ಪದ್ದತಿಯೂ ಹೌದು ವ್ಯಾಪಾರವೂ ಹೌದು

ಆರಾಭಿ ಭಟ್ಟಾಚಾರ್ಯ

0

ಸಾಮಾನ್ಯವಾಗಿ ಯಾರದ್ದೇ ಮನೆಯಲ್ಲಿ ಮಕ್ಕಳು ಹುಟ್ಟಿದ್ರು ಅಂದ್ರೆ ಸಂಭ್ರಮ ಇದ್ದೇ ಇರುತ್ತೆ. ಜಗತ್ತು ಅದೆಷ್ಟೇ ಮುಂದುವರೆದ್ರು ಕೂಡ ಈಗಲೂ ಅದೆಷ್ಟೋ ಜನರ ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದ್ರೆ ಮೂಗು ಮುರಿಯುವವರು ಇದ್ದಾರೆ. ಆದ್ರೆ ಇಲ್ಲೋಂದು ಹಳ್ಳಿಯಲ್ಲಿ ಹೆಣ್ಣುಮಕ್ಕಳು ಹುಟ್ಟಿದ್ರು ಅಂದ್ರೆ ಹಬ್ಬದ ಸಂಭ್ರಮ ಮನೆ ಮಾಡುತ್ತೆ.

ಹೆಣ್ಣು ಹುಟ್ಟುದ್ರೆ ಇಲ್ಲಿ ವನಮಹೋತ್ಸವ

ರಾಜಸ್ಥಾನದ ಪಿಪ್ಲಂತ್ರಿ ಅನ್ನೋ ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದ್ರು ಅಂದ್ರೆ ವನಮಹೋತ್ಸವ. ಊರ ಹಬ್ಬದಂತೆ ಸಂಭ್ರಮಿಸುತ್ತಾರೆ. ಅಷ್ಟೇ ಅಲ್ಲದೆ ಪ್ರತಿ ಹೆಣ್ಣು ಮಕ್ಕಳು ಹುಟ್ಟಿದಾಗಲೂ 111 ಗಿಡವನ್ನ ನೆಡುತ್ತಾರೆ ಹೀಗೆ ನೆಡುತ್ತಾ ಬಂದು ಇಂದಿಗೆ ಈ ಗ್ರಾಮದಲ್ಲಿ 25 ಮಿಲಿಯನ್ ಗೂ ಹೆಚ್ಚು ಮರಗಳಿವೆ ಅನ್ನೋದು ಖುಷಿಯ ವಿಚಾರ. ಅದ್ರಲ್ಲೂ ಇಲ್ಲಿಯ ಜನ ಪ್ರಯೋಜನಕ್ಕೆ ಬರದೇ ಇರೋ ಮರಗಳನ್ನ ನೆಡೋದಿಲ್ಲ ಮನುಷ್ಯರಿಗೂ ಹಾಗೂ ಪಕ್ಷಿ -ಪ್ರಾಣಿಗಳಿಗೆ ಉಪಯೋಗವಾಗುವಂತಹ ಹಣ್ಣು ಹೂ ಬಿಡುವಂತ ಗಿಡಗಳನ್ನ ನೆಡುತ್ತಾರೆ.

