ಕೈಯಲ್ಲಿದ್ದ ಕೆಲಸ ಬಿಟ್ರು... ಅಪರೂಪದ ಸಸ್ಯಗಳನ್ನು ಬೆಳೆಸಿ ಮಾದರಿಯಾದ್ರು..!

ಕೃತಿಕಾ

ಕೈಯಲ್ಲಿದ್ದ ಕೆಲಸ ಬಿಟ್ರು... ಅಪರೂಪದ ಸಸ್ಯಗಳನ್ನು ಬೆಳೆಸಿ ಮಾದರಿಯಾದ್ರು..!

Sunday January 03, 2016,

3 min Read

ಆ ಮನೆಯಲ್ಲಿ ಎಲ್ಲೆಲ್ಲೂ ಹಸಿರಿನ ರಾಶಿ. ಎಲ್ಲಿ ನೋಡಿದರೂ ಹೂವಿನ ಗಿಡಗಳೇ. ಕಿಟಕಿ, ಸಜ್ಜೆ, ಬಾಲ್ಕನಿ ಹೀಗೆ ಎಲ್ಲಿ ನೋಡಿದರೂ ಗಿಡಗಳೇ. ಹಾಲ್​​ನಿಂದ ಹಿಡಿದು ಅಡುಗೆ ಮನೆಯವರೆಗೆ, ಅಡುಗೆ ಮನೆಯಿಂದ ಹಿಡಿದು ಮಲಗುವ ಕೋಣೆಯವರೆಗೆ ಎಲ್ಲಿ ನೋಡಿದರೂ ಅಪರೂಪದ ಸಸಿಗಳು. ಮನೆಯ ತುಂಬ ಬರೀ ಅಪರೂಪದ ಸಸ್ಯಗಳದ್ದೇ ರಾಶಿ. ಛಾವಣಿ ಮೇಲೆ ಪುಟ್ಟದೊಂದು ತೋಟವೇ ತೆರೆದುಕೊಳ್ಳುತ್ತದೆ. ಎಂದೂ ಕಂಡರಿಯದ, ಕೇಳರಿಯದ ನೋಡದೇ ಇರುವ ಸಸ್ಯಲೋಕವೇ ಅಲ್ಲಿ ಅನಾವರಣವಾಗಿದೆ. ಹೀಗೆ ಮನೆಯನ್ನೇ ಸಸ್ಯ ಕಾಶಿಯನ್ನಾಗಿ ಮಾಡಿಕೊಂಡಿರುವವರು ಬೆಳಗಾವಿಯ ಪ್ರದೀಪ್ ಬಾಗಿ. ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದವರು. 16 ವರ್ಷಗಳ ಕಾಲ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡಿದವರು. ಪ್ರದೀಪ್ ಅವರ ತಂದೆ ವಸುಪಾಲಬಾಗಿ ಅವರಿಗೂ ಸಸ್ಯಗಳೆಂದರೆ ಎಲ್ಲಿಲ್ಲದ ಪ್ರೀತಿ. ಅದೇ ಪ್ರೀತಿ ಪ್ರದೀಪ್ ಅವರನ್ನು ಸಸ್ಯ ಲೋಕದತ್ತ ಸೆಳೆದಿದೆ. ಕಳೆದ 30 ವರ್ಷಗಳಿಂದ ದೇಶ ವಿದೇಶಗಳ ಅಪರೂಪದ ಸಸ್ಯವನ್ನು ಹೆಕ್ಕಿ ತಂದು ಬೆಳೆಸುತ್ತಿರುವ ಇವರ ಸಸ್ಯಪ್ರೀತಿ ಇತರರಿಗೆ ಮಾದರಿ.

