ಫ್ಲಿಪ್ಕಾರ್ಟ್ ಭವಿಷ್ಯದ ಕನಸುಗಳು ಗೊತ್ತಾ ?

ಟೀಮ್​ ವೈ.ಎಸ್​. ಕನ್ನಡ

0


ಇತ್ತೀಚೆಗಷ್ಟೇ ಫ್ಲಿಪ್ಕಾರ್ಟ್, 50 ದಶಲಕ್ಷ ಗ್ರಾಹಕರ ಖರೀದಿ ಆಯ್ಕೆಗಳ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಮಾಹಿತಿಯಲ್ಲಿನ ಕೆಲವು ಅಂಶಗಳಂತೂ ಸಾಕಷ್ಟು ಕುತೂಹಲಕರಾಗಿಯಾಗಿವೆ. ಅದಕ್ಕಿಂತಲೂ ಕುತೂಹಲಕಾರಿಯಾಗಿರುವ ಅಂಶವೇನೆಂದರೆ, ಅದರ ಭವಿಷ್ಯದ ಕನಸುಗಳು. ಬೆಂಗಳೂರು ಮೂಲದ ಇ-ಕಾಮರ್ಸ್ ಸಂಸ್ಥೆ ಪ್ರಸಕ್ತ ಹಾಗೂ ಭವಿಷ್ಯದ ಕನಸುಗಳ ಬಗ್ಗೆ ಸುಳಿವು ಬಿಟ್ಟುಕೊಟ್ಟಿದೆ.

100 ಡಾಲರ್ ಸ್ಮಾರ್ಟ್ಫೋನ್​​ಗಳತ್ತ ಗಮನ

ಕಳೆದ 12-24 ತಿಂಗಳ ಅವಧಿಯಲ್ಲಿ ಫ್ಲಿಪ್ಕಾರ್ಟ್ ತನ್ನ ವೇದಿಕೆಯಲ್ಲಿ ಹಲವು ಹೊಸ ಉತ್ಪನ್ನಗಳನ್ನು ಸೇರಿಸಿಕೊಳ್ಳುವುದರಲ್ಲಿ ನಿರತವಾಗಿದೆ. ಈ ವೇದಿಕೆಯಲ್ಲಿ ಪ್ರಸಕ್ತ 70 ವಿಭಾಗಗಳನ್ನು ಹೊಂದಿದೆ. ಖರೀದಿಯ ಸಂಖ್ಯೆಗಳ ಆಧಾರದಲ್ಲಿ ಎಲೆಕ್ಟ್ಟಾನಿಕ್ ಉತ್ಪನ್ನಗಳು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿವೆ. ಮೊಬೈಲ್ ಮಾರಾಟ ಈಗಲೂ ಫ್ಲಿಪ್ಕಾರ್ಟ್​ನಲ್ಲಿ ಮಾರಾಟದ ಕಿಂಗ್ ಆಗಿದ್ದು, ಇ-ಕಾಮರ್ಸ್ ಕ್ಷೇತ್ರದಲ್ಲೂ ಆಗ್ರೇಸರನಾಗಿದೆ. ದೇಶದಲ್ಲಿ ಮಾರಾಟವಾಗುವ ಪ್ರತಿ 5 ಮೊಬೈಲ್​​ಗಳಲ್ಲಿ ಒಂದು ಮೊಬೈಲ್ ತನ್ನ ಮೂಲಕ ಮಾರಾಟವಾಗುತ್ತಿದೆ ಎಂದು ಫ್ಲಿಪ್ಕಾರ್ಟ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ.

