ಟ್ರಶರ್ ಆಫ್ ಇನ್ನೋಸೆನ್ಸ್​​ನಿಂದ ಬೆಳಕು ಕಾಣುತ್ತಿರುವ ಮನಸುಗಳ ಮಾತು

ಟೀಮ್​​ ವೈ.ಎಸ್​​.

ಟ್ರಶರ್ ಆಫ್ ಇನ್ನೋಸೆನ್ಸ್​​ನಿಂದ ಬೆಳಕು ಕಾಣುತ್ತಿರುವ ಮನಸುಗಳ ಮಾತು

Monday November 02, 2015,

4 min Read

ಟ್ರಶರ್ ಆಫ್ ಇನ್ನೋಸೆನ್ಸ್ ಅನ್ನುವುದು ಕೋಲ್ಕತ್ತಾದಲ್ಲಿ ಹುಟ್ಟಿದ ಯಾವುದೇ ಆದಾಯದ ನಿರೀಕ್ಷೆಯಿಲ್ಲದ ನಿಸ್ವಾರ್ಥ ಸಾಮಾಜಿಕ ಸಂಸ್ಥೆ. ಹಿಂದುಳಿದ ಹಾಗೂ ದುರ್ಬಲ ಮಕ್ಕಳ ಮನೋವಿಕಾಸ ಹಾಗೂ ಸಬಲೀಕರಣ ಇದರ ಏಕಮೇವ ಉದ್ದೇಶ. ಇದರಿಂದ ಬೆಳಕು ಕಾಣುತ್ತಿರುವ ಹಲವು ಮಕ್ಕಳಲ್ಲಿ 11 ವರ್ಷದ ರುಬೆಯೇ ಖಟೂನ್ ಸಹ ಒಬ್ಬಳು. ಕೋಲ್ಕತ್ತಾದ ಉಪಪಟ್ಟಣ ತಾಕೂರ್​​ಪುರದವಳಾದ ರುಬೆಯೇಗೆ ಹೊಸ ಆಲೋಚನೆಗಳ ಪರಿಚಯ ಮಾಡಿಸಿಕೊಟ್ಟಿದ್ದು ಟ್ರಶರ್ ಆಫ್ ಇನ್ನೋಸೆನ್ಸ್. ಅವಳು ಇದನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡು ತನ್ನಲ್ಲಾದ ಬದಲಾವಣೆಗಳನ್ನು ಹೇಳಿಕೊಳ್ಳುತ್ತಾಳೆ.

