ಎಚ್ಐವಿ ಪೀಡಿತ ಮಕ್ಕಳಿಗೆ ಹೊಸ ಬದುಕು – 22 ಪುಟಾಣಿಗಳನ್ನು ಪಡೆದಿದ್ದಾರೆ ದತ್ತು   

ಟೀಮ್ ವೈ.ಎಸ್.ಕನ್ನಡ 

1

ತಂದೆಯೇ ಮಕ್ಕಳ ಪಾಲಿಗೆ ಮೊದಲ ಹೀರೋ. ಈ ಕಥೆಯ ನಾಯಕ ಒಬ್ಬ ಸಾಮಾನ್ಯ ಮನುಷ್ಯ, ಆದ್ರೆ ಅವರು ಮಾಡಿರುವ ಅಸಾಮಾನ್ಯ ಕೆಲಸ ಯಾವ ಹೀರೋಗೂ ಕಡಿಮೆಯಿಲ್ಲ. ರಾಜಿಬ್ ಥಾಮಸ್ 24 ಮಕ್ಕಳ ತಂದೆ, ಈ ಪೈಕಿ 22 ಎಚ್ ಐ ವಿ ಪೀಡಿತ ಮಕ್ಕಳನ್ನು ಅವರು ದತ್ತು ತೆಗೆದುಕೊಂಡಿದ್ದಾರೆ. ಈ ಮಕ್ಕಳೆಲ್ಲ ಅವರನ್ನು ಪ್ರೀತಿಯಿಂದ ಪಾಪಾ ರೆಜಿ ಎಂದೇ ಕರೆಯುತ್ತಾರೆ. ಈ 22 ಮಕ್ಕಳನ್ನೂ ಅವರು ತಮ್ಮ ಸ್ವಂತ ಮಕ್ಕಳಂತೆಯೇ ಸಾಕಿ ಸಲಹುತ್ತಿದ್ದಾರೆ. ಮಾರಕ ಖಾಯಿಲೆ ಎಚ್ ಐ ವಿ ಈ ಪುಟಾಣಿಗಳನ್ನು ಆವರಿಸಿಕೊಂಡಿದೆ, ಹೆತ್ತವರು ಜೊತೆಗಿಲ್ಲ. ಅನಾಥರಾಗಿದ್ದ ಈ ಮಕ್ಕಳಿಗೆ ರಾಜಿಬ್ ಥಾಮಸ್ ಆಸರೆಯಾಗಿದ್ದಾರೆ. ದಶಕದ ಹಿಂದೆ ಇವರನ್ನೆಲ್ಲ ದತ್ತು ಪಡೆದಿದ್ದಾರೆ.

''ಒಮ್ಮೆ ನಾನು ಡಿವೈ ಪಾಟೀಲ್ ಆಸ್ಪತ್ರೆಯ ಎದುರಿನಿಂದ ಹಾದು ಹೋಗುತ್ತಿದ್ದೆ. ಬಾಲಕಿಯೊಬ್ಳು ಹೊರಗೆ ಮಲಗಿದ್ಲು, ಎಷ್ಟು ದುರ್ಬಲಳಾಗಿದ್ದಳೆಂದ್ರೆ ಮೂಳೆಗಳೆಲ್ಲಾ ಕಾಣುತ್ತಿದ್ವು. ಎಚ್ಐವಿ ಪೀಡಿತೆಯಾಗಿದ್ದ ಬಾಲಕಿ ಹೆತ್ತವರನ್ನು ಕಳೆದುಕೊಂಡಿದ್ಲು. ಏನಾದ್ರೂ ತಿಂತೀಯಾ ಅಂತ ನಾನು ಕೇಳಿದೆ, ಮಗು ನೂಡಲ್ಸ್ ಬೇಕು ಎಂದಿತ್ತು. ಆದ್ರೆ ಸುತ್ತಮುತ್ತ ಎಲ್ಲೂ ಹೋಟೆಲ್ ಇರಲಿಲ್ಲ. ನಾಳೆ ಬರುವುದಾಗಿ ಹೇಳಿ ಬಂದ ನನಗೆ ಆ ಘಟನೆ ಕಾಡುತ್ತಲೇ ಇತ್ತು. ಮತ್ತೆ ಆಸ್ಪತ್ರೆಗೆ ಭೇಟಿ ನೀಡಿದ ನಾನು ಇಂತಹ ಮಕ್ಕಳು ಇದ್ದಲ್ಲಿ ನನಗೆ ಮಾಹಿತಿ ನೀಡುವಂತೆ ಸೂಚಿಸಿದೆ'' ಅಂತಾ ಥಾಮಸ್ ವಿವರಿಸಿದ್ದಾರೆ.