ಫ್ಲಿಪ್ಕಾರ್ಟ್​ನಲ್ಲಿ ಮಾರಾಟವಾಗುವ ಎಲ್ಲಾ ಬ್ರ್ಯಾಂಡ್​ಗಳ ಪೈಕಿ ನಾಲ್ಕು – ಲೆನೆವೋ, ಮೋಟರೋಲಾ, ಸ್ಯಾಮ್ಸಂಗ್ ಮತ್ತು ಎಂಐ-ಕ್ಸಿಯಾಮಿ- ಮೊಬೈಲ್ ಬ್ರಾಂಡ್​ಗಳೇ ಆಗಿವೆ. ಮೊಬೈಲ್ ಮಾರಾಟದ ಸಾಮರ್ಥ್ಯದಿಂದಾಗಿ, ಫ್ಲಿಪ್ಕಾರ್ಟ್​ ಒಟ್ಟಾರೆ ಮಾರಾಟವೂ ವೃದ್ಧಿಯಾಗಿದೆ. ಈ ವೇದಿಕೆಯಲ್ಲಿ ಸ್ಮಾರ್ಟ್ಫೋನ್​​ಗಳು 7 ಸಾವಿರ ರೂಪಾಯಿಗಳಿಂದ 12 ಸಾವಿರ ರೂಪಾಯಿಗಳವರೆಗಿನ ರೇಂಜಿನಲ್ಲಿ ದೊರೆಯುತ್ತಿರುವುದರಿಂದ ಯುವ ಜನರು ಹೆಚ್ಚಾಗಿ ಮೊಬೈಲ್ ಖರೀದಿಗೆ ಫ್ಲಿಪ್ಕಾರ್ಟ್ ಅವಲಂಬಿಸಿದ್ದಾರೆ. ಹಾಗಿದ್ದರೂ ಕೂಡಾ, ಮೊಬೈಲ್ ಮಾರಾಟದಲ್ಲಿ ಲಾಭಾಂಶದ ಪ್ರಮಾಣ ಕಡಿಮೆ ಇರುವುದು ಫ್ಲಿಪ್ಕಾರ್ಟ್ ತಲೆನೋವಿಗೆ ಕಾರಣವಾಗಿತ್ತು. ಇದಕ್ಕಾಗಿ ಅದು, ಮೋಟರೋಲಾ ಹಾಗೂ ಎಂಐ ಜೊತೆಗೆ ಎಕ್ಸ್ಕ್ಲೂಸಿವ್ ಸಹಭಾಗಿತ್ವವನ್ನು ಮಾಡಿಕೊಂಡಿದ್ದು, ಲಾಭಾಂಶದ ವಿಚಾರದಲ್ಲಿ ಕೊರತೆ ನೀಗಿಸಿಕೊಂಡಿದೆ. ಈ ಪದ್ಧತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಫ್ಲಿಪ್ಕಾರ್ಟ್ ಮುಂದಾಗಿದೆ.

2016ರ ದೊಡ್ಡ ಕ್ರಾಂತಿ ಏನೆಂದರೆ, ಫೀಚರ್ ಫೋನ್ ಬಳಕೆದಾರರು, 100 ಡಾಲರ್​ಗಿಂತ ಕಡಿಮೆ ಇರುವ ಸ್ಮಾರ್ಟ್ಫೋನ್​​ಗಳತ್ತ ಮುಖ ಮಾಡಲಿದ್ದಾರೆ ಎನ್ನುತ್ತಾರೆ ಫ್ಲಿಪ್ಕಾರ್ಟ್​ನ ಮುಖ್ಯ ಬ್ಯುಸಿನೆಸ್ ಅಧಿಕಾರಿ, ಅಂಕಿತ್ ನಗೋರಿ.

ಹಾಗಿದ್ದರೆ, ಫ್ಲಿಪ್ಕಾರ್ಟ್ 100 ಡಾಲರ್ ಒಳಗಿನ ಸ್ಮಾರ್ಟ್ಫೋನ್ಗಳಿಗಾಗಿ ಬ್ರ್ಯಾಂಡ್ಗಳು ಅಥವಾ ಕಂಪನಿಗಳ ಜೊತೆ ಕೆಲಸ ಮಾಡಲಿದೆಯೇ ? ಯುವರ್ ಸ್ಟೋರಿಯ ಈ ಪ್ರಶ್ನೆಗೆ ಸಧ್ಯಕ್ಕೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗದು ಎನ್ನುತ್ತಿದ್ದಾರೆ ಅಂಕಿತ್. ಆದರೆ, ಈ ಕ್ಷೇತ್ರದಲ್ಲಿ ನಾವು ಪ್ರಮುಖ ಪಾತ್ರವಹಿಸಲಿದ್ದೇವೆ ಎನ್ನುತ್ತಾರವರು.

