ನಿಮಗಾಗಿ ‘ಆರೋಗ್ಯ ಆಹಾರ’

ಉಷಾ ಹರೀಶ್

0

ನಮ್ಮದು ಅನ್ನೋ ಭಾವವೇ ನಮ್ಮನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುತ್ತದೆ ಎಂಬ ಕಾರಣದಿಂದಿರಬೇಕು ‘ನಮ್ಮೂರ ಹೋಟೆಲ್’ ಅನ್ನೋ ಹೆಸರು ಹುಟ್ಟಿಕೊಂಡಿದ್ದು. ದಿನನಿತ್ಯದ ವಸ್ತುಗಳ ಬೆಲೆಗಳೆಲ್ಲ ಗಗನಕ್ಕೇರಿರುವಾಗ, ಆಕರ್ಷಕ ದರದಲ್ಲಿ ಬೆಂಗಳೂರಿಗರಿಗೆ ಆರೋಗ್ಯಪೂರ್ಣ ಆಹಾರ ನೀಡಬೇಕು ಎಂಬ ಉದ್ದೇಶದೊಂದಿಗೆ ಜೆ.ಪಿ.ನಗರದ 22 ನೇ ಮುಖ್ಯ ರಸ್ತೆಯಲ್ಲಿ ಆರಂಭವಾಗಿದ್ದೇ ನಮ್ಮೂರ ಹೋಟೆಲ್. ಕಾಲಕ್ಕೆ ಅನುಗುಣವಾಗಿ ವಿವಿಧ ಪ್ರಯೋಗಗಳನ್ನು ಮಾಡುತ್ತ ರುಚಿ, ಶುಚಿಯಾದ ‘ಆರೋಗ್ಯ ಆಹಾರ’ ಉಣಬಡಿಸುತ್ತಿದೆ ನಮ್ಮೂರ ಹೋಟೆಲ್.

ಹೋಟೆಲ್ ಬಗ್ಗೆ ಒಂದಿಷ್ಟು

ಶ್ರೀನಿವಾಸ್‌ರಾವ್ ಅವರ ಮಾಲೀಕತ್ವದಲ್ಲಿ 2003ರಲ್ಲಿ ಆರಂಭವಾದ ಹೋಟೆಲ್ ಆರಂಭದ ದಿನಗಳಲ್ಲಿ ಉತ್ತುಂಗದ ಸ್ಥಿತಿಯಲ್ಲಿತ್ತು. ಖ್ಯಾತ ನಳಪಾಕ ತಜ್ಞ ಕೃಷ್ಣ ಹೆಗಡೆ ಸಾರಥ್ಯದಲ್ಲಿ ತಯಾರಾಗುತ್ತಿದ್ದ ವಿಭಿನ್ನ ಹಾಗೂ ವಿಶಿಷ್ಟ ತಿನಿಸುಗಳು ಗ್ರಾಹಕರು ನಾಲಗೆ ಚಪ್ಪರಿಸುವಂತೆ ಮಾಡುತ್ತಿತ್ತು. ಆದರೆ ಅವರ ಕಾಲಾನಂತರ ಹೋಟೆಲ್ ವ್ಯವಹಾರದಲ್ಲಿ ಕೊಂಚ ಏರುಪೇರಾದರೂ ಬಳಿಕ ‘ಆರೋಗ್ಯ ಆಹಾರ’ ಎಂಬ ನೂತನ ಹೆಸರಿನಲ್ಲಿ, ಮತ್ತಷ್ಟು ವಿಶಿಷ್ಟತೆಗಳೊಂದಿಗೆ ಮತ್ತೆ ಮೊದಲಿನ ವೈಭವಕ್ಕೆ ಅಡಿ ಇಡುತ್ತಿದೆ.

