ಕಾರು ಕೊಳ್ಳುವ ಚಿಂತನೆಯಲ್ಲಿದ್ದೀರಾ? ಹಾಗಾದರೆ ಆನ್‌ಲೈನ್‌ ಮುಖಾಂತರ ಹುಡುಕಾಟ ನಡೆಸಿ...

ಟೀಮ್​​ ವೈ.ಎಸ್​​. ಕನ್ನಡ

ಕಾರು ಕೊಳ್ಳುವ ಚಿಂತನೆಯಲ್ಲಿದ್ದೀರಾ? ಹಾಗಾದರೆ ಆನ್‌ಲೈನ್‌ ಮುಖಾಂತರ ಹುಡುಕಾಟ ನಡೆಸಿ...

Thursday November 19, 2015,

3 min Read

ನೀವು ಕಾರು ಕೊಳ್ಳಬೇಕೆಂದರೆ ಶೋರೂಂಗಳಿಗೆ ಹೋಗಬೇಕು. ಆದರೆ ಆನ್‌ಲೈನ್ ಪೋರ್ಟಲ್‌ಗಳು ಈ ಸಮಸ್ಯೆಯನ್ನು ದೂರವಾಗಿಸಿವೆ. ಒಂದು ಕಾರು ಕೊಳ್ಳುವ ಸಲುವಾಗಿ ಅನೇಕ ಶೋ ರೂಂಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು, ನಿಮ್ಮಿಷ್ಟದ ಮಾದರಿಯ ಸೌಲಭ್ಯಗಳುಳ್ಳ, ನಿಮ್ಮ ನಿರೀಕ್ಷೆಗೆ ತಕ್ಕಂತಹ ಕಾರುಗಳನ್ನು ಶಾರ್ಟ್‌ ಲಿಸ್ಟ್ ಮಾಡಲು ಈ ಆನ್‌ಲೈನ್‌ ಪೋರ್ಟಾಲ್‌ಗಳು ಸಹಾಯ ಮಾಡುತ್ತವೆ. ಕಾರ್‌ ದೇಖೋ.ಕಾಮ್ ನಂತಹ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಗ್ರಾಹಕರು ತಮಗಿಷ್ಟ ಬಂದ ಕಾರುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ಇದರಿಂದ ಸಮಯ, ಪ್ರಯತ್ನ, ಅನೇಕ ಶೋ ರೂಂಗಳಿಗೆ ಭೇಟಿ ನೀಡುವ ಹಣದ ಉಳಿತಾಯವಾಗುತ್ತದೆ.

image


ಅಲೆಕ್ಸಾ ಶ್ರೇಯಾಂಕದ ಪ್ರಕಾರ ಭಾರತದ ಪ್ರಖ್ಯಾತ 200 ವೆಬ್‌ಸೈಟ್‌ಗಳಲ್ಲಿ ಕಾರ್‌ದೇಖೋ.ಕಾಮ್ ಕೂಡ ಒಂದು. ಬಳಕೆಯಾದ ಕಾರುಗಳನ್ನು ಕೊಳ್ಳುವವರಿಗೆ, ಕಾರು ಮಾರಾಟಗಾರರಿಗೆ, ಡೀಲರ್‌ಗಳಿಗೆ ಮತ್ತು ಕಾರುಗಳ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಅತ್ಯಂತ ಪ್ರಿಯವಾದ ವೆಬ್ ಸೈಟ್ ಇದಾಗಿದೆ. ಅಲ್ಲದೇ ಇಲ್ಲಿ ಕಾರುಗಳ ಕುರಿತ ಸಂಪೂರ್ಣ ಮಾಹಿತಿಯೂ ಲಭ್ಯವಿದೆ.