ಫೋನ್ ವಿಭಾಗದ ಮೇಲಿನ ಅವಲಂಬನೆ ತಗ್ಗಿಸುವುದು

ಮೊಬೈಲ್ ಮಾರಾಟವು ಅತಿ ದೊಡ್ಡ ವಿಭಾಗವಾಗಿರಬಹುದು. ಹಾಗೆಂದು, ಬೇರೆ ಉತ್ಪನ್ನಗಳ ಬಗ್ಗೆ ಫ್ಲಿಪ್ಕಾರ್ಟ್ ಗಮನಹರಿಸುತ್ತಿಲ್ಲ ಎಂದಲ್ಲ. ಈ ವರ್ಷ ಫ್ಲಿಪ್ಕಾರ್ಟ್ ಕಾರ್ ಬಿಡಿಭಾಗಗಳು ಹಾಗೂ ಪೀಠೋಪಕರಣಗಳ ವಿಭಾಗ ತೆರೆದಿದೆ. 2014ರಲ್ಲಿ ಮೈಂತ್ರವನ್ನು ಖರೀದಿಸಿದ ಬಳಿಕ ಫ್ಯಾಷನ್ನತ್ತವೂ ಹೆಚ್ಚಿನ ಗಮನ ಹರಿಸಿದೆ. ಇದರಿಂದ ಅವರಿಗೆ ನಿರೀಕ್ಷಿತ ಫಲಿತಾಂಶ ದೊರಕಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪನ್ನಗಳ ಬಳಿಕ 8 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಫ್ಲಿಪ್ಕಾರ್ಟ್​ನಲ್ಲಿ ಅತಿ ಹೆಚ್ಚು ಮಾರಾಟವಾಗುವುದೇ ಲೈಫ್ಸ್ಟೈಲ್ ಉತ್ಪನ್ನಗಳು, ಮಹಿಳೆಯರ ಉಡುಪುಗಳು ಮತ್ತು ಪುರುಷರ ಉಡುಪುಗಳು.

