ನಾಲ್ಕು ವರ್ಷಗಳಲ್ಲಿ ಬಹಳಷ್ಟು ಬಾರಿ ಅವಮಾನಿತನಾದೆ, ಏಟು ತಿಂದೆ..ಬಳಿಕ ಸಿಕ್ತು ಯಶಸ್ಸು..! 

ಟೀಮ್​ ವೈ.ಎಸ್.ಕನ್ನಡ 

0

ಸಾವಿರ ಕೆಟ್ಟ ದಿನಗಳಿಗಿಂತ ಒಂದು ಒಳ್ಳೆಯ ದಿನವೇ ಮೇಲು ಅನ್ನೋ ಮಾತಿದೆ. ಅದೇ ರೀತಿ ಹತ್ತಾರು ಸಮಸ್ಯೆಗಳು, ದುಃಖ ಎಲ್ಲದಕ್ಕೂ ಒಂದು ನೆಲೆ ಸಿಕಿದ್ರೆ ನಾವು ಅನುಭವಿಸಿದ ಆಯಾಸವೆಲ್ಲ ಅಂತ್ಯವಾಗುತ್ತೆ. ಆದ್ರೆ ಒಂದೊಳ್ಳೆ ದಿನಕ್ಕಾಗಿ, ಶಾಶ್ವತ ನೆಲೆಯನ್ನು ತಲುಪಲು ಆಯಾಸಗೊಳ್ಳದೆ ನಿರಂತರವಾಗಿ ಮುನ್ನಡೆಯಲೇಬೇಕು. ಒಡೆದು ಚೂರಾಗುವ ಮುನ್ನ ನಮ್ಮನ್ನು ನಾವು ಒಗ್ಗೂಡಿಸಿಕೊಂಡು ಮುನ್ನುಗ್ಗುವ ಸಾಹಸ ಮಾಡಬೇಕು. ಈ ಧೈರ್ಯ ಮತ್ತು ವಿಶ್ವಾಸ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಆದ್ರೆ ಮಹತ್ವದ ವಿಚಾರ ಅಂದ್ರೆ ನೀವು ಆಗಸದೆತ್ತರಕ್ಕೆ ತಲುಪಿದ ಮೇಲೂ ಭೂಮಿಯನ್ನು ಮರೆಯಬಾರದು. ಇದೆಲ್ಲವನ್ನು ಜೋಡಿಸಿ ನೀವೊಬ್ಬ ವ್ಯಕ್ತಿಯನ್ನು ವ್ಯಾಖ್ಯಾನಿಸಿದರೆ ಅವರೇ ಮನೋಜ್ ತಿವಾರಿ. ಅವರೊಬ್ಬ ಪ್ರಚಂಡ ನಟ, ಅದ್ಭುತ ಗಾಯಕ, ಇನ್ನೊಬ್ಬರ ನೋವಿಗೆ ಸ್ಪಂದಿಸಬಲ್ಲ ಸಹೃದಯಿ, ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯುವ ಛಾತಿಯುಳ್ಳವರು. 43ರ ಹರೆಯದಲ್ಲೇ ದೇಶದ ಶ್ರೇಷ್ಠ ವ್ಯಕ್ತಿಗಳಲ್ಲೊಬ್ಬರು ಎನಿಸಿಕೊಂಡವರು ಮನೋಜ್ ತಿವಾರಿ.

ದೆಹಲಿಯ ಈಶಾನ್ಯ ಪ್ರಾಂತ್ಯದ ಸಂಸದ ಮನೋಜ್ ತಿವಾರಿ ಅವರಿಗೆ ಆ ಸ್ಥಾನವನ್ನು ಅಲಂಕರಿಸುವುದು ಸುಲಭವೇನೂ ಆಗಿರಲಿಲ್ಲ. ಎದೆಗುಂದಬಾರದು, ಎಲ್ಲ ಸವಾಲುಗಳನ್ನು ಎದುರಿಸುವ ಧೈರ್ಯವುಳ್ಳವರಿಗೆ ಯಶಸ್ಸಿನ ಮಾರ್ಗ ತಾನಾಗಿಯೇ ಗೋಚರಿಸುತ್ತೆ ಅನ್ನೋದು ಮನೋಜ್ ತಿವಾರಿ ಅವರ ನಂಬಿಕೆ. ಯುವರ್ ಸ್ಟೋರಿ ಜೊತೆ ಮಾತನಾಡಿದ ಮನೋಜ್ ತಿವಾರಿ, ಎಲ್ಲರಿಗೂ ಪ್ರೇರಣೆಯಾಗಬಲ್ಲ ತಮ್ಮ ಬದುಕಿನಲ್ಲಿ ನಡೆದ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ.