ಈ ಘಟನೆ ಥಾಮಸ್ ಅವರನ್ನು ಬದಲಾಯಿಸಿತ್ತು. ಇಂತಹ ಮಕ್ಕಳನ್ನು ಹುಡುಕಿ ನೆರವಾಗುವುದೇ ಅವರ ಕಾಯಕವಾಯ್ತು. ಎಚ್ಐವಿ ಸ್ಪೆಷಲಿಸ್ಟ್ ದಿವ್ಯಾ ಮಿಥಾಲೆ ಅವರನ್ನು ಭೇಟಿ ಮಾಡಿದ ಥಾಮಸ್, ಮಕ್ಕಳನ್ನೆಲ್ಲ ದತ್ತು ಪಡೆಯಲು ಸಹಾಯ ಕೇಳಿದ್ರು. ಅವರ ನೆರವಿನಿಂದ ಎಚ್ ಐ ವಿ ಪೀಡಿತ ಇಬ್ಬರು ಮಕ್ಕಳನ್ನು ಥಾಮಸ್ ದತ್ತು ಪಡೆದ್ರು. ಆ ಸಮಯದಲ್ಲಿ ಮುಂಬೈನಲ್ಲಿ ವಾಸವಾಗಿದ್ದ ಥಾಮಸ್ ಅವರಿಗೆ ಇಬ್ಬರು ಸ್ವಂತ ಮಕ್ಕಳು ಸಹ ಇದ್ದಾರೆ. ಚಿಕ್ಕ ಮನೆಯಲ್ಲಿ ನಾಲ್ಕು ಮಕ್ಕಳಿಗೆ ಜಾಗ ಮಾಡಿಕೊಡೋದು ಕಷ್ಟವಾಗಿತ್ತು. ಕೊನೆಗೆ 2009ರಲ್ಲಿ ಥಾಮಸ್ ‘ಬ್ಲೆಸ್ ಫೌಂಡೇಶನ್’ ಅನ್ನು ಸ್ಥಾಪಿಸಿದ್ರು.

''2009ರಲ್ಲಿ ನವಿ ಮುಂಬೈನಲ್ಲಿ ನಾನು ಚಿಕ್ಕ ಮನೆಯನ್ನು ಬಾಡಿಗೆ ಪಡೆದಿದ್ದೆ. ದತ್ತು ಪಡೆದ ಇಬ್ಬರು ಮಕ್ಕಳು ಹಾಗೂ ನನ್ನ ಇಬ್ಬರು ಮಕ್ಕಳ ಜವಾಬ್ಧಾರಿ ಹೆಗಲೇರಿತ್ತು. ತುಂಬಾ ಕಷ್ಟದ ದಿನಗಳವು. ಒಂದೇ ಮ್ಯಾಟ್ರೆಸ್ ಮೇಲೆ ನಾಲ್ಕು ಮಕ್ಕಳೂ ಮಲಗಬೇಕಾದ ಸ್ಥಿತಿ ಇತ್ತು. ದಿನಕಳೆದಂತೆ ಜನರು ಹಾಸಿಗೆ, ಆಹಾರ ಧಾನ್ಯ, ಹಣವನ್ನೆಲ್ಲ ದಾನವಾಗಿ ಕೊಡಲಾರಂಭಿಸಿದ್ರು. ನನ್ನ ಕುಟುಂಬ ಕೂಡ 4ರಿಂದ 24 ಸದಸ್ಯರನ್ನೊಳಗೊಂಡು ವಿಸ್ತರಿಸಿತ್ತು'' ಎನ್ನುತ್ತಾರೆ ಥಾಮಸ್.