ಅಂದ ಹಾಗೆ, ಫ್ಲಿಪ್​ಕಾರ್ಟ್​ ಕಳೆದ ವರ್ಷ, ಮಹಿಳೆಯರ ಉಡುಪುಗಳಿಗಿಂತ ಪುರುಷರ ಉಡುಪುಗಳೇ ಹೆಚ್ಚು ಮಾರಾಟಗೊಂಡಿವೆ. ಫ್ಲಿಪ್​ಕಾರ್ಟ್​ನಲ್ಲಿ ಶೇಕಡಾ 70ರಷ್ಟು ಪುರುಷರ ಖಾತೆಗಳಿವೆ. ಶೇಕಡಾ 40ರಷ್ಟು ಉಡುಪುಗಳ ಮಾರಾಟ ಮಹಿಳೆಯರಿಗೆ ಸಂಬಂಧಿಸಿದ್ದಾಗಿದೆ. ಫ್ಯಾಷನ್ ಖರೀದಿಯಲ್ಲಿ ಸೀರೆಗಳಿಗೇ ಅಗ್ರಸ್ಥಾನ. ಈ ಕ್ಷೇತ್ರದಲ್ಲಿ ಪ್ರತಿತಿಂಗಳೂ ಶೇಕಡಾ 20ರಷ್ಟು ಪ್ರಗತಿಯಾಗುತ್ತಿದೆ. ಸೂರತ್ ಮೂಲದ ಮಾರಾಟಗಾರರು ಫ್ಲಿಪ್ಕಾರ್ಟ್ ಮೂಲಕ ಪ್ರತಿದಿನ ಕನಿಷ್ಟ 20 ಸಾವಿರ ಸೀರೆಗಳಿಗೆ ಬೇಡಿಕೆ ಪಡೆಯುತ್ತಿದ್ದಾರೆ. ಈ ವರ್ಷ, ಮಹಿಳಾ ಉಡುಪುಗಳು, ಪೀಠೋಪಕರಣಗಳು ಹಾಗೂ ದೊಡ್ಡ ಗೃಹೋಪಯೋಗಿ ವಸ್ತುಗಳ ಲಭ್ಯತೆ ಹೆಚ್ಚಲಿದೆ ಎನ್ನುವುದು ಅಂಕಿತ್ ಅವರ ನಿರೀಕ್ಷೆ. ಈ ಪೈಕಿ ಪೀಠೋಪಕರಣ ಕ್ಷೇತ್ರದ ಮೇಲೆ ಫ್ಲಿಪ್ಕಾರ್ಟ್ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಸರಬರಾಜು ಜಾಲವು ಸಿದ್ಧಗೊಂಡಿದ್ದು, ದೊಡ್ಡ ಉತ್ಪನ್ನಗಳನ್ನು ಡೆಲಿವರಿ ಮಾಡುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದೇವೆ. ಪೂರೈಕೆ ಜಾಲ ಮತ್ತು ಜೀವೀ ಸಂಸ್ಥೆಯ ಸಂಯೋಜನೆಯೊಂದಿಗೆ, ಈ ವರ್ಷ ಪೀಠೋಪಕರಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿದ್ದೇವೆ ಎನ್ನುತ್ತಾರೆ ಅಂಕಿತ್. ಕಳೆದ ಅಕ್ಟೋಬರ್​​ನಲ್ಲಷಟೇ ಫ್ಲಿಪ್ಕಾರ್ಟ್ ಪೀಠೋಪಕರಣ ದುರಸ್ಥಿ ಮತ್ತು ನಿರ್ವಹಣೆ ಕಂಪನಿ ಜೀವೀಯನ್ನು ಖರೀದಿಸಿತ್ತು.

ಮೈಂತ್ರಾದಂತೆಯೇ ಫ್ಲಿಪ್ಕಾರ್ಟ್ ಕೂಡಾ ಕೇವಲ ಮೊಬೈಲ್ ಆಪ್​​ ಆಧರಿತವಾಗಿ ಉಳಿಯಲಿದೆ. ವೈಬ್ಸೈಟ್ ಕ್ಲೋಸ್ ಆಗಲಿದೆ ಎನ್ನುವ ಊಹಾಪೋಹಗಳು ಇವೆ. ಈ ಮಧ್ಯೆಯೇ ನವೆಂಬರ್​​ನಲ್ಲಿ ಫ್ಲಿಪ್ಕಾರ್ಟ್ ಲೈಟ್ ಆರಂಭಿಸಲಾಗಿದೆ. ಇದು ಅತ್ಯಂತ ಚಿಕ್ಕದಾದ ಮೊಬೈಲ್ ಬ್ರೌಸರ್ ಆಗಿದ್ದು, ಌಪ್ನಂತಹದ್ದೇ ಅನುಭವ ನೀಡುತ್ತಿದೆ. ಫ್ಲಿಪ್ಕಾರ್ಟ್​ನ ಒಟ್ಟು ಖರೀದಿ ಮತ್ತು ವ್ಯವಹಾರದಲ್ಲಿ ಶೇಕಡಾ 75ರಷ್ಟು ಮೂಲಕವೇ ನಡೆಯುತ್ತಿದೆ. ಹೊಸ ಗ್ರಾಹಕರೂ ಆಪ್​​ ಮೂಲಕವೇ ಎಂಟ್ರಿ ಕೊಡುತ್ತಿದ್ದಾರೆ.