ಸಾಂಪ್ರದಾಯಿಕ ಮತ್ತು ಆಫ್‌ಲೈನ್‌ ಕಾರು ಹುಡುಕಾಟದ ಅನುಭವಗಳಿಗೆ, ಸಮಸ್ಯೆಗಳಿಗೆ ಮುಕ್ತಾಯ ಹಾಡುತ್ತಿದೆ ಕಾರ್‌ದೇಖೋ.ಕಾಮ್. ಮೊದಲೆಲ್ಲಾ ಗ್ರಾಹಕರು ಗ್ರಾಹಕರಿಗೆ ಕಾರಿನ ಬಗ್ಗೆ ಎಲ್ಲಾ ಮಾಹಿತಿಗಳು ಒಂದೇ ಕಡೆ ಸಿಗುವುದು ಅಸಾಧ್ಯವಿತ್ತು. ಅದರಲ್ಲೂ ಕಾರುಗಳ ಸೌಲಭ್ಯ, ದರ, ಹಳೆಯ ಕಾರುಗಳು ಮತ್ತು ಹೊಸ ಕಾರುಗಳ ಹೋಲಿಕೆ ಮಾಡುವ ಅವಕಾಶಗಳೂ ಸಹ ದಕ್ಕುತ್ತಿರಲಿಲ್ಲ ಎಂದಿದ್ದಾರೆ ಕಾರ್ ದೇಖೋ.ಕಾಮ್‌ನ ಸಹಸಂಸ್ಥಾಪಕ ಮತ್ತು ಸಿಇಓ ಅಮಿತ್ ಜೈನ್. ಅಂದ ಹಾಗೆ ಈ ವೆಬ್‌ಸೈಟ್ ಆರಂಭವಾಗಿದ್ದು 2008ರಲ್ಲಿ.

image


ಆನ್‌ಲೈನ್ ಮಾದರಿಯಾಗಿ ಕಾರ್‌ದೇಖೋ.ಕಾಮ್ ಯಶಸ್ವಿಯಾಗಿದೆ. ಈ ಸಂಸ್ಥೆ 2013ರಲ್ಲಿ ಸಿಕ್ವೋಯಾ ಕ್ಯಾಪಿಟಲ್‌ನಿಂದ 15 ಮಿಲಿಯನ್ ಯುಎಸ್ ಡಾಲರ್ ಹೂಡಿಕೆ ಪಡೆದುಕೊಂಡಿತ್ತು. ಈ ವರ್ಷದ ಆರಂಭದಲ್ಲೇ ಹಿಲ್ ಹೌಸ್ ಕ್ಯಾಪಿಟಲ್, ಟೈಬೋರ್ನ್ ಕ್ಯಾಪಿಟಲ್ ಮತ್ತು ರತನ್‌ ಟಾಟಾ ಸಂಸ್ಥೆಯಿಂದ ಒಟ್ಟು 50 ಮಿಲಿಯನ್ ಹೂಡಿಕೆಯನ್ನು ಪಡೆದುಕೊಂಡಿದೆ.

ಕಾರ್‌ದೇಖೋ ಸಂಸ್ಥೆಯ ಅನುಭವ

ಅಮಿತ್ ಹೇಳುವಂತೆ, ಕಾರುಗಳನ್ನು ಕೊಳ್ಳುವ ವಿಚಾರದಲ್ಲಿ ಗ್ರಾಹಕರ ಸಾಂಪ್ರದಾಯಿಕ ಮನಸ್ಥಿತಿ ಬದಲಾಗಿದೆ. ಜನ ಶೋ ರೂಂಗಳಿಗೆ ಹೋಗಿ ಕಾರುಗಳ ಬಗ್ಗೆ ವಿಚಾರಿಸುವುದಕ್ಕಿಂತ ಆನ್‌ಲೈನ್‌ ಮುಖಾಂತರವೇ ಮಾಹಿತಿಪಡೆಯುವ ವಿಧಾನವನ್ನು ಅನುಸರಿಸುತ್ತಿದ್ದಾರೆ. ಗ್ರಾಹಕರಿಗೆ ಸಾಂಪ್ರದಾಯಿಕ ಮಾದರಿಗಿಂತ ಈ ಆನ್‌ಲೈನ್ ಮಾದರಿಯಲ್ಲೇ ಹೆಚ್ಚಿನ ತೃಪ್ತಿ ದೊರಕುತ್ತಿದೆ. ಇಲ್ಲಿನ ಅನುಕೂಲಗಳು ಮತ್ತು ಕ್ಷಿಪ್ರಗತಿಯ ಕಾರ್ಯಮಾದರಿ ಮತ್ತು ಸುರಕ್ಷಿತ ಆನ್‌ಲೈನ್ ಆರ್ಥಿಕ ವಹಿವಾಟಿನಿಂದ ಈ ಬದಲಾವಣೆ ಸಾಧ್ಯವಾಗಿದೆ.

