ವಿಶ್ವಕ್ಕೇ ಉಸಿರಾದ ಸ್ವೀಡನ್ ಯುವಕ ವಾಯು ಮಾಲಿನ್ಯದಿಂದ ಪಾರಾಗಲು ಅತ್ಯಾಧುನಿಕ ಮಾಸ್ಕ್

ಟೀಮ್​ ವೈ.ಎಸ್​. ಕನ್ನಡ

0


ನಾವು ಉಸಿರಾಡುವ ಗಾಳಿ ನಿಧಾನವಾಗಿ ನಮಗೆ ಉಸಿರುಗಟ್ಟಿಸುತ್ತಿದೆ. ವಾಯು ಮಾಲಿನ್ಯದಿಂದ ಭಾರತದ ಬಹುತೇಕ ನಗರಗಳಲ್ಲಿ ಪರಿಸ್ಥಿತಿ ಬಿಗಡಾಯಿಸ್ತಾ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಜಗತ್ತಿನ 1600 ನಗರಗಳ ಪೈಕಿ ಅತ್ಯಂತ ಹೆಚ್ಚು ವಾಯು ಮಾಲಿನ್ಯ ಇರೋದು ಎಲ್ಲಿ ಗೊತ್ತಾ? ನಮ್ಮ ರಾಷ್ಟ್ರರಾಜಧಾನಿ ದೆಹಲಿಯಲ್ಲಿ. ಪ್ಯಾರಿಸ್‍ನಲ್ಲಿ ನಡೆದ ಹವಾಮಾನ ಬದಲಾವಣೆ ಸಮ್ಮೇಳನದಲ್ಲೂ ಗಾಳಿಯ ಶುದ್ಧತೆ, ಗುಣಮಟ್ಟದ ಬಗ್ಗೆ ಕಾವೇರಿದ ಚರ್ಚೆಯಾಗಿದೆ.

ಪ್ರಪಂಚದಾದ್ಯಂತ ಜನರು ಪರಿಶುದ್ಧ ಗಾಳಿಯಲ್ಲಿ ಉಸಿರಾಡಲು ಮೂಲಭೂತ ಹಕ್ಕು ಹೊಂದಿದ್ದಾರೆ ಅನ್ನೋ ನಂಬಿಕೆಯಿಂದ್ಲೇ ಸ್ಟಾಕ್ಹೋಮ್ ಮೂಲದ `ಏರಿನಮ್' ಜನ್ಮ ತಾಳಿದೆ. ನಾಲ್ವರು ಸ್ನೇಹಿತರು ಜೊತೆಯಾಗಿ ಕಟ್ಟಿದ ಸಂಸ್ಥೆ ಇದು. ಅಲೆಕ್ಸಾಂಡರ್, ಫ್ರೆಡ್ರಿಕ್ ಕೆಂಪೆ, ಜೋಹಾನ್ಸ್ ಹೆರ್‍ಮನ್, ಮೆಹ್ದಿ ರೆಜ್ರಾಜಿ, ಈ ನಾಲ್ವರು ಸ್ಟಾಕ್ಹೋಮ್‍ನ ಬ್ಯುಸಿನೆಸ್ ಸ್ಕೂಲ್‍ನಲ್ಲಿ ಪರಸ್ಪರ ಪರಿಚಿತರಾಗಿದ್ರು. ವಾಯು ಮಾಲಿನ್ಯ, ಬ್ಯಾಕ್ಟೀರಿಯಾ, ವೈರಸ್ ಸೇರಿದಂತೆ ಇತರೆ ರೋಗಾಣುಗಳಿಂದ ಪಾರಾಗಲು ಅತ್ಯಾಧುನಿಕ ಉಸಿರಾಟದ ಮಾಸ್ಕ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾಸ್ಕ್​ಗಳಿಗಿಂತ ಇದು ವಿಭಿನ್ನವಾಗಿದೆ. `ಏರಿನಮ್' ಉತ್ತಮ ಗುಣಮಟ್ಟ, ರಕ್ಷಣೆ ಮತ್ತು ಅದ್ಭುತ ವಿನ್ಯಾಸಗಳ ಸಮಾಗಮ.

ಹಿಂದಿರುಗುವ ಲಕ್ಷಣಗಳು...