ಆದರೆ, ಸಂಸ್ಥೆಯ ಸ್ಮಾರ್ಟ್ಫೋನ್ ಮಾರಾಟ ಮುಖ್ಯಸ್ಥ ವಿಗ್ನೇಶ್ ರಾಮಕೃಷ್ಣನ್ ಆಸಕ್ತಿದಾಯಕ ವಿಚಾರ ಬಿಚ್ಚಿಡುತ್ತಾರೆ. ಮೊಬೈಲ್ ಆಪ್ ಬಳಕೆಯ ಪ್ರಮಾಣ ರಾತ್ರಿಯ ವೇಳೆ ಹೆಚ್ಚಾಗಿರುತ್ತದೆ. ಹಗಲಿನ ವೇಳೆ ವೆಬ್ಸೈಟ್ನಲ್ಲೇ ಜನ ಉತ್ಪನ್ನಗಳನ್ನು ವೀಕ್ಷಿಸುತ್ತಾರೆ. ಹೀಗಿರುವಾಗ, ಖರೀದಿ ಪ್ರಮಾಣ ಕಡಿಮೆಯಾದರೂ, ವೆಬ್ಸೈಟನ್ನು ಮುಚ್ಚುವ ಪ್ರಶ್ನೆ ಉದ್ಭವಿಸುವುದಿಲ್ಲ ಎನ್ನುತ್ತಾರೆ ಅವರು. ಆದರೆ ಹೆಚ್ಚಿನ ಗಮನವೆಲ್ಲಾ ಮೊಬೈಲ್ ಆಪ್​​ ಇರುತ್ತದೆ ಎನ್ನುತ್ತಾರೆ ವಿಗ್ನೇಶ್.

ಈಗ ಹೆಚ್ಚಿನ ಜನರು ಡೆಸ್ಕ್ಟಾಪ್ಗಳಿಗಿಂತ ಮೂರು ಪಟ್ಟು ಹೆಚ್ಚು ಮೊಬೈಲ್ ಅನ್ನು ಬಳಸುತ್ತಿದ್ದಾರೆ. ಡೆಸ್ಕ್ಟಾಪ್ ಮತ್ತು ಮೊಬೈಲ್ ಪ್ರಮಾಣ ಭಾರತದಲ್ಲಿ 20:80 ಇದೆ ಎನ್ನುತ್ತದೆ ಫ್ಲಿಪ್ಕಾರ್ಟ್ ವರದಿ. ಆಪ್​ನಲ್ಲಿ ಹೊಸ ಗ್ರಾಹಕರು ಸೇರ್ಪಡೆಗೊಳ್ಳುತ್ತಿದ್ದರು, ಡೆಸ್ಕ್ಟಾಪ್ ಬಳಕೆದಾರರೂ ಈಗ ಆ್ಯಪ್​ ಹೊರಳುತ್ತಿದ್ದಾರೆ.

ದೊಡ್ಡ ನಗರಗಳಿಗೇ ಆದ್ಯತೆ ! ಚಿಕ್ಕ ನಗರಗಳಿಗೂ ಗಮನ

ದೆಹಲಿ ದೊಡ್ಡ ನಗರವಾಗಿದ್ದರೂ, ದಕ್ಷಿಣದಲ್ಲೇ ಫ್ಲಿಪ್ಕಾರ್ಟ್ ದೊಡ್ಡ ಜಾಲವಿದೆ. ದೊಡ್ಡ ನಗರಗಳಿಗೆ ಹೋಲಿಸಿದರೆ, ತಮಿಳುನಾಡಿನ ಕೊಯಂಬತ್ತೂರಿನಿಂದ ಆರಂಭಿಸಿ ಪಶ್ಚಿಮ ಬಂಗಾಳದ ಮೇದಿನಿಪುರ್ ನಂತಹ ಚಿಕ್ಕ ನಗರಗಳಿಂದ ಹೆಚ್ಚಿನ ಆರ್ಡರ್ಗಳು ಲಭ್ಯವಾಗುತ್ತಿವೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್​ಗಳು, ಗ್ಯಾಡ್ಜೆಟ್ಗಳು, ಕಾರ್ ಆಸೆಸರೀಸ್​ಗಳು ಫ್ಲಿಪ್ಕಾರ್ಟ್ನ ಅತಿದೊಡ್ಡ ಮಾರುಕಟ್ಟೆಯಾಗಿವೆ.