ನಾನು ಕಾಳಜಿಯೇ ಇಲ್ಲದೇ ಬೆಳೆದೆ. ನನ್ನ ಶಾಲೆಯಲ್ಲಿ, ಶಿಕ್ಷಣದಲ್ಲಿ ಹಾಗೂ ಗೆಳೆಯರೊಂದಿಗೆ ಕಳೆಯುವಾಗ ನನ್ನ ಬಗ್ಗೆ ಗಮನ ಹರಿಸಲು ನನಗೆ ಸಮಯವೇ ಇರುತ್ತಿರಲಿಲ್ಲ. ಆಗ ನಾನು ಟ್ರಷರ್ ಆಫ್ ಇನ್ನೋಸೆನ್ಸ್(ಟಿಒಐ)ನ ಇಗ್ನೇಟೈಡ್ ಮೈಂಡ್ಸ್ ಕಾರ್ಯಕ್ರಮಕ್ಕೆ ಸೇರ್ಪಡೆಗೊಂಡೆ. ಆಗಿನಿಂದ ನನ್ನಲ್ಲಿ ಮಹತ್ವದ ಬದಲಾವಣೆಗಳಾಗತೊಡಗಿದವು. ಇಂದು ನಾನು ನನ್ನ ಬಗ್ಗೆ ಹಾಗೂ ನನ್ನ ಸುತ್ತಲಿನ ವಾತಾವರಣದ ಬಗ್ಗೆ ಗಹನವಾಗಿ ಯೋಚಿಸತೊಡಗಿದ್ದೀನಿ. ನನಗೀಗ ಶಿಕ್ಷಣದ ಮಹತ್ವದ ಅರಿವಾಗಿದೆ. ಜೊತೆಗೆ ಉತ್ತಮ ನಡವಳಿಕೆ, ಬೇರೆಯವರನ್ನು ಗೌರವಿಸುವುದು, ಸಹಾಯಮಾಡುವುದು, ಮುಖ್ಯವಾಗಿ ನಮ್ಮ ಸುತ್ತಲಿನ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳುವುದರ ಅರಿವಾಗಿದೆ. ಒಬ್ಬ ಭಾರತೀಯ ಪ್ರಜೆಯಾಗಿ ನನಗೆ ನನ್ನ ಜವಾಬ್ದಾರಿಗಳ ಅರಿವಾಗಿದೆ. ಅಂತರಿಕ್ಷ ಹಾಗೂ ಆಕಾಶ ಅನ್ನುವ ವಿಷಯದ ತರಗತಿ ನನಗೆ ಅತ್ಯಂತ ಆಸಕ್ತಿ ಮೂಡಿಸಿದೆ. ವಿಶ್ವ ಹಾಗೂ ಅದರಲ್ಲಿ ಅಡಕವಾಗಿರುವ ಭೌತಿಕ ವಸ್ತುಗಳ ವಿಸ್ತಾರದ ಬಗ್ಗೆ ನನಗೆ ಕುತೂಹಲ ಹುಟ್ಟಿದೆ. ಈಗೀಗ ನನ್ನ ಬಗ್ಗೆ ನನಗೆ ಆತ್ಮವಿಶ್ವಾಸ ಹುಟ್ಟಿದೆ ಅಂತ ಹೇಳುತ್ತಾಳೆ ರಬೇಯಾ.

image


ರಬೆಯಾಳಂತೆ ಮಿತಾ ಕರ್ಮಕರ್ ಸಹ ಕಸ್ಸಿಪೊರ್ ವಿದ್ಯಾರ್ಥಿನಿಯರ ಕಲಿಕಾ ಕೇಂದ್ರದಲ್ಲಿ 6ನೇ ತರಗತಿ ಕಲಿಯುತ್ತಿದ್ದಾಳೆ. ಮಿತಾ ಮಕ್ಕಳಿಗಾಗಿ ರಚನೆಯಾದ ಕಥೆ ಪುಸ್ತಕವೊಂದರ ಸಹ ಲೇಖಕಿಯೂ ಹೌದು.

ಟಿಒಐನ ಮೈ ಬುಕ್ ಮೈ ವರ್ಲ್ಡ್ ಕಾರ್ಯಕ್ರಮದಲ್ಲಿ ಮಿತಾ ಭಾಗವಹಿಸಿದ್ದಳು. ಅವಳಿಗೆ ಕಥೆ ಪುಸ್ತಕವೊಂದನ್ನು ರಚಿಸಲು ಹೇಳಲಾಗಿತ್ತು. ಆದರೆ ಇದರ ಬಗ್ಗೆ ಕೊಂಚವೂ ಜ್ಞಾನವಿಲ್ಲದ ಮಿತಾಳಿಗೆ ಇದು ಅತ್ಯಂತ ಸವಾಲಿನ ಸಂಗತಿಯಾಗಿತ್ತು. ಆದರೆ ಟಿಒಐನ ಸದಸ್ಯರು ಅವಳಿಗೆ ಸಹಕರಿಸಿ, ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿದರು. ಬಳಿಕ ಅವಳು ತನ್ನ ತಂಡದೊಂದಿಗೆ ಸೇರಿ ಚಿತ್ರ ಸಹಿತ ಕಥೆಗಳಿರುವ ಪುಸ್ತಕ ರಚನೆಯಲ್ಲಿ ತೊಡಗಿದಳು. ಮೊದ ಮೊದಲು ಅವಳು ಬರೆಯುತ್ತಿದ್ದ ಚಿತ್ರಗಳು ಅಷ್ಟೇನು ಆಕರ್ಷಕವಾಗಿರಲಿಲ್ಲ. ಆಗ ಅವಳ ನೆರವಿಗೆ ಮತ್ತೆ ಟಿಒಐನ ಸದಸ್ಯರು ಬಂದು ಹೇಳಿಕೊಟ್ಟರು. ನಿಧಾನವಾಗಿ ಚಿತ್ರಗಳನ್ನು ತಿದ್ದಿ, ಪರಿಣಾಮಕಾರಿಯಾಗಿ ಕಥೆಗಳನ್ನು ಹಣೆದಳು. ಆನಂತರ ಹೊರತಂದ ಚಿತ್ರಕಥಾ ಪುಸ್ತಕ ಸಾಕಷ್ಟು ಶ್ಲಾಘಿಸಲ್ಪಟ್ಟಿತು. ಇದೊಂದು ಮರೆಯಲಾಗದ ಹಾಗೂ ಹೆಮ್ಮೆ ಪಡುವ ಸಂಗತಿ ಅಂತ ಮಿತಾ ಹೇಳುತ್ತಾಳೆ.

