ಪತ್ನಿ ಹಂತಕರನ್ನೂ ದ್ವೇಷಿಸದ ಸಂಕರ್ಷಣ್​ ಜೇನಾ : ಆನೆಗಳ ರಕ್ಷಣೆಗಾಗಿ ನಿರಂತರ ಅಭಿಯಾನ

ಟೀಮ್ ವೈ.ಎಸ್.ಕನ್ನಡ 

ಪತ್ನಿ ಹಂತಕರನ್ನೂ ದ್ವೇಷಿಸದ ಸಂಕರ್ಷಣ್​ ಜೇನಾ : ಆನೆಗಳ ರಕ್ಷಣೆಗಾಗಿ ನಿರಂತರ ಅಭಿಯಾನ

Thursday July 21, 2016,

2 min Read

ಪತ್ನಿ ಹಂತಕರ ಬಗ್ಗೆ ಪತಿಗೆ ಪ್ರೀತಿ ಇರಲು ಸಾಧ್ಯವೇ? ಸಹಜವಾಗಿಯೇ ಅವರನ್ನು ದ್ವೇಷಿಸಬೇಕು. ಆದ್ರೆ ಸಂಕರ್ಷಣ್ ಜೇನಾ ಅವರಿಗೆ ತನ್ನ ಪತ್ನಿ ಕೊಂದವರ ಮೇಲೆ ಕೋಪವಿಲ್ಲ. ಅರ್ಧಾಂಗಿಯನ್ನು ಬಲಿ ಪಡೆದಿರುವ ಆನೆಗಳ ರಕ್ಷಣೆಗಾಗಿ ಅವರು ಬದುಕನ್ನೇ ಮುಡುಪಾಗಿಟ್ಟಿದ್ದಾರೆ. 62 ವರ್ಷ ವಯಸ್ಸಿನ ಸಂಕರ್ಷಣ್ ಜೇನಾ ನಿವೃತ್ತ ಕಾಲೇಜು ಪ್ರಾಧ್ಯಾಪಕರು. ಸದ್ಯ ಮಾನವರ ಜೊತೆಗಿನ ಸಂಘರ್ಷದಲ್ಲಿ ಸಿಕ್ಕಿಬಿದ್ದ ಆನೆಗಳ ರಕ್ಷಣೆಗಾಗಿ ಅಭಿಯಾನವನ್ನೇ ನಡೆಸುತ್ತಿದ್ದಾರೆ. ಓಡಿಶಾ ಅರಣ್ಯದ ಸಮೀಪವಿರುವ ಜೊರಾಂಡಾದಲ್ಲಿ ಆನೆ ತುಳಿತಕ್ಕೆ ಸಿಕ್ಕು ಅವರ ಪತ್ನಿ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನ ಬಗ್ಗೆ ಮಾತನಾಡುತ್ತ ``ಹುಟ್ಟು ಸಾವು ಎರಡೂ ದೇವರ ಕೈಯ್ಯಲ್ಲಿದೆ, ನಾವು ಕೇವಲ ಆತನ ಸಾಧನವಷ್ಟೆ. ಪತ್ನಿಯನ್ನು ಆನೆಯೊಂದು ಕೊಂದಿದೆ ಎಂಬ ಕಾರಣಕ್ಕೆ ಆನೆಗಳ ಜಾತಿಯನ್ನೇ ದ್ವೇಷಿಸಲು ಸಾಧ್ಯವಿಲ್ಲ'' ಎನ್ನುತ್ತಾರೆ ಸಂಕರ್ಷಣ್. ರಸ್ತೆ ಅಪಘಾತದಲ್ಲಿ ಆತ್ಮೀಯರನ್ನು ಕಳೆದುಕೊಂಡಿದ್ದಕ್ಕೆ ಜನರು ರಸ್ತೆಗಳಲ್ಲಿ ಓಡಾಡುವುದನ್ನು ನಿಲ್ಲಿಸಿಬಿಡ್ತಾರಾ? ಅನ್ನೋದು ಅವರ ಪ್ರಶ್ನೆ. ಆನೆಗಳನ್ನು ದ್ವೇಷಿಸಲಾರಂಭಿಸಿದ್ರೆ ನಾನು ಭೂಮಿ ಮೇಲಿರುವ ಅತಿ ದೊಡ್ಡ ಮೂರ್ಖ ಎನಿಸಿಕೊಳ್ಳುತ್ತೇನೆ ಎನ್ನುತ್ತಾರೆ ಸಂಕರ್ಷಣ್.

image


2011ರ ಜನವರಿ 1ರಂದು ಸಂಕರ್ಷಣ್ ಮತ್ತವರ ಪತ್ನಿ ಧೆಂಕನಲ್ ಜಿಲ್ಲೆಯ ಜೊರಾಂಡಾದಲ್ಲಿ ಬೆಳಗ್ಗೆ ವಾಕಿಂಗ್ ಹೊರಟಿದ್ರು. ಆ ಸಂದರ್ಭದಲ್ಲಿ ಕಾಡಿನಿಂದ ಬಂದಿದ್ದ ಮದಗಜವೊಂದು ಸಂಕರ್ಷಣ್ ಅವರ ಪತ್ನಿಯ ಮೇಲೆ ದಾಳಿ ಮಾಡಿತ್ತು. ಆಕೆ ಸ್ಥಳದಲ್ಲೇ ಮೃತಪಟ್ಟರು. ಈ ಭಯಾನಕ ದೃಶ್ಯವನ್ನು ಸಂಕರ್ಷಣ್ ಕಣ್ಣಾರೆ ಕಂಡಿದ್ದಾರೆ. ಕೆಲದಿನಗಳ ಕಾಲ ಈ ಘಟನೆ ಅವರನ್ನು ಕಾಡುತ್ತಲೇ ಇತ್ತು. ಚೇತರಿಸಿಕೊಂಡ ಅವರು ಮತ್ತೆ ಆನೆಗಳ ಸಂರಕ್ಷಣಾ ಅಭಿಯಾನ ಆರಂಭಿಸಿದ್ರು.

