ರುಚಿ-ಶುಚಿಗೆ ಮತ್ತೊಂದು ಹೆಸರು `ಕೆಫೆ ಜೇಡ್'- ಭೋಜನ ಪ್ರಿಯರ ಹಾಟ್ ಫೇವರಿಟ್

ಟೀಮ್​​ ವೈ.ಎಸ್​​.

0

ಸದ್ಯ ಆಹಾರ ಉದ್ಯಮ ಉತ್ತುಂಗದಲ್ಲಿದೆ. ಆಹಾರ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಅದೆಷ್ಟೋ ಕಂಪನಿಗಳು ಬಗೆ ಬಗೆಯ ಆಫರ್‍ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಆದ್ರೆ ಚಂಡೀಗಢದಲ್ಲಿರೋ ಚೈನೀಸ್ ಫುಡ್ ಪಾರ್ಲರ್ `ಕೆಫೆ ಜೇಡ್' ಅಂತೂ ತಿಂಡಿಪ್ರಿಯರಿಗೆ ಮೋಡಿ ಮಾಡಿದೆ. ಡೋರ್ ಡೆಲಿವರಿ ಹಾಗೂ ಟೇಕ್ ಅವೇ ಸಿಸ್ಟಮ್ ಕೂಡ ಈ ರೆಸ್ಟೋರೆಂಟ್‍ನಲ್ಲಿದೆ. ಬರೀ ಚಂಡೀಗಢದಲ್ಲಿ ಮಾತ್ರವಲ್ಲ ನಗರದ ಹೊರವಲಯದಲ್ಲಿರೋ ಪಂಚ್​ಕುಲಾ, ಮೊಹಾಲಿ, ಜಿರಾಕ್‍ಪುರ ಮತ್ತು ಕಲ್ಕಾದಿಂದಲೂ ಜನರು ಬರ್ತಾರೆ. ಕೆಫೆ ಜೇಡ್‍ನಲ್ಲೇ ತಿನ್ನಬೇಕು ಅನ್ನೋ ಆಸೆಯಿಂದ ಬರುವ ಗ್ರಾಹಕರ ಸಂಖ್ಯೆಯೇ ಹೆಚ್ಚು. ಚೈನೀಸ್ ಹಾಗೂ ಥಾಯ್ ಫುಡ್ ಜೊತೆಗೆ ಕೊಡುವ ಸಾಸ್ ಸಲಾಡ್ ಅಂತೂ ಎಲ್ಲರ ಫೇವರಿಟ್. ತೆಂಗಿನಕಾಯಿ, ಹಾಲು, ಸಕ್ಕರೆ ಮತ್ತು ಅಂಟಿಲ್ಲದ ಚೈನೀಸ್ ಮತ್ತು ಥಾಯ್ ತಿನಿಸುಗಳನ್ನು ಮಾಡುವ ಏಕೈಕ ರೆಸ್ಟೋರೆಂಟ್ ಇದು. ಕಡಿಮೆ ಕ್ಯಾಲೋರಿಯ ತಿನಿಸುಗಳನ್ನು ಮಾಡೋದ್ರಿಂದ ಲಘು ಆಹಾರವನ್ನು ಇಷ್ಟಪಡುವ ಗ್ರಾಹಕರು ಇಲ್ಲಿಗೆ ಖುಷಿ ಖುಷಿಯಾಗಿ ಬರ್ತಾರೆ. ಚಂಡೀಗಢ ಮತ್ತು ಮೊಹಾಲಿಯಲ್ಲಿ ವಾಸವಾಗಿರುವವರು ತಿನಿಸುಗಳನ್ನು ಹೆಚ್ಚಾಗಿ ಕೆಫೆ ಜೇಡ್‍ನಿಂದ ಮನೆಗೇ ತರಿಸಿಕೊಳ್ತಾರೆ.

