400 ನಾಯಿಗಳಿಗೆ ಆಸರೆಯಾದ ಚಿಂದಿ ಆಯುವ ಮಹಿಳೆ 

ಟೀಮ್ ವೈ.ಎಸ್.ಕನ್ನಡ 

0

ಈಕೆ 'ಡಾಗ್ ಲೇಡಿ ಆಫ್ ಡೆಲ್ಲಿ' ಅಂತಾನೇ ಫೇಮಸ್. ನಾಯಿಗಳೆಂದ್ರೆ ಅವರಿಗೆ ಪಂಚಪ್ರಾಣ. ಹಾಗಂತ ಅವರೇನು ಬೇರೆ ಬೇರೆ ಜಾತಿಯ ನಾಯಿಗಳನ್ನು ತಂದು ಸಾಕ್ತಿದ್ದಾರೆ, ಅದೇ ಅವರ ಹವ್ಯಾಸ ಅಂದ್ಕೋಬೇಡಿ. ಆಸರೆಯಿಲ್ಲದೆ ಅಲೆದಾಡುತ್ತಿರುವ ಬೀದಿನಾಯಿಗಳನ್ನು ಸಾಕುತ್ತಿರುವ ಅನ್ನದಾತೆ ಈಕೆ. ಹೌದು 62 ವರ್ಷ ವಯಸ್ಸಿನ ಪ್ರತಿಮಾ ದೇವಿ 400ಕ್ಕೂ ಹೆಚ್ಚು ಬೀದಿನಾಯಿಗಳನ್ನು ಸಾಕಿ, ಸಲಹುತ್ತಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು. ಅದು ಕೂಡ ಚಿಂದಿ ಆಯುವ ಮೂಲಕ.

ಪುಟ್ಟ ಗುಡಿಸಲಿನಂತಹ ಶೀಟ್ ಮನೆಯಲ್ಲಿ ಪ್ರತಿಮಾ ದೇವಿ ಅವರ ವಾಸ. ಅವರ ಜೊತೆಗೆ 120 ನಾಯಿಗಳಿವೆ. ನಾಯಿಗಳ ಆರೈಕೆಯಲ್ಲೇ ಪ್ರತಿಮಾ ದೇವಿ ದಿನಕಳೆಯುತ್ತಿದ್ದಾರೆ. ನಾಯಿಗಳಿಗೆ ಆಹಾರ ಹಾಕುವುದು, ಅನಾರೋಗ್ಯಕ್ಕೀಡಾಗಿದ್ರೆ ಅವುಗಳಿಗೆ ಔಷಧ ಹಾಕೋದು ಇವೇ ಅವರ ಕಾಯಕ. ದಕ್ಷಿಣ ದೆಹಲಿಯ ಸಾಕೇತ್ನಲ್ಲಿ ಸುಮಾರು 30 ವರ್ಷಗಳಿಂದ ಪ್ರತಿಮಾ ದೇವಿ ವಾಸವಿದ್ದಾರೆ. ಚಿಂದಿ ಆಯುವ ಪ್ರತಿಮಾ, ತಾವು ದುಡಿದ ಹಣವನ್ನೆಲ್ಲ ಅವರು ನಾಯಿಗಳಿಗಾಗಿ ಖರ್ಚು ಮಾಡ್ತಾರೆ. ತಮ್ಮ ಪ್ರೀತಿಯ 400 ನಾಯಿಗಳನ್ನು ಪೋಷಿಸ್ತಾರೆ. ``ನಾನು ಸುಮಾರು 400 ನಾಯಿಗಳ ಆರೈಕೆ ಮಾಡುತ್ತಿದ್ದೇನೆ. ಸುಮಾರು 200 ನಾಯಿಗಳು ನನ್ನ ಮನೆಯ ಆಸುಪಾಸಿನಲ್ಲೇ ಇವೆ. ಉಳಿದ ಶ್ವಾನಗಳು ಜೆ-ಬ್ಲಾಕ್​ನ ಪಿವಿಆರ್ ಸಂಕೀರ್ಣದಲ್ಲಿ ವಾಸವಾಗಿವೆ. ನನ್ನ ಮುದ್ದಿನ ನಾಯಿಗಳು ಯಾವತ್ತೂ ಯಾರನ್ನೂ ಕಚ್ಚಿಲ್ಲ. ಎಂಸಿಡಿಯಿಂದ ಅವುಗಳಿಗೆ ತಪ್ಪದೇ ಲಸಿಕೆ ಹಾಕಿಸುತ್ತೇನೆ'' ಎನ್ನುತ್ತಾರೆ ಪ್ರತಿಮಾ ದೇವಿ.

