ಅಂದು ಎಸ್‌ಟಿಡಿ ಬೂತ್‌ಗೆ ಮಾಲೀಕ- ಇಂದು ನೂರಾರು ಕೋಟಿಗಳಿಗೆ ಒಡೆಯ

ಟೀಮ್​ ವೈ.ಎಸ್.ಕನ್ನಡ

1

ಯಾರ ಅದೃಷ್ಟ ಹೇಗೆ ಬದಲಾಗುತ್ತದೆ ಅನ್ನೋದನ್ನ ಹೇಳಲು ಸಾಧ್ಯವಿಲ್ಲ. ಅದೃಷ್ಟ ಇದ್ರೆ ರಸ್ತೆ ಬದಿಯ ಭಿಕ್ಷುಕ ಕೂಡ ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಬಹುದು. ಅದೃಷ್ಟ ಕೈ ಕೊಟ್ರೆ ಶ್ರೀಮಂತ ಕೂಡ ಬೀದಿ ಬದಿಯ ಸಾಮಾನ್ಯ ಮನುಷ್ಯನಾಗಬಹುದು. ಆದ್ರೆ ಸಾಧನೆಯ ಹಂಬಲ ಮತ್ತು ಶ್ರಮ ಇದ್ರೆ ಏನು ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಉದಾಹರಣೆ ಅರುಣ್‌ ಕುಮಾರ್‌ ಕಾರಟ್‌. 49 ವರ್ಷ ವಯಸ್ಸಿನ ಅರುಣ್‌ ಕುಮಾರ್‌ ಕಾರಟ್‌, ಪುಣೆಯಲ್ಲಿ ಒಂದು ಚಿಕ್ಕ ಎಸ್‌ಟಿಡಿ ಬೂತ್‌ ಆಪರೇಟರ್‌ ಆಗಿದ್ದರು. ಆದ್ರೆ ಇವತ್ತು ಅರುಣ್‌ ನೂರಾರು ಕೋಟಿಗಳ ಒಡೆಯ. ಅದೆಲ್ಲವೂ ಸಾಧ್ಯವಾಗಿದ್ದು ಶ್ರಮದಿಂದ ಮತ್ತು ಛಲದಿಂದ. ಇವತ್ತು ಅರುಣ್‌ ಕುಮಾರ್‌ ಪ್ರತಿಷ್ಠಿತ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದಾರೆ. ಐಷಾರಾಮಿ ಕಾರು, ಬಂಗಲೆ ಎಲ್ಲವೂ ಇದೆ. ಅರುಣ್‌ ಕುಮಾರ್‌ ವಿಂಗ್ಸ್‌ ಟ್ರಾವೆಲ್ಸ್‌ ಅನ್ನೋ ಬಾಡಿಗೆಗೆ ಕಾರು ಕೊಡುವ ಸಂಸ್ಥೆಗೆ ಮಾಲೀಕರು. ಒಂದು ಕಾಲದಲ್ಲಿ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡಿದ್ದ ಅರುಣ್‌ ಕುಮಾರ್‌ ಇವತ್ತು ಸುಮಾರು 600 ಜನರಿಗೆ ಉದ್ಯೋಗದಾತರು. ಅಷ್ಟೇ ಅಲ್ಲ ವಾರ್ಷಿಕವಾಗಿ ಸುಮಾರು 140 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಬ್ಯುಸಿನೆಸ್‌ ಮ್ಯಾನ್‌.