ಸಂಶೋಧನೆಗಳು ಹಾಗೂ ಅಭಿವ್ಯಕ್ತಿ

ಟ್ರಶರ್ ಆಫ್ ಇನ್ನೋಸೆನ್ಸ್ (ಟಿಒಐ) ಒಂದು ಆದಾಯ ರಹಿತ ಸಂಸ್ಥೆ. ಹಿಂದುಳಿದ ಮಕ್ಕಳ ಕನಸಿನ ಸಾಮರ್ಥ್ಯಕ್ಕೆ ಪ್ರೋತ್ಸಾಹ ನೀಡಿ, ಅವರನ್ನು ಸಬಲೀಕರಿಸಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ ಅವರಲ್ಲಿರುವ ಕ್ರಿಯಾತ್ಮಕ ಕೆಲಸವನ್ನು ಹೊರತರುವುದೇ ಇದರ ಉದ್ದೇಶ. ಇದು ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬಹಿರಂಗಪಡಿಸುತ್ತದೆ. ಜೊತೆಗೆ ಮಕ್ಕಳ ಕನಸುಗಳಿಗೆ ಸ್ಪಷ್ಟವಾದ ರೂಪ ನೀಡಿ, ಸಾಮಾಜಿಕ ಅನಿಷ್ಠಗಳಿಂದ ಅವರನ್ನು ದೂರವಿಡುವ ಪ್ರಯತ್ನ ಮಾಡುತ್ತಿದೆ.

ಮಕ್ಕಳ ಸೃಜನಾತ್ಮ ಚಿಂತನೆಗಳನ್ನು ಜಾರಿಗೊಳಿಸುವ ಯತ್ನದಲ್ಲಿ ಅವಕಾಶಗಳು ಕಡಿಮೆಯಿದೆ. ಜೊತೆಗೆ ಈ ಮಕ್ಕಳಿಗೆ ಸ್ವಂತ ಆಲೋಚನೆ ಮಾಡುವ ಶಕ್ತಿಯೂ ಇಲ್ಲ ಹಾಗೂ ಯೋಗ್ಯ ಶಿಕ್ಷಣವೂ ದೊರಕುತ್ತಿಲ್ಲ.ಈ ಮಕ್ಕಳಿಗೆ ಅಗತ್ಯವಿರುವುದು ಅವಕಾಶ ಹಾಗೂ ಗುಣಾತ್ಮಕ ಶಿಕ್ಷಣ. ಇದು ದೊರೆಯದ ಹೊರತು ಈ ಮಕ್ಕಳಲ್ಲಿ ಆತ್ಮವಿಶ್ವಾಸವನ್ನಾಗಲೀ ಅಥವಾ ಆಶಯಗಳನ್ನಾಗಲಿ ತುಂಬಲು ಸಾಧ್ಯವಿಲ್ಲ. ಹಾಗಾಗಿ ತಮ್ಮ ಸಂಸ್ಥೆ ಈ ನಿಟ್ಟಿನಲ್ಲಿ ಗಮನಹರಿಸುತ್ತಿದೆ ಅಂದಿದ್ದಾರೆ ಟಿಒಈ ಸಂಸ್ಥಾಪಕಿ ರಾಣಿ ಭೋವಾನಿ.