ಸ್ನ್ಯಾಪ್​ ಡೀಲ್​ನಂತೆಯೇ ಫ್ಲಿಪ್ಕಾರ್ಟ್ ಕೂಡಾ ಪ್ರಾದೇಶಿಕ ಭಾಷೆಗಳಲ್ಲಿ ಆರಂಭವಾಗಲಿದೆಯೇ ಎನ್ನುವ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ ಸಿಗುತ್ತದೆ. ಇಂಗ್ಲಿಷ್ ಇಂಟರ್ನೆಟ್ ಭಾಷೆಯಾಗಿದೆ. ಪ್ರಾದೇಶಿಕ ಭಾಷೆಗಳೇ ಪ್ರಾಮುಖ್ಯತೆ ಪಡೆಯುವ ದಿನ ಬರಲಿದೆ. ಆದರೆ, ಸಧ್ಯಕ್ಕೆ ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ ಫ್ಲಿಪ್ಕಾರ್ಟ್ ನಾಯಕರು.

ಸ್ಥಳೀಯ ಬ್ರ್ಯಾಂಡ್ಗಳಿಂದ ವಿಸ್ತರಣೆಗೆ ಹೆಚ್ಚಿನ ಅವಕಾಶ

ಫ್ಲಿಪ್ಕಾರ್ಟ್ ವಿಸ್ತರಣೆಗೆ ಹೆಚ್ಚಿನ ಗಮನ ಕೊಡುತ್ತಿದೆ. ಫೋನ್ ಹೊರತುಪಡಿಸಿ, ಎಲ್ಲಾ ಕ್ಯಾಟಗರಿಯಲ್ಲೂ ಟಾಪ್ 5-7 ಬ್ರ್ಯಾಂಡ್​ಗಳು ಭಾರತದ್ದೇ ಆಗಿವೆ ಎನ್ನುತ್ತಾರೆ ಅಂಕಿತ್. ಅಷ್ಟೇ ಅಲ್ಲ, ಬಹುತೇಕ ಚಿಕ್ಕಪುಟ್ಟ ಬ್ರ್ಯಾಂಡ್ಗಳೂ ಹೆಚ್ಚಿನ ಮಾರಾಟ ಕಾಣುತ್ತಿವೆ. ಉಡುಪುಗಳ ವಿಚಾರಕ್ಕೆ ಬಂದರೆ, ಭಾರತದ ದೊಡ್ಡ ಬ್ರ್ಯಾಂಡ್ಗಳಲ್ಲ, ಚಿಕ್ಕಪುಟ್ಟ ಬ್ರ್ಯಾಂಡ್ಗಳೇ ಹೆಚ್ಚಿನ ಯಶಸ್ಸು ಗಳಿಸುತ್ತಿವೆ. ಈ ಪೈಕಿ ಬಹುತೇಕ ಕಂಪನಿಗಳು ಈ ಹಿಂದೆ ರಫ್ತು ಮಾಡುತ್ತಿದ್ದು, ಈಗ ಭಾರತಕ್ಕಾಗಿಯೇ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನುತ್ತಾರೆ ಅಂಕಿತ್.