ದಿನಪತ್ರಿಕೆಯೊಂದರಲ್ಲಿ ಮಾರುಕಟ್ಟೆ ನಿರ್ದೇಶಕರಾಗಿದ್ದ ಪಿ.ಕೆ.ಖುರಾನಾ ಕೆಫೆ ಜೇಡ್‍ನ ಸಂಸ್ಥಾಪಕರು. 1999ರಲ್ಲಿ ತಮ್ಮ ಕರ್ತವ್ಯಕ್ಕೆ ರಾಜೀನಾಮೆ ನೀಡಿ ಪಿಆರ್ ಏಜೆನ್ಸಿಯೊಂದನ್ನ ಆರಂಭಿಸಿದ್ರು. ಖುರಾನಾ ಅವರಿಗೆ ಚೈನೀಸ್ ಮತ್ತು ಥಾಯ್ ಫುಡ್ ಅಂದ್ರೆ ಪಂಚಪ್ರಾಣ. ಆರೋಗ್ಯಕರ ಚೈನೀಸ್ ಫುಡ್ ಮೂಲಕವೇ ಗ್ರಾಹಕರ ಮನಗೆಲ್ಲಲು ಅವರು ಮುಂದಾದ್ರು. ಇದರ ಫಲವೇ ಕೆಫೆ ಜೇಡ್ ಉದಯ. ತಮ್ಮ ರೆಸ್ಟೋರೆಂಟ್‍ನಲ್ಲಿ ಆಹಾರದ ಗುಣಮಟ್ಟ, ಪ್ರಮಾಣ , ರುಚಿ ಹಾಗೂ ಸ್ವಚ್ಛತೆ ಬಗ್ಗೆ ಅವರು ಗಮನಹರಿಸಿದ್ರು. ಖುದ್ದು ಖುರಾನಾ ಅವರೇ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಿದ್ರು. ಸಿಬ್ಬಂದಿಗೆ ತರಬೇತಿ ನೀಡುವುದರ ಜೊತೆಗೆ ಆನ್‍ಲೈನ್ ಹಾಗೂ ಆಫ್‍ಲೈನ್ ಮಾರ್ಕೆಟಿಂಗನ್ನೂ ಶುರು ಮಾಡಿದ್ರಿಂದ ಕೆಫೆ ಜೇಡ್ ಭರ್ಜರಿ ಲಾಭ ಗಳಿಸಲಾರಂಭಿಸಿತ್ತು.

ಸಿಬ್ಬಂದಿ ಕೂಡ ಎಷ್ಟು ನಿಪುಣರಿದ್ದಾರೆ ಅಂದ್ರೆ ಈಗ ರೆಸ್ಟೋರೆಂಟ್‍ನಲ್ಲಿ ಖುರಾನಾ ಅವರೇ ಕುಳಿತು ಉಸ್ತುವಾರಿ ನೋಡಿಕೊಳ್ಳಬೇಕಾದ ಅಗತ್ಯವೇ ಇಲ್ಲ. ವಾದ್ಯಗಳ ಜೊತೆಗೆ ಭೂರಿ ಭೋಜನ ಸವಿಯುವ ಅವಕಾಶ ಗ್ರಾಹಕರಿಗೆ ಲಭಿಸುತ್ತಿದೆ. ಜನರು ತಮ್ಮ ರೆಸ್ಟೋರೆಂಟ್‍ನ ತಿನಿಸುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಾಗಲೆಲ್ಲ ಖುರಾನಾ ಸಖತ್ ಥ್ರಿಲ್ ಆಗ್ತಾರಂತೆ. ಗ್ರಾಹಕರಿಗೆ ಆನ್‍ಲೈನ್‍ನಲ್ಲೇ ಆರ್ಡರ್ ಮಾಡಲು ನೆರವಾಗುವಂಥ ಇ-ಕಾಮರ್ಸ್ ವೆಬ್‍ಸೈಟ್ ಹಾಗೂ ಮೊಬೈಲ್ ಆ್ಯಪ್ ಒಂದನ್ನು ಶೀಘ್ರವೇ ಆರಂಭಿಸಲು ಖುರಾನಾ ಯೋಜನೆ ರೂಪಿಸಿದ್ದಾರೆ. ತಮ್ಮ ಹಣ ತಮಗೆ ಹಣ ಮಾಡಿಕೊಡ್ತಾ ಇದೆ, ಆದ್ರೆ ಅಲ್ಲಿ ಖುದ್ದಾಗಿ ತಾವೇ ಹಾಜರಿರಬೇಕೆಂದಿಲ್ಲ ಅನ್ನೋ ವಿಚಾರವೇ ಅವರಿಗೆ ಸಮಾಧಾನ ತಂದಿದೆ. ಅಷ್ಟೇ ಅಲ್ಲ ಇನ್ನಷ್ಟು ಕಡೆಗಳಲ್ಲಿ ಕೆಫೆ ಜೇಡ್‍ನ ಹೋಟೆಲ್‍ಗಳನ್ನು ತೆರೆಯಲು ಅವರ ಉತ್ಸುಕರಾಗಿದ್ದಾರೆ. ವ್ಯವಸ್ಥೆ, ಪ್ರಕ್ರಿಯೆ ಮತ್ತು ಮಾನವ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ಖುರಾನಾ ಅವರಿಗೆ ಗೊತ್ತು. ಹಳೆ ಶಾಲೆಯಲ್ಲಿ ಓದಿದವರಾದ್ರೂ ಹೊಸ ಐಡಿಯಾ, ಆಧುನಿಕ ತಂತ್ರಜ್ಞಾನ ಹಾಗೂ ಉದ್ಯಮಕ್ಕೆ ಅವರು ತೆರೆದುಕೊಂಡಿದ್ದಾರೆ.