ಮನೋಜ್ ತಿವಾರಿ ಬಿಹಾರದ ಕೈಮುರ್ ಜಿಲ್ಲೆಯವರು. ''ನನ್ನ ಬಾಲ್ಯ ಹಳ್ಳಿಯ ಸಾಮಾನ್ಯ ಮಕ್ಕಳಂತೆಯೇ ಕಳೆದಿದೆ. ಶಿಕ್ಷಣ ಅನ್ನೋದು ಕಬ್ಬಿಣದ ಕಡಲೆಯಾಗಿತ್ತು. ಪ್ರತಿದಿನ ನಾಲ್ಕು ಕಿಲೋ ಮೀಟರ್ ನಡೆದುಕೊಂಡೇ ಶಾಲೆಗೆ ಹೋಗಬೇಕಿತ್ತು. ದಿನಪೂರ್ತಿ ಅಭ್ಯಾಸ, ಬಳಿಕ 4 ಕಿಲೋ ಮೀಟರ್ ನಡೆದು ಮನೆಗೆ ಬರೋದು ಇದರಲ್ಲೇ ಸುಸ್ತಾಗಿರುತ್ತಿದ್ದೆವು. ಆಗ ಹಾಫ್ ಪ್ಯಾಂಟ್ ಮತ್ತು ಬನಿಯನ್ ನಮ್ಮ ಡ್ರೆಸ್ ಕೋಡ್ ಆಗಿತ್ತು'' ಎನ್ನುವ ಮನೋಜ್ ತಿವಾರಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ್ರು. ಕಠಿಣ ಪರಿಸ್ಥಿತಿಯಲ್ಲಿ ಹೋರಾಟ ಮಾಡಿ ಒಂದು ಹಂತ ತಲುಪಿರುವ ಮನೋಜ್ ತಿವಾರಿ ಅವರ ಪಾಲಿಗೆ ಬಹುದೊಡ್ಡ ಕನಸು ನನಸಾದಂತೆ. ಇವೆಲ್ಲ ಭಗವಂತನ ಆಶೀರ್ವಾದ ಎನ್ನುತ್ತಾರೆ ಅವರು. ಇಲ್ಲವಾದ್ರೆ ಅವರು ಬೆಳೆದ ಪರಿಸ್ಥಿತಿಗಳನ್ನು ಅವಲೋಕಿಸಿದ್ರೆ ಇದೆಲ್ಲ ಅಸಾಧ್ಯ ಎನಿಸುತ್ತೆ. ಮನೋಜ್ ತಿವಾರಿ ಚಿಕ್ಕ ವಯಸ್ಸಿನವರಾಗಿದ್ದಾಗ್ಲೇ ತಂದೆಯನ್ನು ಕಳೆದುಕೊಂಡ್ರು, ಕುಟುಂಬದ ಸಂಪೂರ್ಣ ಜವಾಬ್ಧಾರಿ ತಾಯಿಯ ಹೆಗಲೇರಿತ್ತು. ಮನೋಜ್ ತಿವಾರಿ ಅವರ ತಾಯಿಯೇ, ಅಪ್ಪ-ಅಮ್ಮ ಇಬ್ಬರ ಹೊಣೆಗಾರಿಕೆಯನ್ನೂ ನಿರ್ವಹಿಸಿದ್ರು. ಅಮ್ಮನ ಬಗ್ಗೆ ಮಾತನಾಡುತ್ತ ಮನೋಜ್ ತಿವಾರಿ ಭಾವುಕರಾಗಿದ್ರು, ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ''ಇವತ್ತು ನಾನಿರುವ ಈ ಸ್ಥಿತಿಗೆ ಅಮ್ಮನೇ ಕಾರಣ. ಪ್ರತಿ ತಿರುವಿನಲ್ಲೂ ನನಗವರು ಬದುಕು ಕಟ್ಟಿಕೊಟ್ಟಿದ್ದಾರೆ. ನನ್ನ ತಾಯಿ ತೊಂದರೆಯಲ್ಲಿದ್ದ ಸಮಯಗಳೆಲ್ಲ ನನ್ನ ಪಾಲಿಗೆ ಅತ್ಯಂತ ಕಷ್ಟದ ದಿನಗಳು. ಅಮ್ಮ ಖುಷಿಯಾಗಿದ್ದಾಗಲೆಲ್ಲ ನನ್ನ ಪಾಲಿಗೆ ಸಂತಸದ ಕ್ಷಣಗಳು. ಅಮ್ಮನ ಎಲ್ಲ ಆಸೆಗಳನ್ನೂ ಪೂರೈಸುತ್ತೇನೆ'' ಅಂತಾ ಮನೋಜ್ ತಿವಾರಿ ಭಾವುಕರಾಗಿ ನುಡಿದ್ರು.