ಅರುಣ್‌ಗೆ ಚಿಕ್ಕ ವಯಸ್ಸಿನಲ್ಲೇ ಓದಿನಲ್ಲಿ ಆಸಕ್ತಿ ಇರಲಿಲ್ಲ. ಹೀಗಾಗಿ ತಾನು ಓದಬೇಕಿದ್ದ ಪುಸ್ತಕಗಳನ್ನು ಸಹೋದರನಿಗೆ ನೀಡುತ್ತಿದ್ದರು. ಆ ಸಹೋದರ ಇವತ್ತು ದೊಡ್ಡ ಡಾಕ್ಟರ್‌. ಓದಿನಲ್ಲಿ ಆಸಕ್ತಿ ಇಲ್ಲದ ಕಾರಣ ಅರುಣ್‌ 10ನೇ ಕ್ಲಾಸಿನ ನಂತರ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದರು. ಕೊನೆಗೆ ತನ್ನ ಸಂಬಂಧಿಯೊಬ್ಬರ ಫೂಟ್‌ವೇರ್‌ ಶಾಪ್‌ ಒಂದರಲ್ಲಿ ಸೇಲ್ಸ್‌ಮನ್‌ ಕೆಲಸಕ್ಕೆ ಸೇರಿಕೊಂಡರು. ಆದ್ರೆ ಇಲ್ಲೂ ಅರುಣ್‌ಗೆ ಕಾಲ ಕಳೆಯಲು ಇಷ್ಟವಾಗಿಲ್ಲ. ತನ್ನದೇ ಬ್ಯುಸಿನೆಸ್‌ ಮಾಡಬೇಕು ಅನ್ನೋ ಕನಸು ದೊಡ್ಡದಾಗಿತ್ತು. ಹೀಗಾಗಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಕೋರ್ಸ್‌ ಮಾಡಲು ಸೇರಿಕೊಂಡರು. ಅಷ್ಟೇ ಅಲ್ಲ ಆ ಕೋರ್ಸ್‌ನ್ನು ಯಶಸ್ವಿಯಾಗಿ ಮುಗಿಸಿದ್ರು.

ಇದನ್ನು ಓದಿ: ಬೈಕ್ ಏರಿ ಮಹಿಳಾಮಣಿಗಳ ಹಿಮಾಲಯ ಸವಾರಿ!

ಡಿಪ್ಲೋಮಾ ಪದವಿ ನಂತರ ಅರುಣ್‌ ಹಲವು ಕೆಲಸಗಳನ್ನು ಮಾಡಿದ್ರು. ಬೇರೆ ಬೇರೆ ವಿಭಾಗದಲ್ಲಿ ಜವಾಬ್ದಾರಿ ನಿರ್ವಹಿಸಿದ್ರು. ಆದ್ರೆ ಯಾವೂದು ಕೂಡ ಅರುಣ್‌ಗೆ ತೃಪ್ತಿ ಕೊಡಲಿಲ್ಲ. ಹೀಗಾಗಿ ಕೊನೆ ಸ್ವಂತ ಎಸ್‌ಟಿಡಿ ಬೂತ್‌ ಆರಂಭಿಸಿ, ಅಲ್ಲೇ ಚಿಕ್ಕದಾಗಿ ಟ್ರಾವೆಲ್‌ ಏಜೆನ್ಸಿಯನ್ನೂ ಆರಂಭಿಸಿದ್ರು. ಆರಂಭದಲ್ಲಿ ಅರುಣ್‌ ಖಾಸಗಿ ಬಸ್‌ಗಳಿಗೆ ಟಿಕೆಟ್‌ ರಿಸರ್ವೇಷನ್‌ ಮಾಡುವ ಕೆಲಸವನ್ನು ಕೂಡ ಶುರು ಮಾಡಿಕೊಂಡರು. ನಿಧಾನವಾಗಿ ಅರುಣ್‌ ಅದೃಷ್ಟ ಬದಲಾಗ ತೊಡಗಿತು. 1993-94ರಲ್ಲಿ ಅರುಣ್‌ ಬಾಡಿಗೆ ಕಾರುಗಳನ್ನು ಪ್ರಯಾಣಿಕರಿಗೆ ಒದಗಿಸುವ ಕೆಲಸ ಶುರುಮಾಡಿಕೊಂಡರು. 1996ರ ಹೊತ್ತಿಗೆ ಅರುಣ್‌ ಸ್ವಂತ ಕಾರನ್ನು ಖರೀದಿ ಮಾಡಲು ಆರಂಭಿಸಿದ್ರು. ದಿನದಿಂದ ದಿನಕ್ಕೆ ಅರುಣ್‌ ಉದ್ದಿಮೆ ಬೆಳೆಯತೊಡಗಿತು. ಆರಂಭದಲ್ಲಿ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಗಲು ಆರಂಭವಾಯಿತು.