ಜನರು ಹಣ ಮಾಡುವ ಉದ್ದೇಶದಿಂದ ಉದ್ಯಮ ಆರಂಭಿಸ್ತಾರೆ. ಕೈತುಂಬಾ ಸಂಪಾದಿಸಿದ ಮೇಲೆ ಅದಕ್ಕೆ ಗುಡ್ ಬೈ ಹೇಳುವವರೂ ಇರ್ತಾರೆ. ಆದ್ರೆ ತಾವು ಅಂಥವರ ಸಾಲಿಗೆ ಸೇರಿಲ್ಲ ಎನ್ನುತ್ತಾರೆ ಖುರಾನಾ. ಹಸುವಿನ ಹಾಲು ಕರೆದು ನಂತರ ಅದನ್ನು ಕಸಾಯಿಖಾನೆಗೆ ದೂಡುವ ಮನಸ್ಥಿತಿ ಅವರದಲ್ಲ. ಹಸು ಚೆನ್ನಾಗಿ ಹಾಲು ಕೊಡುವಂತೆ ಅದನ್ನು ಪ್ರೀತಿಯಿಂದ ಪೋಷಿಸುವ ಮನಸ್ಥಿತಿ ಅವರದ್ದು. ಪ್ರತಿದಿನವೂ ಮೊಟ್ಟೆ ಇಡುವ ಕೋಳಿಯನ್ನೇ ತಿನ್ನೋದು ಯಾಕೆ ಅನ್ನೋದು ಅವರ ಮಾರ್ಮಿಕ ಪ್ರಶ್ನೆ. ಕೆಲ ಉದ್ಯಮಗಳು ಲಾಭದ ಮೇಲೆ ಬೆಳೆಯುತ್ತಿಲ್ಲ, ಹೂಡಿಕೆಯ ಮೇಲೆ ಬೆಳೆಯುತ್ತಿವೆ ಅನ್ನೋದು ಖುರಾನಾ ಅವರ ಅಭಿಪ್ರಾಯ. ಆರಂಭಿಕ ಹೂಡಿಕೆದಾರರೇನೋ ಹಣ ಮಾಡಿಕೊಳ್ಳುತ್ತಾರೆ, ಆದ್ರೆ ಇತರರಿಗೆ ಕತ್ತರಿಸಿದ ಅನುಭವವಾಗೋದು ಗ್ಯಾರಂಟಿ ಎನ್ನುತ್ತಾರೆ ಅವರು. ಇದು ಆರೋಗ್ಯಕರ ಟ್ರೆಂಡ್ ಅಲ್ಲ, ಇಂತಹ ಉದ್ಯಮಗಳು ಋಣಾತ್ಮಕ ಪರಿಣಾಮ ಬೀರುತ್ತವೆ. ಜೊತೆಗೆ ಭವಿಷ್ಯದ ಹೂಡಿಕೆದಾರರನ್ನು ಓಡಿಸಿ ಹಾಕಿದ್ರೂ ಅಚ್ಚರಿಯಿಲ್ಲ ಅಂತಾ ಖುರಾನಾ ಕಳವಳ ವ್ಯಕ್ತಡಿಸ್ತಾರೆ. ಲಾಭವನ್ನು ನಿರ್ಲಕ್ಷಿಸಿದ್ರೆ ಯಶಸ್ಸು ತಾನಾಗಿಯೇ ಬರುತ್ತದೆ ಅನ್ನೋದು ಖುರಾನಾ ಅವರ ಅನುಭವದ ಮಾತು. ಈ ಬಗ್ಗೆ ಹೂಡಿಕೆದಾರರು ಹಾಗೂ ಉದ್ಯಮಿಗಳು ಚಿತ್ತ ಹರಿಸಬೇಕು ಅನ್ನೋದು ಅವರ ಮನವಿ.