ಸಾಮಾಜಿಕ ಬದಲಾವಣೆ ಶಕ್ತಿಯ ಹಿಂದಿನ ಮುಖ

ಕೊಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್ ಆಫ್ ಎಕನಾಮಿಕ್ಸ್ ಕಲಿತ ರಾಣಿ ಎಂಬಿಎ ಪದವೀಧರೆಯೂ ಹೌದು. ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಹಾಗೂ ಕೌನ್ಸಲಿಂಗ್ ಕೆಲಸದಲ್ಲಿ ಅವರಿಗೆ ಸಾಕಷ್ಟು ಅನುಭವವಿದೆ. ಅವರು ಸಂಶೋಧನಾತ್ಮಕ ಹಾಗೂ ತಂತ್ರಜ್ಞಾನ ಆಧಾರಿತ ಹಲವು ಯೋಜನೆಗಳಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿದ್ದಾರೆ. ಮಾಹಿತಿ ಸಂಗ್ರಹಣೆಯಂತಹ ಯೋಜನೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇದರೊಂದಿಗೆ ಮಕ್ಕಳಿಗಾಗಿ ಸಾಮಾಜಿಕ ಜವಾಬ್ದಾರಿ ಅಭಿಯಾನದಂತಹ ಕಾರ್ಯಕ್ರಮದಲ್ಲೂ ಕಾರ್ಯನಿರ್ವಹಿಸಿದ್ದಾರೆ. ರಾಣಿ ಬಹುಮುಖಿ ವ್ಯಕ್ತಿತ್ವದವರಾಗಿದ್ದು ಹತ್ತು ಹಲವು ಬೇರೆ ಬೇರೆ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ.

ತಮ್ಮ ಬಾಲ್ಯದಿಂದಲೇ ಸಾಕಷ್ಟು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರಾಣಿಯವರಿಗೆ ಬಡ ಹಾಗೂ ಹಿಂದುಳಿದ ಮಕ್ಕಳ ಕಲ್ಯಾಣ ಯೋಜನೆಯ ಕುರಿತಾಗಿ ಸಾಕಷ್ಟು ಹೊಸ ಹೊಸ ಚಿಂತನೆಗಳಿದ್ದವು. ಇದೇ ಕಾರಣಕ್ಕೆ ಅವರ ಮನಸ್ಸಿನಲ್ಲಿ ಟಿಒಐನಂತಹ ಯೋಜನೆ ಮೊಳೆಯಲು ಸಾಧ್ಯವಾಯಿತು. ಅವರ ಅಜ್ಜಿ ಬೇಲೂರು ಮಠದೊಂದಿಗೆ ಒಡನಾಟ ಹೊಂದಿದ್ದರು. ಅಲ್ಲಿನ ಗ್ರಾಮೀಣ ಹಿಂದುಳಿದ ಸಮುದಾಯದ ಮಹಿಳೆಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಕೈ ಜೋಡಿಸಿದ್ದರು. ಇದರಿಂದ ಪ್ರೇರಿತರಾದ ರಾಣಿಯೂ ಅವರೊಂದಿಗೆ ಸಕ್ರಿಯರಾಗಿ ಇಂತಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡರು. ತಮ್ಮ ಉನ್ನತ ವ್ಯಾಸಂಗದ ನಂತರ ಕೆಲವು ಕಾರ್ಪೋರೇಟ್ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ 2013ರಲ್ಲಿ ಅವರು ಟ್ರಶರ್ ಆಫ್ ಇನ್ನೋಸೆನ್ಸ್ ಪ್ರಾರಂಭಿಸಿದರು. ಇದಕ್ಕಾಗಿ ಹತ್ತಾರು ರಾತ್ರಿಗಳನ್ನು ಯೋಜನೆಗಳ ಬಗ್ಗೆ ಚಿಂತಿಸಿ ನಿದ್ದೆಗೆಟ್ಟಿದ್ದರು. ಅಂತಿಮವಾಗಿ ಅವರು ತಮ್ಮ ಉದ್ಯೋಗ ತೊರೆದು ಪೂರ್ಣಕಾಲಿಕ ಈ ಕೆಲಸದಲ್ಲಿ ತೊಡಗುವ ನಿರ್ಧಾರಕ್ಕೆ ಬಂದರು. ಹಿಂದುಳಿದ ಮಕ್ಕಳ ಅಭಿವೃದ್ಧಿಗಾಗಿ ಅವರು ಪೂರ್ಣವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು.