ವಿದ್ಯಾರ್ಥಿ ವೇತನ ಸಿಕ್ಕಿದ್ರಿಂದ ಮನೋಜ್ ತಿವಾರಿ ಅವರಿಗೆ ಆರಂಭಿಕ ಶಿಕ್ಷಣಕ್ಕೆ ಅಡಚಣೆಯಾಗಲಿಲ್ಲ. ಆದ್ರೆ ನಂತರ ಬಹಳಷ್ಟು ಸಮಸ್ಯೆಗಳು ಎದುರಾದವು. ''1992ರಲ್ಲಿ ನಾನು ಬನಾರಸ್ ಹಿಂದು ವಿಶ್ವವಿದ್ಯಾನಿಲಯದಲ್ಲಿ ಪದವಿ ಪೂರೈಸಿದೆ. ಅಮ್ಮ ಅದೆಷ್ಟು ಕಷ್ಟಪಟ್ಟು ಹಣ ಕಳುಹಿಸುತ್ತಿರಬಹುದು? ಧಾನ್ಯಗಳನ್ನು ಮಾರಾಟ ಮಾಡಿದರೆ ಮಾತ್ರ ಹಣ ಸಿಗುತ್ತೆ, ಅದನ್ನೆಲ್ಲ ಅಮ್ಮ ನನಗೇ ಕಳುಹಿಸುತ್ತಾರೆ. ಕೆಲವೊಮ್ಮೆ ಧಾನ್ಯಗಳೆಲ್ಲ ನಾಶವಾಗುವ ಸಂದರ್ಭಗಳೂ ಬರುತ್ತವೆ, ಆಗ ಆರ್ಥಿಕ ಬಿಕ್ಕಟ್ಟಿನಿಂದ ಅಮ್ಮ ಕಂಗೆಟ್ಟಿರುತ್ತಾರೆ ಅನ್ನೋ ಯೋಚನೆಗಳು ನನ್ನನ್ನು ಕಾಡುತ್ತಿತ್ತು. ಶಿಕ್ಷಣ ಪೂರೈಸಿದ ಮೇಲೆ ನಾನು ಕೆಲಸಕ್ಕಾಗಿ ಪ್ರಯತ್ನಿಸಿದೆ, ಆದ್ರೆ ಸಿಗಲಿಲ್ಲ'' ಎನ್ನುತ್ತಾರೆ ಮನೋಜ್ ತಿವಾರಿ. ಈ ಸಂದರ್ಭದಲ್ಲಿ ತಾವು ಗಾಯಕರಾಗಬಹುದು ಎಂಬ ಯೋಚನೆ ಅವರಿಗೆ ಬಂದಿತ್ತು.

