ಐದು ತಲೆಮಾರಿನ ಗಾಯಕರಿಂದ ನಾಡಗೀತೆ- ಖ್ಯಾತ ಗಾಯಕಿ ಶಮಿತಾ ಮಲ್ನಾಡ್ ಸಾಹಸ

ಟೀಮ್​ ವೈ.ಎಸ್​. ಕನ್ನಡ

0

ಕನ್ನಡವನ್ನು ವಿಶ್ವದೆಲ್ಲೆಡೆ ಪಸರಿಸಬೇಕು ಅನ್ನುವ ಪ್ರಯತ್ನ ಜೋರಾಗಿಯೇ ನಡೆಯುತ್ತಿದೆ. ಕನ್ನಡ ಟೀ-ಶರ್ಟ್​, ಕನ್ನಡದ ವೆಬ್​ಸೈಟ್​, ಕನ್ನಡಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟು ದುಡಿಯುವ ಕೈಗಳು... ಹೀಗೆ ಕನ್ನಡಕ್ಕಾಗಿ ಎಲ್ಲವೂ ನಡೆಯುತ್ತಿದೆ. ಈ ಮಧ್ಯೆ ಕನ್ನಡದ ಪ್ರಸಿದ್ಧ ಗಾಯಕಿ ಶಮಿತಾ ಮಲ್ನಾಡ್​ ಕನ್ನಡವನ್ನು ಉಳಿಸಲು ವಿಭಿನ್ನ ಪ್ರಯತ್ನವನ್ನು ಮಾಡಿದ್ದಾರೆ. 

ಕರ್ನಾಟಕದ ವಿವಿಧತೆ, ಏಕತೆ ಮತ್ತು ಕರ್ನಾಟಕದ ಪ್ರಸಿದ್ಧಿಯನ್ನು ಸಾರುವ ನಾಡಗೀತೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ವಿಭಿನ್ನ ಮತ್ತು ವಿಶೇಷತೆಗಳೇ ನಾಡಗೀತೆಯನ್ನು ಜನರಿಗೆ ಹತ್ತಿರವಾಗಿಸಿದೆ. ಈ ನಾಡಗೀತೆಯ ಮಹತ್ವ ಮುಂದಿನ ಪೀಳಿಗೆಯವರಿಗೂ ಗೊತ್ತಾಗಲಿ ಎನ್ನುವ ಉದ್ದೇಶದಿಂದ ಶಮಿತಾ ಮಲ್ನಾಡ್ ಇದರ ವಿಡಿಯೋ ಹೊರತಂದಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಾಕಷ್ಟು ಆಲ್ಬಂಗಳಲ್ಲೂ ಹಾಡಿ ಕನ್ನಡಿಗರ ಗಮನ ಸೆಳೆದಿದ್ದಾರೆ ಶಮಿತಾ ಮಲ್ನಾಡ್. ಇದೀಗ ಇವರು ಕನ್ನಡದ ಖ್ಯಾತ 59 ಹಿನ್ನೆಲೆ ಗಾಯಕರನ್ನು ಒಟ್ಟಿಗೆ ಸೇರಿಸಿ ಕರ್ನಾಟಕದ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ...’ಯನ್ನು ಹಾಡಿಸಿದ್ದಾರೆ. ಈ ವಿಡಿಯೋ ಹಾಡು ರಾಜ್ಯೋತ್ಸವ ದಿನದಂದು ಬಿಡುಗಡೆಯಾಗಿದೆ. ವಿಡಿಯೋ ಬಿಡುಗಡೆಯಾದ ಒಂದೇ ದಿನದಲ್ಲಿ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲ್ಪಟ್ಟಿದೆ.

ಶಮಿತಾ ಸಾಹಸದ ಬಗ್ಗೆ ಇನ್ನೊಂದಿಷ್ಟು ಮಾಹಿತಿ ತಿಳಿದುಕೊಳ್ಳುವ ಕುತೂಹಲದಿಂದ ಶಮಿತಾ ಅವರನ್ನು ಕೇಳಿದಾಗ ಖುಷಿಯಿಂದಲೇ ಅನೇಕ ವಿವರ ಹಂಚಿಕೊಂಡರು. 