image


ಮನೆಯನ್ನೇ ಪುಟ್ಟ ಉದ್ಯಾನವನ್ನಾಗಿ ಮಾರ್ಪಡಿಸಿಕೊಂಡು ದೇಶ ವಿದೇಶದ ಹಲವು ಸಸ್ಯ ಸಂಕುಲ ವನ್ನು ರಕ್ಷಿಸುವ ಕೆಲಸವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಸಸಿಗಳನ್ನು ಮನೆಯಲ್ಲಿರುವ ಕುಂಡಗಳಲ್ಲೇ ಬೆಳೆದಿರುವ ಇವರು ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ನೀರು, ಗೊಬ್ಬರ ನೀಡಿದ ನಂತರವೂ ಅಕಸ್ಮಾತ್ ಒಂದು ಸಸಿ ಒಣಗಿತೆಂದರೂ ಅದಕ್ಕೆ ಕಾರಣ ಕಂಡುಕೊಳ್ಳಲು ಸಸ್ಯ ತಜ್ಞರನ್ನು ಸಂಪರ್ಕಿಸುತ್ತಾರೆ. ಇವರ ಮನೆಯಲ್ಲಿ ಅಮೆಜಾನ್ ಕಾಡುಗಳಲ್ಲಿನ ಹೂಗಳು ಅರಳಿವೆ. ಆಫ್ರಿಕಾದ ದಟ್ಟಡವಿಯಲ್ಲಿ ಕಂಡುಬರುವ ಅಪರೂಪದ ಸಸಿಗಳು ಕುಂಡದೊಳಗೆ ಅಡಗಿ ಕುಳಿತಿವೆ. ಪಶ್ಚಿಮ ಘಟ್ಟಗಳಲ್ಲಿ ಅಲೆದಾಡುತ್ತಾರೆ. ಕೈಗೆ ಸಿಕ್ಕ ಅಪರೂಪದ ಸಸಿಯನ್ನು ತಂದು ಪೋಷಿಸುತ್ತಾರೆ. ಇವರ ಮನೆಯೇ ಚಿಕ್ಕದೊಂದು ಬೊಟಾನಿಕಲ್ ಗಾರ್ಡನ್​ನಂತಿದೆ. ಪ್ರದೀಪ್ ಅವರು ಮನೆಯಲ್ಲಿ ಆರೈಕೆ ಮಾಡುತ್ತಿರುವ ಸಸಿಗಳು, ಇವರು ಪೋಷಿಸುತ್ತಿರುವ ಒಟ್ಟು ಸಸ್ಯಗಳ ಶೇ 20ರಷ್ಟು ಮಾತ್ರ. ಮಿಕ್ಕವು ಖಾನಾಪುರ ರಸ್ತೆಯಲ್ಲಿರುವ 5 ಎಕರೆ ತೋಟದಲ್ಲಿವೆ.

ಬೆಳಗಾವಿಯಿಂದ ಖಾನಾಪುರಕ್ಕೆ ತೆರಳುವ ಮಾರ್ಗದಲ್ಲಿ 16 ಕಿ.ಮೀ. ದೂರದಲ್ಲಿ ಪ್ರದೀಪ್ ಬಾಗಿ ಅವರ 5 ಎಕರೆ ಜಮೀನಿದೆ. ಜಮೀನೆಂದರೆ ಅದು ಕೇವಲ ಜಮೀನಲ್ಲ, ಅದೊಂದು ಪುಟ್ಟ ಕಾಡಿನಂತೆ ಕಾಣುತ್ತದೆ. ಕೃಷಿಯ ಗಂಧ, ಗಾಳಿ ಇಲ್ಲದೆ ಬಂಜರು ಭೂಮಿಯಲ್ಲಿ ಗಿಡ, ಮರ ಬೆಳೆಸಿ ಕಾಡನ್ನು ಸೃಷ್ಟಿಸಿದ್ದಾರೆ. ಪ್ರದೀಪ್​​ ಮಾಡುತ್ತಿದ್ದ ಕೆಲಸ ನೋಡಿ ಆರಂಭದಲ್ಲಿ ಇವರನ್ನು ಹುಚ್ಚ ಅಂದವರು ಈಗ ಭೇಷ್ ಎನ್ನುತ್ತಿದ್ದಾರೆ.