ಇದೆಲ್ಲ ಆರಂಭವಾಗಿದ್ದು ಕಳೆದ ವರ್ಷಾಂತ್ಯದಲ್ಲಿ. ಅಲೆಕ್ಸಾಂಡರ್ ಸ್ವೀಡನ್‍ನಿಂದ ಭಾರತಕ್ಕೆ ಬಂದಿದ್ರು. ಐಐಎಂನಲ್ಲಿ 6 ತಿಂಗಳ ವಿದ್ಯಾಭ್ಯಾಸಕ್ಕಾಗಿ ಅಹಮದಾಬಾದ್‍ಗೆ ಆಗಮಿಸಿದ್ರು. ವಾಯು ಮಾಲಿನ್ಯದಿಂದಾಗಿ ಒಂದೇ ತಿಂಗಳಲ್ಲಿ ಅಲೆಕ್ಸಾಂಡರ್‍ಗೆ ಅಸ್ತಮಾ ಕಾಣಿಸಿಕೊಂಡಿತ್ತು. ಆಗ ವಾಯು ಮಾಲಿನ್ಯದಿಂದ ರಕ್ಷಣೆ ನೀಡಬಲ್ಲ ಉತ್ತಮ ಮಾಸ್ಕ್ ಇಲ್ಲದೆ ಅಲೆಕ್ಸಾಂಡರ್ ಪರದಾಡಿದ್ರು. ಅಹಮದಾಬಾದ್‍ನಲ್ಲಿ ಎಲ್ರೂ ಉತ್ತರೀಯಗಳನ್ನು ಮುಖಕ್ಕೆ ಸುತ್ತಿಕೊಂಡು ಓಡಾಡ್ತಾ ಇದ್ರು. ದುರಂತದ ವಿಷಯ ಅಂದ್ರೆ ವಾಯುಮಾಲಿನ್ಯದಿಂದ ತಪ್ಪಿಸಿಕೊಳ್ಳಲು ಅದರಿಂದ ಸಾಧ್ಯವಿರಲಿಲ್ಲ ಎನ್ನುತ್ತಾರೆ ಅಲೆಕ್ಸಾಂಡರ್. ಶ್ವಾಸಕೋಶ ಮತ್ತು ರಕ್ತಪ್ರವಾಹದಲ್ಲಿ ವಿಷಕಾರಿ ಅಂಶಗಳು ಸೇರಿಕೊಳ್ತಾ ಇದ್ದಿದ್ರಿಂದ ಆರೋಗ್ಯ ಸಂಪೂರ್ಣ ಹದಗೆಡುವ ಆತಂಕ ಎದುರಾಗಿತ್ತು. ಇದಕ್ಕೇನಾದ್ರೂ ಪರಿಹಾರ ಕಂಡುಹಿಡಿಯಲೇಬೇಕೆಂದು ನಿರ್ಧರಿಸಿದ್ದ ಅಲೆಕ್ಸಾಂಡರ್, ಸ್ವೀಡನ್‍ಗೆ ಮರಳಿದ ಬಳಿಕ `ಏರಿನಮ್' ಅನ್ನು ಅಭಿವೃದ್ಧಿಪಡಿಸಲು ಆರಂಭಿಸಿದ್ರು.

ಡ್ರಾಯಿಂಗ್ ಬೋರ್ಡ್‍ಗೆ ವಾಪಸ್...

ತಮ್ಮ ಹೊಸ ಉತ್ಪನ್ನ ಹಾಗೂ ಅದರ ಅನುಕೂಲತೆಗಳನ್ನು ಅಲೆಕ್ಸಾಂಡರ್ ವಿವರಿಸಿದ್ರು. ಈ ಪರಿಕಲ್ಪನೆಯನ್ನು ಮೆಚ್ಚಿಕೊಂಡ ಸ್ನೇಹಿತರು ಅವರಿಗೆ ಸಾಥ್ ನೀಡಲು ನಿರ್ಧರಿಸಿದ್ರು. ಈ ಉದ್ಯಮ ಬಲವಾದ ಉದ್ದೇಶ ಹೊಂದಿದ್ದು, ಜಗತ್ತಿನಲ್ಲಿ ವಿಭಿನ್ನತೆಯನ್ನು ಸೃಷ್ಟಿಸಲಿದೆ ಅನ್ನೋ ವಿಶ್ವಾಸ ಅಲೆಕ್ಸಾಂಡರ್ ಅವರಿಗಿದೆ. ದಿನನಿತ್ಯದ ಬದುಕಿನಲ್ಲಿ ಅತ್ಯುತ್ತಮ ಉಸಿರಾಟ ವ್ಯವಸ್ಥೆಯನ್ನು ಕಲ್ಪಿಸುವುದು `ಏರಿನಮ್'ನ ಪ್ರಮುಖ ಗುರಿ. ಅದರ ಜೊತೆಗೆ ವಾಯು ಮಾಲಿನ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕೂಡಾ ಅಲೆಕ್ಸಾಂಡರ್ ಮತ್ತವರ ಸ್ನೇಹಿತರು ಮಾಡುತ್ತಿದ್ದಾರೆ. ಇನ್ನು ನಗರ ಪ್ರದೇಶದ ಜನರು ಸ್ಟೈಲ್ ಬಗ್ಗೆ ಹೆಚ್ಚು ಗಮನಹರಿಸುವುದರಿಂದ, ಮಾಸ್ಕ್ ಅನ್ನು ಅದ್ಭುತವಾಗಿ ವಿನ್ಯಾಸ ಮಾಡಲಾಗಿದೆ. ಜನರು ಮುಜುಗರಪಡುವ ಬದಲು ಖುಷಿಖುಷಿಯಾಗಿ ಮಾಸ್ಕ್ ಹಾಕಿಕೊಳ್ಳುವಂತಿರಬೇಕು ಎನ್ನುತ್ತಾರೆ ಅಲೆಕ್ಸಾಂಡರ್.

