ಪ್ಲಾನ್ `ಬಿ'ಯನ್ನೇ ಬದಿಗೊತ್ತಿ ಯಶಸ್ಸಿನತ್ತ ನಡಿಗೆ-ವಿಶ್ವದಾದ್ಯಂತ ಸದ್ದು ಮಾಡಿದೆ `ಫ್ರೆಶ್ ಡೆಸ್ಕ್'

ಟೀಮ್​​ ವೈ.ಎಸ್​​. ಕನ್ನಡ

ಪ್ಲಾನ್ `ಬಿ'ಯನ್ನೇ ಬದಿಗೊತ್ತಿ ಯಶಸ್ಸಿನತ್ತ ನಡಿಗೆ-ವಿಶ್ವದಾದ್ಯಂತ ಸದ್ದು ಮಾಡಿದೆ `ಫ್ರೆಶ್ ಡೆಸ್ಕ್'

Friday December 11, 2015,

3 min Read

`ಫ್ರೆಶ್‍ಡೆಸ್ಕ್' ಸಂಸ್ಥಾಪಕರ ತಂಡ 2010ರಲ್ಲಿ ತಮ್ಮ ಉತ್ಪನ್ನದ ಮಾದರಿ ತಯಾರಿಸಲು ಆರಂಭಿಸಿತ್ತು. `ಪ್ಲಾನ್ ಬಿ' ಜೊತೆ ಅವರು ಸವಾಲುಗಳನ್ನೆದುರಿಸಲು ಸಜ್ಜಾಗಿದ್ರು. 9 ತಿಂಗಳೊಳಗೆ ಉತ್ಪನ್ನವನ್ನು ಸಿದ್ಧಮಾಡಿ ಕಳುಹಿಸಲು ಸಾಧ್ಯವಾಗದೇ ಇದ್ದರೆ, ಉಳಿದ 9 ತಿಂಗಳಲ್ಲಿ ಅವರ ಉತ್ಪನ್ನ 20,000 ಡಾಲರ್ ಹಣ ಗಳಿಸಲು ವಿಫಲವಾದ್ರೆ ಕಂಪನಿಯನ್ನೇ ಮುಚ್ಚಬೇಕಾದ ಆತಂಕ ಅವರನ್ನು ಕಾಡುತ್ತಿತ್ತು. `ಫ್ರೆಶ್‍ಡೆಸ್ಕ್'ನ ಸಹ ಸಂಸ್ಥಾಪಕ ಗಿರೀಶ್ ಮಾತೃಬೂತಮ್, ಈ ಪ್ರಯತ್ನದಲ್ಲಿ ಯಶಸ್ವಿಯಾಗಲೇಬೇಕೆಂಬ ಹಠದಿಂದ ತಂಡವನ್ನು ಮುನ್ನಡೆಸುತ್ತಿದ್ರು.

