕೈ ತೊಳೆದುಕೊಳ್ಳುವಾಗ, ಮಳೆಯಲ್ಲಿ ನೆನೆದಾದ ಕೈಗಡಿಯಾರಕ್ಕೆ ಹಾನಿ ಆಗದು. ಇದಕ್ಕೆ ಕಾರಣ, ಜಲನಿರೋಧಕ. ಮಳೆಯಲ್ಲಿ ಎಷ್ಟು ತೊಯ್ದರೂ ಏನೂ ಆಗುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೇಹದ ಸ್ವಾಸ್ಥೃದ ಮೇಲೆ ಈ ವಾಚ್ ನಿಗಾ ಇಡುತ್ತದೆ. ಕ್ಯಾಲರಿಯನ್ನು ಲೆಕ್ಕ ಹಾಕಿ ತಿಳಿಸುತ್ತದೆ. ಇದರಿಂದ ಆರೋಗ್ಯಕರ ಜೀವನವನ್ನು ರೂಢಿಸಿಕೊಳ್ಳಲು ಸಹಾಯಕವಾಗುತ್ತದೆ. ಈ ಹಾಟ್ ಸ್ಮಾರ್ಟ್ ವಾಚ್ ಕಾರ್ಯ ನಿರ್ವಹಿಸಲು ಬ್ಲೂಟೂತ್‍ನ ಅಗತ್ಯವಿದೆ.