ಕಾರ್ ಪೂಲಿಂಗ್ ಗೊತ್ತು... ಬೈಕ್ ಪೂಲಿಂಗ್ ಗೊತ್ತಾ...?

ಕೃತಿಕಾ

ಕಾರ್ ಪೂಲಿಂಗ್ ಗೊತ್ತು... ಬೈಕ್ ಪೂಲಿಂಗ್ ಗೊತ್ತಾ...?

Tuesday December 15, 2015,

2 min Read

ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಕಾರ್ ಶೇರ್ ಮಾಡಿಕೊಳ್ಳುವ ಕಾರ್ ಪೂಲಿಂಗ್ ಆರಂಭವಾಯ್ತು. ಬೆಂಗಳೂರಿನಲ್ಲಂತೂ ಕಾರ್ ಪೂಲಿಂಗ್ ಉತ್ತೇಜಿಸಲು ಸಂಚಾರ ಪೊಲೀಸರೇ ಮುಂದಾಗಿದ್ದಾರೆ. ಈಗ ಕಾರ್ ಪೂಲಿಂಗ್ ನಂತರ ಬೈಕ್ ಪೂಲಿಂಗ್ ಅನ್ನೋ ಕಾನ್ಸೆಪ್ಟ್ ಸಿದ್ದವಾಗಿದೆ. ಅಷ್ಟೇ ಅಲ್ಲ ಅದಕ್ಕೊಂದು ಮೊಬೈಲ್ ಅಪ್ಲಿಕೇಶನ್ ಇದೆ. ನಿಮಗೆ ಬಸ್ಸಲ್ಲಿ ಹೋಗಲು ಮನಸ್ಸಿಲ್ಲ, ಕಾರು ಡ್ರೈವ್ ಮಾಡಲು ಆಸಕ್ತಿ ಇಲ್ಲ, ಯಾರಾದರೂ ಬೈಕ್ ಓಡಿಸುವವರಿದ್ದರೆ ಹಿಂದೆ ಕೂತು ಆರಾಮಾಗಿ ಆಫೀಸಿಗೆ ಹೋಗಬಹುದಿತ್ತು ಅಂತ ಅಂದುಕೊಳ್ಳುವವರಿಗೆ ಒಂದು ಇಂಟರೆಸ್ಟಿಂಗ್ ಸುದ್ದಿ ಇದೆ. ಕಾರ್ ಪೂಲಿಂಗ್ ಥರಾನೇ ಬೈಕ್ ಪೂಲಿಂಗ್ ಶುರುವಾಗಿದೆ. ಈ ಬೈಕ್ ಶೇರಿಂಗ್ ವ್ಯವಸ್ಥೆಯ ಹೆಸರು ರ್ಯಾಪಿಡೋ(Rapido).

image


ರ್ಯಾಪಿಡೋ (Rapido)ಅಂತ ಒಂದು ಆ್ಯಪ್ ಇದೆ. ಅದರಲ್ಲಿ ನೀವು ಬೈಕ್ ಶೇರಿಂಗ್ ಮಾಡಿ ಬೆಂಗಳೂರಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗಬಹುದು. ಈ ಆ್ಯಪ್ ಕೂಡ ಓಲಾ, ಉಬರ್ ಟ್ಯಾಕ್ಸಿ ಕಂಪನಿಗಳ ಆ್ಯಪ್ ರೀತಿಯೇ ಕೆಲಸ ಮಾಡುತ್ತದೆ. ಕಡಿಮೆ ಹಣ ಖರ್ಚು ಮಾಡಿ ಪ್ರಯಾಣ ಮಾಡುವ ಅವಕಾಶ ನಿಮಗೆ ಲಭ್ಯವಾಗಲಿದೆ.