image


ಆದ್ರೀಗ `ಪ್ಲಾನ್ ಬಿ' ಧೂಳು ತಿನ್ನುತ್ತಾ ಬಿದ್ದಿದೆ. `ಫ್ರೆಶ್‍ಡೆಸ್ಕ್' ಲಾಂಚ್ ಆಗಿ 5 ವರ್ಷಗಳಲ್ಲಿ ಭಾರತೀಯ ಸಾಫ್ಟ್​​​ವೇರ್ ಉದ್ಯಮದ ಪೋಸ್ಟರ್ ಬಾಯ್‍ನಂತಾಗಿದೆ. 500 ಮಿಲಿಯನ್ ಡಾಲರ್ ಬೆಲೆಬಾಳುವ ಈ ಸಂಸ್ಥೆ ಇತ್ತೀಚೆಗಷ್ಟೆ ಶ್ರೇಷ್ಠ ಹೂಡಿಕೆದಾರರಾದ ಗೂಗಲ್ ಕ್ಯಾಪಿಟಲ್, ಟೈಗರ್ ಗ್ಲೋಬಲ್, ಎಕ್ಸೆಲ್ ಪಾರ್ಟ್‍ನರ್ಸ್ ಸಂಸ್ಥೆಗಳಿಂದ 94 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ. ವಿಶೇಷ ಅಂದ್ರೆ `ಫ್ರೆಶ್‍ಡೆಸ್ಕ್' 145 ರಾಷ್ಟ್ರಗಳಲ್ಲಿ, 50,000 ಗ್ರಾಹಕರನ್ನು ಹೊಂದಿದೆ. `ಹ್ಯಾಕರ್ ನ್ಯೂಸ್'ನಲ್ಲಿ ಲೇಖನವೊಂದನ್ನು ಓದಿದ್ದ `ಫ್ರೆಶ್‍ಡೆಸ್ಕ್'ನ ಗಿರೀಶ್, ಸಖತ್ ಥ್ರಿಲ್ ಆಗಿದ್ರು. ಯಾಕಂದ್ರೆ ಜಾಗತಿಕ ಗ್ರಾಹಕ ಬೆಂಬಲ ಸಂಸ್ಥೆ `ಝೆನ್‍ಡೆಸ್ಕ್' ಬೆಲೆ ಹೆಚ್ಚಳ ಮಾಡಿತ್ತು. ಸಂಭಾವ್ಯ ವ್ಯಾಪಾರ ಅವಕಾಶಗಳ ಬಗ್ಗೆ ಬಳಕೆದಾರನೊಬ್ಬ ಮಾಡಿದ್ದ ಕಮೆಂಟ್ ಕೂಡ ಹ್ಯಾಕರ್ ನ್ಯೂಸ್‍ನಲ್ಲಿ ಪ್ರಕಟವಾಗಿತ್ತು. `ಝೋಹೊ ಕಾರ್ಪ್'ನಲ್ಲಿದ್ದ ತಮ್ಮ ಸಹೋದ್ಯೋಗಿ ಶಾನ್ ಕೃಷ್ಣಸ್ವಾಮಿ ಅವರ ಜೊತೆಗೂಡಿ ಗಿರೀಶ್, 2010ರಲ್ಲಿ ಉದ್ಯಮ ಮಾದರಿಯನ್ನು ತಯಾರಿಸಲು ಆರಂಭಿಸಿದ್ರು. 8 ತಿಂಗಳ ಬಳಿಕ ಉತ್ಪನ್ನ ಸಿದ್ಧವಾಗಿತ್ತು. ಇದೊಂದು ಮೋಡ ಆಧಾರಿತ ಉತ್ಪನ್ನ. ಗ್ರಾಹಕರ ಫೋನ್ ಕರೆ, ಇಮೇಲ್ ಅಥವಾ ಸಾಮಾಜಿಕ ಮಾಧ್ಯಮಗಳ ಸಂದೇಶವನ್ನು ಇದು ಟಿಕೆಟ್ ಆಗಿ ಪರಿವರ್ತಿಸಬಲ್ಲದು. ಅದಕ್ಕೆ ಕಸ್ಟಮರ್ ಕೇರ್ ತಂಡ ಪ್ರತಿಕ್ರಿಯಿಸಬೇಕಿದೆ.

2011ರ ಜೂನ್, `ಫ್ರೆಶ್ ಡೆಸ್ಕ್' ಕಂಪನಿಗೆ ಮಹತ್ವದ ತಿಂಗಳಾಗಿ ಪರಿಣಮಿಸಿತ್ತು. `ಫ್ರೆಶ್ ಡೆಸ್ಕ್'ನ ಸಾಸ್ (SAS) ಉತ್ಪನ್ನಕ್ಕೆ ಮೊದಲ ಗ್ರಾಹಕರು ದೊರೆತಿದ್ರು. ಆಸ್ಟ್ರೇಲಿಯಾದ ಎಟ್‍ವೆಲ್ ಕಾಲೇಜು ಇವರ ಉತ್ಪನ್ನವನ್ನು ಖರೀದಿಸಲು ಮುಂದಾಗಿತ್ತು. ತಮ್ಮ ಉತ್ಪನ್ನವನ್ನು ಜಾಗತಿಕ ಮಟ್ಟದಲ್ಲಿ ಮಾರ್ಕೆಟಿಂಗ್ ಮಾಡಬೇಕೆಂದು ಮೊದಲೇ ಗಿರೀಶ್ ಮತ್ತವರ ತಂಡ ನಿರ್ಧರಿಸಿತ್ತು. ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಆನ್‍ಲೈನ್ ಬೆಂಬಲ ಬೇಕೇಬೇಕು ಎಂಬುದನ್ನೂ ಅವರು ಅರಿತಿದ್ರು. 2011ರ ಜೂನ್‍ನಲ್ಲೇ `ಫ್ರೆಶ್ ಡೆಸ್ಕ್', `ಮೈಕ್ರೋಸಾಫ್ಟ್ ಬಿಝ್‍ಸ್ಪಾರ್ಕ್ ಸ್ಟಾರ್ಟ್‍ಅಪ್ ಚಾಲೆಂಜ್'ನಲ್ಲಿ ಗೆಲುವು ಸಾಧಿಸಿತ್ತು. ಆಗಸ್ಟ್​​​ನಲ್ಲಿ `ಯುವರ್‍ಸ್ಟೋರಿ' ಆಯೋಜಿಸಿದ್ದ `ಟೆಕ್‍ಸ್ಪಾರ್ಕ್ಸ್​​​'ನಲ್ಲಿ ಟೆಕ್-30 ಕಂಪನಿಗಳ ಪೈಕಿ `ಫ್ರೆಶ್ ಡೆಸ್ಕ್' ಸಂಸ್ಥೆಯನ್ನೂ ಆಯ್ಕೆ ಮಾಡಲಾಗಿತ್ತು. ಇದಾಗಿ ಕೆಲವೇ ದಿನಗಳಲ್ಲಿ 100 ಗ್ರಾಹಕರನ್ನು ಸಂಪಾದಿಸಿದ ಕಂಪನಿ, ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ.