ಉದಾಹರಣೆಗೆ, ಹಿಸಾರ್ ಮೂಲದ ರೆಟಿನಾ ಕಂಪನಿಯು ಕಾರು ಬಿಡಿ ಉತ್ಪನ್ನಗಳ ಮಾರಾಟದಲ್ಲಿ ನಂಬರ್ ಒನ್ ಆಗಿದೆ. ಟಿವಿಗಳ ಮಾರಾಟ ವಿಚಾರಕ್ಕೆ ಬಂದರೆ ಮುಂಬೈನ ವಿಯು ಟೆಕ್ನಾಲಜೀಸ್ ಮತ್ತು ಮೈಕ್ರೋಮ್ಯಾಕ್ಸ್ ಅಗ್ರಸ್ಥಾನದಲ್ಲಿವೆ. ಭಾರತೀಯ ಬ್ರ್ಯಾಂಡ್ಗಳು ಲಭ್ಯವಿಲ್ಲದ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಬ್ರ್ಯಾಂರ್ಡಗಳನ್ನು ಪರಿಚಯಿಸುತ್ತೀರಾ ಎನ್ನುವ ಪ್ರಶ್ನೆಗೂ ಫ್ಲಿಪ್ಕಾರ್ಟ್ನಿಂದ ಇಲ್ಲ ಎನ್ನುವ ಉತ್ತರ ಲಭ್ಯವಾಗಿದೆ.

ಅದರ ಬದಲಾಗಿ, ಹೆಚ್ಚು ಪ್ರಚಾರ ಪಡೆಯದ ಗುಣಮಟ್ಟದ ಭಾರತೀಯ ಬ್ರ್ಯಾಂಡ್​ಗಳಿಗೆ ಹೆಚ್ಚು ಪ್ರಚಾರ ನೀಡುತ್ತೇವೆ. ನಮ್ಮ ಬ್ರ್ಯಾಂಡ್ಗಳನ್ನು ಬೆಳೆಸಿದಾಗ ಮಾತ್ರ ಭಾರತದ ಆರ್ಥಿಕತೆ ಬೆಳೆಯಲು ಸಾಧ್ಯ ಎನ್ನುವುದು ಫ್ಲಿಪ್ಕಾರ್ಟ್ನ ಅಜೆಂಡಾ.

ಫ್ಲಿಪ್ಕಾರ್ಟ್ ಗ್ರಾಹಕರಲ್ಲಿ ಯುವಕರ ಪಾಲು ಹೆಚ್ಚು

ಫ್ಲಿಪ್​ಕಾರ್ಟ್​ ಶೇಕಡಾ 70ರಷ್ಟು ಗ್ರಾಹಕರು 15-34 ವಯಸ್ಸಿನ ಒಳಗಿನವರಾಗಿದ್ದಾರೆ. ಈ ಪೈಕಿ ಶೇಕಡಾ 50ರಷ್ಟು ಮಂದಿ ಅವಿವಾಹಿತರಾಗಿದ್ದಾರೆ. ಶೇಕಡಾ 50ರಷ್ಟು ಮಂದಿ ಕಚೇರಿಗಳಿಗೆ ಹೋಗುವವರಾಗಿದ್ದಾರೆ. ಭವಿಷ್ಯದಲ್ಲಿ ಇದೇ ಮಂದಿ ವಿವಾಹಿತರಾಗುವುದರಿಂದ, ಅವರ ಅಗತ್ಯಗಳನ್ನು ಈಡೇರಿಸಲೂ ಫ್ಲಿಪ್ಕಾರ್ಟ್ ಈಗಿನಿಂದಲೇ ತಯಾರಿ ನಡೆಸಿದೆ. ಈಗಾಗಲೇ ಅದು ಮಕ್ಕಳ ವಿಭಾಗವನ್ನೂ ಆರಂಭಿಸಿದೆ. ತನ್ನ ಗ್ರಾಹಕರು ಭವಿಷ್ಯದ ಅವಶ್ಯಕತೆಗಳಿಗಾಗಿ, ಬೇರೆಲ್ಲೂ ಹೋಗಬಾರದು ಎನ್ನುವುದು ಫ್ಲಿಪ್ಕಾರ್ಟ್ ಉದ್ದೇಶ.


ಲೇಖಕರು: ರಾಧಿಕಾ ಪಿ. ನಾಯರ್​​

ಅನುವಾದಕರು: ಪ್ರೀತಂ