ವನಮಹೋತ್ಸವದ ಜೊತೆಗೆ ದೇಣಿಗೆ ಸಂಗ್ರಹ

ಹೆಣ್ಣು ಮಗು ಹುಟ್ಟಿದ ತಕ್ಷಣ ಮರ ನೆಟ್ಟು ಸುಮ್ಮನಾಗದ ಇಲ್ಲಿಯ ಗ್ರಾಮನಿವಾಸಿಗಳು ಮಗುವಿಗಾಗಿ ದೇಣಿಗೆಯನ್ನ ಸಂಗ್ರಹ ಮಾಡುತ್ತಾರೆ. ಪ್ರತಿ ಮಗು ಹುಟ್ಟಿದಾಗ 21 ಸಾವಿರ ದೇಣಿಗೆಯನ್ನ ಸಂಗ್ರಹ ಮಾಡುತ್ತಾರೆ. ಅನಂತರ ಮಗುವಿನ ಪೋಷಕರಿಂದ ಹತ್ತು ಸಾವಿರ ಹಣವನ್ನ ಸಂಗ್ರಹ ಮಾಡುತ್ತಾರೆ. ಸಂಗ್ರಹ ಮಾಡಿದ ಎಲ್ಲಾ ಹಣವನ್ನ ಬ್ಯಾಂಕ್ ನಲ್ಲಿ ಡೆಪೋಸಿಟ್ ಮಾಡಿ 20 ವರ್ಷದ ನಂತ್ರ ಅದನ್ನ ಹಿಂಪಡೆಯಲಾಗುತ್ತೆ. ಇನ್ನೂ ಠೇವಣಿ ಇಟ್ಟಿರೋ ಹಣದಲ್ಲಿ ಬರೋ ಬಡ್ಡಿಯಿಂದ ಮಗುವಿನ ಶಿಕ್ಷಣಕ್ಕಾಗಿ ಉಪಯೋಗಿಸಿಕೊಳ್ಳಲಾಗುತ್ತೆ.

ಮಗುವಿನೊಂದಿಗೆ ಕರಾರು ಪತ್ರಕ್ಕೂ ಸಹಿ

ಹೆಣ್ಣು ಮಗು ಹುಟ್ಟಿದ ತಕ್ಷಣ ಇಲ್ಲಿಯ ಜನರು ಮಗುವಿನ ಪೋಷಕರೊಂದಿಗೆ ಮಗುವಿಗೆ 20 ವರ್ಷ ತುಂಬುವವರೆಗೂ ವಿವಾಹ ಮಾಡುವುದಿಲ್ಲ ಅಂತ ಕರಾರು ಬರೆಸಿಕೊಳ್ಳುತ್ತಾರೆ. ಈ ಮೂಲಕ ಬಾಲ್ಯವಿವಾಹ ಕಡಿವಾಣ ಹಾಕಲಾಗುತ್ತೆ. ಇದರ ಜೊತೆಗೆ ಮಗುವಿಗೆ ಸರಿಯಾದ ಶಿಕ್ಷಣ ಕೊಡುವುದಾಗಿಯೂ ಕರಾರಿನಲ್ಲಿ ಬರೆಸಿಕೊಳ್ಳಲಾಗುತ್ತೆ. ಇನ್ನೂ ಹೆಣ್ಣು ಮಗು ಹುಟ್ಟಿದಾಗ ನೆಟ್ಟಿರೋ ಸಸಿಗಳನ್ನೂ ಕೂಡ ಸರಿಯಾದ ರೀತಿಯಲ್ಲಿ ಪೋಷಣೆ ಮಾಡುವುಗಾಗಿ ಸಹಿ ಮಾಡಿಸಿಕೊಳ್ಳಲಾಗುತ್ತೆ. 

ಪದ್ದತಿ ಜೊತೆಯಲ್ಲೇ ವ್ಯಾಪಾರ

ಇಲ್ಲಿಯ ಜನರು ಭಾವನೆಗಳಿಗೆ ಅದೆಷ್ಟರ ಮಟ್ಟಿಗೆ ಬೆಲೆ ಕೊಡುತ್ತಾರೆ ಅಂದ್ರೆ ಪಿಪ್ಲಂತ್ರಿ ºಗ್ರಾಮದ ಪ್ರತಿಯೊಬ್ಬರು ಒಂದೇ ಕುಟುಂಬದವ್ರಂತೆ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಪ್ರತಿ ಮಗುವಿಗೂ 111 ಗಿಡ ನೆಡುವ ಇವ್ರುಗಳು ಹೆಚ್ಚಾಗಿ ಲೋಳೆಸರ ಗಿಡವನ್ನ ನೆಡುತ್ತಾರೆ. ಈ ಗ್ರಾಮದಲ್ಲಿ ಮಿಲಿಯನ್ ಗಟ್ಟಲೆ ಲೋಳೆ ಸರವನ್ನ ನೆಟ್ಟಿರೋದ್ರಿಂದ ಅದರಿದ ಆಯುರ್ವೇದಿಕ್ ತೈಲಗಳನ್ನ ಮಾಡಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಸ್ವಂತ ಉದ್ದಿಮೆಯನ್ನೂ ಮಾಡುತ್ತಿದ್ದಾರೆ. ಇಂತಹ ವಿಭಿನ್ನ ಪ್ರಯತ್ನವನ್ನ ಎಲ್ಲರೂ ಮೆಚ್ಚಲೇ ಬೇಕಾದದ್ದು. ಇತ್ತ ಪದ್ದತಿಯೂ ಮುಂದುವರೆಯುತ್ತೆ ಅದರ ಜೊತೆಗೆ ವ್ಯಾಪಾರವೂ ನಡೆಯುತ್ತೆ. 