''ಪದವಿ ನಂತರ ಉದ್ಯೋಗವೂ ಸಿಗದೇ ಇದ್ದಾಗ ಮುಂದೇನು ಅನ್ನೋ ಯೋಚನೆ ಕಾಡಲಾರಂಭಿಸಿತ್ತು. 1992ರಲ್ಲಿ ಕಾರ್ಯಕ್ರಮವೊಂದರಲ್ಲಿ ನಾನು ಹಾಡು ಹೇಳಿದ್ದೆ. ಅದಕ್ಕೆ ಪ್ರತಿಯಾಗಿ ನನಗೆ 1400 ರೂಪಾಯಿ ಸಿಕ್ಕಿತ್ತು. ಆಗ ನಾನ್ಯಾಕೆ ಗಾಯಕನಾಗಿ ಮುಂದುವರಿಯಬಾರದು ಎಂಬ ಆಲೋಚನೆ ನನಗೆ ಬಂದಿತ್ತು. ತಂದೆಯವರ ಸಂಗೀತ ಪರಂಪರೆಯನ್ನು ಮುಂದುವರಿಸಲು ನಾನು ನಿರ್ಧರಿಸಿದ್ದೆ. ಅದೇ ಸಮಯದಲ್ಲಿ ನಾನು ದೆಹಲಿಗೆ ಬಂದೆ. ಸಂಸದರೊಬ್ಬರ ಕ್ವಾಟ್ರರ್ಸ್ನಲ್ಲಿ ಉಳಿದುಕೊಂಡೆ. ಗಾಯಕನಾಗಿ ಸಾಕಷ್ಟು ನಗರಗಳನ್ನು ಸುತ್ತಿದ್ದೇನೆ. ಆ ನಾಲ್ಕು ವರ್ಷಗಳಲ್ಲಿ ಜನರು ನನಗೆ ಅದೆಷ್ಟೋ ಬಾರಿ ಅಪಮಾನ ಮಾಡಿದ್ದಾರೆ. ಅದೆಷ್ಟೋ ಮಂದಿ ತಮ್ಮ ಕಚೇರಿಯಿಂದ ನನ್ನನ್ನು ಹೊರದಬ್ಬಿದ್ದಾರೆ. ಆದ್ರೆ ನಾನು ಸೋಲೊಪ್ಪಿಕೊಳ್ಳಲಿಲ್ಲ. ನಿರಂತರ ಪ್ರಯತ್ನ ನಡೆಸಿದ್ದೆ. ನಿಮ್ಮಲ್ಲಿ ಸಾಮರ್ಥ್ಯ ಇದೆ ಅಂತಾದ್ರೆ ಒಳ್ಳೆ ದಿನಗಳು ಬಂದೇ ಬರುತ್ತವೆ. ನನ್ನ ಜೀವನದಲ್ಲೂ ನಡೆದಿದ್ದು ಇದೇ. ಟಿ-ಸಿರೀಸ್ ಮಾಲೀಕ ಗುಲ್ಷನ್ ಕುಮಾರ್ ನನ್ನ ಹಾಡುಗಳನ್ನು ಕೇಳಿದ್ರು. ಅಂದಿನಿಂದ ನಾನು ಹಿಂತಿರುಗಿ ನೋಡಲೇ ಇಲ್ಲ, ನನ್ನ ಹಾಡುಗಳೆಲ್ಲ ಸೂಪರ್​ ಹಿಟ್ ಆದ್ವು'' ಎನ್ನುವ ಮನೋಜ್ ತಿವಾರಿ ತಮ್ಮ ಜೀವನದ ಕಠಿಣ ದಿನಗಳನ್ನು ಮೆಲುಕು ಹಾಕಿದ್ದಾರೆ. 

ಇದನ್ನೂ ಓದಿ...