ದಾರಿಯುದ್ದಕ್ಕೂ ಉಸಿರುಗಟ್ಟಿಸುವ ವಾತಾವರಣ...

ಎಲ್ಲಾ ಬಗೆಯ ಜನರಿಗೂ ರಕ್ಷಣೆ ನೀಡಬಲ್ಲ ಮಾಸ್ಕ್ ಅನ್ನು ತಯಾರಿಸುವುದು ನಿಜಕ್ಕೂ ಸವಾಲಿನ ಕೆಲಸ. ಯಾಕಂದ್ರೆ ಒಬ್ಬೊಬ್ಬರ ಮುಖ ಒಂದೊಂದು ರೀತಿಯಾಗಿರುತ್ತದೆ. ಎಲ್ಲರ ಮುಖಕ್ಕೂ ಸರಿಯಾಗಿ ಕುಳಿತುಕೊಳ್ಳುವಂತಹ, ಮತ್ತು ಎಲ್ಲೂ ಗಾಳಿ ಸೋರಿಕೆಯಾಗದಂತಹ ಮಾಸ್ಕ್ ತಯಾರಿಸುವುದು ಸಾಹಸವೇ ಸರಿ ಅನ್ನೋದು ಅಲೆಕ್ಸಾಂಡರ್ ಅವರ ಅನುಭವದ ಮಾತು. ಎಲ್ಲರ ಮುಖಕ್ಕೂ ಹೊಂದಿಕೊಳ್ಳುವಂತಹ, ಸ್ಟ್ರೆಚೇಬಲ್ ಮಟೀರಿಯಲ್‍ನಿಂದ ಈ ಮಾಸ್ಕ್ ಅನ್ನು ತಯಾರಿಸಲಾಗಿದೆ. ಮಾಸ್ಕ್ ಅನ್ನು ಇನ್ನಷ್ಟು ಆರಾಮಾದಾಯಕವಾಗಿಸುವುದು ಕೂಡ ಅವರಿಗೆ ಸವಾಲಾಗಿತ್ತು.`ಏರಿನಮ್' ಮಾಸ್ಕ್ ಅನ್ನು ಘಂಟೆಗಟ್ಟಲೆ ಧರಿಸಿದ್ರೂ ಯಾವುದೇ ರೀತಿಯ ತೊಂದರೆ ಇಲ್ಲ, ಸುಲಭವಾಗಿ ಉಸಿರಾಡಬಹುದು.

ಪಾಲಿಸ್ಟರ್ ರೀತಿಯ ಫ್ಯಾಬ್ರಿಕ್‍ನಿಂದ ತಯಾರಿಸಿರುವ ಈ ಮಾಸ್ಕ್ ಹಗುರವಾಗಿದೆ. ಗಾಳಿಯನ್ನು ಶೋಧಿಸಿ ಕಳುಹಿಸುವಂತಹ ಅತ್ಯಾಧುನಿಕ ತಂತ್ರಜ್ಞಾನ ಇದರಲ್ಲಿದೆ. ಹಾಗಾಗಿ ಕೆಟ್ಟ ವಾಸನೆ, ಧೂಳು, ಬ್ಯಾಕ್ಟೀರಿಯಾ, ವೈರಸ್, ಪುಷ್ಪರೇಣು ಯಾವುದೂ ಮೂಗಿನೊಳಕ್ಕೆ ಪ್ರವೇಶಿಸದಂತೆ ತಡೆಯುವ ಈ ಮಾಸ್ಕ್, ಪರಿಶುದ್ಧ ಗಾಳಿಯಲ್ಲಿ ಉಸಿರಾಡಲು ನೆರವಾಗುತ್ತದೆ.