`ಫ್ರೆಶ್‍ಡೆಸ್ಕ್' 5ನೇ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಸಂಘಟನೆಯ ಸಂಸ್ಕೃತಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇ ತಮ್ಮ ಅತಿ ದೊಡ್ಡ ಸಾಧನೆ ಎನ್ನುತ್ತಾರೆ ಗಿರೀಶ್. ಏಕಕಾಲಕ್ಕೆ ಉತ್ಪನ್ನ ಹಾಗೂ ಸಂಸ್ಕೃತಿ ಎರಡನ್ನೂ ಒಂದೇ ಪ್ರಮಾಣದಲ್ಲಿ ಕೊಂಡೊಯ್ದಿರುವುದೇ ಕಂಪನಿಯ ಯಶಸ್ಸಿಗೆ ಮೂಲ ಅನ್ನೋದು ಅವರ ಅಭಿಪ್ರಾಯ. ನಾವೊಂದು ಸಂಸ್ಥೆಯನ್ನು ಕಟ್ಟಿದ್ದೇವೆ - ಅದರೊಳಕ್ಕೆ ಒಂದು ಪರಿಸರವನ್ನು ನಿರ್ಮಿಸಿದ್ದೇವೆ - ಅಲ್ಲಿ ಜನರು ತಮ್ಮ ಕೆಲಸದ ಬಗ್ಗೆ ಭಾವೋದ್ರಿಕ್ತರಾಗಿದ್ದಾರೆ ಜೊತೆಗೆ ಅದನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ ಅಂತಾ ಗಿರೀಶ್ ಹೆಮ್ಮೆಯಿಂದ ಹೇಳಿಕೊಳ್ತಾರೆ. `ಫ್ರೆಶ್‍ಡೆಸ್ಕ್' 500 ಸಿಬ್ಬಂದಿಯನ್ನು ಹೊಂದಿರುವ ಅತಿದೊಡ್ಡ ತಂಡ. ಚೆನ್ನೈನಲ್ಲಿ 60,000 ಚದರ ಅಡಿ ವಿಸ್ತೀರ್ಣದ ಬೃಹತ್ ಕಚೇರಿಯಿದೆ. ಅವರವರ ಸಾಮಥ್ರ್ಯಕ್ಕೆ ಅನುಗುಣವಾಗಿ ಜವಾಬ್ಧಾರಿ ಕೊಡುವುದರ ಮೇಲೆ ಗಮನ ಕೇಂದ್ರೀಕರಿಸಬೇಕು, ಅವರಿಗೆ ಹೊಂದಾಣಿಕೆಯಾಗದಂತಹ ಕೆಲಸವನ್ನು ಮಾಡುವಂತೆ ಸಿಬ್ಬಂದಿ ಮೇಲೆ ಒತ್ತಡ ಹೇರಬಾರದು ಅನ್ನೋದು ಗಿರೀಶ್ ಅವರ ನಿಯಮ. ಫ್ರೆಶರ್‍ಗಳು ಕೂಡ `ಫ್ರೆಶ್ ಡೆಸ್ಕ್'ನಲ್ಲಿ `ರಾಕ್‍ಸ್ಟಾರ್ ಟೀಮ್ ಲೀಡರ್'ಗಳಾಗಿರುವುದೇ ಇದಕ್ಕೆ ಸಾಕ್ಷಿ. ಇತ್ತೀಚೆಗೆಷ್ಟೆ `ಫ್ರೆಶ್ ಡೆಸ್ಕ್' ಸ್ಯಾನ್ ಫ್ರಾನ್ಸಿಸ್ಕೋ, ಸಿಡ್ನಿ ಮತ್ತು ಲಂಡನ್‍ನಲ್ಲಿ ಕಚೇರಿಗಳನ್ನು ಆರಂಭಿಸಿದೆ.

