ಸ್ಕೂಲ್ ಬ್ಯಾಗ್ ಭಾರ ಇಳಿಸಲು ಸರಳ ಉಪಾಯ..

ಟೀಮ್ ವೈ.ಎಸ್.ಕನ್ನಡ 

0

ಸ್ಕೂಲ್ ಬ್ಯಾಗ್ ಅನ್ನೋದು ಮಕ್ಕಳಿಗೆ ದೊಡ್ಡ ಹೊರೆ. ಕೆಜಿಗಟ್ಟಲೆ ಪುಸ್ತಕ ಹೊತ್ತು ಪುಟಾಣಿಗಳು ಸುಸ್ತಾಗ್ತಾರೆ. ಆದ್ರೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿರೋ ವಿದ್ಯಾನಿಕೇತನ ಶಾಲೆಯ ಮಕ್ಕಳಿಗೆ ಸ್ಕೂಲ್ ಬ್ಯಾಗ್​ ಹೊರೆ ಇಳಿದಿದೆ. ಶಾಲೆಯಲ್ಲೇ ಪುಸ್ತಕ, ನೋಟ್ ಬುಕ್ ಇವನ್ನೆಲ್ಲ ಇಟ್ಟುಕೊಳ್ಳಲು ಲಾಕರ್ ಇದೆ. ಈ ಪರಿವರ್ತನೆಗೆ ಕಾರಣ ವಿದ್ಯಾನಿಕೇತನ ಶಾಲೆಯ ಇಬ್ಬರು 12 ವರ್ಷದ ವಿದ್ಯಾರ್ಥಿಗಳು ನಡೆಸಿದ ಪತ್ರಿಕಾಗೋಷ್ಠಿ. ರಾಶಿ ರಾಶಿ ಪುಸ್ತಕಗಳನ್ನು ಹೊತ್ತು ಶಾಲೆಗೆ ಬರಲು ಏನೆಲ್ಲಾ ಸಮಸ್ಯೆ ಆಗುತ್ತಿದೆ ಅನ್ನೋದನ್ನು ಆ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಹೇಳಿದ್ದರು.

'' ಪ್ರತಿದಿನ ನಾವು 8 ವಿಷಯಗಳಿಗೆ ಸಂಬಂಧಿಸಿದ ಕನಿಷ್ಠ 16 ಪುಸ್ತಕಗಳನ್ನು ಶಾಲೆಗೆ ಹೊತ್ತು ತರುತ್ತೇವೆ. ಕೆಲವೊಮ್ಮೆ ಅವುಗಳ ಸಂಖ್ಯೆ 18-20 ಆಗಿದ್ದೂ ಇದೆ. ಆ ದಿನ ಯಾವ ತರಗತಿ ನಡೆಯುತ್ತೆ ಅನ್ನೋದರ ಮೇಲೆ ಅದು ಆಧಾರಿತವಾಗಿದೆ. ನಮ್ಮ ಸ್ಕೂಲ್ ಬ್ಯಾಗ್ 5ರಿಂದ 7 ಕೆಜಿ ಭಾರವಿರುತ್ತದೆ. 3ನೇ ಮಹಡಿಯಲ್ಲಿರುವ ನಮ್ಮ ಕ್ಲಾಸ್ ರೂಮ್​ವರೆಗೆ ಅದನ್ನು ಹೊತ್ತುಕೊಂಡು ಹೋಗುವುದು ನಿಜಕ್ಕೂ ಕಷ್ಟದ ಕೆಲಸ'' ಎನ್ನುತ್ತಾರೆ ವಿದ್ಯಾರ್ಥಿಗಳು. ಹೀಗೆ ಬಹಿರಂಗವಾಗಿ ಸಮಸ್ಯೆ ಬಿಚ್ಚಿಟ್ಟರೆ ಶಿಕ್ಷಕರು ನಿಮ್ಮ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬಹುದಲ್ಲಾ ಅನ್ನೋ ಪ್ರಶ್ನೆಗೂ ಮಕ್ಕಳು ಶಾಂತವಾಗಿ ಉತ್ತರಿಸಿದ್ರು. ಇದು ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆ, ಇದಕ್ಕೆ ಪರಿಹಾರ ಬೇಕು ಅನ್ನೋದು ಅವರ ಬೇಡಿಕೆ.