`ಕಿಕ್‍ಸ್ಟಾರ್ಟರ್'ಗೆ ಅಬ್ಬರದ ಆರಂಭ

ಸೂಕ್ತ ಪಾಲುದಾರರು ಸಿಕ್ಕಿದ್ರಿಂದ `ಏರಿನಮ್' ಸ್ಥಿರವಾದ ಬೆಳವಣಿಗೆಯ ಪಥದಲ್ಲಿ ಮುನ್ನಡೆಯುತ್ತಿದೆ. ಆನ್‍ಲೈನ್ ಮಾರುಕಟ್ಟೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಅಲೆಕ್ಸಾಂಡರ್ ಅದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಬ್ಯುಸಿನೆಸ್ ಹಾಗೂ ಎಂಜಿನಿಯರಿಂಗ್ ಪದವೀಧರರನ್ನು ಕೂಡ ನೇಮಕ ಮಾಡಿಕೊಂಡಿರುವ ಅವರು, ಸ್ವೀಡನ್, ಜರ್ಮನಿ, ಫ್ರಾನ್ಸ್ ಮೂಲದ ತಮ್ಮ ಸ್ನೇಹಿತರ ಜೊತೆಗೂಡಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

2015ರ ನವೆಂಬರ್ 23ರಂದು ಕಿಕ್‍ಸ್ಟಾರ್ಟರ್ ಅನ್ನು ಲಾಂಚ್ ಮಾಡಲಾಯ್ತು. 24 ಗಂಟೆಗಳೊಳಗೆ ಅಗತ್ಯಕ್ಕಿಂತ ಹೆಚ್ಚು ನಿಧಿ ಅವರಿಗೆ ದೊರೆತಿರೋದು ವಿಶೇಷ. ಯುರೋಪ್, ಅಮೆರಿಕ, ಏಷ್ಯಾದ ದೇಶಗಳು ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳು ಅಲೆಕ್ಸಾಂಡರ್ ಅವರ ಜಾಗೃತಿ ಅಭಿಯಾನವನ್ನು ಬೆಂಬಲಿಸಿವೆ. ಡಿಸೆಂಬರ್ 27ರ ವರೆಗೂ ಈ ಕ್ಯಾಂಪೇನ್ ನಡೆಯಲಿದೆ.

ಇನ್ನು `ಏರಿನಮ್'ಗೆ ಉದ್ಯಮ ಮಾದರಿಯನ್ನು ಅಳವಡಿಸಲಾಗಿದೆ. ಫಿಲ್ಟರ್‍ಗಳಿಗೆ ಗ್ರಾಹಕರು ಚಂದಾದಾರರಾಗಬಹುದು, ಆದ್ರೆ ಮಾಸ್ಕ್​​ನ ಚರ್ಮವನ್ನು ತೊಳೆದು ಪುನಃ ಉಪಯೋಗಿಸಬಹುದು. ಆರೋಗ್ಯವಂತರಾಗಿರಬೇಕಂದ್ರೆ ಆಗಾಗ ಫಿಲ್ಟರ್‍ಗಳನ್ನು ಬದಲಾಯಿಸುತ್ತಿರಿ ಅನ್ನೋದು ಅವರ ಸಲಹೆ.

ದೊಡ್ಡ ಸಮಸ್ಯೆಗಳನ್ನು ಪರಿಹರಿಸುತ್ತ...

ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗದೆ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಕೂಡ ಅಲೆಕ್ಸಾಂಡರ್ ಪ್ರಯತ್ನಿಸುತ್ತಿದ್ದಾರೆ. ವಾಯು ಗುಣಮಟ್ಟದ ಕುಸಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವರ ಯೋಜನೆ. ಕಡಿಮೆ ಕಲುಷಿತ ಪರಿಸರ ನಿರ್ಮಾಣಕ್ಕೆ ಕೊಡುಗೆ ನೀಡಲು ಅವರು ಪರಿಶ್ರಮಪಡುತ್ತಿದ್ದಾರೆ. ಭವಿಷ್ಯದಲ್ಲಿ, ನೇರವಾಗಿ ವಾಯುಮಾಲಿನ್ಯ ಕಡಿಮೆ ಮಾಡುವಂತಹ ಉತ್ಪನ್ನವೊಂದನ್ನು ಅಭಿವೃದ್ಧಿಪಡಿಸುವ ಗುರಿ ಅವರ ಮುಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಾಯು ಮಾಲಿನ್ಯದಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಯಿಂದ ಜನರನ್ನು ದೂರವಿಡುವ ಪ್ರಯತ್ನಕ್ಕೆ ಅಲೆಕ್ಸಾಂಡರ್ ಮೊದಲ ಆದ್ಯತೆ ನೀಡ್ತಿದ್ದಾರೆ. ಇಡೀ ವಿಶ್ವಕ್ಕೇ ಉಸಿರಾಗಲು ಹೊರಟಿರುವ ಅವರ ಪ್ರಯತ್ನವನ್ನು ಎಲ್ಲರೂ ಮೆಚ್ಚಲೇಬೇಕು.


ಲೇಖಕರು: ಸಿಂಧು ಕಶ್ಯಪ್​

ಅನುವಾದಕರು: ಭಾರತಿ ಭಟ್​​