ಆರೋಗ್ಯ ಆಹಾರದ ವಿಶೇಷ

ಸದ್ಯ ಸುರೇಶ್, ಸಿದ್ದರಾಜು, ಆನಂದ್‌ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರೋ ಈ ಹೋಟೆಲ್‌ನಲ್ಲಿ ನಿತ್ಯ 50ಕ್ಕೂ ಹೆಚ್ಚು ಬಗೆಯ ಖಾದ್ಯಗಳು ತಯಾರಾಗುತ್ತಿವೆ. ಮತ್ತೊಂದು ವಿಶೇಷವೆಂದರೆ ಇಲ್ಲಿ ತಯಾರಾಗುವ ಆಹಾರ ಪದಾರ್ಥಗಳನ್ನು ಕಿಲೋಗ್ರಾಂ ಹಾಗೂ ಲೀಟರ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆಯನ್ನು ಜಾರಿಗೆ ತಂದ ಹೆಗ್ಗಳಿಕೆ ನಮ್ಮೂರ ಹೋಟೆಲ್‌ನದ್ದು. ಅಲ್ಲದೆ ಇಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಇಲ್ಲ. ಬದಲಾಗಿ ಆಹಾರವನ್ನು ಪಾರ್ಸಲ್ ತೆಗೆದುಕೊಂಡು ಹೋಗಿ ಮನೆಯಲ್ಲೇ ನೆಮ್ಮದಿಯಾಗಿ ಸವಿಯಬಹುದು.

ಗುಣಮಟ್ಟದಲ್ಲಿ ರಾಜಿ ಇಲ್ಲ:

ಸುಮಾರು 80 ಜನ ಕಾರ್ಯನಿರ್ವಹಿಸುತ್ತಿರೋ ಈ ಹೋಟೆಲ್‌ನಲ್ಲಿ ಆಹಾರ ಗುಣಮಟ್ಟದಲ್ಲಿ ಮಾತ್ರ ಯಾವುದೇ ರಾಜಿ ಇಲ್ಲ ಎನ್ನುತ್ತಾರೆ ಹೋಟೆಲ್ ವ್ಯವಸ್ಥಾಪಕರಲ್ಲೊಬ್ಬರಾದ ಸುರೇಶ್. ಹಾಗಾಗಿ ಅಡುಗೆ ತಯಾರಿ ಸಂಕೀರ್ಣ ಬಣ್ಣ, ರಾಸಾಯನಿಕ ಹಾಗೂ ಆಮ್ಲೀಯ ಪದಾರ್ಥಗಳಿಂದ ಹೊರತಾಗಿದೆ. ಮಾತ್ರವಲ್ಲ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ತ್ಯಜಿಸಿದ್ದು, ಘಮಘಮಿಸುವ ರಸವತ್ತಾದ ತಿಂಡಿ-ತಿನಿಸಗಳನ್ನು ಗ್ರಾಹಕರಿಗೆ ಒದಗಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. “ ನಮ್ಮ ಹೊಟೇಲ್‌ನಲ್ಲಿ ವಿವಿಧ ಬಗೆಯ ಆಹಾರ ಖಾದ್ಯಗಳು ದೊರೆಯುತ್ತವೆ. ಅದರಲ್ಲೂ ಹಬ್ಬದ ಸಮಯದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಹಾರವನ್ನು ತಯಾರಿಸಿ ಪಾರ್ಸೆಲ್ ಕೊಡುತ್ತೇವೆ. ಸಾಕಷ್ಟು ಎಂಎನ್‌ಸಿ ಕಂಪನಿಗಳಿಗೂ ಇಲ್ಲಿಂದ ಆಹಾರವನ್ನು ಸರಬರಾಜು ಮಾಡುತ್ತೇವೆ. ಉತ್ತಮ ಗುಣಮಟ್ಟದ ಆಹಾರ ನೀಡುವುದು ನಮ್ಮ ಉದ್ದೆಶ” ಅನ್ನೋದು ವ್ಯವಸ್ಥಾಪಕ ಸುರೇಶ್ ಮಾತು.