image


ಬಾಲಕಿಯರ ಕಲಿಕಾ ಕೇಂದ್ರ ನಬಾಜಾತಕ್ ವಿದ್ಯಾಭವನ್ನಲ್ಲಿ 8ನೇ ತರಗತಿ ಕಲಿಯುತ್ತಿರುವ 13 ವರ್ಷದ ಅಂಜುರಾ ಖಟೂನ್ ಸಹ ಟಿಒಐನಿಂದ ನೆರವು ನೀಡಲ್ಪಟ್ಟ ಹೆಣ್ಣುಮಕ್ಕಳಲ್ಲಿ ಒಬ್ಬರು.

ಇಗ್ನೈಟೆಡ್ ಮೈಂಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ನಾನು ಪ್ರಯೋಗಗಳನ್ನು ಮಾಡುವುದನ್ನು ಕಲಿತೆ. ಶಾಲೆ ಪುಸ್ತಕಗಳಿಗಿಂತ ಹೊರಗಿನ ವಿಚಾರಗಳನ್ನು ಅರಿತುಕೊಳ್ಳುವುದು ಆಸಕ್ತಿಕರ ಸಂಗತಿ. ನಮ್ಮ ಸುತ್ತಲಿನ ವಸ್ತುಗಳ ಮೇಲೆ ನಾವು ಪ್ರತೀದಿನವೂ ಪ್ರಯೋಗಾತ್ಮಕವಾಗಿ ನೋಡುವುದನ್ನು ಕಲಿತೆವು. ನಮ್ಮ ಕುತೂಹಲ ಹಾಗೂ ಆಸಕ್ತಿಗಳು ವೃದ್ಧಿಯಾಗಬೇಕೆಂದರೆ ನಾವು ಪ್ರತಿಯೊಂದನ್ನು ಆಳವಾಗಿ ಗಮನಿಸಬೇಕು. ನನಗೆ ಈ ವಿಷಯಗಳನ್ನು ಹೇಳಿಕೊಟ್ಟಿದ್ದು ಟಿಒಐ ಅಂತಾರೆ ಅಂಜೂರಾ