ಶಿಕ್ಷಕ ವೃತ್ತಿಯ ಹೊರತಾಗಿ ಆನೆಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಸಂಕರ್ಷಣ್ ಮಾಡುತ್ತಿದ್ದಾರೆ. ಜೊರಾಂಡಾ ಕಾಲೇಜಿನಲ್ಲಿರುವ ಎನ್ಎನ್ಎಸ್ ವಿದ್ಯಾರ್ಥಿಗಳೇ ಅವರ ಸಂದೇಶವಾಹಕರು. ``ಆನೆ ಅತ್ಯಂತ ಸುಂದರವಾದ ಪ್ರಾಣಿ. ನಮ್ಮ ಧಾರ್ಮಿಕ, ಸಾಂಪ್ರದಾಯಿಕ ಮತ್ತು ಐತಿಹಾಸಿಕ ಜೀವನದ ಬೇರ್ಪಡಿಸಲಾಗದಂತಹ ಅಂಗ. ಒಡಿಶಾದಲ್ಲಿ ಆನೆಗಳ ಸಂಖ್ಯೆ ಗಣನೀಯವಾಗಿದೆ. ಕಳೆದ ಒಂದು ದಶಕದಿಂದೀಚೆಗೆ ಆನೆಗಳು ಮತ್ತು ಮನುಷ್ಯರ ನಡುವೆ ಸಂಘರ್ಷ ಹೆಚ್ಚಾಗಿದೆ. ಆನೆಗಳಿಗೆ ಭೀತಿ ಶುರುವಾಗಿದೆ. ಜನರು ಆನೆಗಳಿಗಿಂತಲೂ ಹೆಚ್ಚು ಹಿಂಸಾ ಪ್ರವೃತ್ತಿಯುಳ್ಳವರು. ಆವಾಸಸ್ಥಾನದ ಕೊರತೆ ಮತ್ತು ನಶಿಸುತ್ತಿರುವ ಆಹಾರದ ಮೂಲಗಳಿಂದಾಗಿ ಪ್ರಾಣಿಗಳು ಕಂಗಾಲಾಗಿವೆ'' ಅನ್ನೋದು ಸಂಕರ್ಷಣ್ ಅವರ ಅಭಿಪ್ರಾಯ.

``ಸರ್ಕಾರ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ರೆ ಸಾಮರಸ್ಯದ ಪರಿಸರ ನಿರ್ಮಾಣ ಸಾಧ್ಯ. ನಿಜಕ್ಕೂ ನಾನು ಎಲ್ಲರಿಗೂ ಪ್ರೇರಣೆ. ಆನೆ ದಾಳಿಯಲ್ಲಿ ಪತ್ನಿಯನ್ನೇ ಕಳೆದುಕೊಂಡ ನಾನು ಅವುಗಳ ರಕ್ಷಣೆಗಾಗಿ ಹೋರಾಡುತ್ತಿರುವಾಗ ಉಳಿದವರೇಕೆ ಅಭಿಯಾನದಲ್ಲಿ ತೊಡಗಿಕೊಳ್ಳಬಾರದು?'' ಎಂಬುದು ಅವರ ಪ್ರಶ್ನೆ. ನಿವೃತ್ತಿಯ ನಂತರ ಸಂಕರ್ಷಣ್ ಅವರ ಹೋರಾಟ ಇನ್ನಷ್ಟು ಚುರುಕಾಗಿದೆ. ಅವರು ಹಳ್ಳಿಹಳ್ಳಿಗೆ ತೆರಳಿ ಆನೆಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ 15ಕ್ಕೂ ಹೆಚ್ಚು ಮಂದಿ ಆನೆ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಒಡಿಶಾದಲ್ಲಿ ಪ್ರತಿ ವರ್ಷ ಈ ಸಂಘರ್ಷಕ್ಕೆ 60-70 ಆನೆಗಳು ಮತ್ತು ಅಷ್ಟೇ ಸಂಖ್ಯೆಯಲ್ಲಿ ಮನುಷ್ಯರು ಪ್ರಾಣ ಕಳೆದುಕೊಳ್ತಿದ್ದಾರೆ.

ಇದನ್ನೂ ಓದಿ...

ರೈತರಿಗಾಗಿ ಬಂದಿದೆ ಮೊಬೈಲ್ ಎಟಿಎಂ..

ಸರಳ ವಿವಾಹಕ್ಕೆ ಜೈ ಎಂದ ಯುವ ಜೋಡಿ : ಮದುವೆಗೆ ಕೂಡಿಟ್ಟ ಹಣ ರೈತರಿಗೆ ದಾನ