ನಮ್ಮೂರ ಹೊಟೇಲ್ ಗೆ ತಾಜಾ ತರಕಾರಿಗಳನ್ನು ಕೆ.ಆರ್.ಮಾರುಕಟ್ಟೆಯಿಂದ ಪ್ರತಿದಿನ ತರಲಾಗುತ್ತದೆ. ಗುಣಮಟ್ಟದಲ್ಲಿ ಒಂದಿಷ್ಟೂ ವ್ಯತ್ಯಾಸವಾಗದಂತೆ ಗ್ರಾಹಕರ ಬೇಡಿಕೆಗೆ ತಕ್ಕಂತಹ ರುಚಿಯಾದ ಖಾದ್ಯ ಒದಗಿಸುವುದೇ ನಮ್ಮ ಅಂತಿಮ ಗುರಿ ಎನ್ನುತ್ತಾರೆ ವ್ಯವಸ್ಥಾಪಕ ಸುರೇಶ್.

ಹತ್ತು ಹಲವು ರಸಂ

ಸುಮಾರು 70 ಬಗೆಯ ಖಾದ್ಯಗಳ ಪೈಕಿ 15-17 ವಿವಿಧ ರಸಂಗಳನ್ನು ತಯಾರಿಸುವುದು ಹೋಟೆಲ್‌ನ ಪ್ರಯೋಗಶೀಲತೆಗೆ ಉದಾಹರಣೆ. ಬಿಸಿಬೇಳೆಭಾತ್, ಮೈಸೂರು ರಸಂ, ಪೈನಾಪಲ್ ಗೊಜ್ಜು, ಹಾಗಲಕಾಯಿ ಗೊಜ್ಜು, ಹಾಲ್‌ಬಾಯಿ, ಕೊಟ್ಟೆಕಡುಬು ತಿನಿಸುಗಳನ್ನು ಗ್ರಾಹಕರು ಹೆಚ್ಚಾಗಿ ಇಷ್ಟಪಟ್ಟು ಕೊಳ್ಳುತ್ತಾರಂತೆ. ದಕ್ಷಿಣ ಭಾರತದ ಆಹಾರದೊಂದಿಗೆ ಉತ್ತರ ಭಾರತ ಹಾಗೂ ಚೈನೀಸ್ ಖಾದ್ಯಗಳೂ ಇಲ್ಲಿ ಲಭ್ಯ. ಬೆಂಗಳೂರಿನ ಯಾವುದೇ ಮೂಲೆಗೂ ಆಹಾರವನ್ನು ತಲುಪಿಸುವ ವ್ಯವಸ್ಥೆಯೂ ಇದೆ. ಅಲ್ಲದೆ ಮಧುಮೇಹಿ ವಯೋವೃದ್ಧರ ಆರೋಗ್ಯ ದೃಷ್ಟಿಯಿಂದ ಶೇ. 100 ರಷ್ಟು ಶುಗರ್ ಫ್ರೀ ಅಟ್ಟಾ ಇಲ್ಲಿ ಲಭ್ಯ.

ಶೇ.100 ಸೋಡಾ ರಹಿತ

ನಮ್ಮೂರ ಹೋಟೆಲ್‌ನಲ್ಲಿ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ವ್ಯವಸ್ಥಿತ ಅಡುಗೆ ಮನೆ ನಿರ್ಮಿಸಿದ್ದು, ಶುಚಿ-ರುಚಿಯಾಗಿ ಗ್ರಾಹಕರು ಒಪ್ಪುವ ಹಾಗೇ ಆಹಾರ ತಯಾರಿಸುತ್ತೇವೆ. ಯಾವುದೇ ಆಹಾರಕ್ಕೂ ಸೋಡಾ ಬೆರೆಸುವುದಿಲ್ಲ ಎನ್ನುತ್ತಾರೆ ವ್ಯವಸ್ಥಾಪಕ ಆನಂದ್‌ಕುಮಾರ್. ಶುಚಿಯಾದ ರುಚಿಯಾದ ಆಹಾರ ಕೊಟ್ರೆ ಯಾರಿಗೆ ಬೇಡ ಹೇಳಿ..!

Related Stories

Stories by usha harish