ಮಣಿಪುರದ ಸ್ವಾಭಿಮಾನಿ ಮಹಿಳೆ: ಹರ್ಬಲ್ ಸೋಪ್‍ನಿಂದಲೇ ಬದುಕು ಕಟ್ಟಿಕೊಂಡ ಜೀನಾ

ಟೀಮ್​​ ವೈ.ಎಸ್​​.

ಮಣಿಪುರದ ಸ್ವಾಭಿಮಾನಿ ಮಹಿಳೆ: ಹರ್ಬಲ್ ಸೋಪ್‍ನಿಂದಲೇ ಬದುಕು ಕಟ್ಟಿಕೊಂಡ ಜೀನಾ

Monday November 09, 2015,

3 min Read

ಜೀನಾ ಖುಮುಜುಮ್...64ರ ಹರೆಯದ ಮಣಿಪುರದ ಉದ್ಯಮಿ. ಮಣಿಪುರದಲ್ಲಿ ಇವರನ್ನು ಗಿಡಮೂಲಿಕೆ ವೈದ್ಯೆ ಅಂತಾನೇ ಕರೀತಾರೆ. `ಮಂಗಲ್' ಹೆಸರಿನಲ್ಲಿ ಜೀನಾ 8 ಬಗೆಯ ಗಿಡಮೂಲಿಕೆ ಸಾಬೂನುಗಳನ್ನು ತಯಾರಿಸ್ತಾರೆ. 2004ರಲ್ಲಿ ಮಂಗಲ್ ಬ್ರಾಂಡ್‍ನ ಸೋಪ್‍ಗಳು ಮಾರುಕಟ್ಟೆಗೆ ಬಂದಿದ್ದವು . ಈ ಸೋಪ್‍ಗಳಿಗೆ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಿದೆ. ಮೊದಲು ಈ ಬ್ರಾಂಡನ್ನು `ಅವರ್ ರೆಸ್ಟ್ ಹೌಸ್' ಅಂತಾ ಕರೆಯಲಾಗ್ತಿತ್ತು. ದೆಹಲಿಯಲ್ಲಿ ನಡೆದ ರಾಷ್ಟ್ರಪತಿಗಳ ಪ್ರದರ್ಶನಲ್ಲಿ ಜೀನಾ ಪಾಲ್ಗೊಂಡಿದ್ರು. ನಂತರ 2011ರಲ್ಲಿ ಇದಕ್ಕೆ `ಮಂಗಲ್' ಎಂದು ಜೀನಾ ಮರುನಾಮಕರಣ ಮಾಡಿದ್ರು. ತಮ್ಮ ಅಸ್ತಿತ್ವ ಕಂಡುಕೊಳ್ಳಲು ನಾಲ್ಕು ಮಕ್ಕಳ ತಾಯಿ ಜೀನಾ ನಡೆಸಿದ ಹೋರಾಟ ನಿಜಕ್ಕೂ ಮಾದರಿಯಾಗುವಂಥದ್ದು. ಉದ್ಯಮಿಯಾಗಿ ಗುರುತಿಸಿಕೊಳ್ಳಲು ಸಾಕಷ್ಟು ಪರಿಶ್ರಮಪಟ್ಟಿರುವ ಅವರು ಕಠಿಣ ಹಾದಿ ಸವೆಸಿದ್ದಾರೆ. ಅವರ ವೈವಾಹಿಕ ಜೀವನ ಸುಖಮಯವಾಗೇನೂ ಇರಲಿಲ್ಲ. ಚಾಲಕನ ಕೆಲಸ ಮಾಡ್ತಾ ಇದ್ದ ಪತಿಗೆ ಕುಡಿಯುವ ಚಟವಿತ್ತು. ನಾಲ್ಕು ಮಕ್ಕಳನ್ನು ಪೋಷಿಸಲು ಆತ ನಯಾಪೈಸೆ ಸಹಾಯ ಮಾಡ್ತಿರ್ಲಿಲ್ಲ. ಮಕ್ಕಳನ್ನು ಶಾಲೆಗೆ ಕಳಿಸಬೇಕೆಂಬ ಆಲೋಚನೆಯೂ ಆತನಿಗೆ ಇರಲಿಲ್ಲ. ಏನಾದ್ರೂ ವ್ಯಾಪಾರ ಶುರು ಮಾಡಿದ್ರೆ ಮಾತ್ರ ಬದುಕಲು ಸಾಧ್ಯ ಅನ್ನೋದನ್ನು ಜೀನಾ ಅರ್ಥಮಾಡಿಕೊಂಡಿದ್ರು. ಮಕ್ಕಳಿಗೆ ಆಸರೆಯಾಗಲು ಏನಾದ್ರೂ ಮಾಡಲೇಬೇಕೆಂದು ನಿರ್ಧರಿಸಿದ್ರು.

image


ಉದ್ಯಮ ಆರಂಭ...