ಮಕ್ಕಳು ಅಧಿಕ ಭಾರದ ಬ್ಯಾಗ್​ಗಳನ್ನು ಹೊತ್ತು ಸ್ಕೂಲಿಗೆ ಬರುತ್ತಿದ್ದಾರೆ ಅನ್ನೋ ವಿಚಾರ ಮಹಾರಾಷ್ಟ್ರ ಸರ್ಕಾರದ ಗಮನಕ್ಕೂ ಬಂದಿತ್ತು. ಮಕ್ಕಳ ಪಾಠಿಚೀಲದ ತೂಕ ಕಡಿಮೆ ಮಾಡಿ ಅಂತಾ ಸರ್ಕಾರ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕೂಡ ಹೊರಡಿಸಿತ್ತು. ಬಾಂಬೆ ಹೈಕೋರ್ಟ್ ನಿರ್ದೇಶನದಂತೆ ಈ ಸುತ್ತೋಲೆಯಲ್ಲಿರುವ ಆದೇಶವನ್ನು ಪಾಲಿಸುವಂತೆ ರಾಜ್ಯದ ಎಲ್ಲ ಶಾಲೆಗಳ ಪ್ರಾಂಶುಪಾಲರು ಮತ್ತು ಶಾಲಾ ಆಡಳಿತ ಮಂಡಳಿಗೆ ಸರ್ಕಾರ ಸೂಚಿಸಿತ್ತು.

ವಿದ್ಯಾನಿಕೇತನ ಶಾಲೆಯ ಮಕ್ಕಳು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ತಮ್ಮ ಸಮಸ್ಯೆ ಹೇಳಿಕೊಂಡ ಎರಡೇ ದಿನಗಳಲ್ಲಿ ಶಾಲೆಯಲ್ಲೇ ಪುಸ್ತಕಗಳನ್ನಿಡಲು ಲಾಕರ್ ಅಳವಡಿಸಲಾಗಿದೆ. ತಮ್ಮ ಪಠ್ಯ-ಪುಸ್ತಕ, ಪೆನ್, ಪೆನ್ಸಿಲ್ ಸೇರಿ ಇತರೆ ವಸ್ತುಗಳನ್ನೆಲ್ಲ ವಿದ್ಯಾರ್ಥಿಗಳು ಲಾಕರ್​ನಲ್ಲಿ ಇಟ್ಟುಕೊಳ್ಳಬಹುದು. ಈ ಸೌಲಭ್ಯ ಕೇವಲ ಒಂದು ಶಾಲೆಗೆ ಮಾತ್ರ ಸೀಮಿತವಾಗಬಾರದು, ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಅನ್ನೋದು ಈ ವಿದ್ಯಾರ್ಥಿಗಳ ಆಶಯ. ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಮಾತನಾಡಿ, ದೇಶದ ಎಲ್ಲ ಶಾಲೆಗಳಲ್ಲೂ ಲಾಕರ್ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಲು ವಿದ್ಯಾನಿಕೇತನ ಸ್ಕೂಲ್ ಮಕ್ಕಳು ಮುಂದಾಗಿದ್ದಾರೆ. ಈ ಧನಾತ್ಮಕ ಬದಲಾವಣೆಯನ್ನು ತರಲು ವಿದ್ಯಾರ್ಥಿಗಳು ಪೋಷಕರ ಸಹಕಾರವನ್ನೂ ಕೋರಿದ್ದಾರೆ. ಎಲ್ಲ ಪೋಷಕರು ತಮ್ಮ ವೆಬ್​ಸೈಟ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮಕ್ಕಳನ್ನು ಬೆಂಬಲಿಸಿ ಅಂತಾ ಕೋರಿದ್ದಾರೆ.

ಇದನ್ನೂ ಓದಿ...

ಸಿನೆಮಾ ನೋಡೋದಿಕ್ಕೆ ಟೈಮ್​ ಇಲ್ಲ- ಕಿರು ಚಿತ್ರಗಳ ಬಗ್ಗೆ ಬೇಜಾರಿಲ್ಲ..!

ಕ್ಯಾನ್ಸರ್ ಪೀಡಿತ ಮಗುವಿಗಾಗಿ ಒಲಿಂಪಿಕ್ಸ್ ಪದಕ ಮಾರಿದ ಕ್ರೀಡಾಪಟು..

Related Stories

Stories by YourStory Kannada