ಸಾವಿಗೆ ಸವಾಲೊಡ್ಡಿ ಗೆದ್ದ ಲಿಝಿ - ವಿಧವೆ, ಎಚ್‍ಐವಿ ಪೀಡಿತೆಯ ಸಾರ್ಥಕ ಬದುಕು  

''ಕನಸುಗಳ ಸಾವು ಅತ್ಯಂತ ಅಪಾಯಕಾರಿ'' ಅಂತಾ ಪಂಜಾಬಿ ಕವಿ ಅವತಾರ್ ಸಿಂಗ್ ಹೇಳಿದ್ದಾರೆ. ಅದೇ ರೀತಿ ನಾವು ಯಾವ ದಿಕ್ಕಿನಲ್ಲಿ ಸಾಗಬೇಕು ಅನ್ನೋದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು ಅನ್ನೋದು ಮನೋಜ್ ತಿವಾರಿ ಅವರ ಅಭಿಪ್ರಾಯ. ಕನಸು ಕಾಣದೇ ಇದ್ರೆ ಅವು ನನಸಾಗುವುದಿಲ್ಲ ಎನ್ನುವ ಮನೋಜ್ ತಿವಾರಿ ಕೂಡ, ಮೂರು ಕನಸುಗಳನ್ನು ಕಂಡಿದ್ದರಂತೆ ಅವೆಲ್ಲ ಸಾಕಾರವಾಗಿವೆ.

ಮೊದಲನೆಯದು ಶ್ರೀಮಂತರ ಮನೆಯ ಯುವತಿಗೆ ನನ್ನ ಹಾಡು ಕೇಳಿಸಬೇಕು, ಅದನ್ನವಳು ಇಷ್ಟಪಡಬೇಕು ಅನ್ನೋದು. ಇನ್ನೊಂದು ಅಮಿತಾಭ್ ಬಚ್ಚನ್ ಅವರನ್ನು ಭೇಟಿ ಮಾಡುವುದು, ಅವರು ನನಗೆ ತಮ್ಮ ಮಗ ಅಭಿಷೇಕ್​ರನ್ನು ಪರಿಚಯಿಸ್ತಾರೆ ಅಂತಾ, ಆ ಕನಸು ಕೂಡ ನನಸಾಗಿದೆ. ಹೀಗೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಕೂಡ ನಾನು ಕನಸು ಕಂಡಿದ್ದೆ. ಆದ್ರೆ ಅಟಲ್​ಜಿ ಅಸ್ವಸ್ಥರಾಗಿರುವುದರಿಂದ ಅವರ ಭೇಟಿ ಸಾಧ್ಯವಾಗುತ್ತಿಲ್ಲ. ಪ್ರತಿ ಬಾರಿ ಪ್ರಧಾನಮಂತ್ರಿಗಳ ನಿವಾಸಕ್ಕೆ ಹೋದಾಗಲೂ, ಇದೇ ಜಾಗದಲ್ಲಿ ಅಟಲ್​ಜಿ ಕೂಡ ಇದ್ದರು ಅನ್ನೋದನ್ನು ನೆನೆಸಿಕೊಂಡು ರೋಮಾಂಚಿತನಾಗುತ್ತೇನೆ'' ಅಂತಾ ತಮ್ಮ ಕನಸುಗಳನ್ನು ಮನೋಜ್ ಬಿಚ್ಚಿಟ್ಟಿದ್ದಾರೆ.

ಆದ್ರೆ ಭೋಜ್ಪುರಿಗೆ ಭಾಷೆಯ ಸ್ಥಾನಮಾನ ಕೊಡಿಸಬೇಕು ಅನ್ನೋ ಮನೋಜ್ ತಿವಾರಿ ಅವರ ಕನಸು ಇನ್ನೂ ನನಸಾಗಿಲ್ಲ. ''ಭೋಜ್ಪುರಿ ನನ್ನ ತಾಯಿ ಇದ್ದಂತೆ. 8 ರಾಷ್ಟ್ರಗಳಲ್ಲಿ ಭೋಜ್ಪುರಿಗೆ ಮಾನ್ಯತೆ ಇದ್ರೂ ಭಾರತದಲ್ಲಿ ಏಕಿಲ್ಲ? ಭೋಜ್ಪುರಿ ತಾಯಿಗೆ ಸಮಾನ, ಹಾಗಾಗಿ ಆ ಗೌರವ ಸಿಗಬೇಕು. 22-24 ಕೋಟಿ ಜನರ ಆಡುಭಾಷೆಯಾಗಿರುವ ಭೋಜ್ಪುರಿಗೆ ಸ್ಥಾನಮಾನ ನೀಡುವ ಬಗ್ಗೆ ಪ್ರಧಾನಮಂತ್ರಿಗಳು ಗಮನಹರಿಸುತ್ತಾರೆಂಬ ವಿಶ್ವಾಸ ನನಗಿದೆ'' ಎನ್ನುತ್ತಾರೆ ಮನೋಜ್.