ಕಾರ್ ದೇಖೋ.ಕಾಮ್ ಗ್ರಾಹಕರಿಗೆ ಅಗತ್ಯವಿರುವ ಮಾಹಿತಿಗಳನ್ನು ನೀಡುವುದು ಮತ್ತು ಕಾರುಗಳನ್ನು ಕೊಳ್ಳುವವರು ಮತ್ತು ಮಾರಾಟಗಾರರ ಮಧ್ಯೆ ಸಂಪರ್ಕಸೇತುವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಗ್ರಾಹಕರಿಗೂ, ಮಾರಾಟಗಾರರಿಗೂ ಸಕಾರಾತ್ಮಕ ಅನುಭವ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈವರೆಗೂ ವೆಬ್‌ಸೈಟ್‌ನಲ್ಲಿ ಹೊಸ ಕಾರುಗಳ 1400 ಡೀಲರ್‌ಗಳು ಮತ್ತು ಬಳಕೆಯಾದ ಕಾರುಗಳನ್ನು ಮಾರುವ 3000 ಡೀಲರ್‌ಗಳು ಸಕ್ರಿಯರಾಗಿದ್ದಾರೆ. ಪ್ರತಿ ತಿಂಗಳೂ ಕಾರ್ ದೇಖೋ.ಕಾಮ್ 10 ಮಿಲಿಯನ್ ಹಿಟ್‌ಗಳನ್ನು ಪಡೆಯುತ್ತಿದೆ. ಈ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಏರುತ್ತಲೇ ಇದೆ.

ಮೊಬೈಲ್‌ ಮೂಲಕವೂ ಈ ವೆಬ್‌ಸೈಟ್‌ಗೆ ಸುಲಭವಾಗಿ ಭೇಟಿ ನೀಡಬಹುದಾದ್ದರಿಂದ ಈ ವೆಬ್‌ಸೈಟ್‌ ಅನ್ನು ಬಳಸುವವರ ಸಂಖ್ಯೆಯಲ್ಲಿ ಕಂಪ್ಯೂಟರ್‌ ಬಳಕೆದಾರರಿಗಿಂತಲೂ ಮೊಬೈಲ್ ಬಳಕೆದಾರರೇ ಹೆಚ್ಚಿದ್ದಾರೆ ಎನ್ನುತ್ತಾರೆ ಅಮಿತ್. ಈ ವೆಬ್‌ಸೈಟ್‌ನಲ್ಲಿ ಸದ್ಯಕ್ಕೆ ವಾಸ್ತವ ಖರೀದಿಯ ಅವಕಾಶವನ್ನು ಒದಗಿಸಿಕೊಟ್ಟಿಲ್ಲ. ಆದರೆ ಈ ಕ್ಷೇತ್ರದಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಗಮನಿಸಿದರೆ ವಾಸ್ತವ ಖರೀದಿಯಂತಹ ದಿನಗಳೂ ದೂರ ಇಲ್ಲ ಎಂದೆನಿಸುತ್ತದೆ.

ವೆಬ್‌ಸೈಟ್‌ಗೆ ಏಕೆ ಕಾರ್‌ದೇಖೋ.ಕಾಮ್ ಎಂಬ ಹೆಸರು?

ಕಾರ್‌ ದೇಖೋ ಸಂಸ್ಥೆಯ ಪ್ರವರ್ತಕರು ತಮ್ಮ ಬಿಸಿನೆಸ್ ಮಾತ್ರವಲ್ಲದೇ ಜನರ ಮನಸ್ಸಿನಲ್ಲಿ ನಿಲ್ಲಬಲ್ಲ, ಅವರು ಪದೇ ಪದೇ ಹೇಳಿಕೊಳ್ಳುವಂತಹ, ಅವರಿಗೆ ಹತ್ತಿರವಾಗುವಂತಹ ಹೆಸರನ್ನು ಇಡಲು ಇಚ್ಛಿಸಿದ್ದರು. ಹಿಂಗ್ಲಿಶ್ ಸಂಸ್ಥೆಗೆ ದೊರಕಿದ್ದ ಜನಪ್ರಿಯತೆಯಿಂದ ಪ್ರೇರೇಪಿತರಾದ ಸಂಸ್ಥಾಪಕರುಗಳು ತಮ್ಮ ಸಂಸ್ಥೆಗೆ ಕಾರ್‌ ದೇಖೋ ಎಂಬ ಹೆಸರನ್ನಿಟ್ಟರು. ಇನ್ನು ಡಾಟ್‌ಕಾಮ್ ಎಂಬುದು ಎಲ್ಲಾ ಆನ್‌ಲೈನ್ ತಾಣಗಳಲ್ಲಿ ಮಾಮೂಲಿಯಾಗಿ ಕಂಡುಬರುವಂತಹ ಶಬ್ದವಾದುದರಿಂದ ಅದನ್ನೂ ಸೇರಿಸಿಕೊಂಡು ಕಾರ್‌ ದೇಖೋ.ಕಾಮ್ ಎಂಬ ಹೆಸರು ನಿರ್ಧಾರವಾಯಿತು. ಅಲ್ಲದೇ ಸಂಸ್ಥೆಯೊಂದು ಆನ್‌ಲೈನ್ ಮುಖಾಂತರ ವಿಸ್ತಾರವಾಗಿ ಬೆಳೆಯಬೇಕಾದರೆ, ತನ್ನ ಬ್ರಾಂಡಿಂಗ್‌ ಅನ್ನು ಪ್ರಸಿದ್ಧಪಡಿಸಿಕೊಳ್ಳಬೇಕಾದರೆ ಡಾಟ್ ಕಾಮ್ ಅತೀ ಮುಖ್ಯವಾದ ಅಂಶ ಎಂಬುದು ಅಮಿತ್ ಅವರ ಅಭಿಪ್ರಾಯ.

