ಬಿಡದಿ ಇಂಡಸ್ಟ್ರಿಯಲ್ ಎಸ್ಟೇಟ್​ಗೆ ಖಾಸಗಿ ಟಚ್

ಉಷಾ ಹರೀಶ್

0

ಸರಕಾರವನ್ನು ನಂಬಿದರೆ ಯಾವುದೇ ಕೆಲಸವಾಗುವುದಿಲ್ಲ ಎಂಬುದನ್ನು ಅರಿತ ಖಾಸಗಿ ಕಂಪನಿಗಳು ಬಿಡದಿ ರಿಯಲ್ ಎಸ್ಟೇಟ್​ನ ಅಭಿವೃದ್ಧಿ ಮತ್ತು ನಿರ್ವಹಣೆಗೆ ತಾವೇ ಮುಂದಾಗಿದ್ದಾವೆ. ಬೆಂಗಳೂರಿಗೆ 30 ಕಿಲೋಮೀಟರ್​ ದೂರದಲ್ಲಿರುವ ಬಿಡದಿಯ ಇಂಡಸ್ಟ್ರಿಯಲ್ ಎಸ್ಟೇಟ್ ಅನ್ನು ವ್ಯವಸ್ಥಿತವಾಗಿ ನಿಭಾಯಿಸಲು ಟೊಯೋಟಾ ಕಿರ್ಲೊಸ್ಕರ್, ಬಾಷ್, ಇಂಗರ್ಸಲ್ ರಾಂಡ್​ನಂತಹ ಕಂಪನಿಗಳು ತಮ್ಮದೇ ಹಣ ಖರ್ಚು ಮಾಡಲು ಸಜ್ಜಾಗಿವೆ. ಇನ್ಫೋಸಿಸ್, ವಿಪ್ರೊ, ಎಚ್​ಪಿ ಮತ್ತು ಟೆಕ್ ಮಹೀಂದ್ರದಂತಹ ಟಾಪ್ ಐಟಿ ಕಂಪನಿಗಳಿರುವ ಸುಮಾರು 900 ಎಕರೆಯಲ್ಲಿ ಹರಡಿರುವ ಎಲೆಕ್ಟ್ರಾನಿಕ್ ಸಿಟಿಯನ್ನು ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ ಅಭಿವೃದ್ಧಿಪಡಿಸಿದಂತೆಯೇ ಬಿಡದಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ತೀರ್ಮಾನ ಮಾಡಿದ್ದಾರೆ.

103 ಕೈಗಾರಿಕೆಗಳ ಸಮೂಹವಾದ ಬಿಡದಿ ಕೈಗಾರಿಕೆಗಳ ಸಂಘಟನೆಯು(ಬಿಐಎ) ಇಲ್ಲಿನ 1,500 ಎಕರೆ ವಿಸ್ತೀರ್ಣದ ಇಂಡಸ್ಟ್ರೀಯಲ್ ಎಸ್ಟೇಟ್​​ನ ಪೂರ್ಣ ನಿರ್ವಹಣೆಯನ್ನು ಮುಂದಿನ ತಿಂಗಳು ವಹಿಸಿಕೊಳ್ಳಲಿದೆ. ಪ್ರಸ್ತುತ ಈ ಎಸ್ಟೇಟ್​​ನ ಅಭಿವೃದ್ಧಿ ಮತ್ತು ನಿರ್ವಹಣೆ ಹೊಣೆಯನ್ನು ಕರ್ನಾಟಕ ಕೈಗಾರಿಕೆಗಳ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಹೊತ್ತಿದೆ. ಮೂಲ ಸೌಕರ್ಯ ಕಲ್ಪಿಸುವಲ್ಲಿ ಕೆಐಎಡಿಬಿ ವಿಫಲವಾಗಿದೆ. ಇಲ್ಲಿನ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಿಲ್ಲ ಎನ್ನುವಂಥ ಟೀಕೆಗಳಿಗೆ ಕೆಐಎಡಿಬಿ ಆಗಾಗ ಗುರಿಯಾಗುತ್ತಿದೆ.

ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಗಿಡಮರಗಳ ಮೂಲಕ ಪರಿಸರ ಸಂರಕ್ಷಣೆ ಸೇರಿದಂತೆ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಲು ಬಿಐಎ ನಿರ್ಧರಿಸಿದೆ. ಅಲ್ಲದೇ, ಎಲೆಕ್ಟ್ರಾನಿಕ್ಸ್ ಸಿಟಿಯಂತೆ ಬಿಡದಿಗೂ ಟೌನ್​ಶಿಪ್ ಸ್ಟೇಟಸ್ ನೀಡುವಂತೆಯೂ ಮನವಿ ಸಲ್ಲಿಸಲಿದೆ. ತಾನೇ ತೆರಿಗೆಯನ್ನು ಸಂಗ್ರಹಿಸಿದರೆ ಇನ್ನೂ ಚೆನ್ನಾಗಿ ಎಸ್ಟೇಟ್ ನಿರ್ವಹಣೆ ಮಾಡಬಹುದು ಎನ್ನುವ ಚಿಂತನೆಯನ್ನು ಬಿಐಎ ಹೊಂದಿದೆ. ಇದಕ್ಕಾಗಿ ಬಿಡದಿ ಇಂಡಸ್ಟ್ರೀಸ್ ಎಸ್ಟೇಟ್ ನಿರ್ವಹಣೆಗಾಗಿ 12 ಸದಸ್ಯರ ತಂಡವನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದೆ.

ಬಿಡದಿಯಲ್ಲಿರುವ ಕೈಗಾರಿಕೆಗಳಲ್ಲಿ ಟೊಯೊಟಾ ದೊಡ್ಡ ಘಟಕವನ್ನು ಹೊಂದಿದ್ದು, ಎಸ್ಟೇಟ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಲು ಉತ್ಸುಕತೆ ತೋರಿಸಿದೆ. ‘‘ಬಿಐಎ ಉತ್ತಮ ಕೆಲಸದ ಮೂಲಕ ಇತರೆ ಉದ್ಯಮ ಸಂಘಟನೆಗಳಿಗೂ ಮಾದರಿಯಾಗಲಿ ಎಂದು ನಾವು ಬಯಸುತ್ತೇವೆ. ಇಂಥ ಕೆಲಸಗಳಿಂದ ಬಿಡದಿಯಲ್ಲಿನ ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ ಪ್ರಯೋಜನವಾಗಲಿದೆ. ಇಂಥ ಎಸ್ಟೇಟ್​ಗಳು ಅಭಿವೃದ್ಧಿಗೊಂಡು ಕರ್ನಾಟಕಕ್ಕೆ ಉತ್ತಮ ಹೂಡಿಕೆ ಬರುವಂತಾಗಲಿ,’’ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್​ನ ಎಂಡಿ ನವೋಮಿ ಇಶಿ ಆಶಿಸಿದ್ದಾರೆ.

"ಉತ್ತಮ ಮೂಲ ಸೌಕರ್ಯದಿಂದ ಉದ್ಯಮಗಳಿಗೆ ಅನುಕೂಲವಾಗುತ್ತದೆ. ಉದ್ಯಮಗಳು ಬೆಳೆದರೆ ಸರಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ".

- ರಾಜೇಂದ್ರ ಹೆಗ್ಡೆ, ಬಿಐಎ ಅಧ್ಯಕ್ಷ

"ಥಾಯ್ಲೆಂಡ್, ಫಿಲಿಪ್ಪೀನ್ಸ್, ಇಂಡೋನೇಷ್ಯಾದಲ್ಲಿರುವ ವಿಶ್ವದ ಉತ್ತಮ ಕೈಗಾರಿಕಾ ಎಸ್ಟೇಟ್​​ಗಳಂತೆಯೇ ಬಿಡದಿ ಎಸ್ಟೇಟ್ ರೂಪುಗೊಳ್ಳಬೇಕು ಎಂದು ನಾವು ಬಯಸುತ್ತೇವೆ".

-ಶೇಖರ್ ವಿಶ್ವನಾಥನ್, ಟೊಯೋಟಾ ಕಿರ್ಲೋಸ್ಕರ್ ಉಪಾಧ್ಯಕ್ಷ