ಹೀಗೆ ಆರಂಭವಾದ ಅರುಣ್ ಯಶಸ್ಸಿನ ಕಥೆ ಇವತ್ತು ಎಲ್ಲರಿಗೂ ಮಾದರಿ ಆಗಿದೆ. ವಿಂಗ್‌ ಟ್ರಾವೆಲ್ಸ್‌ ಇವತ್ತು ಪುಣೆ, ಮುಂಬೈ, ಗುಡ್​ಗಾಂವ್‌, ಚೆನ್ನೈ, ಹೈದ್ರಾಬಾದ್‌, ಬೆಂಗಳೂರು, ಚಂಡೀಗಢ, ಅಹ್ಮದಾಬಾದ್‌, ಬರೋಡಾ ಹೀಗೆ ಭಾರತದ 9 ಮಹಾ ನಗರಗಳಲ್ಲಿ ಶಾಖೆಗಳನ್ನು ಹೊಂದಿದೆ. ಅಷ್ಟೇ ಅಲ್ಲ ಥೈಲೆಂಡ್‌ಗೂ ತನ್ನ ವ್ಯವಹಾರವನ್ನು ವೃದ್ಧಿಸಿದೆ.

" ವಿಂಗ್‌ ಟ್ರಾವೆಲ್ಸ್‌ ಇವತ್ತು ಸುಮಾರು 475 ಸ್ವಂತ ಕ್ಯಾಬ್‌ಗಳನ್ನು ಹೊಂದಿದೆ. ಇದರ ಜೊತೆಗೆ 800 ಕ್ಯಾಬ್‌ಗಳು ಚಾಲಕ-ಮಾಲೀಕರ ಗುಂಪುಗಳಲ್ಲಿದೆ. ಸುಮಾರು 5,500ಕ್ಕೂ ಅಧಿಕ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದೇವೆ. ಭಾರತದ ಅತೀ ದೊಡ್ಡ ಟ್ರಾವೆಲ್‌ ನೆಟ್‌ವರ್ಕ್‌ ಆಗುವ ಕನಸು ನಮ್ಮದು "
- ಅರುಣ್‌ ಕುಮಾರ್‌ ಕಾರಟ್‌, ವಿಂಗ್‌ ಟ್ರಾವೆಲ್ಸ್‌ ಮಾಲೀಕ

ವಿಂಗ್‌ ಟ್ರಾವೆಲ್ಸ್‌ ಹಲವು ಸಮಾಜಮುಖಿ ಕಾರ್ಯಗಳಿಂದಲೂ ಗಮನ ಸೆಳೆಯುತ್ತಿದೆ. ಇತ್ತೀಚೆಗೆ ವಿಂಗ್‌ ಟ್ರಾವೆಲ್ಸ್‌ ಹಲವು ಎನ್‌ಜಿಒಗಳ ಜೊತೆ ಸೇರಿಕೊಂಡು ಮುಂಬೈ ಮಹಾನಗರದಲ್ಲಿ ಸುಮಾರು 300 ಲೆಸ್ಬಿಯನ್‌, ಗೇ, ಬೈ ಸೆಕ್ಸ್ಯುವಲ್‌ ಮತ್ತು ಎಲ್‌.ಜಿ.ಬಿ.ಟಿ ಕಮ್ಯುನಿಟಿಯ ಸದಸ್ಯರುಗಳಿಗೆ ನಗರದಲ್ಲಿ ಖಾಸಗಿ ಟ್ಯಾಕ್ಸಿಗಳನ್ನು ಬಾಡಿಗೆಗೆ ನೀಡಿ ಅದರಿಂದ ಆದಾಯಗಳಿಸುವ ಉಪಾಯಗಳನ್ನು ಹೇಳೊಕೊಟ್ಟಿತ್ತು. ಇದು ಈ ಅಂಡರ್‌ ಪ್ರಿವಿಲೆಡ್ಜಡ್‌ ಕಮ್ಯುನಿಟಿ ಸದಸ್ಯರುಗಳಿಗೆ ತನ್ನದೇ ಉದ್ಯಮ ಸ್ಥಾಪಿಸಲು ಸ್ಫೂರ್ತಿ ನೀಡಿತ್ತು.