ಕಾರ್‌ ದೇಖೋ .ಕಾಮ್ ಸಂಸ್ಥೆಯ ಮುಂದಿದ್ದ ದೊಡ್ಡ ಸವಾಲೆಂದರೆ ಅದು ಗ್ರಾಹಕರ ನಂಬಿಕೆಯನ್ನು ಗಳಿಸಿಕೊಳ್ಳಬೇಕಿತ್ತು. ಕಾರ್‌ ದೇಖೋ ಸಂಸ್ಥೆ ವಿಷಯಾತ್ಮಕ, ಪಾರದರ್ಶಕ ಮತ್ತು ಸಮರ್ಪಕ ಟೂಲ್‌ಗಳು, ಮಾಹಿತಿಯನ್ನು ನೀಡುತ್ತಾ, ವಿಶ್ವಾಸಾರ್ಹತೆಯನ್ನು ಗಳಿಸುತ್ತಾ ಮುಂದುವರೆಯುತ್ತಿದೆ. ಆನ್‌ಲೈನ್ ಮೂಲಕ ಹುಡುಕಾಟ ನಡೆಸುವ ಹೆಚ್ಚಿನ ಗ್ರಾಹಕರನ್ನು ಪಡೆಯಲು ಶ್ರಮಿಸುತ್ತಿದೆ. ಒಮ್ಮೆ ಮಾರುಕಟ್ಟೆಯ ಸಮರ್ಪಕ ಅಗತ್ಯವನ್ನು ಗುರುತಿಸಿದರೆ ಮತ್ತು ಆ ಅಗತ್ಯವನ್ನು ಹೇಗೆ ಪೂರೈಸಬೇಕೆಂದು ತಿಳಿದುಕೊಂಡರೆ ವೆಬ್‌ಸೈಟ್ ನಿಮ್ಮ ಟಾರ್ಗೆಟ್ ಗ್ರಾಹಕರನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.

ಕಾರ್‌ದೇಖೋ.ಕಾಮ್ ವೆಬ್‌ಸೈಟ್ ಸಾಂಪ್ರದಾಯಿಕ ಮಾದರಿಯಲ್ಲಿಯೇ ಮುಂದುವರೆಯುತ್ತಿರುವುದರಿಂದ ಕಾರ್‌ದೇಖೋ.ಕಾಮ್ ವೆಬ್‌ಸೈಟ್ ಜನಪ್ರಿಯ ಕಾರು ಮಾರಾಟ ವೇದಿಕೆಯಾಗಿ ಯಶಸ್ವಿಯಾಗಿದೆ. ನಿಮ್ಮ ಬಳಿ ಸಮರ್ಪಕ ಯೋಜನೆ ಇದ್ದಲ್ಲಿ ಅದನ್ನು ಕೂಡಲೇ ಕ್ರಿಯಾರೂಪಕ್ಕೆ ತನ್ನಿ. ಅದನ್ನು ವೆಬ್‌ಸೈಟ್ ಮುಖಾಂತರ ಜನಪ್ರಿಯಗೊಳಿಸಿ ಎಂಬುದು ಅಮಿತ್ ಅವರ ಸಲಹೆ.

ಲೇಖಕರು: ಶಾರಿಕಾ ನಾಯರ್​​

ಅನುವಾದಕರು: ವಿಶ್ವಾಸ್​​​