ಹೆಣ್ಣು ಮಗುವಿನ ಸಾವಿನಿಂದ ಶುರುವಾಯ್ತು ವಿಭಿನ್ನ ಪದ್ದತಿ

ಹೆಣ್ಣು ಮಗುವೊಂದು ಹುಟ್ಟಿದ ತಕ್ಷಣ ಗಿಡ ನೆಡೋ ಪದ್ದತಿ ಹಾಗೂ ದೇಣಿಗೆ ಸಂಗ್ರಹ ಮಾಡೋ ಪದ್ದತಿ ಪಿಪ್ಲಂತ್ರಿ ಗ್ರಾಮದ ಮಾಜಿ ನಾಯಕ ಶ್ಯಾಮ ಸುಂದರ್ ಅವ್ರಿಂದ ಪ್ರಾರಂಭ ಆಯ್ತು. ಶ್ಯಾಮ್ ಸುಂದರ್ ಅವ್ರಿಗೆ ಹುಟ್ಟಿದ ಹೆಣ್ಣು ಮಗುವೊಂದು ಅಕಾಲಿಕ ಮರಣ ಹೊಂದಿತ್ತು ಅದರಿಂದ ಬೇಸರಗೊಂಡ ಶ್ಯಾಮ್ ಇಂತದೊಂದು ಪದ್ದತಿಗೆ ನಾಂದಿ ಹಾಡಿದ್ರು. ಅಂದಿನಿಂದ ಇಲ್ಲಿಯ ಜನರು ಈ ಪದ್ದತಿಯನ್ನ ಪಾಲಿಸುತ್ತಾ ಬಂದಿದ್ದಾರೆ..ಇನ್ನೂ ವಿಶೇಷ ಅಂದ್ರೆ ಸುಮಾರು 9 ವರ್ಷಗಳಿಂದ ಈ ಗ್ರಾಮದಲ್ಲಿ ಯಾವುದೇ ರೀತಿ ಕ್ರೈಂ ನಡೆದಿಲ್ಲ. ಅಷ್ಟೇ ಅಲ್ಲದೆ ಈ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ನೀಡೋ ಗೌರವ ಮತ್ತೆಲ್ಲೂ ನೀಡಿಲ್ಲ ಅಂದ್ರೆ ತಪ್ಪಾಗಲಾರದು. ವ್ಯಾಪಾರ ಸಂಬಂಧ ಪದ್ದತಿ ಒಟ್ಟೋಟ್ಟಿಗೆ ನಡೆದುಕೊಂಡು ಹೋಗುತ್ತೀರೋದು ಒಂದು ಅಚ್ಚರಿಯ ವಿಚಾರವೇ ಸರಿ.


ಇದನ್ನು ಓದಿ...

1. ಸಿಟಿಯಲ್ಲೋಂದು ಹಳ್ಳಿ - ಬನ್ನಿ ಮಕ್ಕಳಿಗೆ ಪ್ರಾಣಿ ಪರಿಚಯ ಮಾಡಿಸಿ


2. ಆತ್ಮ ವಿಶ್ವಾಸವೇ ಈ ಕುಸುಮಗಳ ಬಂಡವಾಳ..

3.ಸ್ವಂತ ಅನುಭವವೇ ಉದ್ಯಮಕ್ಕೆ ದಾರಿ.. ಇದು ಪಿಕ್ ಮೈ ಲಾಂಡ್ರಿ ಸ್ಟೋರಿ.. !