ಪ್ರತಿಮಾ ಅವರಿಗೆ ಮನೆ, ಮಕ್ಕಳು ಇಲ್ಲ ಎಂದೇನಲ್ಲ. ಮೂವರು ಮಕ್ಕಳಿದ್ದಾರೆ, ಎಲ್ರೂ ಅವರ ಸ್ವಂತ ಹಳ್ಳಿಯಲ್ಲಿ ವಾಸವಿದ್ದಾರೆ. ಆದ್ರೆ ಪ್ರತಿಮಾ ದೇವಿ ಮಾತ್ರ ದೆಹಲಿಯಲ್ಲೇ ನೆಲೆಸಿದ್ದಾರೆ. ನಾಯಿಗಳ ಪಾಲನೆಯಲ್ಲೇ ಬದುಕು ಸವೆಸುತ್ತಿದ್ದಾರೆ. ``ನಾಯಿಗಳೊಂದಿಗೆ ಬದುಕಲು ಸಂತೋಷವಾಗುತ್ತದೆ. ನನ್ನ ಪತಿಯೊಂದಿಗಿದ್ದಾಗ ನಾನು ಖುಷಿಯಾಗಿರಲಿಲ್ಲ. ಇಡೀ ದಿನ ಕೆಲಸ ಮಾಡಿ ನಾನು ಮನೆ ನಡೆಸಬೇಕಿತ್ತು. ನನ್ನ ದುಡಿಮೆಯಲ್ಲೇ ಕುಟುಂಬ ನಿರ್ವಹಣೆ ನಡೆಯುತ್ತಿತ್ತು. ಯಾಕಂದ್ರೆ ನನ್ನ ಪತಿ ಕೆಲಸವನ್ನೇ ಮಾಡುತ್ತಿರಲಿಲ್ಲ. ಈಗಲೂ ನನ್ನ ಮಗ ಆಗಾಗ ಕರೆ ಮಾಡ್ತಾನೆ, ಊರಿಗೆ ಕರೆದೊಯ್ಯೋದಾಗಿ ಹೇಳ್ತಾನೆ. ಆದ್ರೆ ನಾನವನ ಮಾತು ಕೇಳುವುದಿಲ್ಲ. ನನಗೆ ಊರಿಗೆ ಮರಳಲು ಇಷ್ಟವಿಲ್ಲ. ನಾಯಿಗಳಿಗೆ ಒಳಿತು ಮಾಡುತ್ತ ಇಲ್ಲೇ ಇರಲು ಬಯಸುತ್ತೇನೆ'' ಎನ್ನುವ ಪ್ರತಿಮಾ ತಮ್ಮ ಬದುಕಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ನಾಯಿಗಳಿಗಾಗಿ ಮನೆಯನ್ನೇ ಬಿಟ್ಟು ಬಂದಿರುವ ಪ್ರತಿಮಾ ಅವರ ಪ್ರಾಣಿ ಪ್ರೀತಿಯನ್ನು ನಾವು ಮೆಚ್ಚಲೇಬೇಕು. ಇಳಿವಯಸ್ಸಿನಲ್ಲೂ ಚಿಂದಿ ಆಯ್ದು ಶ್ವಾನಗಳನ್ನು ಸಾಕುತ್ತಿರುವ ಇವರು ಎಲ್ಲರಿಗೂ ಮಾದರಿಯಾಗ್ತಾರೆ. ಅಷ್ಟೇ ಅಲ್ಲ ಮನಸ್ಸು ಮಾಡಿದ್ರೆ ಯಾವ ಕೆಲಸವೂ ಅಸಾಧ್ಯವಲ್ಲ ಅನ್ನೋದನ್ನೂ ತೋರಿಸಿಕೊಟ್ಟಿದ್ದಾರೆ. ಮೂಕ ಪ್ರಾಣಿಗಳ ಬದುಕಿಗೆ ಆಧಾರವಾಗಿರುವ ಪ್ರತಿಮಾ ಅವರನ್ನು ಸಮಾಜ ಗುರುತಿಸಲಿ, ಅವರ ಸೇವೆಗೆ ನೆರವಾಗಲಿ ಅನ್ನೋದೇ ಎಲ್ಲರ ಆಶಯ.  

ಇದನ್ನೂ ಓದಿ..

ಗೋ ರಕ್ಷಣೆ ಹೆಸರಲ್ಲಿ ಅಮಾನವೀಯತೆ..! 

ಹಳ್ಳಿಯ ಚಿಪ್ಸ್- ಸಿಟಿ ಜನರಿಗೆ ಸಖತ್ ಟೇಸ್ಟ್