ಇತ್ತೀಚಿನ ದಿನಗಳಲ್ಲಿ ವಿದೇಶಿ ಆಹಾರ ವ್ಯವಸ್ಥೆಗೆ ಮಾರು ಹೋಗುವವರೇ ಹೆಚ್ಚು. ಅದ್ರಲ್ಲೂ ಚೈನೀಸ್ ಹಾಗೂ ಥಾಯ್ ಫುಡ್ ಅಂದ್ರೆ ತಿಂಡಿಪೋತರ ಬಾಯಲ್ಲಿ ನೀರೂರುತ್ತೆ. ಆದ್ರೆ ಚೆನ್ನಾಗಿ ತಿಂದ್ಬಿಟ್ರೆ ಎಷ್ಟು ಕ್ಯಾಲೋರಿ ಜಾಸ್ತಿಯಾಗುತ್ತೋ ಏನೋ? ಬೊಜ್ಜು ಬಂದ್ರೆ ಏನ್ಮಾಡೋದು ಅನ್ನೋ ಆತಂಕವೂ ಇರುತ್ತೆ. ಆದ್ರೆ ಕೆಫೆ ಜೇಡ್‍ಗೆ ಬಂದ್ರೆ ನಿಮಗೆ ತಲೆನೋವೇ ಇಲ್ಲ. ನಿಮಗಿಷ್ಟವಾದ ಚೈನೀಸ್ ಮತ್ತು ಥಾಯ್ ಫುಡ್‍ನ್ನ ಚಪ್ಪರಿಸಬಹುದು. ಕಡಿಮೆ ಕ್ಯಾಲೋರಿ ಇರೋದ್ರಿಂದ ಜಂಕ್ ಫುಡ್ ಅನ್ನೋ ಆತಂಕ ಕೂಡ ಇರುವುದಿಲ್ಲ. ರುಚಿ - ಶುಚಿ ಬಗೆಗಂತೂ ಎರಡು ಮಾತಿಲ್ಲ. ಹಾಗಿದ್ರೆ ಇನ್ಯಾಕೆ ತಡ ನೀವೂ ಒಮ್ಮೆ ಕೆಫೆ ಜೇಡ್‍ಗೆ ವಿಸಿಟ್ ಮಾಡಿ, ನಿಮಗಿಷ್ಟವಾದ ತಿನಿಸನ್ನು ಟೇಸ್ಟ್ ಮಾಡಿ.

Related Stories

Stories by YourStory Kannada