ಉದಾಹರಣೆಗೆ ನೀವು ಜಯನಗರದಲ್ಲಿದ್ದೀರಾ ಅಂದುಕೊಳ್ಳಿ. ನಿಮಗೆ ತಕ್ಷಣ ಕೋರಮಂಗಲಕ್ಕೆ ಹೋಗಬೇಕು. ಬಸ್ಸಲ್ಲಿ ಹೋಗೋ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬೇಕು. ಕ್ಯಾಬ್​​ನಲ್ಲಿ ಲೇಟಾಗತ್ತೆ. ಜೊತೆಗೆ ದುಡ್ಡೂ ಹೆಚ್ಚು ಖರ್ಚಾಗುತ್ತೆ, ಆಟೋದವರು ಬರಲ್ಲ. ಇಂಥಾ ಹೊತ್ತಲ್ಲಿ ನೀವು ರ್ಯಾಪಿಡೋ (Rapido) ಆ್ಯಪ್​ಗೆ ಹೋದರೆ ಅಲ್ಲಿ ಎಂಜಿ ರಸ್ತೆಯಿಂದ ಬಸವನಗುಡಿಗೆ ಹೊರಟಿರುವ ವ್ಯಕ್ತಿಯ ವಿವರ ಸಿಗುತ್ತದೆ. ನೀವು ಆ ವ್ಯಕ್ತಿಯ ಬೈಕ್ ಹತ್ತಿಕೊಂಡು ಬಸವನಗುಡಿಯವರೆಗೆ ಹೋಗಬಹುದು. ಇದೊಂಥರಾ ಕೈ ತೋರಿಸಿ ಓ ಅಲ್ಲಿಯವರೆಗೆ ಡ್ರಾಪ್ ಮಾಡ್ತೀರಾ... ಪ್ಲೀಸ್ ಅಂತಾ ಕೇಳಿದ ಹಾಗೆಯೇ ಇರುತ್ತದೆ.

image


ನಿಮ್ಮ ಹತ್ತಿರ ಬೈಕ್ ಇದೆ. ನೀವು ಎಂಜಿ ರಸ್ತೆಯಿಂದ ಬಸವನಗುಡಿ ಕಡೆಗೆ ಹೊರಟಿದ್ದೀರಿ. ಯಾರಾದರೂ ಜೊತೆಗಿದ್ದರೆ ಒಳ್ಳೆಯದಿತ್ತು ಅಂತ ನಿಮಗನ್ನಿಸಿದೆ. ಹಾಗಿದ್ದರೆ ನೀವು ನಿಮ್ಮ ಹೆಸರು ರ್ಯಾಪಿಡೋ(Rapido)ದಲ್ಲಿ ನೋಂದಾಯಿಸಬಹುದು. ಇದಕ್ಕೆ ನಿಮಗೆ ದುಡ್ಡು ಕೂಡ ಸಿಗುತ್ತದೆ. ಆದರೆ ನೀವು ಬೈಕ್​​ನ ಡಾಕ್ಯುಮೆಂಟ್ ಮತ್ತು ನಿಮ್ಮ ಲೈಸೆನ್ಸ್ ರ್ಯಾಪಿಡೋ(Rapido)ಗೆ ಸಲ್ಲಿಸಬೇಕು. ಒಂದು ಕಿಲೋಮೀಟರ್ ಪ್ರಯಾಣಕ್ಕೆ ಬೈಕ್ ಸವಾರ ಐದು ರೂಪಾಯಿ ಹಣ ಗಳಿಸಬಹುದು. ಖಾಲಿಯಾಗಿರೋ ಹಿಂದಿನ ಸೀಟು ಭರ್ತಿಯಾದ್ರೆ ನಿಮಗೇನೂ ನಷ್ಟವಿಲ್ಲ. ಅದರ ಜೊತೆಗೆ ರ್ಯಾಪಿಡೋ(Rapido) ಅಪ್ಲಿಕೇಶನ್ ಇದ್ರೆ ಹಣವನ್ನೂ ನಿಮ್ಮದಾಗಿಸಿಕೊಳ್ಳಬಹುದು.ಸದ್ಯ ಬೆಂಗಳೂರಿನಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿರೋ ಈ ಅಪ್ಲಿಕೇಶನ್ ಅನ್ನು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಬಳಸುತ್ತಿದ್ದಾರೆ. ಕಾರ್ ಪೂಲಿಂಗ್ ಅನ್ನೋ ಯೋಜನೆ ಜನಪ್ರಿಯತೆ ಗಳಿಸಲು ಹೆಣಗಾಡುತ್ತಿರುವಾಗಲೇ ಬೈಕ್ ಪೂಲಿಂಗ್ ಮಾಡೋ ರ್ಯಾಪಿಡೋ (Rapido) ಕಾನ್ಸೆಪ್ಟ್ ಸದ್ದಿಲ್ಲದೇ ಕೆಲಸ ಮಾಡುತ್ತಿದೆ.