ಇತ್ತೀಚೆಗೆ ಅರುಣ್‌ ಬೆಂಗಳೂರಿನಲ್ಲಿ ತನ್ನ ಕ್ಯಾಬ್‌ಗಳಿಗೆ SOS ಫೀಚರ್‌ಗಳನ್ನು ಕೂಡ ನೀಡಿದ್ದಾರೆ. ಪ್ರಯಾಣಿಕರು ಕ್ಯಾಬ್‌ನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಭಯಕ್ಕೆ ಬಿದ್ದು ಕಿರುಚಾಡಿದ್ರೆ, ಈ SOS ತಂತ್ರಜ್ಞಾದ ಮೂಲಕ ಅವರನ್ನು ಅಪಾಯದಿಂದ ಪಾರು ಮಾಡಲಾಗುತ್ತದೆ. ಅಷ್ಟೇ ಅಲ್ಲ ಅವರಿಗೆ ಬೇರೊಂದು ಕ್ಯಾಬ್‌ ವ್ಯವಸ್ಥೆಯನ್ನು ಕೂಡ ಮಾಡಿಕೊಡಲಾಗುತ್ತದೆ. ಒಟ್ಟಿನಲ್ಲಿ ಅರುಣ್‌ ಕುಮಾರ್‌ ಇವತ್ತು ಭಾರತದ ಕೋಟ್ಯಾಧೀಶರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಟ್ರಾವೆಲ್ಸ್‌ ಉದ್ದಿಮೆಯಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಛಲ ಮತ್ತು ಶ್ರಮ ಇದ್ದರೆ ಯಾವ ಸಾಧನೆ ಬೇಕಾದರೂ ಮಾಡಬಹುದು ಅನ್ನೋದಕ್ಕೆ ಅರುಣ್‌ ಕುಮಾರ್‌ ಕಾರಟ್‌ಗಿಂತ ಬೇರೆ ಉದಾಹರಣೆ ಬೇಕಿಲ್ಲ.

ಇದನ್ನು ಓದಿ:

1. ಮೇಕ್​ ಇನ್​ ಇಂಡಿಯಾ ಕಥೆಗೆ ಹೊಸ ಸೇರ್ಪಡೆ- ಚೆನ್ನೈನಲ್ಲಿ ತಲೆ ಎತ್ತಲಿದೆ "ಮೆಡಿಪಾರ್ಕ್

2. ಸ್ಟಾರ್​ಗಳಿಗೆ ಲುಕ್​ ಕೊಡುವ ಗಟ್ಟಿಗಿತ್ತಿ- ಪಾತರಗಿತ್ತಿಗೂ ಬಣ್ಣ ಹಚ್ಚೋ ಪವಿತ್ರರೆಡ್ಡಿ

3. ಆನ್​ಲೈನ್​ ಉದ್ಯಮದಲ್ಲಿ ಲಾಭಕ್ಕಾಗಿ ಪೈಪೋಟಿ- ಗ್ರಾಹಕರಿಗೆ "ಹಬ್ಬದೂಟ"ದ ಸಂಭ್ರಮ..!

Related Stories