ತಮ್ಮ ಸ್ವಂತ ಮಕ್ಕಳು ಹಾಗೂ ಉಳಿದ 22 ಎಚ್ಐವಿ ಪೀಡಿತರ ಮಧ್ಯೆ ಥಾಮಸ್ ಮತ್ತವರ ಪತ್ನಿ ಯಾವುದೇ ಬೇಧಭಾವ ಮಾಡಿಲ್ಲ. ಪತ್ನಿ ಮಿನಿ ಕೂಡ ಥಾಮಸ್ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಎಲ್ಲರನ್ನೂ ಸಮಾನವಾಗಿ ಪ್ರೀತಿಸ್ತಾರೆ. ಎಚ್ಐವಿ ಬಗ್ಗೆ ಅರಿವಿದ್ದಿದ್ದರಿಂದ ತಮಗೂ ಆ ಖಾಯಿಲೆ ಬರಬಹುದು ಎಂಬ ಭಯವೆಲ್ಲ ಥಾಮಸ್ ಅವರಲ್ಲಿರಲಿಲ್ಲ. ತಮ್ಮ ಮಕ್ಕಳಿಗೂ ಅದರ ಬಗ್ಗೆ ಥಾಮಸ್ ತಿಳಿಹೇಳಿದ್ದಾರೆ.

ಥಾಮಸ್ 24 ಮಕ್ಕಳ ಪ್ರೀತಿಯ ತಂದೆ, ಅವರದ್ದು ಸುಖಿ ಕುಟುಂಬ. ಪ್ರೀತಿಯೇ ಅವರ ಬದುಕಿಗೆ ಆಧಾರ. ತಾವು ವಿಶೇಷವಾದುದ್ದನ್ನೇನೋ ಮಾಡುತ್ತಿದ್ದೇನೆ ಎಂಬ ಭಾವನೆ ಅವರಲ್ಲಿಲ್ಲ. ''ಎಚ್ಐವಿ ಪಾಸಿಟಿವ್ ಎಂದಾಕ್ಷಣ ಅವರ ಬದುಕು ಅಲ್ಲಿಗೇ ಮುಗಿಯಿತು ಎಂದರ್ಥವಲ್ಲ. ಸಾಮಾನ್ಯ ಮನುಷ್ಯ ಬದುಕಿದಷ್ಟೇ ದಿನ ಅವರು ಕೂಡ ಜೀವಿಸಬಹುದು. ಪ್ರೀತಿ ಹಾಗೂ ಕಾಳಜಿ ಇದ್ರೆ ಯಾವುದೂ ಅಸಾಧ್ಯವಲ್ಲ. ತಂದೆಯಾಗಿ ಅವರನ್ನು ರಕ್ಷಿಸುವುದು ನನ್ನ ಕರ್ತವ್ಯ'' ಅಂತಾ ಯಾವುದೇ ಹಮ್ಮು ಬಿಮ್ಮಿಲ್ಲದೆ ಥಾಮಸ್ ಹೇಳಿಕೊಳ್ತಾರೆ.

ಥಾಮಸ್ ನಿಜಕ್ಕೂ ಒಬ್ಬ ಅನನ್ಯ ವ್ಯಕ್ತಿ, ಅತ್ಯುತ್ತಮ ತಂದೆ. ಸಮಾಜಕ್ಕೆ ಏನಾದ್ರೂ ಕೊಡುಗೆ ಕೊಡಬೇಕೆಂಬ ಉದ್ದೇಶ ಹೊಂದಿರುವವರಿಗೆ ಥಾಮಸ್ ಮಾದರಿಯಾಗ್ತಾರೆ.   

ಇದನ್ನೂ ಓದಿ..

ಗರ್ಭಧಾರಣೆಯ ಪ್ರತಿ ಸಮಯದಲ್ಲೂ ನಿಮ್ಮ ಸಂಗಾತಿ ಈ ಆ್ಯಪ್

ಭಾರತೀಯ ಮೂಲದ ಬ್ರಿಟನ್ ಪೊಲೀಸ್ ಅಧಿಕಾರಿಗೆ ಶೌರ್ಯ ಪ್ರಶಸ್ತಿ..