ಜೀನಾ ಉಣ್ಣೆಯ ಬ್ಲೌಸ್, ಸಾಕ್ಸ್, ಗ್ಲೌಸ್‍ಗಳನ್ನೆಲ್ಲ ಕೈಯಲ್ಲೇ ಹೆಣೆಯಲು ಆರಂಭಿಸಿದ್ರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೇಡದ ಸಿಮೆಂಟ್ ಚೀಲಗಳಿಂದ ಬಗೆಬಗೆಯ ಕ್ಯಾರಿ ಬ್ಯಾಗ್‍ಗಳನ್ನು ತಯಾರಿಸಿದ್ರು. ಆ ಸಮಯದಲ್ಲೇ ಜೀನಾರ ಬದುಕನ್ನೇ ಬದಲಾಯಿಸುವ ಘಟನೆಯೊಂದು ನಡೀತು. ಸಾಬೂನು ತಯಾರಿಕೆ ಬಗ್ಗೆ ತರಬೇತಿ ಪಡೆಯುವ ಅವಕಾಶ ಅವರಿಗೆ ಸಿಕ್ಕಿತ್ತು. ತರಬೇತಿ ಬಳಿಕ ಜೀನಾ ಮನೆಯಲ್ಲೇ ಸೋಪ್ ತಯಾರಿಸಲು ಶುರು ಮಾಡಿದ್ರು. ಬಳಿಕ ಸೌತೆಕಾಯಿ, ನಿಂಬೆಹಣ್ಣು, ಅಲೋವೆರಾ, ಅರಿಶಿನವನ್ನೆಲ್ಲ ಬಳಸಿ ಬಗೆ ಬಗೆಯ ಸಾಬೂನು ತಯಾರಿಸಿದ್ರು. ಸಹಜವಾಗಿಯೇ ಜೀನಾ ಅವರ ಆಸಕ್ತಿ ಗಿಡಮೂಲಿಕೆಗಳ ಕಡೆಗಿತ್ತು. ಪ್ರತಿನಿತ್ಯ ತಲೆ ಹಾಗೂ ದೇಹ ಸ್ವಚ್ಛಗೊಳಿಸಲು ಗಿಡಮೂಲಿಕೆಗಳನ್ನು ಬಳಸಿದ್ರೆ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮನೆಯ ಹಿರಿಯರಿಂದ ಜೀನಾ ತಿಳಿದುಕೊಂಡಿದ್ರು. ಇನ್ನು ಕೆಲವರು ಜಪಾನ್‍ಗೆ ತೆರಳಿ ಅಲ್ಲಿ ಸಾವಯವ ಕೃಷಿ ಬಗ್ಗೆ ತರಬೇತಿ ಪಡೆದುಕೊಂಡು ಬಂದಿದ್ರು. ಇದೆಲ್ಲವನ್ನೂ ನೋಡಿದಾಗ ತಾವು ಕೂಡ ಸಾಬೂನು ತಯಾರಿಕೆ ಉದ್ಯಮದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕೆಂದು ನಿರ್ಧರಿಸಿದ್ರು. ಇದೀಗ ಜೀನಾ ಅವರು ತಯಾರಿಸುವ ಸಾಬೂನುಗಳಿಗೆ ಅಪಾರ ಅಭಿಮಾನಿಗಳಿದ್ದಾರೆ. ಮಣಿಪುರಕ್ಕೆ ಬರುವ ವಿದೇಶೀಯರು ಕೂಡ ಸಾಬೂನುಗಳನ್ನು ಭಾರೀ ಪ್ರಮಾಣದಲ್ಲಿ ಕೊಂಡುಕೊಳ್ತಿದ್ದಾರೆ.

image


ಮೊದಲ ಬಾರಿ ಸಾಬೂನು ತಯಾರಿಸಿದ ನೆನಪು ಜೀನಾ ಮನದಲ್ಲಿ ಇನ್ನೂ ಹಸಿರಾಗಿದೆ. ಒಂದುಹೊತ್ತಿನ ಊಟ ಬಿಟ್ಟು, ಅದೇ ಹಣದಲ್ಲಿ ಅವರು ಸಾಬೂನು ತಯಾರಿಸಿದ್ರು. ನಾವು ಬಡವರು ನಿಜ. ಆದ್ರೆ ಯಾರಿಂದಲೂ ನಯಾಪೈಸೆ ಹಣ ಪಡೆದಿಲ್ಲ ಎನ್ನುತ್ತಾರೆ ಅವರು. ಬಡತನದ ನಡುವೆಯೂ ಸ್ವಾಭಿಮಾನಿಯಾಗಿ ಅವರು ತಮ್ಮ ಮಕ್ಕಳನ್ನು ಬೆಳೆಸಿದ್ದಾರೆ.