image


ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆದಿರುವ ವಿಶಿಷ್ಟ ಗಿಡ, ಮರ, ಸಸ್ಯಗಳು ಕಣ್ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಯುವ ಪೀಳಿಗೆಗೆ ಅವುಗಳನ್ನು ಪರಿಚಯಿಸುವ ಕೆಲಸವನ್ನೂ ಮಾಡಬೇಕಿದೆ. ಮತ್ತು ಈ ಅಪರೂಪದ ಸಸ್ಯಗಳನ್ನು ನಮ್ಮ.ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳು ಆ ಕೆಲಸ ಮಾಡುತ್ತಿವೆ. ಅವುಗಳ ಜೊತೆ ನಾವೂ ಕೈಜೋಡಿಸವೇಕು ಎಂಬ ಉದ್ದೇಶದಿಂದ ನಾನು ಈ ಕೆಲಸ ಮಾಡುತ್ತಿದ್ದೇನೆ ಅಂತಾರೆ ಪ್ರದೀಪ್ ಬಾಗಿ.

ಆರ್ಕಿಡ್​​ಗಳೆಂದರೆ ಪ್ರದೀಪ್ ಅವರಿಗೆ ಅಚ್ಚುಮೆಚ್ಚು. ಭೂಮಿಯ ಮೇಲೆ ಹಲವು ಬಗೆಯ ಆರ್ಕಿಡ್​​ಗಳಿವೆ. ಅವುಗಳ ಬಗ್ಗೆ ಎಲ್ಲರಿಗೂ ಮಾಹಿತಿಯೇ ಇರುವುದಿಲ್ಲ. ಜಗತ್ತಿನ ಅತ್ಯಂತ ಸುಂದರ ಹೂ ಎನಿಸಿರುವ ಆರ್ಕಿಡ್, ಸಭೆ, ಸಮಾರಂಭ, ಶುಭ ಕಾರ್ಯಗಳಲ್ಲಿ ಅಲಂಕಾರಕ್ಕೆ ಬಳಸುತ್ತಾರೆ. ಕೆಲ ಬಗೆಯ ಆರ್ಕಿಡ್​​ಗಳು ಗಿಡದಿಂದ ಕಿತ್ತ ಬಳಿಕ ಇಪ್ಪತ್ತು ದಿನಗಳ ಕಾಲ ಬಾಡುವುದಿಲ್ಲ. ಅಂಥ ಹೂಗಳನ್ನೂ ಬೆಳೆಸುವ ಅಪರೂಪದ ಕಾರ್ಯ ಮಾಡುತ್ತಿದ್ದಾರೆ ಪ್ರದೀಪ್.

ಹೂವಿನ ಗಿಡಗಳು ಮಾತ್ರವಲ್ಲ ನನ್ನ ತೋಟದಲ್ಲಿ ಕ್ಯಾಕ್ಟಸ್​​ಗಳ ದೊಡ್ಡ ಲೋಕವೇ ಇದೆ. ಕ್ಯಾಕ್ಟಸ್ ಅಂದರೆ ಕಳ್ಳಿಗಳು. ಸುಮಾರು ಐನೂರಕ್ಕೂ ಹೆಚ್ಚು ಜಾತಿಯ ಕ್ಯಾಕ್ಟಸ್​​ಗಳು ಇವರ ಸಂಗ್ರಹದಲ್ಲಿದ್ದು, ಮುಳ್ಳುರಹಿತ, ಮುಳ್ಳುಸಹಿತ ಕಳ್ಳಿಗಿಡಗಳೂ ಇವೆ. ಇದಿಷ್ಟೇ ಅಲ್ಲ ನನ್ನ ತೋಟದಲ್ಲಿ ಥಾಯ್ಲೆಂಡ್​​ನ ಡ್ರ್ಯಾಗನ್ ಫ್ರೂಟ್, ಲಿಂಬೆ ಜಾತಿಯ ಲ್ಯಾಂಬುಟಾನ್, ಆಸ್ಟ್ರೇಲಿಯಾದ ಅಕೇಶಿಯಾ, ವಿಯೆಟ್ನಾಂನ ಬಾಳೆ, ಟ್ಯಾಂಗೋದ ಮೂಸಂಬಿ ಸೇರಿದಂತೆ 165 ಮಾದರಿಯ ಕಣಗಲ ಹೂಗಳ ಗಿಡಗಳಿವೆ ಅಂತಾರೆ ಪ್ರದೀಪ್ ಬಾಗಿ.