image


ಉತ್ಪನ್ನವೇ `ಫ್ರೆಶ್ ಡೆಸ್ಕ್'ನ ಹೃದಯ. `ಮೊಬೈಲ್ ಸ್ಪಾಕ್ರ್ಸ್' 2015 ಸಂದರ್ಭದಲ್ಲಿ `ಯುವರ್‍ಸ್ಟೋರಿ' ಜೊತೆ ಮಾತನಾಡಿದ ಗಿರೀಶ್, ರೆಸ್ಟೋರೆಂಟ್‍ಗಳ ಯಶಸ್ಸಿಗೆ ತಿನಿಸುಗಳೇ ಮೂಲ ಹಾಗೆಯೇ ಫ್ರೆಶ್ ಡೆಸ್ಕ್ ಯಶಸ್ಸಿನ ಹಿಂದೆ ಉತ್ಪನ್ನದ ಗುಣಮಟ್ಟವಿದೆ ಅಂತಾ ಹೇಳಿದ್ದಾರೆ. ಈ ಸಂಸ್ಥೆ ಇತ್ತೀಚೆಗಷ್ಟೆ `ಫ್ರೆಶ್‍ಸರ್ವೀಸ್' ಅನ್ನು ಕೂಡ ಲಾಂಚ್ ಮಾಡಿದೆ. ಇದೊಂದು ಆಂತರಿಕ ಐಟಿ ಹೆಲ್ಪ್‍ಡೆಸ್ಕ್, ಅಷ್ಟೇ ಅಲ್ಲ ಮೊಬೈಲ್ ಅಪ್ಲಿಕೇಷನ್‍ಗಳಿಗೆ ಬೇಕಾದ ಆ್ಯಪ್ ಸಪೋರ್ಟ್ ಕೂಡ ನೀಡುತ್ತೆ. ಎರಡು ಕಂಪನಿಗಳನ್ನು ಕೂಡ ಸ್ವಾಧೀನಪಡಿಸಿಕೊಂಡಿದೆ. ಆಗಸ್ಟ್‍ನಲ್ಲಿ `ಫ್ರೆಶ್ ಡೆಸ್ಕ್' ನೇರ ವಿಡಿಯೋ ಚಾಟ್ ಮತ್ತು ಕೋ ಬ್ರೌಸಿಂಗ್ ವೇದಿಕೆ `1CLICK.io.' ಅನ್ನು ಆರಂಭಿಸಿದೆ. `1CLICK.io..' ನಲ್ಲಿ ವಿಡಿಯೋ ಚಾಟ್, ಸ್ಕ್ರೀನ್ ಶೇರಿಂಗ್ ಮತ್ತು ಕೋ-ಬ್ರೌಸಿಂಗ್ ವ್ಯವಸ್ಥೆಯಿದೆ. ಕಳೆದ ತಿಂಗಳಷ್ಟೆ ಸಾಮಾಜಿಕ ಶಿಫಾರಸು ವೇದಿಕೆ `ಫ್ರಿಲ್ಪ್' ಅನ್ನು ಫ್ರೆಶ್‍ಡೆಸ್ಕ್ ಸ್ವಾಧೀನಪಡಿಸಿಕೊಂಡಿದೆ.

``ನಾವು ಆರಂಭಿಕ ಹಂತವನ್ನು ದಾಟಿದ್ದೇವೆ, ಇದು ಬೆಳವಣಿಗೆಗೆ ಸೂಕ್ತವಾದ ಹಂತ. ನಮ್ಮ ಉತ್ಪನ್ನ `SAAS' ಅನ್ನು ಕೇವಲ ಭಾರತದಲ್ಲಿ ಮಾತ್ರವಲ್ಲ ಒಂದು ಜಾಗತಿಕ ಬ್ರಾಂಡ್ ಆಗಿ ಗುರುತಿಸಿಕೊಳ್ಳುವಂತೆ ಮಾಡುವುದೇ ನಮ್ಮ ಗುರಿ ಅನ್ನೋದು ಗಿರೀಶ್ ಅವರ ಆತ್ಮವಿಶ್ವಾಸದ ನುಡಿ''.

ಲೇಖಕರು: ರಾಧಿಕಾ ಪಿ ನಾಯರ್​​​

ಅನುವಾದಕರು: ಭಾರತಿ ಭಟ್​​