ಸ್ವಚ್ಛ ಭಾರತಕ್ಕಾಗಿ ಸೈಕಲ್ ಸವಾರಿ...ಕೆಲಸ ಬಿಟ್ಟು ಜಾಗೃತಿ ಅಭಿಯಾನ ಆರಂಭಿಸಿದ ಯುವಕ

ಟೀಮ್​​ ವೈ.ಎಸ್​​.

ಸ್ವಚ್ಛ ಭಾರತಕ್ಕಾಗಿ ಸೈಕಲ್ ಸವಾರಿ...ಕೆಲಸ ಬಿಟ್ಟು ಜಾಗೃತಿ ಅಭಿಯಾನ ಆರಂಭಿಸಿದ ಯುವಕ

Wednesday November 04, 2015,

2 min Read

ಸ್ವಚ್ಛ ಭಾರತದ ಕನಸು ಬಿತ್ತಿದವರು ಪ್ರಧಾನಿ ನರೇಂದ್ರ ಮೋದಿ. ಪ್ರಧಾನಿ ಗದ್ದುಗೆ ಏರುತ್ತಿದ್ದಂತೆ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ಕೊಟ್ರು. ತಮ್ಮ ಪ್ರತೀ ಭಾಷಣದಲ್ಲೂ ಕ್ಲೀನ್ ಇಂಡಿಯಾ ಬಗ್ಗೆ ಪ್ರಸ್ತಾಪಿಸಿದ ಅವರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆಕೊಟ್ರು. ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ದೇಶವನ್ನು ಸ್ವಚ್ಛವಾಗಿಡಲು ಪ್ರಧಾನಿ ತೋರುತ್ತಾ ಇರೋ ಕಾಳಜಿ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ನಮೋ ಅವರ ಮನವಿಗೆ ಓಗೊಟ್ಟು ಅದೆಷ್ಟೋ ಮಂದಿ ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿದ್ದಾರೆ. ದೇಶಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ಮಾಡ್ತಿದ್ದಾರೆ. ಉತ್ತರ ಪ್ರದೇಶದ ಈ ಯುವಕ ಕೂಡ ಅವರಲ್ಲೊಬ್ರು. ಅಭಿಷೇಕ್ ಕುಮಾರ್ ಶರ್ಮಾ, ಸೈಕಲ್ ಸವಾರಿ ಮಾಡುತ್ತಲೇ ಕಳೆದ ಒಂದು ವರ್ಷದಿಂದ ಸ್ವಚ್ಛ ಭಾರತ ಅಭಿಯಾನದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡ್ತಿದ್ದಾರೆ.

image


29 ವರ್ಷದ ಅಭಿಷೇಕ್ ಕುಮಾರ್ ಶರ್ಮಾ, ಪರಿಸರ ವಿಜ್ಞಾನದಲ್ಲಿ ಎಂಎಸ್‍ಸಿ ಪದವಿ ಪಡೆದಿದ್ದಾರೆ. ಎಂಫಿಲ್ ಕೂಡ ಮಾಡಿದ್ದಾರೆ. ಇದುವರೆಗೆ ಸೈಕಲ್ ಮೂಲಕವೇ 1500 ಕಿಲೋ ಮೀಟರ್ ಕ್ರಮಿಸಿರುವ ಅಭಿಷೇಕ್, ಉತ್ತರಪ್ರದೇಶ, ಉತ್ತರಾಖಂಡ್, ಹಿಮಾಚಲಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಂಚಾರ ಮಾಡಿದ್ದಾರೆ. 5000ಕ್ಕೂ ಹೆಚ್ಚು ಹಳ್ಳಿಗಳು ಹಾಗೂ 350ಕ್ಕೂ ಅಧಿಕ ನಗರಗಳಲ್ಲಿ ಅಭಿಷೇಕ್ ಸಂಚಾರ ಮಾಡಿದ್ದಾರೆ. ಕಳೆದ ವರ್ಷ ನವೆಂಬರ್‍ನಲ್ಲಿ ಅಭಿಷೇಕ್ ಸೈಕಲ್ ಸಂಚಾರದ ಮೂಲಕ ಜಾಗೃತಿ ಕಾರ್ಯವನ್ನು ಆರಂಭಿಸಿದ್ರು.

ಸ್ವಚ್ಛ ಭಾರತ ಅಭಿಯಾನದಿಂದ ಅಭಿಷೇಕ್ ಕುಮಾರ್ ಶರ್ಮಾ ಪ್ರೇರಣೆ ಪಡೆದಿದ್ರು. ಇದಕ್ಕಾಗಿಯೇ ಉದ್ಯೋಗಕ್ಕೂ ಗುಡ್ ಬೈ ಹೇಳಿದ ಅವರು, ದೇಶಾದ್ಯಂತ ಸಂಚರಿಸಿ ಸ್ವಚ್ಛತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ಪಣ ತೊಟ್ರು. ಜನಸಾಮಾನ್ಯರ ಜೊತೆ, ಮಕ್ಕಳ ಪೋಷಕರ ಜೊತೆ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಜೊತೆ ಅಭಿಷೇಕ್ ಮಾತನಾಡ್ತಾರೆ. ತಮ್ಮ ತಮ್ಮ ಮನೆ, ಕಚೇರಿ ಹಾಗೂ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದು ಹೇಗೆ? ಅದರ ಅಗತ್ಯವೇನು ಎಂಬುದನ್ನು ಮನವರಿಕೆ ಮಾಡಿಕೊಡ್ತಾರೆ. ಈ ಜಾಗೃತಿ ಅಭಿಯಾನದ ಮುಂದುವರಿದ ಭಾಗವಾಗಿ ಆಂಧ್ರಪ್ರದೇಶ, ತೆಲಂಗಾಣ, ಓಡಿಶಾ, ಪಶ್ಚಿಮ ಬಂಗಾಳ ಹಾಗೂ ದೆಹಲಿಯಲ್ಲೂ ಸಂಚರಿಸಲಿದ್ದಾರೆ. ನವೆಂಬರ್ 20ರಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಅಭಿಷೇಕ್ ಅವರ ಜಾಗೃತಿ ಸೈಕಲ್ ಯಾನ ಅಂತ್ಯವಾಗಲಿದೆ.