image


ನಾನು ಇಂಟರ್ ನೆಟ್ ನಲ್ಲಿ ಏನೋ ಬ್ರೌಸ್ ಮಾಡುವಾಗ ಈ ಆ್ಯಪ್ ಬಗ್ಗೆ ತಿಳಿದುಕೊಂಡೆ. ತಕ್ಷಣ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡು ಬಳಸುತ್ತಿದ್ದೇನೆ. ಕಡಿಮೆ ಖರ್ಚಿನಲ್ಲಿ ಬೆಂಗಳೂರಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಬೇಕು ಅಂದ್ರೆ ರ್ಯಾಪಿಡೋ(Rapido) ಗಿಂತ ಮತ್ತೊಂದು ಮಾರ್ಗವಿಲ್ಲ. ನಾನು ಪ್ರತಿ ದಿನ ಕೆಲಸಕ್ಕಾಗಿ ಕೋರಮಂಗಲದಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಬೇಕು. ಆ್ಯಪ್ ಬಳಸಲು ಆರಂಭಿಸಿದ ನಂತರ ನನಗೆ ಬೈಕ್ ಸವಾರರು ಸಿಗುತ್ತಾರೆ ಅಂತಾರೆ ರ್ಯಾಪಿಡೋ (Rapido)ಆ್ಯಪ್ ಬಳಸುತ್ತಿರುವ ಖಾಸಗಿ ಬ್ಯಾಂಕ್ ನ ಉದ್ಯೋಗಿ ಮನೀಶ್.

ಬೆಂಗಳೂರಿನಲ್ಲಿನ ಟ್ರಾಫಿಕ್ ನಲ್ಲಿ ಒದ್ದಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ಆ್ಯಪ್ ಸಿದ್ದಪಡಿಸಲಾಗಿದೆ. ಒಂದೇ ಕಡೆಗೆ ಹೋಗುವವರು ಈ ಆ್ಯಪ್ ನಿಂದ ಅನುಕೂಲ ಪಡೆದುಕೊಳ್ಳಬಹುದು. ಬೆಂಗಳೂರಿನ ಟ್ರಾಫಿಕ್, ಕಿರಿದಾದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ಮಾತ್ರ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ ನಾವು ಬೈಕ್ ಪೂಲಿಂಗ್ ಮಾಡುವ ಯೋಜನೆ ರೂಪಿಸಿ ರ್ಯಾಪಿಡೋ ಆ್ಯಪ್ ಅಭಿವೃದ್ದಿ ಪಡಿಸಿದ್ದೇವೆ. ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಈ ಆ್ಯಪ್ ಬಳಸುತ್ಯಿದ್ದಾರೆ. ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಲಿದೆ ಅಂತಾರೆ ರ್ಯಾಪಿಡ್ ಆ್ಯಪ್ ಅಭಿವೃದ್ದಿ ಪಡಿಸಿರೋ ರ್ಯಾಪಿಡೋ ಸಂಸ್ಥೆಯ ವಿಲಾಸ್.

ಟ್ರಾಫಿಕ್ ಸಿಕ್ಕಾಪಟ್ಟೆ ಜಾಸ್ತಿಯಾಗುತ್ತಿರುವ ಸಂದರ್ಭದಲ್ಲಿ ಈ ಬೈಕ್ ಶೇರಿಂಗ್ ತುಂಬಾ ಒಳ್ಳೆಯದು ಅಂತನ್ನಿಸಿದರೆ ನೀವೂ ರ್ಯಾಪಿಡೋ ಗ್ರೂಪ್​ಗೆ ಸೇರಿಕೊಳ್ಳಬಹುದು. ಹಣ ಉಳಿಸುವುದರ ಜೊತೆಗೆ ಹಣ ಗಳಿಸುವ ಮಾರ್ಗವನ್ನೂ ರ್ಯಾಪಿಡೋ ಆ್ಯಪ್ ಮೂಲಕ ಮಾಡಬಹುದು