image


ಜಾವಾ ಮತ್ತು ಸುಮತ್ರಾ ದ್ವೀಪ ಮೂಲದಲ್ಲಿ ದೊರೆಯುವ ರಿಯಲ್ ಗುಡ್ ಲಕ್ ಬಿದಿರು, ಕರಿ ಬಿದಿರು ಸೇರಿದಂತೆ 40 ಜಾತಿಯ ಬಿದಿರು ಪ್ರದೀಪ್ ಅವರ ತೋಟದಲ್ಲಿ ಮೈದಳೆದಿವೆ. ಇದರ ಜೊತೆಗೆ ಬಿಸ್ಮಾರ್ಕಿಯಾ ಸೇರಿದಂತೆ 30ಕ್ಕೂ ಹೆಚ್ಚು ಪ್ರಬೇಧದ ತಾಳೆ, 42 ಬಗೆಯ ಮಾವಿನಹಣ್ಣು, ಆಕರ್ಷಕ ಆಲದ ಮರಗಳು, 50ವರ್ಷಗಳಷ್ಟು ಹಳೆಯ ಬೋನ್ಸಾಯ್ ಮರಗಳು, ಆನೆಯ ಕಿವಿಯಂತೆ ಕಾಣುವ ಎಲೆಯಿರುವ ಘೋಸ್ಟ್ ಪ್ಲಾಂಟ್, ಮೆಕ್ಸಿಕೋ ಮೂಲದ ಅಲೊವೆರಾ, ಆಲಂಕಾರಿಕ ಪೈನಾಪಲ್, ಹೆಲಿಕೋನಿಯಾ, ಬರ್ಡ್ಸ್ ನೆಸ್ಟ್ ಫರ್ನ್, ಕೀಟಭಕ್ಷಕ ಪಿಚರ್ಪ್ಲಾಂಟ್ ಸೇರಿದಂತೆ ಹಲವು ಸಸ್ಯ ಪ್ರಬೇಧಗಳನ್ನು ತಮ್ಮ ತೋಟದಲ್ಲಿ ಬೆಳೆದಿದ್ದಾರೆ ಪ್ರದೀಪ್ ಬಾವಿ.

ಲಕ್ಷಗಟ್ಟಲೆ ಖರ್ಚು ಮಾಡಿ ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಸಸ್ಯ ಲೋಕವನ್ನು ಪೋಷಿಸುತ್ತಿರುವ ಪ್ರದೀಪ್ ಉತ್ತಮ ಪರಿಸರ ನಿರ್ಮಾಣ ಮಾಡಿದ್ದಾರೆ . ಸಾವಿರಾರು ರೂಪಾಯಿ ಖರ್ಚು ಮಾಡಿ ಸಸಿಯನ್ನು ಖರೀದಿಸುವ, ಬೇರೆ ಕಡೆಯಿಂದ ತರಿಸಿಕೊಂಡು ಬೆಳೆಸುವುದರಲ್ಲೇ ತೃಪ್ತಿ, ಖುಷಿ ಕಂಡುಕೊಂಡಿರುವ ಪ್ರದೀಪ್ ಇತರರಿಗೆ ಮಾದರಿಯಾಗಿ ನಿಲ್ಲುತ್ತಾರೆ.