ಅಂತರಗಳನ್ನು ಹೋಗಲಾಡಿಸುವುದು

ಪಟ್ಟಣ ಹಾಗೂ ಗ್ರಾಮಗಳ ಅನಾಥ ಮಕ್ಕಳು, ಹಿಂದುಳಿದ ಸಮುದಾಯದ ಮಕ್ಕಳು ಹಾಗೂ ನಿರ್ಗತಿಕ ಬಾಲಕಿಯರ ಸಬಲೀಕರಣಕ್ಕಾಗಿ ಟಿಒಐ ಶ್ರಮಿಸುತ್ತಿದೆ. ಇದರ ಮುಖ್ಯ ಗುರಿ ಮಕ್ಕಳಲ್ಲಿರುವ ಸೃಜನಾತ್ಮಕ ಆಲೋಚನೆ ಹಾಗೂ ಬೌದ್ಧಿಕ ಸಾಮರ್ಥ್ಯಗಳನ್ನು ಅಭಿವ್ಯಕ್ತಗೊಳಿಸುವುದು. ಯೋಗ, ಚರ್ಚಾಕೂಟ, ಭಾಷಣಕಲೆ, ವೀಡಿಯೋಗಳನ್ನು ತೋರಿಸುವುದು, ಕಥೆ ಹೇಳುವುದು, ಆಟಗಳನ್ನಾಡಿಸುವುದು, ನಾಟಕಗಳು, ಏಕವ್ಯಕ್ತಿ ಪ್ರದರ್ಶನ, ವಿಜ್ಞಾನದ ಪ್ರಯೋಗಗಳು, ಹಾಗೂ ತಂತ್ರಜ್ಞಾನದ ಕಲಿಕೆ ಮುಂತಾದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಮಕ್ಕಳ ಮನೋವಿಕಾಸಕ್ಕೆ ಇದು ಮುಂದಾಗಿದೆ.

ನಾವು ಪ್ರಯೋಗಿಸಲ್ಪಡುತ್ತಿರುವ ವಿಧಾನಗಳಿಂದ ನಮಗೆ ಮಕ್ಕಳ ಮನೋಸಾಮರ್ಥ್ಯ ಹಾಗೂ ಸೃಜನಾತ್ಮಕತೆಯ ಅರಿವಾಗುತ್ತಿದೆ. ತಮ್ಮಲ್ಲಡಗಿರುವ ಸುಪ್ತ ಪ್ರತಿಭೆಗಳನ್ನು ಮಕ್ಕಳು ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಪಡಿಸುತ್ತಿದ್ದಾರೆ. ವಿಶೇಷ ಸಾಮರ್ಥ್ಯದ ಮಕ್ಕಳಿಂದಲೂ ಸೃಜನಾತ್ಮ ಆಲೋಜನೆಗಳು ಸಾಧ್ಯ ಅನ್ನುವುದನ್ನು ನಾವು ಕಣ್ನಾರೆ ಕಂಡಿದ್ದೇವೆ. ಮಕ್ಕಳ ಮನಸಿನಲ್ಲಿ ಅಡಗಿರುವ ಕ್ರಿಯಾತ್ಮಕ ಸಾಮರ್ಥ್ಯದ ಅರಿವು ಈಗ ನಮಗಾಗಿದೆ. ಟಿಒಐ ಇದಕ್ಕೊಂದು ವೇದಿಕೆ ಹಾಕಿಕೊಟ್ಟಿದೆಯಷ್ಟೆ. ನಾವು ಟಿಐಎಲ್ ಮಾದರಿಯನ್ನು ರೂಪಿಸಿದ್ದೇವೆ, ಅಂದರೆ (ಟಿಐಎಎಲ್-ಥಿಂಕ್, ಐಡಿಯೇಟ್,) ಯೋಚನೆ-ಆಲೋಚನೆ-ಅಭಿನಯ-ನಾಯಕತ್ವ. ಇದರಿಂದ ನಮಗೆ ಮಕ್ಕಳ ಆಲೋಚನೆಗಳಲ್ಲಿ ಪರಿಪೂರ್ಣತೆ ಸೃಷ್ಟಿ ಸಾಧ್ಯವಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ ರಾಣಿ.