" ಐದು ತಲೆಮಾರಿನ ಕನ್ನಡದ ಖ್ಯಾತ ಗಾಯಕ, ಗಾಯಕಿಯರನ್ನು ಒಟ್ಟುಗೂಡಿಸಿ ನಾಡಗೀತೆ ಹಾಡಿಸಬೇಕೆಂಬ ಕನಸು ಹತ್ತು ವರ್ಷಗಳಿಂದ ಕಾಡುತ್ತಿತ್ತು. ಇದನ್ನು ನಿರ್ಮಾಣ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡರು ಸಂತೋಷದಿಂದಲೇ ಒಪ್ಪಿಕೊಂಡರು. ನಂತರ ಈ ಯೋಜನೆಗೆ ಚಾಲನೆ ಸಿಕ್ಕಿತು"
- ಶಮಿತಾ ಮಲ್ನಾಡ್​, ಗಾಯಕಿ 

ಕನ್ನಡದ ಗಾಯಕರು ಅಂತ ಹುಡುಕಿಕೊಂಡು ಹೊರಟರೆ ಸಾಕಷ್ಟು ದಂಥಕತೆಗಳು ನಮಗೆ ಸಿಗುತ್ತಾರೆ. ಕ್ಲಾಸಿಕಲ್, ವಚನ ಸಾಹಿತ್ಯದಲ್ಲಿ ಹೀಗೆ ಸಾಕಷ್ಟು ವಿಭಾಗಗಳಲ್ಲಿ ಹಾಡುಗಾರರು ಸಿಗುತ್ತಾರೆ. ಆದರೆ ಸಿನಿಮಾದಲ್ಲಿನ ಹಿನ್ನೆಲೆ ಗಾಯಕರನ್ನು ಒಂದೆಡೆ ಸೇರಿಸಬೇಕು ಎಂದು ತೀರ್ಮಾನಿಸಿದೆ. ಒಟ್ಟು 65 ಜನ ಗಾಯಕರನ್ನು ಪಟ್ಟಿ ಮಾಡಿಕೊಂಡಿದ್ದೆ. ಕೆಲವರಿಗೆ ಸಮಯದ ಅಭಾವದಿಂದ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.ಹಾಗಾಗಿ ನಮ್ಮ ಪಟ್ಟಿ 59ಕ್ಕೆ ಇಳಿಯಿತು. ಅಂದಹಾಗೆ ಇದರಲ್ಲಿ ‘ಬಿ.ಕೆ. ಸುಮಿತ್ರಾ, ಮಂಜುಳಾ ಗುರುರಾಜ್, ಬಿ.ಆರ್. ಛಾಯಾ, ಕಸ್ತೂರಿ ಶಂಕರ್, ನರಸಿಂಹ ನಾಯಕ್, ರಮೇಶ್ಚಂದ್ರ, ರಾಜೇಶ್ ಕೃಷ್ಣನ್, ಚೈತ್ರಾ, ವಾಣಿ ಹರಿಕೃಷ್ಣ, ಲತಾ ಹಂಸಲೇಖಾ ಸೇರಿದಂತೆ ಸುಮಾರು ಐದು ತಲೆಮಾರಿನ ಗಾಯಕರು ಹಾಡಿದ್ದಾರೆ ಅನ್ನುವ ವಿವರ ನೀಡುತ್ತಾರೆ ಶಮಿತಾ.

ಇಷ್ಟಕ್ಕೂ ಇಂಥದೊಂದು ಆಲ್ಬಂ ಬಿಡುಗಡೆ ಮಾಡುವ ಉದ್ದೇಶವಾದರೂ ಏನು? ‘ಮೊದಲನೆಯದಾಗಿ ಎಲ್ಲ ಶಾಲೆಗಳಲ್ಲೂ ನಾಡಗೀತೆ ಕಡ್ಡಾಯವಾಗಬೇಕು. ಕರ್ನಾಟಕದಲ್ಲಿ ಓದುವ ಪ್ರತಿಯೊಬ್ಬರಿಗೂ ನಾಡಗೀತೆ ಗೊತ್ತಿರಬೇಕು. ಈಗ ಸಾಕಷ್ಟು ಶಾಲೆಗಳಲ್ಲಿ ನಾಡಗೀತೆಯನ್ನು ಕಲಿಸುವುದೇ ಇಲ್ಲ. ಕಡೇ ಪಕ್ಷ ಈ ಹಾಡನ್ನು ಪ್ರತಿಯೊಬ್ಬ ಕನ್ನಡಿಗನೂ ತಮ್ಮ ಮನೆಯಲ್ಲಿಟ್ಟುಕೊಂಡು ತಮ್ಮ ಮಕ್ಕಳಿಗೆ ಈ ಹಾಡನ್ನು ಕಲಿಸಿದರೆ ನಮ್ಮ ಮುಂದಿನ ಪೀಳಿಗೆಗೆ ನಾಡಗೀತೆ ತಿಳಿಯುತ್ತಿದೆ, ಅದರ ಮಹತ್ವ ಗೊತ್ತಾಗಲಿ’ ಎಂದು ಉತ್ತರವಾಗುತ್ತಾರೆ.

ಇದನ್ನು ಓದಿ: ಬಣ್ಣಗಳ ಅರಿವಿಲ್ಲದಿದ್ದರೂ ಪೈಂಟಿಂಗ್​ ಮಾಡ್ತಾರೆ- ದೃಷ್ಟಿ ವಿಕಲ ಚೇತನರಾಗಿದ್ರೂ ಬದುಕಿನ ಆಸೆ ಬಿಟ್ಟಿಲ್ಲ..!