ಪ್ರಮಾಣ ಪತ್ರಗಳನ್ನೇ ಸುಟ್ಟ ಪತಿ

ಕುಡಿದ ಅಮಲಿನಲ್ಲಿ ಜೀನಾರ ಪತಿ ಒಮ್ಮೆ ಅವರ ಶೈಕ್ಷಣಿಕ ಪ್ರಮಾಣಪತ್ರಗಳನ್ನೆಲ್ಲ ಸುಟ್ಟು ಹಾಕಿದ್ದ. ಉನ್ನತ ವ್ಯಾಸಂಗ ಮಾಡಿದ್ರೂ ಅದನ್ನು ಸಾಬೀತುಪಡಿಸಲು ಅವರ ಬಳಿ ಪ್ರಮಾಣಪತ್ರಗಳಿಲ್ಲ. ಕೇವಲ ಎಸ್‍ಎಸ್‍ಎಲ್‍ಸಿ ಸರ್ಟಿಫಿಕೇಟ್ ಮಾತ್ರ ಇದೆ. ಹಾಗಾಗಿ ಅವರ ಬಯೋಡೇಟಾದಲ್ಲಿ ಅಷ್ಟು ಮಾತ್ರ ಓದಿದ್ದೇನೆಂದು ನಮೂದಿಸ್ತಾರೆ. ಅಸಹಾಯಕ ಹೆಣ್ಣು ಮಗಳು ಜೀನಾ ಸಾಬೂನು ಉದ್ಯಮಕ್ಕೆ ಕೈಹಾಕುವ ಸಂದರ್ಭದಲ್ಲಿ ಪತಿಯಿಂದ್ಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಜೀನಾ ಮಾರುಕಟ್ಟೆಗೆ ಹೋಗಿ ಸಾಬೂನು ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಖರೀದಿಸುವುದು ಪತಿಗೆ ಇಷ್ಟವಿರಲಿಲ್ಲ. ಜೀನಾರಲ್ಲಿ ನಿರುತ್ಸಾಹ ಮೂಡಿಸಲು ಆತ ಎಲ್ಲಾ ರೀತಿಯ ಕಸರತ್ತನ್ನೂ ಮಾಡುತ್ತಿದ್ದ. ಪತಿಯ ನಡತೆಯಿಂದ ಮನಸ್ಸಿನಲ್ಲಿ ಮೂಡುವ ಋಣಾತ್ಮಕ ಚಿಂತನೆಗಳನ್ನು ತಡೆಯಲು ಜೀನಾ ಸದಾಕಾಲ ಕೆಲಸದಲ್ಲಿ ನಿರತರಾಗಿರುತ್ತಿದ್ರು.

image


ಯಶಸ್ವಿ ಉದ್ಯಮಿ...

ಈಗ ಜೀನಾ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ಪ್ರತಿದಿನ 70 - 80 ಸಾಬೂನುಗಳನ್ನು ತಯಾರಿಸ್ತಿದ್ದಾರೆ. ವರ್ಷದ ಹಿಂದಷ್ಟೆ ಜೀನಾ ಪತಿಯನ್ನು ಕಳೆದುಕೊಂಡಿದ್ದಾರೆ. ಮಗಳು ಮತ್ತು ಸೊಸೆ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಉತ್ತಮ ಜಗತ್ತು ನಿರ್ಮಾಣವಾಗಬೇಕಂದ್ರೆ ಮಹಿಳಾ ಸಬಲೀಕರಣ ಅಗತ್ಯ ಅನ್ನೋದು ಜೀನಾರ ಅಭಿಪ್ರಾಯ. ಹಾಗಾಗಿ ಜೀನಾ ವಿಧವೆಯರಿಗೆ ಗಿಡಮೂಲಿಕೆಗಳ ಸೋಪ್ ತಯಾರಿಕೆ ಬಗ್ಗೆ ತರಬೇತಿ ನೀಡ್ತಿದ್ದಾರೆ. ಒಂದು ಸೋಪ್‍ಗೆ 20 ರೂಪಾಯಿಯಂತೆ ಜೀನಾ ಮಾರಾಟ ಮಾಡ್ತಾರೆ. ತಿಂಗಳಿಗೆ 10,000 ರೂಪಾಯಿ ಸಂಪಾದಿಸ್ತಾರೆ. ಆನ್‍ಲೈನ್‍ನಲ್ಲೂ ಅವರು ಮಂಗಲ್ ಸೋಪ್‍ಗಳನ್ನು ಮಾರಾಟ ಮಾಡ್ತಿದ್ದಾರೆ. ಭಾರತದ ರಾಷ್ಟ್ರೀಯ ಇನ್ನೋವೇಶನ್ ಫೌಂಡೇಶನ್ ಜೀನಾ ಅವರ ಪ್ರತಿಭೆ ಮತ್ತು ಪರಿಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಬ್ಯಾಂಕ್‍ಗಳಿಂದ ಹಣಕಾಸು ನೆರವು ದೊರೆತರೆ ಜೀನಾ ತಮ್ಮ ಉದ್ಯಮವನ್ನು ವಿಸ್ತರಿಸಿ, ಯಶಸ್ಸು ಪಡೆಯಲಿದ್ದಾರೆ.