ಅಸಹಾಯಕ, ಬಡ ಹಾಗೂ ಹಿಂದುಳಿದ ವರ್ಗಗಳ, ಅನಾಥ ಮುಗ್ದ ಮಕ್ಕಳೇ ಟಿಒಐನ ಗುರಿ. ಅವರು ತಿರಸ್ಕೃತರು ಹಾಗೂ ವಿಶ್ವವನ್ನೇ ಎದುರಿಸಿ ನಿಲ್ಲಬೇಕಾದ ನಿರ್ಲಕ್ಷಿತ ಮನಸುಗಳು. ತಮ್ಮನ್ನು ತಾವು ಅರಿತು ತಮಗೊಂದು ನೆಮ್ಮದಿಯ ಬದುಕು, ಹೊಟ್ಟೆಪಾಡು ಹಾಗೂ ವಾಸಿಸಲೊಂದು ಸೂರುಗಳಿಸಲೂ ಪರದಾಡಬೇಕಾದವರು. ಈ ಮಕ್ಕಳಿಗೊಂದು ಭಾವನಾತ್ಮಕ ಹಾಗೂ ಗಟ್ಟಿ ತಳಪಾಯದ ನೆಲೆ ಬೇಕಿದೆ. ಅವರಲ್ಲಿ ಅಂತಃಶಕ್ತಿ ಹಾಗೂ ಆತ್ಮಸ್ಥೈರ್ಯ ತುಂಬಬೇಕಿದೆ. ಇವರಲ್ಲಿ ಅಮಾಯಕತೆಯ ಜೊತೆಯೇ ಆತ್ಮವಿಶ್ವಾಸ ಹುಟ್ಟಬೇಕಿದೆ. ನಾವು ಸಮಾಜದಲ್ಲಿರುವ ಸರ್ಕಾರಿ ಶಾಲೆಗಳು, ಅನಾಥಾಶ್ರಮಗಳು ಹಾಗೂ ಈ ಮಕ್ಕಳ ನೆಲೆಗಳನ್ನೇ ಬಳಸಿಕೊಂಡು ಗುಣಾತ್ಮಕ ಶಿಕ್ಷಣ ಒದಗಿಸಲು ಮುಂದಾಗಿದ್ದೇವೆ ಅಂತಾರೆ ಟಿಒಐನ ಸ್ವಯಂಸೇವಕರೊಬ್ಬರು.

ದಿಟ್ಟ ಹೆಜ್ಜೆ

ಜೂನ್ 2013ರಿಂದ ತನ್ನ ಸೇವೆ ಆರಂಭಿಸಿದ ಟಿಒಐ, ಈ 2 ವರ್ಷಗಳಲ್ಲಿ ಸಾಕಷ್ಟು ದೂರ ಅತ್ಯುತ್ತಮ ಕೆಲಸಗಳ ಮೂಲಕ ಪಯಣ ಬೆಳೆಸಿದೆ. ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ ಅನ್ನುವುದು ಇದರ ವಾದ. ಸರಳವಾಗಿ ಹೇಳುವುದಾರೆ ಸಂಸ್ಥೆ ಬೇರೆ ಬೇರೆ ವರ್ಗದ, ಸಮುದಾಯಗಳ ಹಾಗೂ ಬೇರೆ ಪ್ರದೇಶಗಳ ಹಿಂದುಳಿದ ಮಕ್ಕಳಲ್ಲಿ ಸೃಜನಾತ್ಮ ಆಲೋಚನೆಗಳನ್ನು ಬಿತ್ತಿ ಸಾಮರ್ಥ್ಯದ ಬೆಳೆ ತೆಗೆಯಲು ಮುಂದಾಗಿದೆ. ತಮ್ಮ ಈ ನಿಸ್ವಾರ್ಥ ಸೇವೆಯನ್ನು ಮುಂದುವರೆಸುವಲ್ಲಿ ಟಿಒಐಗೆ ಈಗ ಯಾವ ಹಿಂಜರಿಕೆಗಳಾಗಲೀ, ತೊಂದರೆಗಳಾಗಲಿ ಇಲ್ಲ ಅನ್ನುವುದು ರಾಣಿಯವರ ಆತ್ಮವಿಶ್ವಾಸದ ನುಡಿಗಳು.