ವರ್ತಮಾನ ಕಾಲದಲ್ಲಿ ಜೀವಿಸಲು ಮನೋಜ್ ತಿವಾರಿ ಇಷ್ಟಪಡ್ತಾರೆ. ಯಾವ ಕೆಲಸವನ್ನಾದ್ರೂ ಪೂರ್ತಿ ಮಾಡಬೇಕು ಅನ್ನೋದೇ ಅವರ ಉದ್ದೇಶ. ಇದೇ ಕಾರಣಕ್ಕೆ ಯಶಸ್ಸು ಅವರಿಗೆ ಒಲಿದಿದೆ.  ''ನಾನು ಹಾಡು ಹೇಳುವ ಸಂದರ್ಭದಲ್ಲಿ ಸಂಪೂರ್ಣ ಅದರಲ್ಲೇ ಮುಳುಗಿರುತ್ತೇನೆ. ಜನರ ಮಧ್ಯೆ ಇದ್ರೆ ಅವರೊಂದಿಗೆ ಬೆರೆತು ಹೋಗುತ್ತೇನೆ. ಹಾಗಾಗಿಯೇ ವರ್ತಮಾನದಲ್ಲಿ ಜೀವಿಸುತ್ತೇನೆ'' ಎಂದಿದ್ದಾರೆ ಅವರು. ಯಾರಲ್ಲಿ ಪ್ರಾಮಾಣಿಕತೆ ಇರುತ್ತೋ ಅವರು ಯಶಸ್ವಿಯಾಗ್ತಾರೆ. ನಮ್ಮಲ್ಲಿರುವ ಕೊರತೆ ಹಾಗೂ ಪ್ರತಿಭೆಗಳನ್ನು ಅರಿತವರೇ ಸಾರ್ಥಕ ಬದುಕು ನಡೆಸುತ್ತಾರೆ. ಕಠಿಣ ಸವಾಲುಗಳೆದುರು ಗಟ್ಟಿಯಾಗಿ ನಿಂತವರು ಮಾತ್ರ ಸಶಕ್ತರು. ಮನೋಜ್ ತಿವಾರಿ ಈ ಎಲ್ಲ ಸದ್ಗುಣಗಳುಳ್ಳ ಒಬ್ಬ ಮಾದರಿ ವ್ಯಕ್ತಿ. ಅವರ ಯಶಸ್ಸನ್ನು ಅವರೇ ಗಳಿಸಿದ್ದಾರೆ. ಕೋಟ್ಯಂತರ ಜನರಿಗೆ ಮನೋಜ್ ತಿವಾರಿ ಅವರ ಜೀವನ ಮಾದರಿಯಾಗಿದೆ.

ಇದನ್ನೂ ನೋಡಿ...

ಆನ್‍ಲೈನ್‍ನಲ್ಲೂ ಸಿಗುತ್ತೆ ಪೂಜೆಗೆ ಬೇಕಾಗುವ ವಸ್ತುಗಳು

ಅಂದು ಬಾಲಕಾರ್ಮಿಕ ಪದ್ಧತಿ, ಹಿಂಸಾಚಾರಕ್ಕೆ ಬಲಿಯಾದ ಮಹಿಳೆ - ಇಂದು ಸಾಮಾಜಿಕ ಕ್ರಾಂತಿಯ ನಾಯಕಿ 

Related Stories

Stories by YourStory Kannada