ಕಳೆದ ವರ್ಷ ನವೆಂಬರ್ 10ರಂದು ಉತ್ತರಪ್ರದೇಶದ ಫತೇಗಢ್‍ನಿಂದ ಅಭಿಷೇಕ್ ಸೈಕಲ್ ಸವಾರಿ ಆರಂಭಿಸಿದ್ರು. ವಿಶೇಷ ಅಂದ್ರೆ ಅಭಿಷೇಕ್ ಅವರ ಜಾಗೃತಿ ಅಭಿಯಾನ ನೋಡಿ ಖುದ್ದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಅವರನ್ನು ಭೇಟಿಯಾದ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ರು. ಭವಿಷ್ಯದಲ್ಲಿ ಕೂಡ ಇಂತಹ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಮಾಡುವಂತೆ ಪ್ರೋತ್ಸಾಹಿಸಿದ್ರು. ಅಭಿಷೇಕ್ ಅವರನ್ನು ಭೇಟಿಯಾದ ಬಗ್ಗೆ ಪ್ರಧಾನಿ ಮೋದಿ ಟ್ವಿಟ್ಟರ್‍ನಲ್ಲಿ ಕೂಡ ಬರೆದುಕೊಂಡಿದ್ದಾರೆ. ಅಭಿಷೇಕ್ ಅವರ ಜಾಗೃತಿ ಅಭಿಯಾನದ ಸಂಪೂರ್ಣ ಮಾಹಿತಿಯನ್ನು ಕೂಡ ಪ್ರಧಾನಿ ಪಡೆದುಕೊಂಡಿದ್ದಾರೆ. ಅವರಿಗೆ ಇಂಥದ್ದೊಂದು ಆಲೋಚನೆ ಬಂದಿದ್ದು ಹೇಗೆ? ಈ ಕಾರ್ಯಕ್ಕೆ ಸಾಥ್ ಕೊಟ್ಟವರು ಯಾರು? ಅಭಿಷೇಕ್ ಅವರ ಭವಿಷ್ಯದ ಯೋಜನೆಗಳೇನು ಎಂಬುದರ ಬಗ್ಗೆ ಮೋದಿ ತಿಳಿದುಕೊಂಡಿದ್ದಾರೆ. ಇನ್ನು ತಮ್ಮ ಅಭಿಯಾನವನ್ನು ಪೂರ್ಣಗೊಳಿಸಿದ ಬಳಿಕ ಅಭಿಷೇಕ್ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ.

image


ಹಣ ಗಳಿಕೆಯೊಂದೇ ಜೀವನದ ಉದ್ದೇಶವಲ್ಲ. ಪ್ರಧಾನಿ ಮೋದಿ ತಮ್ಮ ಅಭಿಯಾನದ ಮೂಲಕ ನನ್ನ ವಿಚಾರಧಾರೆಯನ್ನೇ ಬದಲಾಯಿಸಿದ್ದಾರೆ ಅನ್ನೋದು ಅಭಿಷೇಕ್ ಅವರ ಅಭಿಪ್ರಾಯ. ಪ್ರತಿ ಹಳ್ಳಿಯ ಹಾಗೂ ನಗರದ ಒಬ್ಬೊಬ್ಬರಲ್ಲಿ ಜಾಗೃತಿ ಮೂಡಿಸಲಯ ಸಫಲರಾದ್ರೆ ತಮ್ಮ ಅಭಿಯಾನ ಯಶಸ್ವಿಯಾದಂತೆಯೇ ಲೆಕ್ಕ ಎನ್ನುತ್ತಾರೆ ಅವರು. ತಮ್ಮ ಜೊತೆಗೆ ಎಲ್‍ಇಡಿ ಲೈಟ್‍ಗಳನ್ನೂ ಕೊಂಡೊಯ್ದಿರುವ ಅವರು ಪ್ರತಿ ಹಳ್ಳಿಯಲ್ಲೂ ಯುವಕರು ಹಾಗೂ ಹಿರಿಯರನ್ನು ಭೇಟಿ ಮಾಡಿ ಜಾಗೃತಿ ಮೂಡಿಸ್ತಿದ್ದಾರೆ. ತಮ್ಮ ಸೈಕಲ್ ಸವಾರಿಯನ್ನು ಅಭಿಷೇಕ್ ಅನಿಶ್ಚಿತ ಪಯಣ ಎಂದು ಕರೆದಿದ್ದಾರೆ.