‘ನಾಡಗೀತೆಯ ಪ್ರತಿ ಪದವೂ ಕೇಳುಗರ ಮನಸ್ಸಿನಲ್ಲಿ ರೆಜಿಸ್ಟರ್ ಆಗಬೇಕು ಎಂದು ನಿಧಾನವಾದ ಶೈಲಿಯಲ್ಲಿ ಹಾಡನ್ನು ಕಂಪೋಸ್ ಮಾಡಿದ್ದೇನೆ. ತುಂಬ ಜನ ಗಾಯಕರನ್ನು ಒಟ್ಟಿಗೆ ಸೇರಿಸುವುದು ಹೇಗೆಂಬ ಯೋಚನೆಯೂ ಕಾಡಿತ್ತು. ಆದರೆ ಕರೆ ಮಾಡಿ ವಿಷಯ ಹೇಳುತ್ತಿದ್ದಂತೆ ಎಲ್ಲರೂ ನಾಡಗೀತೆ ಎನ್ನುವ ಕಾರಣಕ್ಕೆ ಯಾವುದೇ ಷರತ್ತು ವಿಧಿಸದೇ ಕೈಜೋಡಿಸಿದರು. ನಾಲ್ಕೈದು ದಿನ ಶೂಟಿಂಗ್ ಮಾಡಿದ್ದೇವೆ. ಕನ್ನಡದ ಟಾಪ್ ಮೋಸ್ಟ್ ಸಂಗೀತಗಾರರು ಇದಕ್ಕೆ ಕೆಲಸ ಮಾಡಿದ್ದಾರೆ. ಎಡಿಟಿಂಗ್, ವಿಎಫ್ಎಕ್ಸ್ ಎಲ್ಲವೂ ವೃತ್ತಿಪರರಿಂದ ಮಾಡಿಸಿದ ಪರಿಣಾಮ ವಿಡಿಯೋ ಆ ಮಟ್ಟದ ಕ್ವಾಲಿಟಿಯಿಂದ ಕೂಡಿದೆ. ಇದಕ್ಕೆ ಜನರ ಪ್ರತಿಕ್ರಿಯೆಯೂ ಅದ್ಭುತವಾಗಿದೆ, ಒಂದೇ ದಿನದಲ್ಲಿ ಒಂದೂವರೆ ಲಕ್ಷ ಜನ ಈ ಹಾಡನ್ನು ನೋಡಿದ್ದಾರೆ’ ಎಂಬ ಖುಷಿ ಈ ಗಾಯಕಿಗೆ.

ಕರ್ನಾಟಕದ ನಾಡಗೀತೆಯನ್ನು ಅದ್ಭುತವಾಗಿ ಮೂಡಿಬರುವಂತೆ ಮಾಡಿದ ಶಮಿತಾ ಮುಂದಿನ ಯೋಜನೆಗಳ  ಬಗ್ಗೆಯೂ ಮಾತಾನಾಡಿದ್ದಾರೆ. ಬೆಂಗಳೂರಿಗೆ ಕಸದ್ದೇ ದೊಡ್ಡ ಸಮಸ್ಯೆ. ಈ ನಿಟ್ಟಿನಲ್ಲಿ ಕಸದ ಕಾನ್ಸೆಪ್ಟ್ ಇಟ್ಟುಕೊಂಡು ಮಕ್ಕಳ ಕೈಯಲ್ಲಿ ದೊಡ್ಡವರಿಗೆ ಅರಿವು ಮೂಡಿಸಲು ಒಂದು ಆಲ್ಬಂ ಮಾಡುವ ಯೋಚನೆಯಲ್ಲಿದ್ದೇನೆ ಎಂದು ಹೇಳುತ್ತಾ ಶಮಿತಾ ಮಾತು ಮುಗಿಸಿದ್ರು. 

ಇದನ್ನು ಓದಿ:

1. ವನ್ಯಜೀವಿಗಳ ಪಾಲಿನ ಸಂರಕ್ಷಕ- ಜೀವ ಸಂಕುಲಗಳನ್ನು ಕಾಪಾಡಲು ಪಾಠ ಮಾಡುವ ಶಿಕ್ಷಕ

2. ಇವರಿಗೆ ಸರ್ಕಾರ ಕರೆಂಟ್​ ಕೊಡಲ್ಲ- ಇವರೇ ಸರ್ಕಾರಕ್ಕೆ ಕರೆಂಟ್​ ಕೊಡ್ತಾರೆ..!

3. ಜೋಧ್​ಪುರದ ಉದ್ಯಮಕ್ಕೆ ಫೇಸ್​ಬುಕ್​ ಟಚ್​- ಸಣ್ಣ ಉದ್ಯಮದಲ್ಲಿ ಸಾಮಾಜಿಕ ತಾಣದ ಮ್ಯಾಜಿಕ್​

Related Stories